ಉಡುಪಿ, ಕಟಪಾಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯಲ್ಲಿ ದಿನಾಂಕ 08 ಸೆಪ್ಟೆಂಬರ್ 2024ರಂದು ಎಂ.ಕೆ. ಬಾಲರಾಜ್ ಸಾರಥ್ಯದ ಎಂಕಲ್ನ ಕಲಾವಿದೆರ್ ಮಟ್ಟು ಕಟಪಾಡಿ ತಂಡದವರಿಂದ ‘ಮಾಯೊದ ಮಹಾಶಕ್ತಿಲು’ ಎಂಬ ಅದ್ದೂರಿಯ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತ್ತು. ದಾರಿಕಾಸುರನು ಬ್ರಹ್ಮ ದೇವರನ್ನು ಕುರಿತು ದೀರ್ಘಕಾಲ ತಪಸ್ಸನ್ನಾಚರಿಸಿ ವರವನ್ನು ಪಡೆಯುವ ಸುಂದರ ದೃಶ್ಯದೊಂದಿಗೆ ಆರಂಭವಾಗುವ ಈ ನಾಟಕವು, ಅರೆಕ್ಷಣವೂ ಪ್ರೇಕ್ಷಕ ಕಣ್ಣ ರೆಪ್ಪೆಯನ್ನು ಮುಚ್ಚದೆ ನೋಡುವಂತೆ ಮಾಡುವ ಕುತೂಹಲ ಭರಿತವಾದ ಕಥಾ ಹಂದರವನ್ನೊಳಗೊಂಡಿರುವ ನಾಟಕ ಇದಾಗಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಬರವುದ ತುಡರ್’ ನವೀನ್ ಪಡ್ರೆ ಇವರು ಈ ನಾಟಕವನ್ನು ರಚಿಸಿದ್ದು, ಅಪ್ಪಟ ತುಳುವಿನ ಅದ್ಭುತವಾದ ಶಬ್ದ ಭಂಡಾರಗಳನ್ನೊಳಗೊಂಡ ಇವರ ಸಂಭಾಷಣೆ ಕಲಾಭಿಮಾನಿಗಳ ಮನ ಮುಟ್ಟುವಂತಿದೆ. ದಿವಾಕರ್ ಕಟೀಲು ಹಾಗೂ ನಾಗರಾಜ್ ವರ್ಕಾಡಿ ಇವರ ಜಂಟಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ನಾಟಕ ಯಶಸ್ಸನ್ನು ಕಂಡಿದೆ.
ಶರತ್ ಉಚ್ಚಿಲ ಇವರ ಸಂಗೀತ ನಿರ್ದೇಶನದ, ರವೀಂದ್ರ ಪ್ರಭು ಹಾಡಿರುವ ನವೀನ್ ಪಡ್ರೆ ಇವರ ಸಾಹಿತ್ಯದ ‘ಮಾಯೊದ ಮಹಾಶಕ್ತಿಲು….ಮೊಕುಲು ಮಾಯೊದ ಮಹಾಶಕ್ತಿಲು” ಎಂಬ ಸುಂದರವಾದ ಶೀರ್ಷಿಕೆ ಗೀತೆ ನಾಟಕದ ಕಂಪನ್ನು ಮತ್ತಷ್ಟು ಹೆಚ್ಚಿಸಿದೆ. ಬಾಲಕೃಷ್ಣ ಉದ್ಯಾವರ ಇವರ ದಾರಿಕಾಸುರನ ಪಾತ್ರ ಹಾಗೂ ಚಿತ್ರಾಸುರನ ಪಾತ್ರ ಅದ್ಭುತವಾಗಿತ್ತು. ಸಪ್ತ ಮಾತೃಕೆಯರು ದಾರಿಕಾಸುರನೊಂದಿಗೆ ಸೆಣಸಾಡುವ ದೃಶ್ಯವಂತೂ ತುಂಬಾ ಅದ್ಭುತವಾಗಿತ್ತು. ದೀಪಕ್ ಎಸ್. ಕೋಟ್ಯಾನ್ ಚೇಳ್ಯಾರು ಇವರ ಸಾಹಿತ್ಯದ “ಕರ್ಗಂಡ ಕಪ್ಪುದ ಮೋನೆಗೆ…” ಎಂಬ ಸುಂದರವಾದ ಹಾಡಿಗೆ ಗುಳಿಗನ ಅಬ್ಬರದ ರಂಗ ಪ್ರವೇಶ ಅದ್ಭುತವಾಗಿತ್ತು. ತಂಡದ ಸಮಗ್ರ ನಿರ್ವಹಣೆಯ ಹೊಣೆಯನ್ನು ಹೊತ್ತಿರುವ ರಂಜಿತ್ ಮಟ್ಟು ಇವರು ಗುಳಿಗನ ಪಾತ್ರದಲ್ಲಿ ಮಿಂಚಿದ್ದಾರೆ. ಉಮೇಶ್ ಪಿತ್ರೋಡಿಯವರು ಬ್ರಹ್ಮ ಹಾಗೂ ವಿಚಿತ್ರಾಸುರನ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ವಾತಿ ತೊಟ್ಟಂ ಇವರು ಶ್ರೀ ದೇವಿಯ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ತನ್ನ ಪಾತ್ರಕ್ಕೆ ಶಕ್ತಿಮೀರಿ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಆತ್ಮಿಕ ಜಿ. ಸುಳ್ಯ ಇವರ ಭುವನ ಮೋಹಿನಿಯ ಅದ್ಭುತವಾದ ಪಾತ್ರ ನೈಜತೆಯಿಂದ ಕೂಡಿದ್ದು ಕಲಾಭಿಮಾನಿಗಳನ್ನು ರೋಮಾಂಚನಗೊಳಿಸುತ್ತದೆ. ನಾಟಕ ಮುಗಿದ ಬಳಿಕವೂ ಕಲಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಪಾತ್ರ ಇದಾಗಿದೆ. ಈ ಪಾತ್ರದಲ್ಲಿ ನವೀನ್ ಪಡ್ರೆಯವರ ಸಾಹಿತ್ಯದ “ಐಸಿರ ದಿಂಜಿನ ಈ ಬೂಡು” ಹಾಡಿನ ನೃತ್ಯ ಹಾಗೂ ಈ ದೃಶ್ಯ ಮತ್ತು ವೈಕುಂಠದ ದೃಶವೂ ತುಂಬಾ ಸುಂದರವಾಗಿ ಮೂಡಿ ಬಂದಿದೆ. ಆಶ್ಲೇಷ್ ಭಟ್ ಇವರ ವಿಷ್ಣುವಿನ ಪಾತ್ರ, ಲಿಪಿಕಾ ಪಂಜಿಮಾರ್ ಇವರ ಲಕ್ಷ್ಮೀ ಹಾಗೂ ರಂಭಾಮಣಿಯ ಪಾತ್ರ, ಅಶ್ವಿನಿ ಕಟಪಾಡಿ ಇವರ ಭಾಗೀರಥಿಯ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
ಪೌರಾಣಿಕ ನಾಟಕವಾದರೂ ಒಂದು ದೃಶ್ಯದಲ್ಲಿ ಕಲಾಭಿಮಾನಿಗಳಿಗೆ ರಸಭಂಗವಾಗದ ರೀತಿಯಲ್ಲಿ ಸ್ವಲ್ಪ ಆರೋಗ್ಯಕರವಾದ ಹಾಸ್ಯವೂ ಇತ್ತು. ಕಿರಣ್ ಪಂಜಿಮಾರ್ ಇವರು ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ನವರಸ ಭರಿತ ನಾಟಕ ಇದಾಗಿದೆ. ಏಳು ಜನ ಜಲದುರ್ಗೆಯರು ಗುಳಿಗನನ್ನು ದೋಣಿಯ ಅಂಬಿಗನನ್ನಾಗಿಸಿಕೊಂಡು ಸಮುದ್ರದಲ್ಲಿ ಬರುವ ದೃಶ್ಯ ಕಲಾಭಿಮಾನಿಗಳ ಕಣ್ಮನ ಸೆಳೆಯುತ್ತದೆ. ಜಗದೀಶ್ ಜಿ. ಸುಳ್ಯರವರು ಕಡಲ ಹಂದಿಯ ಪಾತ್ರವನ್ನು ಮಾಡಿದ್ದು, ಸಮುದ್ರದ ಮಧ್ಯದಲ್ಲಿ ಕಡಲ ಹಂದಿಯೊಂದಿಗೆ ಸೆಣಸಾಟ ಅತ್ಯುತ್ತಮವಾಗಿ ಮೂಡಿ ಬಂದಿದೆ. ಕನ್ನಡ ಕೋಗಿಲೆ ಖ್ಯಾತಿಯ ಲಿಖಿತ್ ಉಡುಪಿ ಇವರ ಮಹಾಕಾಳಿಯ ಪಾತ್ರವೂ ಗಾಂಭೀರ್ಯತೆಯಿಂದ ಕೂಡಿತ್ತು. ಏಳು ಜನ ಜಲದುರ್ಗೆಯರು ತಮ್ಮ ಜನಕನಾದ ಮಹಾವಿಷ್ಣುವಿನ ಆಣತಿಯಂತೆ ಗುಳಿಗನನ್ನು ತಮ್ಮ ದೂತ ನನ್ನಾಗಿಸಿಕೊಂಡು, ಶ್ರೀಗಂಧದ ದೋಣಿಯಲ್ಲಿ ಕುಳಿತು, ತುಳುನಾಡಿಗೆ ಬರುತ್ತಿರಲು, ನಾವೆಯು ಈಗಿನ ಚಿತ್ರಾಪುರವನ್ನು ಸಮೀಪಿಸುತ್ತಿದ್ದಂತೆ ಕಿರಿಯ ದೇವಿಯು ಚಿತ್ರ-ವಿಚಿತ್ರವಾಗಿ ಕಂಗೊಳಿಸುವ ಆ ಊರಿನ ಸೌಂದರ್ಯಕ್ಕೆ ಮನಸೋತು ತಾನು ಆ ಊರಿನಲ್ಲಿಯೇ ನೆಲೆ ನಿಲ್ಲಬೇಕೆಂದು ಆಸೆ ಪಡುತ್ತಾರೆ. ಅನಂತರ ಚಿತ್ರಾಸುರ ಹಾಗೂ ವಿಚಿತ್ರಾಸುರರಿಂದ ಕಮಲೆ-ವಿಮಲೆಯರ ಅಪಹರಣ, ಅವರ ವಧೆಗಾಗಿ ಶ್ರೀ ದೇವಿಯು ಭುವನ ಮೋಹಿನಿಯಾಗಿ ಧರೆಗಿಳಿದು ಬಂದು ಚಿತ್ರ-ವಿಚಿತ್ರರನ್ನು ವಧಿಸಿ ಲಿಂಗ ರೂಪದಲ್ಲಿ ಮೂಡಿ ಬರುವುದು, ಕಾಲ್ದಿ ಎಂಬವಳು ಆ ಕಲ್ಲಿನಲ್ಲಿ ಕತ್ತಿ ಮಸೆದಾಗ ರಕ್ತ ಹೊರಹೊಮ್ಮುವುದು, ಅವಳ ಬಾಯಿಯಿಂದ ಬಂದ ಇದೇನು ವಿಚಿತ್ರ ಎಂಬ ಉದ್ಗಾರದಿಂದ ಆ ಊರಿಗೆ ವಿಚಿತ್ರಾಪುರ ಅಥವಾ ಚಿತ್ರಾಪುರ ಎಂದು ಹೆಸರಾಗುವುದು, ಅನಂತರ ಏಳು ಜನ ಜಲದುರ್ಗೆಯರು ಏಳು ಕ್ಷೇತ್ರಗಳಲ್ಲಿ ನೆಲೆಯಾಗುವ ಸುಂದರ ದೃಶ್ಯದೊಂದಿಗೆ ನಾಟಕವು ಮುಕ್ತಾಯ ಗೊಳ್ಳುತ್ತದೆ. 2-30 ಗಂಟೆಯ ಈ ನಾಟಕವು ನೋಡುಗರನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತದೆ.
