ಜುಲೈ 15, 1932ರಂದು ಜನಿಸಿದ ಮನೋರಮ ಇವರು ಪರಮೇಶ್ವರ ಶಾಸ್ತ್ರಿ ಹಾಗೂ ಸತ್ಯಭಾಮ ದಂಪತಿಯ ಪ್ರೀತಿಯ ಮಗಳು. ಮುಳಿಯ ಮಹಾಬಲ ಭಟ್ಟರ ಪತ್ನಿಯಾಗಿ, ಪಂಡಿತ ಪರಂಪರೆಯ ಮುಳಿಯ ತಿಮ್ಮಪ್ಪಯ್ಯನವರ ಹಿರಿಯ ಸೊಸೆಯಾಗಿ ಸಾಹಿತ್ಯದ ಮೇಲಿನ ಒಲವನ್ನು ಜೀವನ ಪ್ರೀತಿಯನ್ನು ನಿರಂತರವಾಗಿ ಕಾಯ್ದುಕೊಂಡವರು. ಅಮೇರಿಕಾದಲ್ಲಿ ನೆಲೆಗೊಂಡ ಜಯರಾಮ್ ಭಟ್ ಮತ್ತು ಬೆಂಗಳೂರಲ್ಲಿರುವ ಖ್ಯಾತ ಛಾಯಾಚಿತ್ರ ತಂತ್ರಜ್ಞ ಮಹೇಶ್ ಎಂ. ಭಟ್ ಇವರ ಮಕ್ಕಳು. ಖ್ಯಾತ ಒಡಿಸ್ಸಿ ನೃತ್ಯಗಾತಿ ಬಿಜೋಯಿನಿ ಸತ್ಪತಿ ಇವರ ಮನೆಯ ಓರ್ವ ಸೊಸೆ. ಹಿಂದೆ ‘ನವಭಾರತ’ ಪತ್ರಿಕೆಯಲ್ಲಿ ಮತ್ತು ‘ಉದಯವಾಣಿ’ಯಲ್ಲಿ ‘ಶಿಂಗಣ್ಣ’ ಕಾಲಂ ಬರೆಯುತ್ತಿದ್ದ ಕೆ. ರಾಮಕೃಷ್ಣ ಇವರ ಅಣ್ಣ.
ಹೆಣ್ಣು ಮಕ್ಕಳು ಶಾಲೆ ಕಲಿಯುವುದು ಅಪರೂಪವಾಗಿದ್ದ ಕಾಲದಲ್ಲಿ ಮನೋರಮಾ ಶಿಕ್ಷಣವನ್ನು ಪಡೆದು ಸ್ವಂತ ವಿಚಾರವಂತಿಕೆಯನ್ನು ಬೆಳೆಸಿಕೊಂಡು ಹೆಣ್ಣು ಮಕ್ಕಳ ಬಗೆಗಿನ ಚಿಂತನೆಯನ್ನು, ಅವರ ಆಯ್ಕೆಯ ಬಗೆಗಿನ ಮಹತ್ವವನ್ನು ಅನುಸರಿಸಿದವರು. ಆಕಾಶವಾಣಿ ಕಲಾವಿದೆಯಾಗಿ ಬಾನುಲಿ ನಾಟಕಗಳಲ್ಲಿ ಪಾತ್ರ ವಹಿಸಿ ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯಿಂದ ನಟಿಯಾಗುವ ಆಯ್ಕೆಯನ್ನು ಬೆಳೆಸಿಕೊಂಡವರು. 90ರ ಹರೆಯದಲ್ಲೂ ಗಿರೀಶ್ ಕಾಸರವಳ್ಳಿ ಅವರ ‘ಗುಲಾಬಿ ಟಾಕೀಸ್’ ಚಲನಚಿತ್ರದಲ್ಲಿ ನಟಿಸಿದ ಅಭಿನೇತ್ರಿ ಈಕೆ.
