ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇದರ 2024-25ನೇ ಸಾಲಿನ ರಂಗ ಚಟುವಟಿಕೆಗಳ ‘ನಾಂದಿ ಆರಂಭೋತ್ಸವ’ವನ್ನು ದಿನಾಂಕ 15 ಸೆಪ್ಟೆಂಬರ್ 2024ರಂದು ದಾವಣಗೆರೆಯ ಮೆಡಿಕಲ್ ಕಾಲೇಜ್ ಆವರಣ, ಜೆ.ಜೆ.ಎಂ. ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 10-30 ಗಂಟೆಗೆ ‘ವರ್ತಮಾನ ವೃತ್ತಿ ರಂಗಭೂಮಿ : ಬಿಕ್ಕಟ್ಟು ಮತ್ತು ಪರಿಹಾರ’ ಎಂಬ ವಿಷಯದ ಬಗ್ಗೆ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಡಾ. ಪ್ರಕಾಶ ಗರುಡ ಇವರು ‘ನಾಟಕ ಕಂಪನಿ ಪರಂಪರೆ ಮತ್ತು ಪ್ರಯೋಗಶೀಲತೆ’, ಶ್ರೀ ಬಸವರಾಜ ಬೆಂಗೇರಿ ಇವರು ‘ಸಾಹಿತ್ಯ ಮತ್ತು ಸಂಗೀತ’ ಮತ್ತು ಶ್ರೀ ಅರುಣ್ ಸಾಗರ್ ಇವರು ‘ರಂಗ ಪರಿಕರ ಮತ್ತು ರಂಗಸಜ್ಜಿಕೆ” ಎಂಬ ವಿಷಯಗಳ ಬಗ್ಗೆ ಪ್ರಬಂಧ ಮಂಡನೆ ಮಾಡಲಿರುವರು. ಬಳಿಕ ರಂಗ ಗೀತೆಗಳ ಗಾಯನ ನಡೆಯಲಿದೆ.
ಸಂಜೆ 4-00 ಗಂಟೆಗೆ ಸಾಣೇಹಳ್ಳಿಯ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಇವರ ರಂಗ ಸಾನಿಧ್ಯದಲ್ಲಿ ಸಚಿವರಾದ ಶ್ರೀ ಎಸ್.ಎಸ್. ಮಲ್ಲಿಕಾರ್ಜುನ್ ಇವರು ಉದ್ಘಾಟನೆ ಮಾಡಲಿದ್ದಾರೆ. ಶಾಸಕರಾದ ಡಾ. ಶಾಮ ನೂರು ಶಿವ ಶಂಕರಪ್ಪ ಇವರ ಅಧ್ಯಕ್ಷತೆಯಲ್ಲಿ ನಾದಬ್ರಹ್ಮ ಹಂಸಲೇಖ ಇವರು ರಂಗಜ್ಯೋತಿ ಬೆಳಗುವರು. ಸಂಜೆ 6-00 ಗಂಟೆಗೆ ನಡೆಯಲಿರುವ ನಾಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನ ಕಡಕೋಳ ಇವರು ವಹಿಸಲಿದ್ದು, ಮಾನ್ಯ ಸಂಸದರಾದ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ ಇವರು ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ಪಂಡಿತ ಪುಟ್ಟರಾಜ ಗವಾಯಿಗಳು ರಚಿಸಿರುವ ‘ಅಕ್ಕ ಮಹಾದೇವಿ’ ಎಂಬ ನಾಟಕವನ್ನು ಮಹಾದೇವ ಹೊಸೂರು ಇವರ ನಿರ್ದೇಶನದಲ್ಲಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಡಿತ ಪಂಚಾಕ್ಷರ ಗವಾಯಿಗಳ ನಾಟ್ಯ ಸಂಘ ತಂಡದವರು ಪ್ರಸ್ತುತ ಪಡಿಸಲಿದ್ದಾರೆ.