ಮಂಗಳೂರು : ಶ್ರೀ ಶಾರದಾ ನಾಟ್ಯಾಲಯದ 30ನೇ ವರ್ಷದ ಕಾರ್ಯಕ್ರಮವಾದ ‘ತ್ರಿದಶ ನಾಟ್ಯ ಕಲೋತ್ಸವ’ದ ಉದ್ಘಾಟನೆಯು ದಿನಾಂಕ 14 ಸೆಪ್ಟೆಂಬರ್ 2024ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬಹಳ ವಿಜೃಂಭಣೆಯಿಂದ ನೆರವೇರಿತು.
ಸನಾತನ ನಾಟ್ಯಾಲಯದ ನೃತ್ಯ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಇವರು ನಾಟ್ಯಾಧಿದೇವತೆಯಾದ ನಟರಾಜನಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು. ‘ತ್ರಿದಶ ನಾಟ್ಯ ಕಲೋತ್ಸವ’ ಉದ್ಘಾಟನೆಯನ್ನು ಉಡುಪಿಯ ಖ್ಯಾತ ವಿಮರ್ಶಕರಾದಂತಹ ಗುರು ವಿದುಷಿ ಶ್ರೀಮತಿ ಪ್ರತಿಭಾ ಸಾಮಗರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬಂದಂತಹ ಮಾಜಿ ಶಾಸಕ ಕ್ಯಾಪ್ಟನ್ ಶ್ರೀ ಗಣೇಶ್ ಕಾರ್ಣಿಕ್, ವಿದುಷಿ ಶ್ರೀಮತಿ ಶ್ರೀಲತಾ ನಾಗರಾಜ್, ‘ತ್ರಿದಶ ನಾಟ್ಯ ಕಲೋತ್ಸವ’ದ ಸಮಿತಿಯ ಅಧ್ಯಕ್ಷರಾದ ಪ್ರೊ. ಶ್ರೀ ರಮೇಶ್ ಭಟ್ ಎಸ್.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶ್ರೀಲತಾ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಶ್ರೀ ದಾಮೋದರ್ ಶರ್ಮಾ ಇವರು ಕಾರ್ಯಕ್ರಮದ ನಿರೂಪಣೆಗೈದರು. ಶ್ರೀ ಶಾರದಾ ನಾಟ್ಯಾಲಯದ ಹಿರಿಯ ನೃತ್ಯ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮದ ಬಳಿಕ ಚೆನ್ನೈಯ ಖ್ಯಾತ ಅಂತರಾಷ್ಟ್ರೀಯ ನೃತ್ಯ ಪಟು ಡಾ. ಅಪೂರ್ವ ಜಯರಾಮನ್ ಅವರಿಂದ ಅತ್ಯದ್ಭುತ ನೃತ್ಯ ಪ್ರದರ್ಶನ ನೆರವೇರಿತು. ಶ್ರೀ ಶಾರದಾ ನಾಟ್ಯಾಲಯದ ನಿರ್ದೇಶಕಿ ವಿದುಷಿ ಶ್ರೀಮತಿ ಭಾರತಿ ಸುರೇಶ್ ಪ್ರಾಸ್ತಾವಿಕಗೈದರೆ ಸಹ ನಿರ್ದೇಶಕಿ ವಿದುಷಿ ಶ್ರೀಮತಿ ಪ್ರಣತಿ ಸತೀಶ್ ವಂದಿಸಿದರು.