‘ನನ್ನ ಅಲಂಕಾರ ನನ್ನ ಹಕ್ಕು’ ಎಂದು ಗಟ್ಟಿಯಾಗಿ ಮಾತನಾಡಿದ ಮನೋರಮಾ ಎಂ. ಭಟ್ ತಮ್ಮ ಮುಗ್ಧವಾದ ನಗು ಮತ್ತು ಸರಳವಾದ ಬದುಕು, ಅದಮ್ಯವಾದ ಜೀವನ ಪ್ರೀತಿಯಿಂದ ಚಿರಪರಿಚಿತರು. ಪ್ರೀತಿಯ ಕಾಯಕದಲ್ಲಿ ತನ್ನ ಕೈಯ್ಯಾರೆ ಮಾಡಿದ ಉಣ್ಣೆಯ ಶಾಲುಗಳನ್ನು ತನ್ನ ಸಹವಾಸಕ್ಕೆ ಬಂದ, ಮನಸ್ಸು ಗೆದ್ದ ಹಿರಿಕಿರಿಯರಿಗೆ ಹಾಸಿ ಹೃದಯ ವೈಶಾಲ್ಯತೆಯಿಂದ ಪ್ರೀತಿಯನ್ನು ಹೆಚ್ಚಿಸಿಕೊಂಡವರು. ಅವರ ಕ್ರಿಯಾಶೀಲತೆ ಮತ್ತು ಸೃಜನಶೀಲತೆ ಅವರನ್ನು ಇಳಿ ವಯಸ್ಸಿನಲ್ಲೂ ಜನಮನದಲ್ಲಿ ರಾರಾಜಿಸುವಂತೆ ಕಾರ್ಯ ಚಟುವಟಿಕೆಯಿಂದ ಇರುವಂತೆ ಸಾಧ್ಯವಾಗಿಸಿತು. ಅಸಹಾಯಕ ಹೆಣ್ಣು ಮಕ್ಕಳಿಗೆ ಸಹಾಯ ಹಸ್ತವನ್ನು ಚಾಚಿದರೂ ಅದನ್ನು ಎಲ್ಲೂ ಯಾವ ವೇದಿಕೆಯಲ್ಲೂ ಬಹಿರಂಗ ಪಡಿಸಲಿಲ್ಲ. ಕರಾವಳಿಯ ಹಿರಿಯ ಲೇಖಕಿಯಾಗಿ ಗುರುತಿಸಿಕೊಂಡು, ಸಾಹಿತ್ಯ ಒಲವಿನ ಕುಟುಂಬದಿಂದ ಬಂದ ಅವರಿಗೆ ಸಾಹಿತ್ಯ ಸಂಗೀತ, ನಾಟಕ, ಚಿತ್ರಕಲೆಯ ಮೇಲೆ ಅಪಾರ ಒಲವಿತ್ತು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಬೊಳುವಾರು ಶಾಲೆಯಲ್ಲಿ ಮುಗಿಸಿದರು. ನಂತರ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಸಂತ ವಿಕ್ಟರ್ ಹುಡುಗಿಯರ ಶಾಲೆಯಲ್ಲಿ ಆಂಗ್ಲಮಾಧ್ಯಮದಲ್ಲಿ ಪಡೆದರು.
ಕರಾವಳಿ ಲೇಖಕಿ ವಾಚಕಿಯರ ಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಹೆಣ್ಣು ಮಕ್ಕಳಿಗೆ ಮಾತನಾಡಲು ಒಂದು ವೇದಿಕೆ ಬೇಕು, ಅವರ ಧ್ವನಿಯನ್ನು ಸಮಾಜ ಕೇಳಬೇಕು ಎಂದು ಸಂಘಟನೆಯನ್ನು ಕಟ್ಟಲು ಕಾರಣಕರ್ತರಾದವರು. ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತ್ತು 1996– 98ರ ಅಧ್ಯಕ್ಷರಾಗಿ ಯಶಸ್ವೀ ಕಾರ್ಯವನ್ನು ನಿರ್ವಹಿಸಿದ್ದಾರೆ. ಅಜ್ಞಾತರಾಗಿದ್ದ ಹಲವಾರು ಲೇಖಕಿಯರನ್ನು ಗುರುತಿಸಿ ಪರಿಚಯಿಸಲು ‘ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು’ ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ. ಮುಂದೆ ಸಾಹಿತ್ಯ ಲೋಕದ ಹಿರಿಯ ಮತ್ತು ಮಹತ್ವದ ಲೇಖಕಿಯಾಗಿಯೇ ಗುರುತಿಸಿಕೊಂಡಿದ್ದ ಮನೋರಮ ಎಂ. ಭಟ್ ಇವರು 14 ಸೆಪ್ಟೆಂಬರ್ 2024ರಂದು ಇಹಲೋಕವನ್ನು ತ್ಯಜಿಸುವುದರೊಂದಿಗೆ ಸಾಹಿತ್ಯ ಲೋಕದ ಬಿಗಿಯಾದ ಅನುಪಮ ಬಂಧವೊಂದು ಸಡಿಲಗೊಂಡು ಕಳಚಿದೆ.