ವಿಶ್ವನಾಥ್ ಮಟ್ಟು, ಶ್ರೇಯಾ ಪಾಂಗಳ, ರೀಯಾ ಪಾಂಗಳ, ಸಾನ್ವಿ ಅಂಚನ್, ನವ್ಯ ಪಿತ್ರೋಡಿ, ಸ್ವರಾಜ್ ಲಕ್ಷ್ಮೀ ಅಲೆವೂರು, ಜ್ಞಾನ ಪಂಜಿಮಾರ್ ಹೀಗೆ ಸುಮಾರು 18 ಕಲಾವಿದರು ನಾಟಕದಲ್ಲಿ ಬಣ್ಣ ಹಚ್ಚಿದ್ದು ಎಲ್ಲರೂ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಗಣೇಶ್ ಜಿ.ಎನ್.ಎಸ್ ಆರ್ಟ್ಸ್ ಕಟಪಾಡಿ ಇವರ ತಂಡದ ದೃಶ್ಯ ಸಂಯೋಜನೆಯೂ ತುಂಬಾ ಸುಂದರವಾಗಿತ್ತು. ಮಟ್ಟ್ ದ ಬೊಲ್ಪು ಹರೀಶ್ ಮಟ್ಟುರವರ ಧ್ವನಿ, ಬೆಳಕಿನ ಸಂಯೋಜನೆ, ಕವನ್ ಪೂಜಾರಿಯವರ ಸಂಗೀತ ನಿರ್ವಹಣೆಯೂ ಅಚ್ಚುಕಟ್ಟಾಗಿತ್ತು. ಏಳು ಜನ ಜಲದುರ್ಗೆಯರು ಏಳು ಕ್ಷೇತ್ರಗಳಲ್ಲಿ ನೆಲೆಯಾಗುವ ನಾಟಕದ ಕೊನೆಯ ದೃಶ್ಯ ಹಾಗೂ ಆ ದೃಶ್ಯದಲ್ಲಿ ಶಶಾಂಕ್ ಸಚ್ಚರಿಪೇಟೆ ಇವರ ಸಾಹಿತ್ಯದ ಹಾಡು ಕಲಾಭಿಮಾನಿಗಳನ್ನು ಭಕ್ತಿಯ ಕಡಲಿನಲ್ಲಿ ತೇಲುವಂತೆ ಮಾಡುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ‘ಮಾಯೊದ ಮಹಾಶಕ್ತಿಲು’ ನಾಟಕವು ತುಳು ರಂಗಭೂಮಿಗೆ ಒಂದು ಅಮೂಲ್ಯವಾದ ಕೊಡುಗೆಯಾಗಿದೆ. ಉತ್ತಮವಾದ ಕಥಾ ಹಂದರ, ಅಪ್ಪಟ ತುಳುವಿನ ಕಥಾ ಸಂಭಾಷಣೆ, ಸುಂದರವಾದ ರಂಗ ವಿನ್ಯಾಸ, ಪಾತ್ರಗಳ ಸಂಭಾಷಣೆಯ ಉತ್ತಮವಾದ ಧ್ವನಿ ಮುದ್ರಣ, ಪ್ರಬುದ್ಧ ಕಲಾವಿದರ ಮನೋಜ್ಞ ಅಭಿನಯದ ಮೂಲಕ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾದ ಈ ತಂಡವು ಉಡುಪಿ ಜಿಲ್ಲೆಯ, ಪೌರಾಣಿಕ ನಾಟಕಗಳನ್ನು ಪ್ರದರ್ಶಿಸಿಸುವ ಎಲ್ಲಾ ತಂಡಗಳಿಗೂ ಈ ತಂಡ ಈಗ ಅಗ್ರಸ್ಥಾನದಲ್ಲಿದೆ. ಈ ನಾಟಕವು ಕನ್ನಡಕ್ಕೆ ಭಾಷಾಂತರಗೊಂಡು ಇತ್ತೀಚೆಗಷ್ಟೇ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಪ್ರಥಮ ಪ್ರದರ್ಶನ ಕಂಡಿರುವುದು ಈ ತಂಡದ ಯಶಸ್ಸಿನ ಕಿರೀಟಕ್ಕೆ ಹೆಮ್ಮೆಯ ಗರಿ ಎಂದರೂ ತಪ್ಪಾಗಲಾರದು. ಈ ನಾಟಕವು ಇನ್ನೂ ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳುವ ಮೂಲಕ ತುಳು ರಂಗಭೂಮಿಯಲ್ಲಿ ದಾಖಲೆಯನ್ನು ಬರೆಯಲಿ.
ಗೀತಾ ಎನ್. ಚಿಟ್ಪಾಡಿ, ಉಡುಪಿ