ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಗೋಣಿಕೊಪ್ಪಲು ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಶ್ರೀಮತಿ ದಿ. ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ಜ್ಞಾಪಕಾರ್ಥ ದತ್ತಿ ಕಾರ್ಯಕ್ರಮವು ದಿನಾಂಕ 11 ಸೆಪ್ಟೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ, ಪತ್ರಕರ್ತ ಡಾ. ಜೆ ಸೋಮಣ್ಣ ಇವರು ದತ್ತಿ ಉಪನ್ಯಾಸ ನೀಡುತ್ತಾ “ಹಿಂದಿನ ಕಾಲದ ಎಲ್ಲಾ ದೇವಾಲಯಗಳು ಪ್ರಾಚೀನ ವಿಶೇಷ ಕಟ್ಟಡಗಳು ತಯಾರಾದದ್ದು ವಿಶ್ವಕರ್ಮರಿಂದ. ದ್ವಾರಕ, ಶ್ರೀಲಂಕಾ, ಇಂದ್ರಪ್ರಸ್ಥ ಇವುಗಳೆಲ್ಲದರ ಅರಮನೆಗಳು, ದೇವಾಲಯಗಳ ನಿರ್ಮಾತರು ವಿಶ್ವಕರ್ಮರು. ವಿಶ್ವಕರ್ಮ ಸಮುದಾಯದಲ್ಲಿ ಆಚಾರಿ, ಸಂಚಾರಿ, ಅಕ್ಕಸಾಲಿಗ, ಕಂಚುಗಾರ, ಬಡಗಿ, ಜಾಚಾರ, ಕಲ್ಲುಕುಟಿಗ ಹೀಗೆ ಹತ್ತು ಹಲವು ಪಂಗಡಗಳಿದ್ದು ಅವರೆಲ್ಲರೂ ಕೂಡ ಮರಗೆಲಸ, ಕಲ್ಲು ಕೆಲಸ, ಚಿತ್ರಕಲೆ, ಚಿನ್ನದ ಕೆಲಸ, ಕಬ್ಬಿಣದ ಕೆಲಸ ಇವೆಲ್ಲದರಲ್ಲೂ ಪರಿಣಿತರಾಗಿದ್ದು ಇಂದಿನ ಯಾವುದೇ ಇಂಜಿನಿಯರಿಂಗ್ ತಜ್ಞರಿಗಿಂತಲೂ ಉತ್ತಮ ಕೆಲಸ ಮಾಡಿದ್ದ ನಿರ್ದೇಶನಗಳಿವೆ. ರೂಪ ಆಕಾರ ಇಲ್ಲದ ಮಣ್ಣು, ಕಲ್ಲು, ಮರ, ಕಬ್ಬಿಣ ಇವುಗಳಿಗೆ ತನ್ನ ಮನಸ್ಸಿನಲ್ಲಿ ಚಿಂತಿಸಿದ ರೂಪವನ್ನು ನೀಡಿ ವಿಗ್ರಹ ತಯಾರು ಮಾಡುತ್ತಿದ್ದ ಇವರು ಪ್ರಪಂಚದ ಮೊದಲ ತಂತ್ರಜ್ಞರು ಅಥವಾ ಇಂಜಿನಿಯರ್ ಗಳು , ಸಿಂಧು ನಾಗರಿಕತೆಯ ನಿರ್ಮಾತರು ವಿಶ್ವಕರ್ಮರು ಎಂಬ ದಾಖಲೆ ಇದೆ. ರಾಮಾಯಣ ಕಾಲದ ಪುಷ್ಪಕ ವಿಮಾನವನ್ನು ತಮ್ಮ ಸಮುದಾಯದವರೇ ರಚಿಸಿದ್ದು ಎಂದು ಅವರು ಪ್ರತಿಪಾದಿಸುತ್ತಾರೆ” ಎಂದು ಹೇಳಿದರು.
ದಿ. ಸಂಪಾಜೆ ಸಣ್ಣಯ್ಯ ಪಟೇಲ್ ದತ್ತಿಯ ‘ಗ್ರಾಮೀಣ ಜಾನಪದ ಸೊಗಡು’ ಕುರಿತು ಮಾತನಾಡುತ್ತಾ ನಿವೃತ್ತ ಅಧ್ಯಾಪಕಿ ಹೆಚ್.ಜಿ. ಸಾವಿತ್ರಿ “ಜಾನಪದ ಎನ್ನುವುದು ನಮ್ಮ ಜೀವನದ ಶೈಲಿಯಾಗಿದೆ. ಇಂದಿನ ಜಗತ್ತು ಆಧುನಿಕತೆಯನ್ನು ಮೈಗೂಡಿಸಿಕೊಳ್ಳುವ ಭರದಲ್ಲಿ ಜಾನಪದವನ್ನು ಮರೆಯುವುದು ತರವಲ್ಲ. ನಮ್ಮ ಜನಪದರ ಕುರಿತು ಕವಿರಾಜ ಮಾರ್ಗದಲ್ಲಿ ಕವಿ ಅಂದಿನ ಕಾಲದ ಜನರನ್ನು ವಿಶ್ಲೇಷಿಸುತ್ತ ‘ಕುರಿತೊದಯೂ ಕಾವ್ಯ ಪರಿಣಿತರಗಳ್’ ಎಂದು ಹೇಳಿದ್ದಾರೆ. ವಿದ್ಯಾಭ್ಯಾಸ, ಓದುಬರಹ ಇಲ್ಲದವರು ಕಾವ್ಯ ಕವನ ಗ್ರಂಥಗಳನ್ನು ರಚಿಸಿದ್ದಾರೆ. ತಮ್ಮ ಜೀವನಾನು ಭಾವದಿಂದ ಬದುಕನ್ನು ರೂಪಿಸಿಕೊಳ್ಳುತ್ತಿದ್ದ ಜನಪದರು ತಮ್ಮ ಜೀವನದ ಕಥೆ ವ್ಯಥೆಗಳನ್ನು ಹಾಡುಗಳ ರೂಪದಲ್ಲಿ ರಚಿಸಿ ಒಬ್ಬರ ಬಾಯಿಂದ ಒಬ್ಬರಿಗೆ ಹರಿದು ಬರೆದಿದ್ದು ಯಾರು ಎಂಬ ಮಾಹಿತಿ ಕೂಡ ಇಲ್ಲದೆ ಜಗತ್ ಪ್ರಸಿದ್ಧವಾದ ಹಾಡು ಕವನಗಳು ಕಥೆಗಳು ಇವೆ. ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ, ಕೃಷಿ ಸಮಯದಲ್ಲಿ ಆಡುತ್ತಿದ್ದ ಮಾತುಗಳೇ ಹಾಡುಗಳಾಗಿ ಜಾನಪದ ಗೀತೆಗಳಾಗಿ ಹರಿದಿರುವುದು ನಾವು ನೋಡಿದ್ದೇವೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ “ದತ್ತಿ ಕಾರ್ಯಕ್ರಮಗಳು ನಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುವ ಕಾರ್ಯಕ್ರಮವಾಗಿದ್ದು, ಸಂಪಾಜೆಯ ದೇವಿ ಪ್ರಸಾದ್ ರವರು ತಮ್ಮ ಪಿತ್ರ ದಿ. ಸಂಪಾಜೆ ಸಣ್ಣಯ್ಯ ಪಟೇಲ್ ಇವರ ಜ್ಞಾಪಕರ್ತ ಸ್ಥಾಪಿಸಿದ ದತ್ತಿಯು ಜಿಲ್ಲೆಯ ಪ್ರಥಮ ದತ್ತಿ ಆಗಿದ್ದು, ಗ್ರಾಮೀಣ ಜಾನಪದ ಸೊಗಡಿನ ಕುರಿತು ಇಂದಿನ ವಿದ್ಯಾರ್ಥಿಗಳಿಗೆ ಉಪನ್ಯಾಸ ಮೂಲಕ ತಿಳಿಯಪಡಿಸಲು ಆಶಿಸಿದ್ದರು. ಹೆಬ್ಬಾಲೆಯ ಸುಬ್ರಹ್ಮಣ್ಯರವರು ತಮ್ಮ ತಂದೆ ತಾಯಿ ದಿ. ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ಅವರ ಜ್ಞಾಪಕಾರ್ಥ ದತ್ತಿ ಸ್ಥಾಪಿಸಿ, ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆಯ ಕುರಿತು ಉಪನ್ಯಾಸ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ವಿಶ್ವಕರ್ಮ ಸಮುದಾಯದ ವಿಚಾರಗಳನ್ನು ಅರಿವು ಮಾಡಿಕೊಡಬೇಕೆಂದು ದತ್ತಿ ಸ್ಥಾಪಿಸಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು ನುಡಿ ಆಚಾರ ವಿಚಾರ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸಿಕೊಂಡು ಬರುತ್ತಿದೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗೋಣಿಕೊಪ್ಪಲು ಪ್ರೌಢಶಾಲೆಯ ಕಾರ್ಯದರ್ಶಿ ಗೋಣಿಕೊಪ್ಪಲು ಪುರಸಭೆಯ ಮಾಜಿ ಉಪಾಧ್ಯಕ್ಷ ಕುಪ್ಪಂಡ ಗಣೇಶ್ ತಿಮ್ಮಯ್ಯ ಮಾತನಾಡುತ್ತಾ “ಕನ್ನಡದ ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ವಿದ್ಯಾರ್ಥಿಗಳಿಗೆ ನಾಡು ನುಡಿಯ ಕುರಿತು ಪರಿಚಯ ಮಾಡಿಕೊಡುತ್ತಿರುವುದು ಒಂದು ಉತ್ತಮವಾದ ಕಾರ್ಯ” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪೊನ್ನಂಪೇಟೆ ಹೋಬಳಿಯ ಅಧ್ಯಕ್ಷರಾಗಿದ್ದು, ಗೋಣಿಕೊಪ್ಪಲು ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುಲ್ಲಚಂಡ ಪ್ರಮೋದ್ ಗಣಪತಿಯವರನ್ನು ಮತ್ತು ಹುದಿಕೇರಿ ಹೋಬಳಿಯ ಅಧ್ಯಕ್ಷರಾಗಿದ್ದು ಕರ್ನಾಟಕ ಸರ್ಕಾರದ ಭೂಮಾಪನ ಇಲಾಖೆಯ ಸೂಪರಿಡೆಂಟ್ ಆಗಿದ್ದು, ಇದೀಗ ಎ.