ಮಂಗಳೂರು : ರತ್ನ ಕಲಾಲಯ ಮಂಗಳೂರು ಇದರ 3ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ‘ಅನುಪದಮ್ – 2024’ ಇದರಲ್ಲಿ ರತ್ನ ಕಲಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ತಾಳ ಪ್ರವೀಣ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಇವರಿಂದ ವಿದ್ಯಾರ್ಥಿಗಳು ಹಾಗೂ ಹೆತ್ತವರಿಗಾಗಿ ನೃತ್ಯದ ಬಗ್ಗೆ ಪ್ರೇರಣೆ ನೀಡುವ ಕಾರ್ಯಾಗಾರ ದಿನಾಂಕ 14 ಸೆಪ್ಟೆಂಬರ್ 2024ರಂದು ಮಂಗಳೂರಿನ ಉರ್ವಸ್ಟೋರ್ ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ನಾಟರಾಜನ ಮೂರ್ತಿಗೆ ಮಂಗಳ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ‘ಕರ್ನಾಟಕ ರಾಜ್ಯೋತ್ಸವ’ ಹಾಗೂ ‘ನಾಟ್ಯರಾಣಿ ಶಾಂತಲಾ’ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರನ್ನು ಚಂಡೆ ವಾದನಗಳ ಮೂಲಕ ಬರಮಾಡಿಕೊಳ್ಳಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಭಕ್ತಿ – ಗೌರವಪೂರ್ಣವಾದ ಪಾದ ಪೂಜೆ ನಡೆಯಿತು. ಕಲಾಸಕ್ತರನ್ನು ಉದ್ದೇಶಿಸಿ ಮಾತನಾಡಿದ ನಾಟ್ಯಗುರು “ಶಾಸ್ತ್ರೀಯತೆಯನ್ನು ಉಳಿಸಿಕೊಂಡು ಏನೂ ತೊಂದರೆಯಾಗದಂತೆ ಸನಾತನ ಕಲೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲಾ ನೃತ್ಯಗುರುಗಳಿಗೂ ಇದೆ” ಎನ್ನುತ್ತಾ ರತ್ನ ಕಲಾಲಯದ ಉತ್ತಮ ಭವಿಷ್ಯಕ್ಕೆ ಶುಭ ಹಾರೈಸಿದರು.
ಖ್ಯಾತ ಹರಿದಾಸರು ಹಾಗೂ ವಿಶ್ವಕರ್ಮ ಕಲಾ ಪರಿಷತ್ (ರಿ.) ಮಂಗಳೂರು ಇದರ ಅಧ್ಯಕ್ಷರಾದ ಡಾ. ಎಸ್. ಪಿ. ಗುರುದಾಸ್ ಮಾತನಾಡಿ “ಯಾವುದೇ ಕಲೆಯನ್ನು ಆಯ್ಕೆಮಾಡಲು ಮೊದಲು ಬೇಕಾಗಿರುವುದು ಪ್ರತಿಭೆ. ಪ್ರತಿಭೆಯ ಹರಿವು ಎಂಬುದು ವ್ಯಕ್ತಿಯ ಕಲ್ಯಾಣ ಮತ್ತು ಸಮಾಜದ ಶ್ರೇಯಸ್ಸಿಗಾಗಿ ಸದ್ಬಳಕೆಯಾಗಬೇಕು. ಹರಿಯುವ ನದಿಗೆ ದಡ ಇರುವಂತೆ ಯಾವುದೇ ಕಲೆಗೆ ಶಾಸ್ತ್ರದ ಚೌಕಟ್ಟು ಬೇಕು. ದಡ ಇಲ್ಲದ ನದಿಯ ಪ್ರವಾಹದಿಂದ ಅನಾಹುತ ಸಂಭವಿಸುವಂತೆ ಶಾಸ್ತ್ರದ ಚೌಕಟ್ಟು ಇಲ್ಲದ ಕಲೆಯು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳಬಹುದು. ಎಂದರು.
ಎಸ್. ಕೆ. ಜಿ. ಐ. ಕೋ – ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಅಧ್ಯಕ್ಷರಾದ ಶ್ರೀ. ಪಿ. ಉಪೇಂದ್ರ ಆಚಾರ್ಯ ಮಾತನಾಡಿ “ಗುರುವಿನ ಮೇಲಿನ ವಿಶ್ವಾಸ ಹಾಗೂ ತಮ್ಮ ಶಕ್ತಿಯ ಮೇಲಿನ ನಂಬಿಕೆಯಿಂದ ವಿದ್ಯೆಯನ್ನು ಸಿದ್ಧಿಸಿಕೊಂಡು ರತ್ನ ಕಲಾಲಯ ಮುನ್ನಡೆಯಲಿ.” ಎಂದು ಹಾರೈಸಿದರು.
ತಾಳ ಪ್ರವೀಣ ವಿದ್ವಾನ್ ಮಂಜುನಾಥ್ ಎನ್. ಪುತ್ತೂರು ಮಾತನಾಡಿ ನೃತ್ಯ ವಿದ್ಯಾರ್ಥಿಗಳು ತಮ್ಮಲ್ಲಿ ಕ್ರಿಯಾಶೀಲತೆ, ಶ್ರದ್ಧೆ, ಭಕ್ತಿ ಮತ್ತು ಪರಿಶ್ರಮದ ಕೆಲಸ ಇವುಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದನ್ನು ಕಥೆಗಳ ಮೂಲಕ ವಿವರಿಸುತ್ತಾ, ಬೈಕಾಡಿ ಪ್ರತಿಷ್ಠಾನ ಮತ್ತು ರತ್ನ ಕಲಾಲಯ ಅತ್ಯಲ್ಪ ಸಮಯದಲ್ಲಿ ಸಾಧಿಸಿದ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷೆಯಾದ ರತ್ನಾವತಿ ಜೆ. ಬೈಕಾಡಿ ಸ್ವಾಗತಿಸಿ, ವಾರುಣಿ ಮಂಗಳಾದೇವಿ ಇವರು ಸಭಾಕಾರ್ಯಕ್ರಮ ಹಾಗೂ ರಶ್ಮಿ ಭಟ್ ಭಾರತನಾಟ್ಯ ಕಾರ್ಯಕ್ರಮ ನಿರೂಪಿಸಿ, ರತ್ನ ಕಲಾಲಯದ ನಿರ್ದೇಶಕಿಯಾದ ಅಕ್ಷತಾ ಬೈಕಾಡಿ ವಂದಿಸಿದರು. ಬೈಕಾಡಿ ಪ್ರತಿಷ್ಠಾನದ ಕಾರ್ಯದರ್ಶಿ ಭರತ್ ರಾಜ್ ಬೈಕಾಡಿ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ರತ್ನಕಲಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು. ಇವರಿಗೆ ನಟುವಾಂಗದಲ್ಲಿ ಅಕ್ಷತಾ ಬೈಕಾಡಿ, ಗಾಯನದಲ್ಲಿ ಲಾವಣ್ಯಾ ಸುಧಾಕರ್ ಮಂಗಳೂರು, ಮೃದಂಗದಲ್ಲಿ ಮನೋಹರ ರಾವ್ ಮಂಗಳೂರು, ಕೊಳಲಿನಲ್ಲಿ ರಾಜಗೋಪಾಲನ್ ಕಾಞಗಾಡ್ ಹಾಗೂ ಪ್ರಸಾಧನದಲ್ಲಿ ವೆಂಕಟೇಶ್ ಆಚಾರ್ಯ ಮಂಗಳೂರು ಸಹಕರಿಸಿದರು.