ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ‘ಅರಿವು ತಿಳಿವು’ ತಿಂಗಳ ಉಪನ್ಯಾಸ ಮಾಲಿಕೆಯು ದಿನಾಂಕ 28 ಸೆಪ್ಟೆಂಬರ್ 2024 ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಆಗಮಿಸಿದ ವೇದ ವಿದ್ವಾಂಸರಾದ ಡಾ. ಕಾರ್ತಿಕ್ ವಾಗ್ಳೆ ಪಂಚನಬೆಟ್ಟು ಇವರು ‘ಮಾಂಡೂಕ್ಯ ಉಪನಿಷತ್ತು’ ಇದರ ಕುರಿತು ಮಾತನಾಡುತ್ತಾ “ವೇದಾಂತ ದರ್ಶನಗಳ ಅಧ್ಯಯನದಿಂದಲೇ ನಾವು ಭಾರತೀಯ ಸಂಸ್ಕೃತಿಯ ಹಿರಿಮೆಯನ್ನು ಅರಿತುಕೊಳ್ಳಲು ಸಾಧ್ಯವಿದೆ. ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ತುಗಳೆಂಬ ಪ್ರಸ್ಥಾನತ್ರಯಗಳಲ್ಲಿ ಉಪನಿಷತ್ತುಗಳು ವೇದದ ಭಾಗವೇ ಆಗಿರುವುದು. ಅರ್ಥವೇದದಲ್ಲಿ ಬರುವ ಮಾಂಡೂಕ್ಯ ಉಪನಿಷತ್ ಗಾತ್ರದ ದೃಷ್ಟಿಯಿಂದ ಹನ್ನೆರಡು ಮಂತ್ರಗಳುಳ್ಳ ಸಣ್ಣ ಉಪನಿಷತ್ತು ಆದರೂ ಮೋಕ್ಷಾಪೇಕ್ಷಿಗಳಿಗೆ ಇದು ಅತ್ಯಂತ ಮಹತ್ವಪೂರ್ಣವಾದ ಉಪನಿಷತ್ ಆಗಿದ್ದು ಬ್ರಹ್ಮ ಜ್ಞಾನವನ್ನು ಹೊಂದುವುದರಿಂದ ಲೌಕಿಕದ ಮೇಲಿನ ಮೋಹ ಕಳೆದು ಮೋಕ್ಷದೆಡೆಗೆ ಸಾಗುವ ಸಾಧನಾಮಾರ್ಗವನ್ನು ಇದು ವಿವರಿಸುತ್ತದೆ.” ಎಂದರು.
ಡಾ. ನಾ. ಮೊಗಸಾಲೆ, ಎಸ್. ನಿತ್ಯಾನಂದ ಪೈ, ಶ್ರೀಮತಿ ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಶಾರ್ವರಿಯವರು ಪ್ರಾರ್ಥಿಸಿ, ಸದಾನಂದ ನಾರಾವಿ ಸ್ವಾಗತಿಸಿ, ಮಾಲತಿ ವಸಂತರಾಜ್ ಅವರು ಅತಿಥಿಗಳನ್ನು ಪರಿಚಯಿಸಿ, ಸುಲೋಚನಾ ಬಿ. ವಿ. ಕಾರ್ಯಕ್ರಮ ನಿರ್ವಹಿಸಿ, ಶೈಲಜಾ ಹೆಗ್ಡೆ ವಂದಿಸಿದರು.