ಸಾಲಿಗ್ರಾಮ : ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಇವರು ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2024 ಪ್ರಶಸ್ತಿ’ಗೆ ಈ ನಾಡಿನ ಹಿರಿಯ ಸಾಹಿತಿ, ಸಂಘಟಕ, ಕವಿ, ಕಾದಂಬರಿಕಾರ, ಸಾಂಸ್ಕೃತಿಕ ಚಿಂತಕ ಡಾ. ನಾ. ಮೊಗಸಾಲೆಯವರು ಆಯ್ಕೆಯಾಗಿದ್ದಾರೆ.
ಅತ್ಯಂತ ಗ್ರಾಮೀಣ ಪ್ರದೇಶವಾದ ಕಾಂತಾವರದಲ್ಲಿ ಕನ್ನಡ ಸಂಘ ಸ್ಥಾಪಿಸಿ ನಿರಂತರ ಚಟುವಟಿಕೆಯ ಮೂಲಕ ವಿಶ್ವ ಭೂಪಟದಲ್ಲಿ ಕಾಂತಾವರವನ್ನು ಗುರುತಿಸುವಂತೆ ಮಾಡಿದ ಡಾ. ಮೊಗಸಾಲೆಯವರ ಸಾಧನೆ ಅನನ್ಯವಾದುದು. ಕಾರಂತರಂತೆ ಸಂಘಟನೆ, ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಕಾದಂಬರಿಕಾರರಾಗಿ, ಕಥೆಗಾರರಾಗಿ ಕವಿಯಾಗಿ, ಮೊಗಸಾಲೆಯವರ ಸಾಧನೆ ಬೆಲೆಕಟ್ಟಲಾಗದು. ಈ ಹಿಂದೆ ಶ್ರೀಮತಿ ಮಾಲಿನಿ ಮಲ್ಯ, ಶ್ರೀ ಎಸ್. ನಾರಾಯಣ ರಾವ್, ಪೇತ್ರಿ ಮಾಧವ ನಾಯಕ್, ಶ್ರೀ ಶ್ರೀನಿವಾಸ ಸಾಸ್ತಾನ, ಶ್ರೀ ಹಿರಿಯಡ್ಕ ಗೋಪಾಲರಾವ್, ಶ್ರೀ ಎಚ್. ಇಬ್ರಾಹಿಂ ಸಾಹೇಬ್, ಶ್ರೀ ಪಾಂಡೇಶ್ವರ ಚಂದ್ರಶೇಖರ ಚಡಗ, ಶ್ರೀ ಬನ್ನಂಜೆ ಸಂಜೀವ ಸುವರ್ಣ, ಶ್ರೀಮತಿ ವೈದೇಹಿ ಇವರುಗಳು ಕಾರಂತ ಪುರಸ್ಕಾರ ಪಡೆದವರಾಗಿದ್ದಾರೆ.
ಈ ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಫಲಪುಷ್ಪ, ಶಾಲು ಇತ್ಯಾದಿಗಳಿಂದ ಕೂಡಿರುತ್ತದೆ. ಗೆಳೆಯರ ಬಳಗ ‘ಕಾರಂತ ಪುರಸ್ಕಾರ-2024’ನ್ನು ದಿನಾಂಕ 19 ಅಕ್ಟೋಬರ್ 2024ರ ಶನಿವಾರ ಸಂಜೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಜರಗಲಿರುವ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು ಎಂದು ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಥ ಹೊಳ್ಳ ತಿಳಿಸಿದ್ದಾರೆ.