03 ಮಾರ್ಚ್ 2023, ಉಡುಪಿ: 4ನೇ ದಿನದ ಸುಮನಸ ರಂಗ ಹಬ್ಬ(ಮಾರ್ಚ್ 01, ಬುಧವಾರ)ದಲ್ಲಿ ಪ್ರದರ್ಶನಗೊಂಡ ಏಕಲವ್ಯ – ಕನ್ನಡ ಯಕ್ಷಗಾನ – ಪೂರ್ಣಿಮಾ ಜನಾರ್ದನ ಕೊಡವೂರು ಕಂಡಂತೆ
ಏಕಲವ್ಯ – ಕನ್ನಡ ಯಕ್ಷಗಾನ
ತಂಡ: ಸುಮನಸಾ ಕೊಡವೂರು ನಿರ್ದೇಶನ: ಗುರು ಬನ್ನಂಜೆ ಸಂಜೀವ ಸುವರ್ಣ
ಕರಾವಳಿಯ ಜೀವನಾಡಿ, ಕರಾವಳಿ ಜನತೆಯ ಅನುಗಾಲದ ಒಡನಾಡಿ ಯಕ್ಷಗಾನ ಎಂದರೆ ಆಬಾಲ ವೃದ್ಧರಾದಿಯಾಗಿ ಎಲ್ಲರೂ ಇಷ್ಟಪಡುವ ಕಲಾ ಪ್ರಕಾರ . ಅದರಲ್ಲೂ ಮಹಿಳಾ ಮಣಿಗಳ ಯಕ್ಷಗಾನ ಅಂದರೆ ಇನ್ನಷ್ಟು ಒಲವು. ಅಲ್ಲದೆ ಸಾಮಾಜಿಕ ಸೇವೆಯ ಪರಿಕಲ್ಪನೆ ಯೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಕೊಂಡ ಒಂದು ಸಂಸ್ಥೆ ತನ್ನದೇ ಧ್ಯೇಯೋದ್ಧೇಶಗಳನ್ನು ಬೆಳೆಸಿಕೊಂಡು ನಾಟಕವನ್ನು ಜೀವಾಳವಾಗಿಟ್ಟುಕೊಂಡು ಯಕ್ಷಗಾನ ,ಜಾನಪದ ಕಲೆಗಳಿಗೂ ಪ್ರಾಮುಖ್ಯತೆ ನೀಡಿ ಕಲಾ ಸಾಮ್ರಾಜ್ಯದಲ್ಲಿ ವಿಹರಿಸುತ್ತಾ ತನ್ನದೇ ಸಂಸ್ಥೆಯ ಮಹಿಳಾ ಕಲಾವಿದರಿಗೆ ಯಕ್ಷಗಾನ ಪ್ರಸ್ತುತಿ ನಡೆಸಿಕೊಡಲು ಅವಕಾಶ ಮಾಡಿಕೊಟ್ಟದ್ದು ನಿಜಕ್ಕೂ ಅಭಿನಂದನೀಯ .
ಕಳೆದ ವರುಷದವರೆಗೆ ನಾಟಕ ,ಯಕ್ಷಗಾನ ಗಳನ್ನು ನೋಡುತ್ತಾ ಆನಂದಿಸುತ್ತಾ ಸಂಸ್ಥೆಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬಂದ ಸುಮನಸಾ ಸಂಸ್ಥೆಯ ವನಿತೆಯರು ಕಳೆದ ವರುಷದಿಂದ ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದ ತಾಳ ಲಯ ಹೆಜ್ಜೆಯನ್ನು ಅಭ್ಯಸಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡಿದ್ದು ಸುಲಭದ ಮಾತಲ್ಲ. ಕಲಾ ಸರಸ್ವತಿಯನ್ನು ಒಲಿಸಿಕೊಳ್ಳಲು ನಿರಂತರ ಶ್ರಮ, ಶ್ರದ್ಧೆ, ಹಾಗೂ ಆಕೆಯ ಅನುಗ್ರಹವಿದ್ದರೆ ಮಾತ್ರ ಸಾಧ್ಯ .ಇಂದು ಸುಮನಸಾ ಸಂಸ್ಥೆಯ ರಂಗ ಹಬ್ಬದಲ್ಲಿ ಸಂಸ್ಥೆಯ ಕಲಾವಿದೆಯರು ಪ್ರಸ್ತುತಪಡಿಸಿದ ಏಕಲವ್ಯ ಯಕ್ಷಗಾನ ಪ್ರಸ್ತುತಿ ಚಿರಕಾಲ ಕಲಾರಾಧಕರ ಮನದಲ್ಲಿ ಉಳಿಯುವುದು ಮಾತ್ರ ಸತ್ಯ . ಯಕ್ಷಗಾನ ಕಲೆಯ ಅಪ್ಪಟ ಕಲಾವಿದ, ನುರಿತ ಗುರು, ಸರಳ ಸಜ್ಜನ ,ಯಕ್ಷಗಾನ ಕೌತುಕ ಬನ್ನಂಜೆ ಸಂಜೀವ ಸುವರ್ಣರ ಅಮೋಘ ನಿರ್ದೇಶನದ ಸೊಬಗು , ಇಂದಿನ ಪ್ರಸ್ತುತಿಯ ಪ್ರಮುಖ ಅಂಶ. ಏಕಲವ್ಯ ಯಕ್ಷಗಾನ ಪ್ರಸಂಗ ಹಳೆಯದಾದರೂ ತನ್ನ ವಿನೂತನ ಯಕ್ಷರಂಗ ಸಂಯೋಜನೆಯಿಂದ ಪ್ರತಿಯೊಂದು ದೃಶ್ಯಾವಳಿಯಲ್ಲಿಯೂ ಹೊಸತನವನ್ನು ತಂದು ಪ್ರೇಕ್ಷಕರ ಮನತಣಿಸಿದ್ದು ಗುರುಗಳ ಹೆಗ್ಗಳಿಕೆ . ಯಕ್ಷಗಾನದುದ್ದಕ್ಕೂ ಕನ್ನಡ ಭಾಷೆಯ ಲಾಲಿತ್ಯವನ್ನು ಉಣಪಡಿಸಿದ ಜೋಡುನುಡಿ, ನುಡಿಗಟ್ಟುಗಳು, ಉಪಮೆಗಳು ಯಕ್ಷಗಾನದ ಹಿರಿಮೆಯನ್ನು ಹೆಚ್ಚಿಸಿದ್ದು ,ಹಿತವಾದ ಸಾಹಿತ್ಯ ನೀಡಿ ಯಕ್ಷಗಾನ ರಚನೆ ಮಾಡಿದ ಹೊಸ್ ತೋಟ ಮಂಜುನಾಥ ಭಾಗವತ್ ,ಅಚ್ಚುಕಟ್ಟಾದ ವೇಷಭೂಷಣ ನಡೆಸಿಕೊಟ್ಟ ಅಜಪುರ ಯಕ್ಷಗಾನ ಸಂಘ, ಸುಶ್ರಾವ್ಯ ಭಾಗವತಿಕೆಯಿಂದ ಮನಗೆದ್ದ ಮಯೂರವತಿ ಶುಭಯೋಗೀಶ್, ಕರ್ಣಾನಂದಕರವಾದ ಚೆಂಡೆವಾದನದಿಂದ ಮನ ಸೆಳೆದ ರೋಹಿತ್ ತೀರ್ಥಹಳ್ಳಿ, ಯಕ್ಷಗಾನ ಪ್ರಸ್ತುತಿಗೆ ತಕ್ಕದಾದ ಹಿಮ್ಮೇಳದೊಂದಿಗೆ ಮೇಳೈಸಿದ ಏಕಲವ್ಯ ಯಕ್ಷಗಾನ ಪ್ರಿಯರ ಮನತಣಿಸಿತ್ತು .ಕಳೆದ ವರುಷ ಕೇವಲ ಸ್ತ್ರೀ ಪೀಠಿಕೆಯಲ್ಲಿ ಮಿಂಚಿದ ಸ್ತ್ರೀಯರು ಇಂದು ಒಂದಿಡೀ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಲು ಸಿದ್ಧರಾದದ್ದು ಹೆಮ್ಮೆಯೆ ಸರಿ. ರಂಗ ಪ್ರವೇಶದ ಕ್ಷಣದಿಂದ ರಂಗದಿಂದ ನಿರ್ಗಮನದವರೆಗೂ ತಮ್ಮ ಚುರುಕು ಮಾತು, ಚುರುಕುಗತಿಯ ಹೆಜ್ಜೆಗಳಿಂದ, ಚಂದದ ಆಂಗಿಕ ಅಭಿನಯದಿಂದ ಮನ ಗೆದ್ದ ಪೂರ್ವಾರ್ಧದ ಏಕಲವ್ಯ ಪಾತ್ರಧಾರಿ ಕವನ ಹಾಗೂ ಉತ್ತರಾರ್ಧ ಏಕಲವ್ಯ ಪಾತ್ರಧಾರಿ ಚಿಗರೆ ನಡೆಯ ಪಾದರಸದ ಬೆಡಗಿ ಪ್ರಜ್ಞಶ್ರೀ , ಸಂದರ್ಭಕ್ಕೆ ಅಗತ್ಯವಾದ ಗಂಭೀರತೆಯೊಂದಿಗೆ ಲಯಬದ್ಧ ಹೆಜ್ಜೆಯೊಂದಿಗೆ ಪಾತ್ರಕ್ಕೆ ಜೀವ ತುಂಬಿದ ದ್ರೋಣ ಪಾತ್ರದ ಇಬ್ಬರು ಪಾತ್ರಧಾರಿಗಳಾದ ಕಾವ್ಯ ಹಾಗೂ ರಾಧಿಕಾ ದಿವಾಕರ್, ಗಂಭೀರವದನೆಯಾದರೂ ಪಾತ್ರ ಬಯಸಿದಲ್ಲಿ ಸಣ್ಣಗೆ ಮುಗುಳುನಗೆ ಹರಿಸಿ ತನ್ಮಯತೆಯಿಂದ ಪ್ರಬುದ್ಧತೆಯಿಂದ ಅರ್ಜುನ ಪಾತ್ರ ನಿರ್ವಹಿಸಿದ ವರಾಲಿ ಪ್ರಕಾಶ್,ತುಂಟ ಕಣ್ಣುಗಳಲ್ಲಿ ಮಾತನಾಡುವ ಕೌರವ ಪಾತ್ರಧಾರಿ ಧೃತಿ ಸಂತೋಷ್ ಮತ್ತು ನಿಷ್ಕಲ್ಮಶ ನಗುವಿನ ಪುಟ್ಟ ಬಾಲಕಿ ವಿಕರ್ಣ ಪಾತ್ರಧಾರಿ ಸ್ವಸ್ತಿ ಪ್ರಶಾಂತ್ ಅಲ್ಲದೆ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ ದುಶ್ಯಾಸನನಾಗಿ ಮಿಂಚಿದ ಸಂಧ್ಯಾ ಪ್ರಕಾಶ್, ಧರ್ಮರಾಯ ಪ್ರಿಯಾ ಪ್ರವೀಣ್, ನಕುಲ ಶಿಲ್ಪ ಚಂದ್ರ , ಸಹದೇವ ಪಾತ್ರಧಾರಿ ವಿಜಯಾ ಭಾಸ್ಕರ, ಚುರುಕು ನಡೆಯ ಬಾಲಗೋಪಾಲರಾದ ಮೃಣಾಲ್ ( ಒಬ್ಬನೇ ಬಾಲಕ) ಹಾಗು ಚಾರ್ವಿ ಪ್ರವೀಣ್ ಮಧ್ಯೆ ಬಂದು ಹೋದ ರಕ್ಕಸ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ ಗೀತಾ ಹರೀಶ್ ಅಂಬಲಪಾಡಿ ಹೀಗೆ ಎಲ್ಲ ಕಲಾವಿದರು ಯಕ್ಷಗಾನದ ಅಂದ ಹೆಚ್ಚಿಸಿದವರು. ಅಂತೂ ರಂಗ ಹಬ್ಬದ ನೆಪದಲ್ಲಿ ರಂಗ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಾ ರಂಗ ಕಲಾವಿದರಿಗೆ ಅವಕಾಶ ನೀಡುತ್ತಾ ಕಲಾ ರಸಿಕರಿಗೆ ರಸದೌತಣ ನೀಡುತ್ತಲಿರುವ ರಜತಪೀಠಪುರದ ಹೆಮ್ಮೆಯ ಸುಮನಸಾ ರಿ. ಕೊಡವೂರು ,ಸಾಂಸ್ಕೃತಿಕ ಕಲಾ ಸಂಘಟನೆಗೆ ಕಲಾಪ್ರೇಮಿಯ ಪ್ರೀತಿಯ ಶುಭ ಹಾರೈಕೆ.
- ಪೂರ್ಣಿಮಾ ಜನಾರ್ದನ್ ಕೊಡವೂರು