ಮೂಡುಬಿದಿರೆ : ಸಮಾಜಮಂದಿರ ಸಭಾ (ರಿ.) ಮೂಡುಬಿದಿರೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಇವುಗಳ ಆಶ್ರಯದಲ್ಲಿ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಇವರಿಗೆ 80ರ ಅಭಿನಂದನಾ ಸಮಾರಂಭವು ದಿನಾಂಕ 21 ಸೆಪ್ಟೆಂಬರ್ 2024ರಂದು ಮೂಡುಬಿದಿರೆಯ ಸಮಾಜಮಂದಿರ ಸಭಾದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ “ಕನ್ನಡ ಸಾರಸ್ವತ ಲೋಕಕ್ಕೆ ಮೌಲ್ಯಯುತ ಸಾಹಿತ್ಯವನ್ನು ನೀಡಿದ ಹೆಗ್ಗಳಿಕೆ ಡಾ. ನಾ. ಮೊಗಸಾಲೆಯವರದ್ದಾಗಿದೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ಭಾಷೆ ಕಟ್ಟುವ, ಭಾಷೆ ಬೆಳೆಸುವ ಕಾಯಕವನ್ನು ಮೊಗಸಾಲೆಯವರು ಸಮರ್ಥವಾಗಿ ಮಾಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಭಾಷೆ ಬೆಳೆಯಬೇಕು. ಕನ್ನಡ ಬೆಳೆಯಲು ಕನ್ನಡ ಸಾಹಿತ್ಯ ಬೆಳಗಬೇಕಾಗಿದೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ದೊಡ್ಡ ಕಲ್ಪನೆಯನ್ನು ಮಾಡಿ ಯಶಸ್ವಿಯಾದವರು ಮೊಗಸಾಲೆ. ಕುಗ್ರಾಮದಲ್ಲಿ ಕನ್ನಡ ಕಟ್ಟಿ ಬೆಳಸಿ ಎಲ್ಲರೂ ಕಾಂತಾವರದತ್ತ ತಿರುಗಿ ನೋಡುವಂತಹ ಸಾಧನೆಯನ್ನು ಮೊಗಸಾಲೆ ಮಾಡಿದ್ದಾರೆ” ಎಂದು ಶ್ಲಾಘಿಸಿದರು.
ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ್ ರೈ ಇವರು ಮಾತನಾಡಿ “ಹಳ್ಳಿಗಳನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ಕಾಂತಾವರದ ಹಳ್ಳಿಯನ್ನು ನೋಡಿ ಕಲಿಯಬೇಕಾಗಿದೆ. ಕಾಂತಾವರ ಇದಕ್ಕೊಂದು ಮಾದರಿ. ಕನ್ನಡ ಸಂಘವನ್ನು ಒಂದಿನಿತೂ ಸಮಸ್ಯೆಯಾಗದಂತೆ ಮುನ್ನಡೆಸುವ ದೃಷ್ಠಿಯಿಂದ ಹೊಸ ಗೆಳೆಯರನ್ನು ಸೇರಿಸಿಕೊಂಡು ಕನ್ನಡದ ರಥವನ್ನು ಎಳೆಯುವ ಮೊಗಸಾಲೆ ಯವರ ಕಾರ್ಯ ಶ್ಲಾಘನಾರ್ಹ” ಎಂದು ಹೇಳಿದರು.
ಡಾ. ನಾ. ಮೊಗಸಾಲೆ ಹಾಗೂ ಪ್ರೇಮಾ ಮೊಗಸಾಲೆ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಹಾಗೂ ಮೊಗಸಾಲೆ 80 ಅಭಿನಂದನಾ ಸಮಿತಿ ವತಿಯಿಂದ ಗಾಂಧಿ ಹಾರ, ಶಾಲು, ಸನ್ಮಾನಪತ್ರ, ಹಣ್ಣು ಹಂಪಲು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಮೊಗಸಾಲೆಯವರು “ಬರೆಯುವದರಲ್ಲಿಯೇ ನಾನು ಸಂತೋಷ ಪಡುತ್ತೇನೆ. ಇಷ್ಟೊಂದು ದೊಡ್ಡ ಪ್ರಮಾಣದ ಜನತೆಯ, ಅಭಿಮಾನಿ ಬಂಧುಗಳ ಪ್ರೀತಿ ನನಗೆ ಲಭಿಸಿದ್ದು ನನ್ನ ಬದುಕು ನನಗೆ ಕೊಟ್ಟ ಭಾಗ್ಯ” ಎಂದರು.
“ಕನ್ನಡಕ್ಕಾಗಿ ಧ್ವನಿ ಎತ್ತಿದವರು ಡಾ.ನಾ. ಮೊಗಸಾಲೆ” ಎಂದು ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಭಿಪ್ರಾಯಿಸಿದರು. ಉದ್ಯಮಿ ಕೆ. ಶ್ರೀಪತಿ ಭಟ್, ಸಂಪತ್ ಸಾಮ್ರಾಜ್ಯ ವೇದಿಕೆಯಲ್ಲಿದ್ದರು. ಪತ್ರಕರ್ತ ಹರೀಶ್ ಕೆ. ಆದೂರು ಇವರ ಪರಿಕಲ್ಪನೆ, ಸಾಹಿತ್ಯ, ನಿರ್ದೇಶನದಲ್ಲಿ ಮೂಡಿಬರುತ್ತಿರುವ ಡಾ. ನಾ. ಮೊಗಸಾಲೆ ಅವರ ಜೀವನ ಯಾನದ ಸಾಕ್ಷ್ಯ ಚಿತ್ರದ ಪೋಸ್ಟರ್ ಅನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅನಾವರಣಗೊಳಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಡಾ. ಯೋಗೀಶ್ ಕೈರೋಡಿ ಕಾರ್ಯಕ್ರಮ ನಿರ್ವಹಿಸಿ, ಸದಾನಂದ ನಾರಾವಿ ವಂದಿಸಿದರು. ಹಿರಿಯ ಸಾಹಿತಿ ತಾಳ್ತಜೆ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ಮೊಗಸಾಲೆಯವರ ಕೃತಿ ಸಮೀಕ್ಷೆ ಕಾರ್ಯಕ್ರಮ ನಡೆಯಿತು. ಹಿರಿಯ ಸಾಹಿತಿ ಡಾ. ಬಿ. ಜನಾರ್ಧನ ಭಟ್ – ಕಾದಂಬರಿ, ಡಾ. ರವಿಶಂಕರ ಜಿ.ಕೆ. – ಕಾವ್ಯ, ಡಾ. ಸುಭಾಷ್ ಪಟ್ಟಾಜೆ – ಸಣ್ಣಕಥೆಗಳ ಬಗ್ಗೆ ಸಮೀಕ್ಷೆ ನಡೆಸಿದರು. ಇದೇ ಸಂದರ್ಭದಲ್ಲಿ ಕೃತಿಗಳನ್ನು ಸಂಪಾದಿಸಿದ ಲೇಖಕರಿಗೆ ಸನ್ಮಾನ ನಡೆಯಿತು.