ಇವರ ಕೃತಿಗಳು ಹಲವು.. .
“ಸ್ವಯಂವರ” (1994) ಮತ್ತು “ಶಬ್ದಗಳಾಗದ ಧ್ವನಿಗಳು” (2007) ಎಂಬ ಕಥಾಸಂಕಲನ, “ಹೆಣ್ಣಗೇಕೆ ಈ ಶಿಕ್ಷೆ” (2004) ಎಂಬ ವೈಚಾರಿಕ ಕೃತಿ, ವ್ಯಕ್ತಿ ಚಿತ್ರಗಳ ಮಾಲಿಕೆಯಲ್ಲಿ “ಶಿಂಗಣ್ಣ ಖ್ಯಾತಿಯ ಕೆ. ರಾಮಕೃಷ್ಣ” (2012), ಮುಳಿಯರ ನೆನಪುಗಳು (2002), ಪ್ರಮುಖವಾದವುಗಳು. ಹಲವಾರು ಬಾನುಲಿ ನಾಟಕಗಳನ್ನು ಇವರು ರಚಿಸಿದ್ದು, ಬಾನುಲಿ ನಾಟಕಗಳಲ್ಲಿ ಪಾತ್ರವನ್ನು ಸಹ ನಿರ್ವಹಿಸಿದ್ದಾರೆ. ಹೊಸ ಹಾದಿ ಮತ್ತು ಇತರ ರೇಡಿಯೋ ನಾಟಕಗಳು (1996), ಬಲಿ ಮತ್ತು ಇತರ ರೇಡಿಯೋ ನಾಟಕಗಳು (1996), ನಿರ್ಧಾರ ಮತ್ತು ಇತರ ರೇಡಿಯೋ ನಾಟಕಗಳು (1997), ಆಯ್ಕೆ ಮತ್ತು ಇತರ ರೇಡಿಯೋ ನಾಟಕಗಳು (1997) ಇವರ ಮುಖ್ಯ ನಾಟಕ ಕೃತಿಗಳು.
ವೈಯಕ್ತಿಕವಾಗಿ ನಾನು ಕರಾವಳಿ ಲೇಖಕಿ ವಾಚಕಿಯರ ಸಂಘಕ್ಕೆ ಪರಿಚಯಗೊಂಡಿದ್ದು, ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ. ಸಾಹಿತ್ಯ ಸದನದಲ್ಲಿ ನಡೆಯುವ ಕಾರ್ಯಕ್ರಮಗಳಿಗಿಂತ ಪೂರ್ವ ಸ್ವಂತ ಕಟ್ಟಡ ಇಲ್ಲದಿದ್ದಾಗ ಅಲ್ಲಲ್ಲಿ ಜರಗುತ್ತಿದ್ದ ಕಾರ್ಯಕ್ರಮದಲ್ಲಿ ಅವರು ನಿರಂತರವಾಗಿ ಪಾಲು ಪಡೆಯುತ್ತಿದ್ದರು. ಸಂಘಕ್ಕೆ “ಸಾಹಿತ್ಯ ಸದನ”ವೆಂಬ ಸ್ವಂತ ಕಟ್ಟಡ ಆದ ಮೇಲಂತೂ ತಮ್ಮ ಮನೆ ಸಮೀಪದ ಸಂಘದ ಕಟ್ಟಡಕ್ಕೆ ದಿನವೂ ಸಂಜೆ ವಾಕಿಂಗ್ ಬಂದು, ಅದರ ಒಡನಾಟದಲ್ಲಿ ವಿರಾಮದ ಸಮಯವನ್ನು ಕಳೆದು ತಮ್ಮನ್ನು ತಾವು ಕ್ರಿಯಾಶೀಲಗೊಳಿಸಿಕೊಳ್ಳುತ್ತಿದ್ದರು. ಕ.ಲೇ.ವಾ. ಸಂಘದ ಮೇಲಿನ ಅವರ ಪ್ರೀತಿ ಮತ್ತು ಅಭಿಮಾನ ಅಪಾರವಾದದ್ದು. ಇದು ಸಂಘದಲ್ಲಿರುವ ಹಿರಿ ಕಿರಿಯ ಗೆಳತಿಯರನ್ನು ಅಪಾರವಾಗಿ ಪ್ರಭಾವಿಸಿದೆ. ಅವರ ಹಸನ್ಮುಖಿ ವ್ಯಕ್ತಿತ್ವ, ಜೀವಂತಿಕೆಯ ಸೆಲೆ, ಮಾತುಕತೆ ಯಾವತ್ತೂ ತನ್ನ ಬಾಲ್ಯವನ್ನು ನೆನಪಿಸುತ್ತಲೇ ವರ್ತಮಾನಕ್ಕೆ ಕೊಂಡಿಯಾಗುತ್ತಿತ್ತು. ಅವರು ಕ.ಲೇ.ವಾ. ಸಂಘದ ಕಾರ್ಯಕಾರಿಣಿಯಲ್ಲಿ, ಕಾರ್ಯಕ್ರಮದ ಸಭೆಗಳಲ್ಲಿ ತಪ್ಪದೆ ಇರುತ್ತಿದ್ದುದೇ ಸಂಘಕ್ಕೊಂದು ಘನತೆ ಗೌರವ ತಂದುಕೊಡುತ್ತಿತ್ತು.
