ಬದಿಯಡ್ಕ : ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯದ ಸಭಾಂಗಣದಲ್ಲಿ ದಿನಾಂಕ 15 ಸೆಪ್ಟೆಂಬರ್ 2024ರಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಕೇಂದ್ರ ಕಚೇರಿ, ಹಾಸನ, ಕಾಸರಗೋಡು ಜಿಲ್ಲಾ ಘಟಕ, ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕಾಸರಗೋಡಿನ ವಿಸ್ಡಮ್ ಇನ್ಸ್ಟಿಟ್ಯೂಷನ್ಸ್ ನೆಟ್‌ವರ್ಕ್ ಸಂಯುಕ್ತ ಆಶ್ರಯದಲ್ಲಿ ಕೇರಳ-ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ, ಸಂಸ್ಕೃತಿ ಸಮ್ಮೇಳನವು ನಡೆಯಿತು.
ಈ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ‘ಯಾರು ಏನೇ ಹೇಳಿದರೂ ಕೃಷಿಕರು ದೇಶದ ಕಾಯಕ ಯೋಗಿಗಳು. ಕೃಷಿಕರು ತಮ್ಮ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡುತ್ತಾರೆ. ದೇಶದ ಪ್ರಗತಿಯಲ್ಲಿ ಅವರ ಕೊಡುಗೆ ಮಹತ್ವ ಪಡೆದಿದೆ. ಸಾಹಿತ್ಯ, ಶಿಕ್ಷಣ, ಕೃಷಿ, ಸಂಸ್ಕೃತಿ ಎಂಬ ಪ್ರಧಾನ ಅಂಶಗಳನ್ನು ಸೇರಿಸಿಕೊಂಡು ನಡೆಯುವ ಈ ಸಮ್ಮೇಳನವು ಯಾವ ಅಖಿಲ ಭಾರತ ಮಟ್ಟದ ಸಮ್ಮೇಳನಕ್ಕೂ ಕಡಿಮೆಯಲ್ಲ’ ಎಂದು ಶ್ಲಾಘಿಸಿದರು.
ಶಿಕ್ಷಣ ತಜ್ಞ ವಿ.ಬಿ. ಕುಳಮರ್ವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿ.ಬಿ. ಕುಳಮರ್ವ, ಲಲಿತಾಲಕ್ಷ್ಮಿ ಕುಳಮರ್ವ ದಂಪತಿಗೆ ‘ಸ್ಪಂದನ ಶಿಕ್ಷಣ ಸಿರಿ’ ಸನ್ಮಾನ, ಕೆ. ವಾಮನ್ ರಾವ್ ಬೇಕಲ್, ಸಂಧ್ಯಾರಾಣಿ ಟೀಚರ್ ದಂಪತಿಗೆ ‘ಕನ್ನಡ ನುಡಿಸಿರಿ’ ದಂಪತಿ ಸನ್ಮಾನ, ಪುಟ್ಟಸ್ವಾಮಿ ಹೊಳೇನರಸೀಪುರ, ಎಚ್.ಎಂ. ರಮೇಶ್ ಚನ್ನರಾಯಪಟ್ಟಣ ಅವರಿಗೆ ‘ಸ್ಪಂದನ ಕೃಷಿ ಸಿರಿ’ ಪ್ರಶಸ್ತಿ, ಸಾಹಿತಿಗಳಾದ ಕೆ. ನರಸಿಂಹ ಭಟ್ ಏತಡ್ಕ, ವಿರಾಜ್ ಅಡೂರು ಅವರಿಗೆ ‘ಸಾಹಿತ್ಯ ಸೇವಾ ವಿಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕನ್ನಡ ಭವನ ಗ್ರಂಥಾಲಯದ ವತಿಯಿಂದ ನೀಡುವ ‘ಕನ್ನಡ ಪಯಸ್ವಿನಿ ಪ್ರಶಸ್ತಿ-2024’ನ್ನು ಭಾಗ್ಯಲಕ್ಷ್ಮಿ ವಿ. ಹಂಪಿ, ಸುಂದರೇಶ್ ಡಿ. ಉಡುವಾರೆ, ಆಶಾಕಿರಣ ಬೇಲೂರು, ಗಿರಿತೇಜ ತೇಜೋಮಯ ಹಾಸನ, ಜಿ.ಎಸ್. ಕಲಾವತಿ ಮಧುಸೂದನ, ಮಂಗಳಾ ನಂದಕುಮಾರ್, ಲಾವಣ್ಯ ಶೇರುಗಾರು ಉಪ್ಪಿನಕುದ್ರು, ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು ಇವರುಗಳಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಧ್ವಜಾರೋಹಣ, ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ, ಜ್ಯೋತಿ ಹಾಸನ ಮತ್ತು ತಂಡದಿಂದ ನಾಡಗೀತೆ, ಕೃಷ್ಣಿಮಾ ಭುವನೇಶ್ ಕೂಡ್ಲು ಇವರಿಂದ ಸ್ವಾಗತ ನೃತ್ಯ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶಿಕ್ಷಕಿ ಕೆ.ಟಿ. ಶ್ರೀಮತಿ, ನಿವೃತ್ತ ಪ್ರಾಂಶುಪಾಲ ಪ್ರೋ. ಶ್ರೀನಾಥ್ ಉಪಸ್ಥಿತರಿದ್ದರು. ಜಿ.ಎಸ್. ಕಲಾವತಿ ಮಧುಸೂದನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ವಾಮನ್ ರಾವ್ ಬೇಕಲ್ ಸ್ವಾಗತಿಸಿ, ನರಸಿಂಹ ಭಟ್ ಏತಡ್ಕ ವಂದಿಸಿ, ವಿರಾಜ್ ಅಡೂರು ನಿರೂಪಿಸಿದರು.