ತೀರ್ಥಹಳ್ಳಿ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ತೀರ್ಥಹಳ್ಳಿ ಮತ್ತು ಪ್ರಗತಿ ಪ್ರಕಾಶನ ಮೈಸೂರು ಇವರ ವತಿಯಿಂದ ಸರ್ಜಾಶಂಕರ್ ಹರಳಿಮಠ ಇವರ ಸಂಶೋಧನಾ ಕೃತಿ ‘ಕನ್ನಡತನ’ ದಿನಾಂಕ 28 ಸೆಪ್ಟೆಂಬರ್ 2024ರಂದು ತೀರ್ಥಹಳ್ಳಿಯಲ್ಲಿ ಲೋಕಾರ್ಪಣೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿದ ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್ಾ. ದುರ್ಗಾದಾಸ್ ಇವರು ಮಾತನಾಡಿ ‘ದೇಶದಲ್ಲಿ ಜಾತಿ, ಕೋಮು ಸಂಘರ್ಷ ನಡೆದಾಗ ಸಾಮೂಹಿಕ ಬೆಂಬಲ ಇರುವುದಿಲ್ಲ. ಸೌಹಾರ್ದ, ಪ್ರೀತಿ ಬಯಸುವ ಬಹುಸಂಖ್ಯಾತರು ದೇಶದಲ್ಲಿದ್ದಾರೆ. ಆದರೆ ಒಗ್ಗಟ್ಟಿಗಾಗಿ ಧ್ವನಿಗೂಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಸಂಸ್ಕೃತ, ಹಿಂದಿ ಭಾಷಾ ಹೇರಿಕೆ ಭಿನ್ನವಾಗಿಲ್ಲ. ಕನ್ನಡದ ಯಜಮಾನಿಕೆಯ ಗಟ್ಟಿತನವನ್ನೇ ಕನ್ನಡದ ಕವಿಗಳು ಜಾಗೃತಗೊಳಿಸಿದ್ದಾರೆ. ಕುವೆಂಪು ಆ ಸಾಲಿಗೆ ಸೇರುವ ಅಗ್ರ ಗಣ್ಯರು. ಹಗೆತನ, ದ್ವೇಷ, ಅಸೂಯೆ ಬಿಟ್ಟು ಕನ್ನಡಿಗರು ಒಗ್ಗೂಡಬೇಕು. ಕನ್ನಡದ ಜೊತೆಗೆ ಬದುಕುವ ತುಳು, ಕೊಡವ, ಬಂಜಾರ ಮುಂತಾದ ಭಾಷೆಗಳಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿ ‘ಭಾಷೆ ಸ್ವಾಯತ್ತ ಅಲ್ಲ. ಅದನ್ನು ನುಡಿಯುವ, ಆಡುವ ಮನುಜನ ಸ್ಥಾನಮಾನಕ್ಕೆ ಹೊಂದಿಕೊಂಡಿದೆ. ಇವೆಲ್ಲವನ್ನು ಇಟ್ಟುಕೊಂಡ ಗುಣ ಗ್ರಾಹಿ ಕೃತಿ ‘ಕನ್ನಡತನ’ ಎಂದು ಹೇಳಿದರು.
“ಕನ್ನಡವು ಧರ್ಮ, ವರ್ಗಕ್ಕೆ ಸೇರದೆ ಎಲ್ಲರನ್ನೂ ಒಳಗೊಳ್ಳುವ ಭಾಷೆಯಾಗಬೇಕು. ಮಿತವಾದ ಶಕ್ತಿಗಳ ಅಡಿಯಾಳಾಗದೆ ಕೆಳವರ್ಗದ ಹಿತ ಕಾಯಬೇಕು. ಪೂರ್ವಗ್ರಹ, ವೈಯಕ್ತಿಕ ಭಾವನೆ ತುರುಕದೆ ನಿರ್ಲಿಪ್ತವಾಗಿ ಕೃತಿ ಮೂಡಿದೆ” ಎಂದು ಸಾಹಿತಿ ಜೆ.ಕೆ. ರಮೇಶ್ ಅಭಿಪ್ರಾಯಪಟ್ಟರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ. ರಹಮತ್ ಉಲ್ಲಾ ಅಸಾದಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಲೇಖಕ ಸರ್ಜಾಶಂಕರ ಹರಳಿಮಠ ಉಪಸ್ಥಿತರಿದ್ದರು.