ಆಕಾಶವಾಣಿಯ ಉತ್ತಮ ಕೇಳುಗರಾಗಿದ್ದ ಅವರು ತಮ್ಮ ಇಳಿವಯಸ್ಸಿನಲ್ಲೂ ಸಂಘದ ಗೆಳತಿಯರು ನೀಡುತ್ತಿದ್ದ ಕಾರ್ಯಕ್ರಮಗಳಿಗೆ ಬಹಳ ಬೇಗ ಸ್ಪಂದಿಸುತ್ತಿದ್ದರು. ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದಾಗ ಸ್ವತಃ ತಾನೇ ಫೋನಾಯಿಸಿ ಅವರನ್ನು ಹುರಿದುಂಬಿಸಿ ಅವರೊಂದಿಗೆ ಸಂವಹನ ನಡೆಸಿ, ಪ್ರಶ್ನೆ ಚರ್ಚೆಗಳೊಂದಿಗೆ ಅವರ ಬೆನ್ನು ತಟ್ಟಿ ಇನ್ನಷ್ಟು ಬರೆಯಿರಿ ಎಂದು ಪ್ರೋತ್ಸಾಹಿಸುತ್ತಿದ್ದರು. ಈ ಪ್ರೋತ್ಸಾಹದ ನೆನಪನ್ನು ಹಲವು ಗೆಳತಿಯರು ಹಂಚಿಕೊಳ್ಳುತ್ತಾರೆ. ಬಹುಶ ಇದು ಅವರ ಜೀವನ ಪ್ರೀತಿಯೂ ಹೌದು. ಎಲ್ಲರನ್ನೂ ಒಳಗೊಳ್ಳುವ ಎಲ್ಲವನ್ನು ಪ್ರೀತಿಸುವ ಅವರ ನಡೆಯಲ್ಲಿ ಗುಣಕ್ಕೆ ಮಾತ್ಸರ್ಯವಿರಲಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಮನೋರಮ ಅವರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಘಟಿಸಿ, ಸಂಯೋಜಿಸಿ ಅದರಲ್ಲಿ ಪಾಲು ಪಡೆಯುತ್ತಿದ್ದುದು ಮಾತ್ರವಲ್ಲ ತನಗೆ ಸರಿ ಕಂಡದ್ದನ್ನು ನೇರವಾಗಿ ಹೇಳುತ್ತಿದ್ದರು. ತಪ್ಪು ಎಂದು ಕಂಡಾಗ ವಿರೋಧಿಸುವ ಗುಣವೂ ಅವರಲ್ಲಿ ಇತ್ತು. ತನ್ನ ಪತಿ ಮುಳಿಯ ಮಹಾಬಲ ಭಟ್ಟರು ತೀರಿಕೊಂಡಾಗ ಅವರ ಅಪೇಕ್ಷೆ ಮತ್ತು ತನ್ನ ನಿರ್ಧಾರದಂತೆ ತನ್ನ ವೈಧವ್ಯದ ಆಚರಣೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಬಗ್ಗೆ ಬಹಳಷ್ಟು ಹೋರಾಟಗಳನ್ನು ನಡೆಸಿ ಮನವಿಗಳನ್ನು ಬರೆದು ಮಠಾಧಿಪತಿಗಳಲ್ಲೂ ಸಂವಾದವನ್ನು ನಡೆಸಿ ಹೆಣ್ಣನ್ನು ವಿರೂಪಗೊಳಿಸುವ, ವಿಕೃತಗೊಳಿಸುವ ಮನಸ್ಥಿತಿಯನ್ನು ವಿರೋಧಿಸಿದ್ದರು. “ನೀನು ಜೀವಂತವಿರುವಷ್ಟು ಕಾಲ ಇದು ನಿನ್ನ ಕೊರಳಿನಲ್ಲಿ ಇರಲಿ“ ಎಂದು ವಿವಾಹದ ಸಂದರ್ಭದಲ್ಲಿ ಮಂತ್ರ ಪಠಿಸಿ ವಿವಾಹದ ವಿಧಿಯಂತೆ ಧರಿಸಲ್ಪಡುವ ತಾಳಿ ಹೆಣ್ಣು ಬದುಕಿರುವವರೆಗೂ ಅವಳ ಕೊರಳಲ್ಲಿರಬೇಕು ಎಂದು ಗಟ್ಟಿಯಾಗಿ ಪ್ರತಿಪಾದಿಸಿದವರು. ಈ ಕಾಲಕ್ಕೆ ಆಧುನಿಕತೆಗೆ ಇದು ದೊಡ್ಡ ವಿಚಾರವಲ್ಲವಾದರೂ ಆ ಕಾಲದಲ್ಲಿ ಅವರು ಸಾಂಪ್ರದಾಯಿಕ ಮನಸ್ಥಿತಿಯ ಜನರ ವಿರೋಧವನ್ನು ಟೀಕೆಯನ್ನು ಅವರ ಈ ನಿಲುವಿನಿಂದಾಗಿ ಎದುರಿಸಬೇಕಾಗಿತ್ತು. ಅದಕ್ಕೆ ಅಂಜದೇ ಅಳುಕದೇ ತನ್ನ ನಿರ್ಧಾರವನ್ನು ಬದಲಾಯಿಸದೆ ಕೈಯ ಬಳೆ, ಕೊರಳಿನ ಕರಿಮಣಿ ಸರ ಇವನ್ನು ತೆಗೆಯದೆ ಹಣೆಗೆ ತಿಲಕವಿಟ್ಟಂತೆ ಮುದ್ದಾದ ಕುಂಕುಮ ಅವರ ಹಣೆಯಲ್ಲಿ ಯಾವತ್ತೂ ರಾರಾಜಿಸುತ್ತಿತ್ತು. ಅಲಂಕಾರ ಹೆಣ್ಣಿನ ಹಕ್ಕು, ಅದನ್ನು ಆಕೆ ನಿರ್ವಹಿಸುವುದು ಅವಳ ಆಯ್ಕೆ ಎಂದು ಪ್ರತಿಪಾದಿಸಿದ ಅವರ ಈ ಚಿಂತನೆಗಳು ವೈಚಾರಿಕ ಬರಹಗಳಾಗಿಯೂ ಪ್ರಕಟಗೊಂಡಿವೆ.
ಅವರು ಮಂಗಳೂರು ನಗರದ ಹೊರವಲಯಕ್ಕೆ ಹೋಗಿ ನೆಲೆ ನಿಂತಾಗಲೂ ಕ.ಲೇ.ವಾ. ಸಂಘದೊಂದಿಗೆ ಒಡನಾಟವನ್ನು ನಿರಂತರವಾಗಿ ಉಳಿಸಿಕೊಂಡವರು. ಸಂಘಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಆ ಸಂಭ್ರಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲು ಪಡೆದವರು. ಕಾರ್ಯಕ್ರಮಗಳಿಗೆ ಆಮಂತ್ರಿಸಿದಾಗ ನಮ್ಮ ಬೆನ್ನು ತಟ್ಟಿ ಪ್ರೀತಿಯಿಂದ ಕಾರ್ಯಕ್ರಮಕ್ಕೆ ಹಾಜರಾಗಿ ಅದರ ಘನತೆಯನ್ನು ಹೆಚ್ಚಿಸಿದವರು. ಕಿರಿಯರ ಬರಹಗಳನ್ನು ಓದುತ್ತ, ಹಿರಿಯರ ಬರಹಗಳನ್ನು ನೆನಪಿಸುತ್ತ ಸಮನ್ವಯದ ಧೋರಣೆಯಿಂದ ಬದುಕಿದ ಅವರಲ್ಲಿ ಅದಮ್ಯವಾದ ಜೀವನ ಪ್ರೀತಿ ಇತ್ತು. ತನ್ನ ಹುಟ್ಟೂರು ಪುತ್ತೂರಿನ ಬಗೆಗೂ ಅಷ್ಟೇ ಸಹಜವಾದ ಪ್ರೀತಿ ಅವರಲ್ಲಿತ್ತು. ಅದನ್ನೇ ಕವಿತೆಯಾಗಿ ಹಾಡಿದವರು.