ಡಿ.ಎಲ್.ರಾಗಿ ಭಡ್ತಿ ಹೊಂದಿರುವ ಬಾನಂಗಡ ಅರುಣ್ ಕುಮಾರ್ ರವರನ್ನು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾನಂಗಡ ಅರುಣ್ ಧನ್ಯವಾದ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕುಲ್ಲಚಂಡ ಗಣಪತಿ ಮಾತನಾಡುತ್ತಾ ತಮ್ಮ ನಿರಂತರ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆನ್ನೆಲುಬಾಗಿ ನಿಂತಿದ್ದು, ಅದಕ್ಕಾಗಿ ಧನ್ಯವಾದಗಳು ಸಲ್ಲಿಸಿದರು. ವೇದಿಕೆಯಲ್ಲಿ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯ ಚಂಗಪ್ಪ, ಗೋಣಿಕೊಪ್ಪಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಟಿ. ರತೀಶ್ ರೈ ಶ್ರೀಮಂಗಲ ಕ.ಸಾ.ಪ. ಹೋಬಳಿ ಅಧ್ಯಕ್ಷೆ ಉಳುವಂಗಡ ಕಾವೇರಿ ಉದಯ, ಜಿಲ್ಲಾ ಸಮಿತಿ ನಿರ್ದೇಶಕ ವಿ.ಟಿ. ಮಂಜುನಾಥ್, ಬಾಳೆಲೆ ಹೋಬಳಿ ಕಾರ್ಯದರ್ಶಿ ಪಿ.ಜಿ. ಜಾನಕಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಕೆ.ಕೆ. ಶಿವಪ್ಪ, ಶ್ರೀಮತಿ ಗಿರಿಜಾ ಮಂಜುನಾಥ್, ಶ್ರೀಮತಿ ಶಾಂತ ಶ್ರೀನಿವಾಸ್, ಪ್ರಮೋದ್ ಕುಮಾರ್, ನವೀನ್ ಕುಮಾರ್, ಬಾವಾ ಮಾಲ್ದಾರೆ, ಪುರುಷೋತ್ತಮ್, ಸಾಹಿತಿ ಟಿ.ಆರ್. ವಿನೋದ್, ಶ್ರೀಮತಿ ಸಂಧ್ಯಾ ಕಾಮತ್, ಶ್ರೀಮತಿ ಶಾಂಭವಿ ಕಾಮತ್, ಶ್ರೀಮತಿ ಚಂದನಾ ಮಂಜುನಾಥ್, ಶ್ರೀಮತಿ ನಿರ್ಮಲ ಬೋಪಣ್ಣ, ಬಾಳೆಲೆ ವಿಜಯಲಕ್ಷ್ಮಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ. ಚಂದ್ರಶೇಖರ್, ಪೊನ್ನಂಪೇಟೆ ಹೋಬಳಿ ಗೌರವ ಕೋಶಾಧಿಕಾರಿ ಚಂದನ್ ಕಾಮತ್, ಅಧ್ಯಾಪಕರುಗಳಾದ, ಗಿಡ್ಡಯ್ಯ, ಪ್ರೌಢಶಾಲಾ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪೊನ್ನಂಪೇಟೆ ತಾಲ್ಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ಶೀಲಾ ಬೋಪಣ್ಣ ನಿರೂಪಿಸಿ, ಅದ್ಯಾಪಕ ಕೃಷ್ಣ ಚೈತನ್ಯ ಸ್ವಾಗತಿಸಿ, ಅಧ್ಯಾಪಕಿ ಸಬೀನಾ ವಂದಿಸಿದರು. ಮೊದಲಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನಾಡಗೀತೆ ಕಾರ್ಯಕ್ರಮ ನಡೆಯಿತು.