ಮಂಜೇಶ್ವರ : ಕರ್ನಾಟಕ ಗಮಕ ಕಲಾ ಪರಿಷತ್ ಮತ್ತು ಸಿರಿಗನ್ನಡ ವೇದಿಕೆ ಸಂಸ್ಥೆಗಳ ಕೇರಳ ಗಡಿನಾಡು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಶ್ರಾವಣ ಮಾಸದ ಗಮಕ ಶ್ರಾವಣ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ದಿನಾಂಕ 4 ಸೆಪ್ಟೆಂಬರ್ 2024ರಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಗಾಯತ್ರಿ ಸಭಾಂಗಣದಲ್ಲಿ ನಡೆಯಿತು.
ಈ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮಾತನಾಡಿ “ಕಲೆ ಮತ್ತು ಸಾಹಿತ್ಯಗಳು ಸರಸ್ವತೀ ದೇವಿಯು ಮನುಜರಿಗೆ ಕರುಣಿಸುವ ಮಹೋನ್ನತವಾದ ವರಗಳು. ಅವುಗಳು ಭಾರತೀಯ ಸಂಸ್ಕೃತಿಯ ಕಣ್ಣುಗಳು. ಗಮಕ ಕಲಾ ಪರಿಷತ್ ಮತ್ತು ಸಿರಿಗನ್ನಡ ವೇದಿಕೆಗಳು ಸಂಯುಕ್ತವಾಗಿ ನಡೆಸಿಕೊಂಡು ಬರುತ್ತಿರುವ ಸಾಹಿತ್ಯ ಸಮಾರಾಧನೆಗಳು ಸಂಪೂರ್ಣ ಯಶಸ್ವಿಯಾಗಿ ನೆರವೇರುತ್ತಿವೆ” ಎಂದು ಹೇಳಿದ್ದಾರೆ.
ಗಮಕ ಕಲಾ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ, ಸಿರಿಗನ್ನಡ ವೇದಿಕೆಯ ಗಡಿನಾಡ ಘಟಕದ ಅಧ್ಯಕ್ಷ ವಿ.ಬಿ. ಕುಳಮರ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಗಮಕ ಶ್ರಾವಣದ ಮಹತ್ವನ್ನು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಕಮಲಾಕ್ಷ ಎಂ. ಶುಭಹಾರೈಸಿದರು.
ಕುಳಮರ್ವ ಶಂಕರ ಶರ್ಮರು ಭಾಮಿನಿ ಷಟ್ಟದಿಯಲ್ಲಿ ರಚಿಸಿದ ‘ಉತ್ತರ ಕಾಂಡ ಕಾವ್ಯಧಾರಾ’ ಮಹಾಕಾವ್ಯದಿಂದಾಯ್ದ ‘ಲಕ್ಷ್ಮಣ ಮಹೋತ್ಸರ್ಗ’ ಎಂಬ ಭಾಗವನ್ನು ದಿವ್ಯಾ ಕಾರಂತ ಸುಶ್ರಾವ್ಯವಾಗಿ ವಾಚಿಸಿದರು. ಗಮಕಿ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಭಾವಪೂರ್ಣವಾಗಿ ವ್ಯಾಖ್ಯಾನ ಮಾಡಿದರು. ಉತ್ತರ ಕಾಂಡ ಕಾವ್ಯಧಾರಾ ಮಹಾಕಾವ್ಯವನ್ನು ರಚಿಸಿದ ಕುಳಮರ್ವ ಶಂಕರ ಶರ್ಮ ಇವರನ್ನು ಕೊಂಡೆವೂರು ಶ್ರೀಗಳು ಮತ್ತು ವಿ.ಬಿ. ಕುಳಮರ್ವ ಇವರುಗಳು ಪ್ರತ್ಯೇಕವಾಗಿ ಶಾಲು ಹೊದೆಸಿ ಹಾರ ಹಾಕಿ ಗೌರವಿಸಿದರು. ದಿನೇಶ್ ಜಾದೂಗಾರ್ ಕಾರ್ಯಕ್ರಮ ನಿರೂಪಿಸಿ, ಅಶೋಕ್ ಬಾಡೂರು ವಂದಿಸಿದರು.