ಇವರ ಕಾರ್ಯ ಚಟುವಟಿಕೆಗೆ ಹಲವಾರು ಪ್ರಶಸ್ತಿ ಬಹುಮಾನಗಳು ಸಂದಿವೆ. 1998ರಲ್ಲಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವವನ್ನು ಪಡೆದಿದ್ದಾರೆ. 1993ರಲ್ಲಿ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಸೇವೆಗಾಗಿ ಗೌರವ, 1996ರಲ್ಲಿ ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಸಾಗರದ ಹೊಸ ಬಾಳೆ ಅನಂತಪ್ಪ ಸೇವಾ ಪುರಸ್ಕಾರ, 2001 ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2004 ಸುವರ್ಣ ಕರ್ನಾಟಕ ರಾಜ್ಯೋತ್ಸವ ಗೌರವ, ಸಂಸ್ಕಾರ ಭಾರತೀಯ ಸನ್ಮಾನ ಹೀಗೆ ಹತ್ತು ಹಲವು ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. ಮುಳಿಯ ತಿಮ್ಮಪ್ಪಯ್ಯ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಗೆ ಟ್ರಸ್ಟಿನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿ, ಪಂಡಿತ ಪರಂಪರೆಯನ್ನು ಗುರುತಿಸುವ, ಆ ಪರಂಪರೆಯಲ್ಲಿ ಹೆಣ್ಣು ಮಕ್ಕಳಿಗೂ ಸ್ಥಾನ ಒದಗಿಸಿಕೊಟ್ಟ ಹಿರಿಮೆ ಅವರದು. ಹಿರಿಯ ಲೇಖಕರ ಸಾಹಿತ್ಯ ಮಂಥನ ಸರಣಿಯಲ್ಲಿ 2022ರಲ್ಲಿ ಮನೋರಮ ಎಂ. ಭಟ್‌ರವರ ಸಮಗ್ರ ಸಾಹಿತ್ಯದ ಬಗ್ಗೆ ಕರ್ನಾಟಕ ಲೇಖಕಿಯರ ಸಂಘವು ವಿಚಾರ ಸಂಕಿರಣವನ್ನು ಏರ್ಪಡಿಸಿದ್ದು, ಅವರಿಗೆ ಸಂದ ಗೌರವವಾಗಿದೆ. ಇತ್ತೀಚೆಗೆ ತಮ್ಮ ಅಂಕಣ ಬರಹಗಳ ಕೃತಿಯೊಂದನ್ನು ಅವರು ಹೊರತಂದಿದ್ದು ಅದು ಅವರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.
ಹೀಗೆ ತುಂಬು ಜೀವನ ನಡೆಸಿ ಕ್ರಿಯಾಶೀಲರಾಗಿ ಇದ್ದ ಮನೋರಮ ಎಂ. ಭಟ್ ಇನ್ನು ನೆನಪು ಮಾತ್ರ. ಕರಾವಳಿ ಲೇಖಕಿಯರ ವಾಚಕಿಯರ ಸಂಘವು ಅವರನ್ನು ಪ್ರೀತಿ ಗೌರವಗಳಿಂದ ನೆನೆಯುತ್ತ ಅವರಿಗೆ ಅಶ್ರು ತರ್ಪಣದೊಂದಿಗೆ ನುಡಿ ನಮನವನ್ನು ಸಲ್ಲಿಸುತ್ತಿದೆ.
ಡಾ. ಜ್ಯೋತಿ ಚೇಳೈರು
ಕರಾವಳಿ ಲೇಖಕಿಯರ – ವಾಚಕಿಯರ ಸಂಘದ ನಿಕಟಪೂರ್ವ ಅಧ್ಯಕ್ಷರು