ಮಂಗಳೂರು : ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತ ರೇಮಂಡ್ ಡಿಕೂನ್ಹಾ ತಾಕೊಡೆಯವರ 15ನೇ ಸಾಹಿತ್ಯ ಕೃತಿ ‘ಆಭರಣಗಳು’ ಕೃತಿ ಅನಾವರಣ ಸಮಾರಂಭವು ದಿನಾಂಕ 2 ಸೆಪ್ಟೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಸ್ತಕ ಪರಿಚಯ ಮಾಡಿದ ಹಿರಿಯ ಶಿಕ್ಷಕಿ ಸಾಹಿತಿ ಚಂದ್ರಕಲಾ ನಂದಾವರ ಇವರು ಮಾತನಾಡಿ “ಸಾಹಿತ್ಯದ ರಚನೆಯಲ್ಲಿ ವಿವಿಧ ಭಾಷೆಗಳು ತುರುಕಿ ಬರುವುದು ಈಗಿನ ಗ್ಲೋಬಲೈಜ್ ನಿಂದ ಸಾಮಾನ್ಯ. ನಾವು ಸಾಹಿತ್ಯದ ಬರವಣಿಗೆ ಮಾಡುವಾಗ ಮೂಲ ಆಂಗ್ಲ ಶಬ್ದ ಬರೆದರೆ ಸರಿಯಾದ ಸಾಂದರ್ಭಿಕ ಅರ್ಥ ಬರಲು ಸುಲಭ ಆದೀತು. ಪತ್ರಕರ್ತರ ಜೀವನ ಮತ್ತು ಸಾಹಿತಿ ಹಾಗೂ ಶಿಕ್ಷಕರ ಜೀವನ ಒಂದು ಪ್ರೆಶರ್ ನಲ್ಲಿ ಈಗ ಇದೆ. ಯಾವುದು ಬರೆಯಬೇಕು, ಹೇಳಬೇಕು, ಕಲಿಸಬೇಕು ಎಂದು ಹೇಳುವ ಒತ್ತಡ ಇಂದಿದೆ. ಪತ್ರಕರ್ತ ರೇಮಂಡ್ ತಮ್ಮ ಕೃತಿಯಲ್ಲಿ ವಾಸ್ತವ ತೆರೆದಿಡುವ ಪ್ರಯತ್ನ ಮಾಡಿದ್ದಾರೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಪುಸ್ತಕ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ “ಸಾಹಿತ್ಯದ ಮಗ್ಗುಲುಗಳನ್ನು ಪತ್ರಕರ್ತರ ಜೀವನದ ಒಂದು ಅಂಶ. ಅದನ್ನು ಮರೆಯದೆ ಬರೆಯಬೇಕು” ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರೆಸ್ ಕ್ಲಬ್ ಆಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ “ಪ್ರತಿಯೊಬ್ಬ ಪತ್ರಕರ್ತರೂ ತಮ್ಮ ಬೈಲೈನ್ ಆರ್ಟಿಕಲ್ಸ್ ಸಂಗ್ರಹಿಸಿ ಪುಸ್ತಕ ಪ್ರಕಟ ಮಾಡಬೇಕು. ಇಲ್ಲವಾದರೆ ನಾವು ಎಷ್ಟು ದೊಡ್ಡ ಪತ್ರಕರ್ತರು ಆದರೂ ಮತ್ತೆ ಮರೆತು ಹೋಗುತ್ತವೆ” ಎಂದರು.
ಹಿರಿಯ ಪತ್ರಕರ್ತ ಬಹುಭಾಷಾ ಸಾಹಿತಿ ರೇಮಂಡ್ ಡಿಕೂನ್ಹಾ ತಾಕೊಡೆ ಸ್ವಾಗತಿಸಿ, ರಿಯಾನಾ ಡಿಕೂನ್ಹಾ ವಂದಿಸಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ಪತ್ರಕರ್ತ ಭಾಸ್ಕರ ರೈ ಕಟ್ಟ ನಿರೂಪಿಸಿದರು.