ಪುತ್ತೂರು : ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ ಹಾಗೂ ಪುತ್ತೂರು ತಾಲೂಕು ಘಟಕದ ವತಿಯಿಂದ ಆಯೋಜಿಸಿದ ಗಮಕ ವಾಚನ – ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 17 ಸೆಪ್ಟೆಂಬರ್ 2024ರಂದು ನಿವೃತ್ತ ಪ್ರಾಂಶುಪಾಲರು ಹಾಗೂ ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ ಇವರ ಸ್ವಗೃಹ, ಪುತ್ತೂರಿನ ನೆಹರು ನಗರದ ‘ಶ್ರೀಮಾ’ದಲ್ಲಿ ನಡೆಯಿತು.
ಅನಂತಪದ್ಮನಾಭ ವ್ರತದ ಸಮಾರೋಪ ಪೂಜಾಕಾರ್ಯದ ಅಂಗವಾಗಿ ‘ಗುರು ಚರಿತಾಮೃತ’ದಿಂದ ಆಯ್ದ ‘ಅನಂತಪದ್ಮನಾಭ ವ್ರತ ಮಹಾತ್ಮೆ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು. ಗಮಕಿ ಮಂಜುಳಾ ಸುಬ್ರಹ್ಮಣ್ಯ ಭಟ್ ಇವರು ಗಮಕ ವಾಚನಗೈದು, ಶ್ರೀಯುತ ಮುಳಿಯ ಶಂಕರ ಭಟ್ ವ್ಯಾಖ್ಯಾನಗೈದರು. ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರನ್ನು ರಂಜಿಸಿತು.
ಗಮಕ ಕಲಾ ಪರಿಷತ್ತು ಬಂಟ್ವಾಳ ಘಟಕದ ಅಧ್ಯಕ್ಷರಾದ ಕೈಯೂರು ನಾರಾಯಣ ಭಟ್ ಸ್ವಾಗತಿಸಿ, ನಿವೃತ್ತ ಕನ್ನಡ ಪ್ರಾಚಾರ್ಯರಾದ ವಸಂತ ಕುಮಾರ್ ತಾಳ್ತಜೆ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಕಲಾವಿದರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಘಟಕದ ಗೌರವಾಧ್ಯಕ್ಷರಾದ ಭಾಸ್ಕರ ಬಾರ್ಯ, ಕಾರ್ಯದರ್ಶಿ ಶಂಕರಿ ಶರ್ಮ, ಸದಸ್ಯರಾದ ಮಹಾಲಿಂಗ ಭಟ್, ಜಯಲಕ್ಷ್ಮೀ ವಿ. ಭಟ್ ಮತ್ತು ಆಗಮಿಸಿದ ಅತಿಥಿಗಳು ಹಾಗೂ ಮನೆಮಂದಿಯೆಲ್ಲರೂ ಉಪಸ್ಥಿತರಿದ್ದರು.