3 ಮಾರ್ಚ್ 2023, ಉಡುಪಿ: ಸುಮನಸಾ ಕೊಡವೂರು ಉಡುಪಿ (ರಿ), ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ), ಉಡುಪಿ ಹಾಗೂ ಕರ್ನಾಟಕ ಜಾನಪದ ಪರಿಷತ್ತು (ರಿ) ಬೆಂಗಳೂರು – ಉಡುಪಿ ಜಿಲ್ಲಾ ಘಟಕ ಇವರ ಸಹಯೋಗದಲ್ಲಿ ದಿನಾಂಕ 05-03-2023ನೇ ರವಿವಾರ “ಭುಜಂಗ ಪಾರ್ಕ್” ಅಜ್ಜರ ಕಾಡು ಉಡುಪಿ ಇಲ್ಲಿ “ಜಾನಪದ ಹಬ್ಬ 2023” ಹಾಗೂ “ಜಾನಪದ ಸಂಘಟಕ ಪ್ರಶಸ್ತಿ” ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಸುಮನಸಾ ಕೊಡವೂರು ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಜಿ. ಕೊಡವೂರು ಇವರು ಸಭಾಧ್ಯಕ್ಷತೆ ವಹಿಸುವ ಈ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಪಿ. ಸುಬ್ರಹ್ಮಣ್ಯ ಯಾಡಪಡಿತ್ತಾಯ ಉದ್ಘಾಟಿಸಲಿರುವರು. ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ.ಬೀ. ವಿಜಯ ಬಲ್ಲಾಳ್, ಮಣಿಪಾಲದ ಮಾಹೆಯ ಸಹಾಯಕ ಉಪ ಕುಲಪತಿಗಳಾದ ಡಾ. ನಾರಾಯಣ ಸಬಾಹಿತ್, ಶ್ರೀ ರವೀಂದ್ರ ಶೆಟ್ಟಿ, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ಉಡುಪಿ, ಶ್ರೀ ಪ್ರದೀಪ್ ಚಂದ್ರ ಕುತ್ಪಾಡಿ, ಪ್ರಧಾನ ಕಾರ್ಯದರ್ಶಿ ರಂಗಭೂಮಿ (ರಿ) ಉಡುಪಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ವೇದಿಕೆಯಲ್ಲಿ ಉಡುಪಿಯ ಪ್ರಸಿದ್ಧ ಜಾನಪದ ಸಂಘಟಕರಾದ ಶ್ರೀ ಗೋಪಾಲ ಸಿ. ಬಂಗೇರ ಇವರಿಗೆ ಜಾನಪದ ಸಂಘಟಕ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷರು ತಿಳಿಸಿದ್ದಾರೆ. 25 ವರ್ಷಗಳಿಂದ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಕಲಾ ಲೋಕಕ್ಕೆ ವಿಶೇಷ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಸಂಘಟನೆಯ ಮೂಲ ಉದ್ದೇಶವೇ ಕಲೆ, ಕಲಾವಿದ ಮತ್ತು ಯಕ್ಷಗಾನವನ್ನು ಪ್ರೋತ್ಸಾಹಿಸುವುದು ಮತ್ತು ಕಲಾವಿದರನ್ನು ಗುರುತಿಸಿ ಗೌರವಿಸುವುದು.
ಪ್ರತೀ ವರ್ಷ ಎರಡು ಪ್ರಶಸ್ತಿಗಳನ್ನು ನೀಡುತ್ತಾ ಇರುವುದು ಈ ಸಂಘಟನೆಯ ಕಾರ್ಯ ವೈಖರಿಯ ಪ್ರತೀಕವಾಗಿದೆ. ಅರ್ಹ ಯಕ್ಷಗಾನ ವಿದ್ವಾಂಸರಿಗೆ “ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ”ಯನ್ನು ನೀಡಲಾಗುತ್ತದೆ. ರೂ.40,000 ನಗದು ಮೊತ್ತ ಮತ್ತು ಸನ್ಮಾನವನ್ನೊಳಗೊಂಡ ಪ್ರಶಸ್ತಿ ಇದಾಗಿದೆ. ಸಮಾಜ ಸಾಧಕರಿಗೆ “ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿ” ನೀಡಲಾಗುತ್ತದೆ. ಈ ಪ್ರಶಸ್ತಿ ರೂ.40,000 ಮತ್ತು ಸನ್ಮಾನವನ್ನೊಳಗೊಂಡಿರುತ್ತದೆ.
Subscribe to Updates
Get the latest creative news from FooBar about art, design and business.