ಮಂಗಳೂರು : ಶಾರದಾ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘದ ಆಶ್ರಯದಲ್ಲಿ ಸಂಸ್ಕೃತ ದಿನೋತ್ಸವ ಕಾರ್ಯಕ್ರಮವು ದಿನಾಂಕ 02 ಸೆಪ್ಟೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕೆನರಾ ಪ್ರೌಢಶಾಲೆ ಉರ್ವ ಇಲ್ಲಿಯ ಸಂಸ್ಕೃತ ಶಿಕ್ಷಕ ಶ್ರೀ ಬಿ. ಮುರಾರಿ ತಂತ್ರಿಯವರು “ಸಂಸ್ಕೃತ ಸಂಸ್ಕರಿಸಲ್ಪಟ್ಟ ಭಾಷೆ. ಈ ಭಾಷೆಯು ಬಹುಪ್ರಾಚೀನ ಕಾಲದಲ್ಲಿ ವ್ಯವಹಾರ ಭಾಷೆಯಾಗಿ ಜನಮಾನಸದಲ್ಲಿ ಉಳಿದ ಭಾಷೆ. ರಾಮಾಯಣದ ಸೀತಾನ್ವೇಷಣೆಯ ಕಾಲದಲ್ಲಿ ಸೀತೆಯೊಂದಿಗೆ ಆಂಜನೇಯ ಸಂಸ್ಕೃತ ಭಾಷೆಯಲ್ಲಿಯೇ ಮಾತನಾಡಿದ ಎಂದು ಮಾಲ್ಮೀಕಿ ಮಹರ್ಷಿಗಳು ವರ್ಣಿಸುತ್ತಾರೆ. ಅಂತಹ ಭಾಷಾ ಸೌಂದರ್ಯದಿಂದ ಆಕರ್ಷಿಸಲ್ಪಟ್ಟ ಭಾಷೆ ಇಂದು ವೈಜ್ಞಾನಿಕ ಭಾಷೆಯಾಗಿಯೂ ಸರ್ವಜನಾನುರಾಗಿಯಾಗಿದೆ. ಹೇಗೆ ಚಿನ್ನದ ಗಟ್ಟಿ ಆಭರಣವಾದಾಗ ಇನ್ನೂ ಹೆಚ್ಚು ಸೌಂದರ್ಯದಿಂದ ಕೂಡಿರುತ್ತದೆಯೊ ಹಾಗೆ ಸಂಸ್ಕೃತ ದೇವ ಭಾಷೆ ಎಂದು ಪೂಜಿಸಿದರೆ ಸಾಲದು ಅದನ್ನು ವ್ಯಾವಹಾರಿಕವಾಗಿ ಬಳಸುವಂತಾಗಬೇಕು” ಎಂಬುದಾಗಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾರದಾ ಸಮೂಹ ಸಂಸ್ಥೆಗಳ ವಿಶ್ವಸ್ಥರಾದ ಶ್ರೀ ಸುಧಾಕರ ರಾವ್ ಪೇಜಾವರ ಇವರು ಮಾತನಾಡಿ “ಸಂಸ್ಕೃತ ಭಾಷೆ ಇಂದು ವಿಶ್ವ ಭಾಷೆಯಾಗಿ ಶೋಭಿಸುತ್ತಿದೆ. ಸಂಸ್ಕೃತ ಕಾವ್ಯಗಳ ಭಾಷಾ ಚಮತ್ಕಾರವನ್ನು ಕಾವ್ಯ ಸೌಂದರ್ಯವನ್ನು ವಿದ್ಯಾರ್ಥಿಗಳು ಆಸ್ವಾದಿಸಲು ಪ್ರಯತ್ನಿಸಬೇಕು. ಇಂತಹ ಉತ್ಸವಗಳು ನಮ್ಮಲ್ಲಿ ಭಾಷಾ ಕಲಿಕೆಯ ಮಹತ್ವವನ್ನು ಸಾರುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಕಾಶ್ ನಾಯಕ್ ಶುಭ ಹಾರೈಸಿದರು. ಉಪಪ್ರಾಂಶುಪಾಲರಾದ ಶ್ರೀಮತಿ ಅರುಣ ಕುಮಾರಿ ಹಾಗೂ ಶಾರದಾ ಪದವಿಪೂರ್ವ ಕಾಲೇಜಿನ ಸಂಸ್ಕೃತ ಸಂಘದ ಅಧ್ಯಕ್ಷ, ಸಂಸ್ಕೃತ ಉಪನ್ಯಾಸಕರಾದ ಶ್ರೀ ರಮೇಶ ಆಚಾರ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಂಸ್ಕೃತದಲ್ಲಿ ಪ್ರಹಸನ, ಭಾಷಣ, ನೃತ್ಯರೂಪಕ ಹಾಗೂ ಏಕಪಾತ್ರಾಭಿನಯ, ಸಮೂಹಗಾನ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶಾರದಾ ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಕುಮಾರಿ ತನ್ವಿ ಪ್ರಭು ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಪ್ರಾಂಜಲಿ ನಾವಡ, ಕುಮಾರಿ ವಿದ್ಯಾರ್ಥಿ ಅಮೃತ ರಾವ್ ಅತಿಥಿಗಳನ್ನು ಪರಿಚಯಿಸಿ, ಕುಮಾರಿ ಜಾಹ್ನವಿ ಧನ್ಯವಾದವಿತ್ತರು. ತನ್ವಿ, ಕುಮಾರಿ ಪ್ರೇಕ್ಷಣ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಅಮೃತ ರಾವ್ ಅತಿಥಿಗಳನ್ನು ಪರಿಚಯಿಸಿ, ಕುಮಾರಿ ಜಾಹ್ನವಿ ಧನ್ಯವಾದವಿತ್ತರು.