ಉಡುಪಿ : ಉಡುಪಿ ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಲಾಗುತ್ತಿರುವ ಸುವರ್ಣ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರ್ಟಿಸ್ಟ್ ಫೋರಂ ಸಹಯೋಗದೊಂದಿಗೆ ಮಕ್ಕಳಿಗಾಗಿ ಏರ್ಪಡಿಸಿದ ಚಿತ್ರಕಲಾ ಸ್ಪರ್ಧೆಯು ದಿನಾಂಕ 13 ಸೆಪ್ಟೆಂಬರ್ 2024ರ ಶುಕ್ರವಾರದಂದು ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠಾಧಿಶರಾದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ “ಕರ್ನಾಟಕ ನಾಮಕರಣಗೊಂಡು 50 ಸಂವತ್ಸರಗಳು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಕನ್ನಡ ಭಾಷೆ ನಾಡಿನ ಕನ್ನಡಿಗರ ಉಸಿರಾಗಲಿ. ಬಹುಮಾನಗಳಿಕೆಗಿಂತ ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮುಖ್ಯ. ಸ್ಪರ್ಧಾ ಮನೋಭಾವ ಮಕ್ಕಳಲ್ಲಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ “ಬಹು ಭಾಷೆ, ಬಹು ಕಲೆ ಸಂಸ್ಕೃತಿಯ ಈ ಕರಾವಳಿ ಭಾಗದಲ್ಲಿ ಮುಂದಿನ ತಿಂಗಳು ಮಂಗಳೂರಿನಲ್ಲಿ ನಡೆಯುವ ಬಹು ಸಂಸ್ಕೃತಿ ಉತ್ಸವಕ್ಕೆ ಪೂರಕವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇರೆ ಬೇರೆ ಸ್ಪರ್ಧೆಗಳನ್ನು ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರ ಮೂಲಕ ನಮ್ಮ ರಾಷ್ಟ್ರೀಯ ಹಬ್ಬಗಳು, ಆಚಾರ- ವಿಚಾರ, ಸಂಸ್ಕೃತಿಯನ್ನು ಮೈಗೊಡಿಸಿಕೊಂಡು ದೇಶದ ಸುಸಂಸ್ಕೃತ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಬೇಕು.” ಎಂದರು .
ಜಿಲ್ಲಾಮಟ್ಟದ ಈ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ – ಪ್ರಥಮ ಬಹುಮಾನ ರೂಪಾಯಿ 3,000, ದ್ವಿತೀಯ ಬಹುಮಾನ ರೂಪಾಯಿ 2,000 , ತೃತೀಯ ಬಹುಮಾನ ರೂಪಾಯಿ 1,000 – ನಗದು ಹಾಗೂ 5 ಸಮಾಧಾನಕರ ಬಹುಮಾನಗಳು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಪ್ರಮಾಣ ಪತ್ರವನ್ನು ಉಡುಪಿಯ ಆರ್ಟಿಸ್ಟ್ ಫೋರಂ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಣಪತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್, ಆರ್ಟಿಸ್ಟ್ ಫೋರಂ ಉಡುಪಿ ಇದರ ಕಾರ್ಯದರ್ಶಿಗಳಾದ ಸಕು ಪಾಂಗಾಳ ಹಾಗೂ ಶ್ರೀಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಶ್ರೀ ಕೃಷ್ಣ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ವಂದಿಸಿದರು.