ಕೈಕಂಬ : ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಳಾಯಿಬೆಟ್ಟು ಗುರುಪುರ, ‘ಕಲಾಭಿ ಥಿಯೇಟರ್’ ಮಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವುಗಳ ಸಹಯೋಗದಲ್ಲಿ ‘ರಂಗದಿನ’ ಸಮಾರಂಭ ಮತ್ತು ನಾಟಕ ಪ್ರದರ್ಶನವು ದಿನಾಂಕ 21 ಸೆಪ್ಟೆಂಬರ್ 2024ರ ಶನಿವಾರದಂದು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಇದರ ಫಲ್ಗುಣಿ ಸಭಾಭವನದಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಹಿರಿಯ ಕವಿ, ಸಾಹಿತಿ ಹಾಗೂ ಜಾನಪದ ವಿದ್ವಾಂಸರಾದ ವಾಮನ ನಂದಾವರ ಇವರ ‘ಸಾವಿರದ ಕ್ಷಣಗಳು’ ಪುಸ್ತಕವನ್ನು ರಾಜಮಾರ್ಯದೆಯೊಂದಿಗೆ ಪಲ್ಲಕಿಯಲ್ಲಿ ಹೊತ್ತು ವಿಶೇಷ ರೀತಿಯಲ್ಲಿ ವೇದಿಕೆಗೆ ತಂದು ಲೋಕಾರ್ಪಣೆಗೊಳಿಸಲಾಯಿತು. ಪುಸ್ತಕ ಲೋಕಾರ್ಪಣೆಗೊಳಿಸಿದ ಸಾಹಿತಿ ಮುದ್ದು ಮೂಡುಬೆಳ್ಳೆ ಮಾತನಾಡಿ “ಗ್ರಾಮದ ಜನರಿಗೆ ಒಟ್ಟಾಗಿ ಖುಷಿಕೊಡುವ ಕಾರ್ಯಕ್ರಮ ಇದಾಗಿದೆ. ನಾಟಕ ಶಿಕ್ಷಣದ ಒಂದು ಭಾಗ. ಆ ಮೂಲಕ ವ್ಯಕ್ತಿತ್ವ ಬೆಳೆಯುತ್ತದೆ. ರಂಗ ಮಾಧ್ಯಮ ಒಳ್ಳೆಯ ಅವಕಾಶ. ಇದರತ್ತ ಆಡಳಿತ, ಶಾಲಾ ಶಿಕ್ಷಕರು ಗಮನ ಹರಿಸುವ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಪ್ರೇರಣೆಯಾಗಲಿ.” ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ತುಳು ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಿಕೆಯಾಗಿರುವ ಡಾ. ಸಾಯಿಗೀತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಕಲಾಭಿ ಮಂಗಳೂರು ಇದರ ಅಧ್ಯಕ್ಷೆಯಾದ ಡಾ. ಮೀನಾಕ್ಷಿ ರಾಮಚಂದ್ರ, ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ, ರಂಗಭೂಮಿ ಕಲಾವಿದ ರಾಜೀವ್ ಶೆಟ್ಟಿ ಸಲ್ಮಾಜೆ, ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲಾ ಎಸ್. ಡಿ. ಎಂ. ಸಿ. ಅಧ್ಯಕ್ಷ ಅಬ್ದುಲ್ ನಾಸಿರ್, ಶಾಲಾ ಮುಖ್ಯೋಪಾಧ್ಯಾಯನಿ ಜಾನೆಟ್ ರೋಜ್, ವಸತಿಶಾಲಾ ಶಿಕ್ಷಕ ಜಯಕರ ಶೆಟ್ಟಿ, ಮೌಲಾನ ಶಾಲಾ ಪ್ರಾಂಶುಪಾಲರಾದ ಗಂಗಾಧರ, ಉಳಾಯಿಲೆಟ್ಟು ಶ್ರೀ ಮಹಾಮಾಯೀ ಸ್ಪೋರ್ಟ್ಸ್ ಕ್ಲಬ್ ಇದರ ಅಧ್ಯಕ್ಷರಾದ ಹರೀಶ್ ಕಿನ್ನಿಬೆಟ್ಟು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ಕ್ಯಾಥರಿನ್ ಸ್ವಾಗತಿಸಿ, ಚೇತನ್ ಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ‘ಕಲಾಭಿ ಥಿಯೇಟರ್’ ತಂಡದ ಕಲಾವಿದರಿಂದ ‘ಹೋಳಿಗೆ ತುಪ್ಪ ಮತ್ತು ಪೋತರಾಜ’ ಆಧುನಿಕ ಶೈಲಿಯ ಜಾನಪದ ನಾಟಕ ಹಾಗೂ ದ. ಕ. ಜಿ. ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ‘ಮಳೆರಾಜನಿಗೊಂದು ಮನವಿ’ ನಾಟಕ ಪ್ರದರ್ಶನಗೊಂಡಿತು