ಮೂಡುಬಿದಿರೆ : ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು ಇದರ ನೇತೃತ್ವದಲ್ಲಿ ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ನಡೆದ ‘ಜಾನಪದ ಉಚ್ಚಯ – 2024 ನಮ್ಮ ತುಳುನಾಡ್ ಕಲಾ ಪಂಥ’ ಸ್ಪರ್ಧೆಯಲ್ಲಿ ಐವತ್ತು ಸಾವಿರ ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆದ ಮೂಡುಬಿದಿರೆ ತುಳುಕೂಟದ ಸದಸ್ಯರು ಮತ್ತು ಕಲಾವಿದರ ತಂಡಕ್ಕೆ ಅಭಿನಂದನಾ ಸಮಾರಂಭವು ದಿನಾಂಕ 14 ಸೆಪ್ಟೆಂಬರ್ 2024ರಂದು ಮೂಡಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ವಕೀಲರು ಹಾಗೂ ಮೂಡುಬಿದಿರೆ ತುಳುಕೂಟದ ಗೌರವಾಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್ ಮಾತನಾಡಿ “ತುಳು ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಅಭಿಮಾನದ ಜೊತೆ ಸಂಘಟನಾತ್ಮಕವಾಗಿ ಒಂದುಗೂಡಿದರೆ ಯಾವುದೇ ಕಾರ್ಯದಲ್ಲಿಯೂ ಯಶಸ್ಸು ಪಡೆದುಕೊಳ್ಳಲು ಸಾಧ್ಯ. ಮೂಡುಬಿದಿರೆ ತುಳುಕೂಟದ ಸದಸ್ಯರು ಈ ನಿಟ್ಟಿನಲ್ಲಿ ಮಾಡಿದ ಸಾಧನೆ ಪ್ರಶಂಸನೀಯವಾದುದು.” ಎಂದರು. ತುಳುಕೂಟದ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ಅಭಿನಂದಿಸಿ ಮಾತನಾಡಿದರು.
ಕಲಾಪಂಥದ ಸ್ಪರ್ಧೆಯಲ್ಲಿ ಒಟ್ಟು ಹದಿಮೂರು ತಂಡಗಳು ಭಾಗವಹಿಸಿದ್ದು ಮೂಡುಬಿದಿರೆ ತುಳುಕೂಟದ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದ್ದು, ಇಪ್ಪತ್ತು ನಿಮಿಷಗಳ ಅವಧಿಯ ಈ ಪ್ರದರ್ಶನದ ಸಾಹಿತ್ಯ, ಪರಿಕಲ್ಪನೆ ಮತ್ತು ನಿರ್ದೇಶನದ ಹೊಣೆ ಹೊತ್ತು ಅದರ ಯಶಸ್ಸಿಗಾಗಿ ಶ್ರಮಿಸಿದ ಪ್ರಶಾಂತ್ ಕೈಕಂಬ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಮಕ್ಕಳಿಂದ ಹಿಡಿದು ಹಿರಿಯರ ತನಕ ಪ್ರದರ್ಶನದಲ್ಲಿ ಪಾಲ್ಗೊಂಡ ಮೂವತ್ತಕ್ಕೂ ಹೆಚ್ಚಿನ ಸದಸ್ಯರು ಮತ್ತು ಕಲಾವಿದರನ್ನು ಪ್ರಮಾಣಪತ್ರದೊಂದಿಗೆ ಸತ್ಕರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ತುಳುಕೂಟದ ಅಧ್ಯಕ್ಷರಾದ ತೋಡಾರುಗುತ್ತು ಧನಕೀರ್ತಿ ಬಲಿಪ ಒಗ್ಗಟ್ಟಿನಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಸದಸ್ಯರಿಗೆ ಹಾಗೂ ಸಹಕರಿಸಿದ ಸರ್ವರಿಗೂ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಈಗಾಗಲೇ ಇದರ ಪ್ರದರ್ಶನಕ್ಕೆ ಹಲವು ಕಡೆಗಳಿಂದ ಬೇಡಿಕೆ ಬಂದಿದ್ದು ಮುಂದೆ ಪ್ರದರ್ಶನ ನೀಡುವಲ್ಲಿ ಎಲ್ಲರ ಸಹಕಾರ ನಿರೀಕ್ಷಿಸುವುದಾಗಿಯೂ ತಿಳಿಸಿದರು. ಸ್ಥಾಪಕಾಧ್ಯಕ್ಷರಾದ ಚಂದ್ರಹಾಸ ದೇವಾಡಿಗ, ಕಾರ್ಯದರ್ಶಿಗಳಾದ ಕೆ.ವೇಣುಗೋಪಾಲ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ನಿಷ್ಕಾ ರೈ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಜೊತೆ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿ, ಶ್ರೀಮತಿ ಚೇತನಾ ಹೆಗ್ಡೆ ನಿರೂಪಿಸಿ, ಜಿನೇಂದ್ರ ಹೆಗ್ಡೆ ವಂದಿಸಿದರು.