ಮಂಗಳೂರು : ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗಾಂಧಿ ವಿಚಾರ ವೇದಿಕೆ ನೇತೃತ್ವದಲ್ಲಿ ಆರ್.ಜಿ. ಫೌಂಡೇಶನ್ ಮತ್ತು ಅಹರ್ನಿಶಿ ಪ್ರಕಾಶನ ಶಿವಮೊಗ್ಗ ಸಹಯೋಗದಲ್ಲಿ ಮಂಗಳೂರಿನ ಲೇಖಕ, ಅಂಕಣಕಾರ ಎಂ.ಜಿ. ಹೆಗಡೆ ಇವರ ಆತ್ಮಕತೆ ‘ಚಿಮಣಿ ಬೆಳಕಿನಿಂದ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 22 ಸೆಪ್ಟೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಕವಿ ಸುಬ್ರಾಯ ಚೊಕ್ಕಾಡಿ ಇವರು ಮಾತನಾಡಿ “ಆತ್ಮಕತೆ ಬರೆಯುವುದು ಸುಲಭದ ಕೆಲಸವಲ್ಲ. ವ್ಯಕ್ತಿಯ ಒಳ್ಳೆತನ ಮತ್ತು ಕೆಟ್ಟತನ ಎರಡನ್ನು ಮುಚ್ಚಿಡದೇ ನಿರ್ಭಿತಿಯಿಂದ ಬರೆಯುವ ಶಕ್ತಿ ಲೇಖಕನಿಗೆ ಬರಬೇಕು. ಇಲ್ಲದೇ ಹೋದರೆ ಆತ್ಮಕತೆಗಳು ಬರೀ ಹುಸಿ ಕೃತಿಯಾಗಿ ಬಿಡುವ ಭಯ ಇರುತ್ತದೆ. ಎಂ.ಜಿ. ಹೆಗಡೆ ಸತ್ಯವನ್ನು ಧೈರ್ಯವಾಗಿ ಆತ್ಮ ಕೃತಿಯ ಮೂಲಕ ಹೊರಗೆ ಇಟ್ಟಿದ್ದಾರೆ” ಎಂದು ಹೇಳಿದರು.
ಚಿಂತಕ ಅರವಿಂದ ಚೊಕ್ಕಾಡಿ ಇವರು ಪುಸ್ತಕ ಪರಿಚಯ ಮಾಡುತ್ತಾ ಮಾತನಾಡಿ “ಆತ್ಮಕತೆ ಎನ್ನುವುದು ಜೀವಮಾನ ಉದ್ದಕ್ಕೂ ತನ್ನನ್ನು ಅವಲೋಕನ ಮಾಡುವ ಕೃತಿಯಾಗಿ ಬರಬೇಕು. ಎಂ.ಜಿ. ಹೆಗಡೆ ಸತ್ಯ ವಿಚಾರವನ್ನು ಈ ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ‘ಚಿಮಣಿ ಬೆಳಕಿನಿಂದ’ ಉತ್ತಮ ಆತ್ಮಕತೆಯಾಗಿ ಕಾಣಿಸಿಕೊಳ್ಳುತ್ತದೆ” ಎಂದರು.
ಕೃತಿಕಾರ ಎಂ.ಜಿ. ಹೆಗಡೆ ಮಾತನಾಡಿ “ವರ್ತಮಾನಕ್ಕೆ ಇತಿಹಾಸ ವೇಷ ಕಟ್ಟಿಕೊಳ್ಳುವ ಅಗತ್ಯವಿಲ್ಲ ಎಂಬುದನ್ನು ತಿಳಿದುಕೊಂಡಿದ್ದೇನೆ. ಇತಿಹಾಸವನ್ನು ಕೆದಕುತ್ತಾ ಹೋದರೆ ಗೊಂದಲ ಸೃಷ್ಠಿಯಾಗುತ್ತದೆ. ಸೃಜನಶೀಲ ಬದುಕಿಗೆ ವರ್ತಮಾನವಷ್ಟೇ ಸಾಕು” ಎಂದರು.
ಗಾಂಧಿ ವಿಚಾರ ವೇದಿಕೆಯ ಅಧ್ಯಕ್ಷ ಶ್ರಿಧರ್ ಜಿ. ಭಿಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಲೇಖಕಿ ಭುವನೇಶ್ವರಿ ಹೆಗಡೆ, ನಿವೃತ್ತ ಪ್ರಾಂಶುಪಾಲ ಡಾ. ಉದಯಕುಮಾರ್ ಇರ್ವತ್ತೂರು, ನಾಗವೇಣಿ, ಸೀತಾರಾಮ ಹೆಗಡೆ ಶಾನವಳ್ಳಿ, ನಿವೃತ್ತ ಉಪಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ, ಪ್ರಭಾಕರ ಹೆಗಡೆ ಹೆಸಲ್ಮನೆ ಶಿರಸಿ, ನಂದಗೋಪಾಲ, ಲಾತವ್ಯ ಆಚಾರ್ಯ ಉಡುಪಿ, ಲಕ್ಷ್ಮೀ ಹೆಗಡೆ, ಗಹನ ಹೆಗಡೆ ಉಪಸ್ಥಿತರಿದ್ದರು.
ಗಾಂಧಿ ವಿಚಾರ ವೇದಿಕೆಯ ಆಡಳಿತಾಧಿಕಾರಿ ಭಾಗ್ಯೇಶ್ ರೈ ಸ್ವಾಗತಿಸಿದರು. ಕಲ್ಲೂರು ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಎಂ.ಜಿ. ಹೆಗಡೆ ಅವರು ರಚಿಸಿದ ಭಾವಗೀತೆಗಳ ಗಾಯನ ನಡೆಯಿತು. ಭಾನುಮತಿ ಹೆಗಡೆ, ಹುಸೇನ್ ಕಾಟಿಪಳ್ಳ, ಸಹನಾ ಭಟ್ ಹಾಡಿದರು.