06 ಮಾರ್ಚ್ 2023, ಮಂಗಳೂರು: ಕಣ್ಣೂರು ವಿಶ್ವವಿದ್ಯಾನಿಲಯದ 2022-2023ರ ಸಾಲಿನ ವಿವಿಧ ವಿಭಾಗಗಳ ಕಲೋತ್ಸವ ಸ್ಪರ್ಧೆಗಳು ತಲಶ್ಯೇರಿ ಬ್ರನ್ನನ್ ಕಾಲೇಜಿನಲ್ಲಿ ಮಾರ್ಚ್ 1ರಿಂದ ನಡೆಯುತ್ತಿದ್ದು, ಸದಾಶಿವ ಮಾಸ್ಟರ್ ಪೊಯ್ಯೆ ಇವರ ನಿರ್ದೇಶನದಲ್ಲಿ ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ‘ಬಲಿ’ ನಾಟಕ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ತಂಡದ ಸ್ವರ್ಣ ಕೆ.ಎಸ್. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಅಕ್ರಮ ಭೂ ಕಬಳಿಕೆ, ನಗರೀಕರಣದ ಸೋಗಿನಲ್ಲಿ ಕಳೆದುಹೋಗುತ್ತಿರುವ ಪಾರಂಪರಿಕ ಬದುಕಿನ ಕುರಿತಾಗಿರುವ ‘ಬಲಿ’ ನಾಟಕ ಮೂಲತ: ಅಕ್ಷತಾರಾಜ್ ಪೆರ್ಲರ ‘ಬೇಲಿ’ ತುಳು ನಾಟಕವಾಗಿದೆ. ‘ಬೇಲಿ’ 2020ರ ಕುಡ್ಲ ತುಳುಕೂಟ ಆಯೋಜನೆಯ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಹಸ್ತಪ್ರತಿ ಪ್ರಶಸ್ತಿ ಪುರಸ್ಕೃತ ನಾಟಕವಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯ ಮಂಜುನಾಥೇಶ್ವರ ತುಳುಪೀಠ ಪ್ರಕಟಿಸಿದ್ದು, 2021ರ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನಿತ ಕೃತಿಯಾಗಿದೆ. ಮೂಲ ತುಳುನಾಟಕ ಮಂಗಳೂರು ಆಕಾಶವಾಣಿಯ ತುಳು ನಾಟಕ ಸರಣಿಯಲ್ಲಿ ಶಶಿರಾಜ್ ಕಾವೂರು ನಿರ್ದೇಶನದಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ತಂಡ ಪ್ರಸ್ತುತಪಡಿಸಿರುತ್ತದೆ.
‘ಬೇಲಿ’ ತುಳು ನಾಟಕದ ಹಿನ್ನೆಲೆಯಲ್ಲಿ ಹೆಣೆಯಲಾದ ‘ಬಲಿ’ ನಾಟಕವನ್ನು ಕಾಸರಗೋಡಿನ ಸೃಜನಶೀಲ ರಂಗಕರ್ಮಿ, ನಿರ್ದೇಶಕ ಸದಾಶಿವ ಮಾಸ್ಟರ್ ಪೊಯ್ಯೆ ನಿರ್ದೇಶಿಸಿದ್ದು, ಕಾಸರಗೋಡು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಸಮರ್ಥವಾಗಿ ಪಾತ್ರ ನಿಭಾಯಿಸುವುದರ ಮೂಲಕ 2022-2023ನೇ ಸಾಲಿನ ಕೇರಳ ವಿ.ವಿ. ಕಲೋತ್ಸವ ಸ್ಪರ್ಧೆಯ ಕನ್ನಡ ನಾಟಕ ಸ್ಪರ್ಧೆಯ ವಿಜೇತರಾಗಿದ್ದಾರೆ.
ಶ್ರೇಷ್ಠ ನಟಿ ಪ್ರಶಸ್ತಿ ವಿಜೇತೆ ಸ್ವರ್ಣ ಕೆ ಎಸ್