ಮಂಗಳೂರು : ಯಕ್ಷರಂಗದ ಸವ್ಯಸಾಚಿ ಕಲಾವಿದರೆನಿಸಿದ್ದ ದಿ. ಬಾಬು ಕುಡ್ತಡ್ಕರ ಹೆಸರಿನಲ್ಲಿ ವರ್ಷಂಪ್ರತಿ ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾಕೇಂದ್ರವು ದಿ. ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಸಹಕಾರದಲ್ಲಿ ನೀಡಲಾಗುತ್ತಿರುವ 2024-25ರ ಸಾಲಿನ ‘ಬಾಬು ಕುಡ್ತಡ್ಕ ಪ್ರಶಸ್ತಿ’ಗಾಗಿ ತೆಂಕು ಬಡಗು ತಿಟ್ಟು ಎರಡು ಪ್ರಕಾರಗಳಲ್ಲೂ ಖ್ಯಾತನಾಮರೆನಿಸಿದ ಯಕ್ಷಗಾನದ ಸ್ತ್ರೀ ವೇಷಧಾರಿ, ಪ್ರಸಂಗ ಕರ್ತೃ ಎಂ.ಕೆ. ರಮೇಶ್ ಆಚಾರ್ಯ ಇವರನ್ನು ಸ್ವಸ್ತಿಕ್ ಆಯ್ಕೆ ಸಮಿತಿಯ ಮೂಲಕ ಪ್ರಶಸ್ತಿಗಾಗಿ ಆಯ್ಕೆಗೊಳಿಸಲಾಗಿದೆ.
ಪರಿಚಯ : ಮಲೆನಾಡು ಕಂಡ ಪ್ರತಿಭಾಶಾಲಿ ಹಾಗೂ ಹಿರಿಯ ಯಕ್ಷಗಾನ ಕಲಾವಿದರು ಎಂ.ಕೆ. ರಮೇಶ್ ಆಚಾರ್ಯರು. ಇವರು ಉಭಯ ತಿಟ್ಟುಗಳ ಸಮರ್ಥ ಸ್ತ್ರೀ ವೇಷ ದಾರಿ. ಐದನೇ ತರಗತಿಯಲ್ಲಿರುವಾಗಲೇ ಯಕ್ಷರಂಗ ಪ್ರವೇಶಿಸಿ, ವೃತ್ತಿ ಕಲಾವಿದರಾಗಿ ಐವತ್ತು ವರ್ಷಗಳ ಸಾರ್ಥಕ ಸೇವೆ ಗೈದು ಹತ್ತಾರು ಯಕ್ಷಗಾನ ಪ್ರಸಂಗಗಳಿಗೆ ಕಲಾ ನಿರ್ದೇಶನ, ಮೂವತ್ತೈದಕ್ಕೂ ಹೆಚ್ಚು ಕಾಲ್ಪನಿಕ ಪ್ರಸಂಗಗಳಿಗೆ ಪದ್ಯ ರಚನೆ, ಅನೇಕ ಪುರಾಣ ಪ್ರಸಂಗಗಳನ್ನು ಯಕ್ಷರಂಗಕ್ಕೆ ನೀಡಿರುವ ವೇಧಾವಿ. ಶೇಣಿ- ಸಾಮಗರಂತಹ ಯಕ್ಷ ದಿಗ್ಗಜರೊಂದಿಗೆ, ದ್ರೌಪದಿ, ಚಂದ್ರಮತಿ, ಶಾಂತಲೆ, ಮೇನಕ, ಕಯಾದು, ಸೈರಂದ್ರಿ, ಸೀತೆ, ರುಕ್ಮಿಣಿ ಮುಂತಾದ ಪಾತ್ರಗಳಿಗೆ ಜೀವ ತುಂಬಿ ಯಕ್ಷರಂಗದ ಚೌಕಟ್ಟಿನಲ್ಲಿ ಪರಂಪರಾಗತ ಪಾತ್ರದಿಂದ, ನವಿರಾದ ಮಾತುಗಳಿಂದ ಜನಮಾನಸದಲ್ಲಿ ನೆಲೆನಿಂತ ಪ್ರಬುದ್ದ ಕಲಾವಿದ. ಮಂದಾರ್ತಿ, ಧರ್ಮಸ್ಥಳ, ಸುರತ್ಕಲ್, ಸೌಕೂರು, ಪೆರ್ಡೂರು, ಸಾಲಿಗ್ರಾಮ ಮೇಳಗಳಲ್ಲಿ ದುಡಿದ ಇವರ ಅದ್ವಿತೀಯ ಯಕ್ಷಸೇವೆಯನ್ನು ಗುರುತಿಸಿ ಸ್ವಸ್ತಿಕ್ ಕಲಾಕೇಂದ್ರ ಈ ಪ್ರಶಸ್ತಿ ನೀಡಲಿದೆ. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಗೌರವ ಫಲಕ, ಪ್ರಶಸ್ತಿ ಪತ್ರ ಅಲ್ಲದೆ ಸ್ಮರಣಿಕೆಯನ್ನೊಳಗೊಂಡಿರುತ್ತದೆ. ಮಂಗಳೂರು ಪುರಭವನದಲ್ಲಿ ದಿನಾಂಕ 29 ಸೆಪ್ಟಂಬರ್ 2024ನೇ ರವಿವಾರ ನಡೆಯಲಿರುವ ಈ ಪ್ರಶಸ್ತಿ ಸಮಾರಂಭ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಾಂಸ್ಕೃತಿಕ ಕಾರ್ಯದರ್ಶಿ ಕೆ.ಸಿ. ಹರಿಶ್ಚಂದ್ರ ರಾವ್ ತಿಳಿಸಿದ್ದಾರೆ.