ಶಿವಮೊಗ್ಗ : ಕರ್ನಾಟಕ ಸಂಘ (ರಿ) ಶಿವಮೊಗ್ಗ ಇದರ ವತಿಯಿಂದ ಮಹಿಳಾ ಲೇಖಕರು ಪ್ರಕಾರಕ್ಕಾಗಿ ನೀಡುವ ‘ಎಂ.ಕೆ. ಇಂದಿರಾ ಪುಸ್ತಕ ಬಹುಮಾನ’ವನ್ನು ಘೋಷಿಸಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಇರವಿನ ಅರಿವು’ ವಿಮರ್ಶಾ ಕೃತಿಯು ‘ಎಂ.ಕೆ. ಇಂದಿರಾ ಪ್ರಶಸ್ತಿ’ಗೆ ಪಾತ್ರವಾಗಿದೆ.
ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಪ್ರಶಸ್ತಿಪತ್ರ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ದಿನಾಂಕ 22 ಸೆಪ್ಟೆಂಬರ್ 2024ರಂದು ಸಂಜೆ ಗಂಟೆ 5-30ಕ್ಕೆ ಶಿವಮೊಗ್ಗದಲ್ಲಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ನಡೆಯಲಿದೆ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರು ಸಾಹಿತ್ಯದ ಕಾವ್ಯ , ಕತೆ, ನಾಟಕ, ವಿಮರ್ಶೆ, ಅಂಕಣ ಬರಹ, ಅನುವಾದ, ಸಂಶೋಧನೆ ಮಂತಾದ ಪ್ರಕಾರಗಳಲ್ಲಿ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕಾಯಕಾವ್ಯ’, ‘ಅವನು ಹೆಣ್ಣಾಗಬೇಕು’ ಹಾಗೂ ‘ನಕ್ಷತ್ರ ನಕ್ಕ ರಾತ್ರಿ’ ಮುಂತಾದ ಕವನ ಸಂಗ್ರಹಗಳು, ‘ತೊಗಲು ಗೊಂಬೆ’ ಕಾದಂಬರಿ, ‘ಇರವಿನ ಅರಿವು’ ಮತ್ತು ‘ಮೊಗ್ಗಿನ ಮಾತು’, ಮುಂತಾದವು ಇವರ ಕೆಲವು ಕೃತಿಗಳು.
ಕನಕದಾಸರ ಕೀರ್ತನೆಗಳನ್ನು ಮತ್ತು ವಚನಗಳನ್ನು ತುಳುವಿಗೆ ಅನುವಾದ ಮಾಡಿರುವ ಇವರು ಕನಕನ ಕೃತಿಗಳನ್ನು ಆಧರಿಸಿ ನಾಟಕಗಳನ್ನು ಬರೆದಿದ್ದಾರೆ. ‘ರಾಮಧಾನ್ಯ ಚರಿತೆ’ಯನ್ನು ತುಳುವಿಗೆ ಅನುವಾದ ಮಾಡಿ ಮೂಲದೊಂದಿಗೆ ಪ್ರಕಟಿಸಿದ್ದಾರೆ .ಇದಕ್ಕಾಗಿ ಅವರಿಗೆ ಕರ್ನಾಟಕ ಸರ್ಕಾರವು ‘ಕನಕ ಯುವ ಪ್ರಶಸ್ತಿ’ಯನ್ನು ನೀಡಿದೆ. ಸಾಹಿತ್ಯ ಸಂಸ್ಕೃತಿಗೆ ಇವರು ಕೊಟ್ಟಿರುವ ಕೊಡುಗೆಯನ್ನು ಗಮನಿಸಿ ಸರ್ಕಾರವು ಸಾಹಿತ್ಯ ಅಕಾಡೆಮಿ ಹಾಗೂ ನಾಟಕ ಅಕಾಡೆಮಿ ಬಹುಮಾನ ನೀಡಿ ಗೌರವಿಸಿದೆ. ಪ್ರಸ್ತುತ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ.