ಬೆಳ್ತಂಗಡಿ: ಮಂಗಳೂರಿನ ನಾಟ್ಯಾರಾಧನಾ ಸಂಸ್ಥೆಯ ತ್ರಿಂಶೋತ್ಸವದ ಅಂಗವಾಗಿ ಆಯೋಜಿಸಿದ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಮೃತ – 9’ರ ‘ದೃಷ್ಟಿ – ಸೃಷ್ಟಿ’ ಕಾರ್ಯಕ್ರಮವು ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ 14 ಸೆಪ್ಟೆಂಬರ್ 2024ರ ಶನಿವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಳದ ಆಡಳಿತ ಮೊಕ್ತಸರ ಶರತ್‌ಕೃಷ್ಣ ಪಡ್ಡೆಟ್ನಾಯ ಮಾತನಾಡಿ “ಹಿರಿಯರು ಬೆಳೆಸಿದ ಕಲಾಪರಂಪರೆಯನ್ನು ಉಳಿಸುವ ಕಾರ್ಯ ಮಂಗಳೂರಿನ ನಾಟ್ಯಾರಾಧನಾ ಕಲಾಕೇಂದ್ರ ಮಾಡುತ್ತಿರುವುದು ಶ್ಲಾಘನೀಯ. ಭಾರತೀಯ ಪರಂಪರೆಯಲ್ಲಿ ಕಲೆಗಳಿಗೆ ದೈವತ್ವದ ಸ್ಥಾನ ನೀಡಲಾಗಿದೆ.” ಎಂದರು.
ಉಜಿರೆ ಎಸ್. ಡಿ. ಎಂ.ಕಾಲೇಜಿನ ಪ್ರಾಚಾರ್ಯ ಬಿ. ಎಂ. ಕುಮಾರ ಹೆಗ್ಡೆ, ಕಲಾನಿಕೇತನ ಕಲ್ಲಡ್ಕ ಇದರ ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್, ನೀನಾಸಂ ಕಲಾವಿದೆ ಸಂಗೀತಾ ಭಿಡೆ, ಪುರೋಹಿತ ಗಣಪತಿ ಚಿಪಳೂಣ್ಕರ್, ಕಲಾಕೇಂದ್ರದ ಟ್ರಸ್ಟಿ ಬಿ. ರತ್ನಾಕರ ರಾವ್ ಉಪಸ್ಥಿತರಿದ್ದರು. ಸಂಯೋಜಕಿ ಚಿತ್ರಾ ಭಿಡೆ ಸ್ವಾಗತಿಸಿ, ಪ್ರಧಾನ ಟ್ರಸ್ಟಿ ವಿದುಷಿ ಸುಮಂಗಲಾ ರಾವ್ ಪ್ರಸ್ತಾವಿಕವಾಗಿ ಮಾತನಾಡಿದರು.
ಸಭಾಕಾರ್ಯಕ್ರಮದ ಬಳಿಕ ವಿದುಷಿ ಸುಮಂಗಲಾ ರಾವ್, ವಿದ್ವಾನ್ ಶೋಧನ್ ಕುಮಾರ್, ಕುಮಾರಿ ವೃಂದಾ ಜಿ. ರಾವ್, ಕುಮಾರಿ ಧರಿತ್ರಿ ಭಿಡೆ ಹಾಗೂ ಕುಮಾರಿ ಹಂಸಿನಿ ಭಿಡೆ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಇವರಿಗೆ ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ ದೀಪಕ್ ಪುತ್ತೂರು, ಮೃದಂಗದಲ್ಲಿ ವಿದ್ವಾನ್ ಶ್ಯಾಮ ಭಟ್ ಪುತ್ತೂರು ಹಾಗೂ ಕೊಳಲಿನಲ್ಲಿ ಕುಮಾರಿ ಮೇಧಾ ಮಂಗಳೂರು ಸಹಕರಿಸಿದರು.