ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರು ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಸಂಘ ಆಶ್ರಯದಲ್ಲಿ ಆಯೋಜಿಸಿದ ಸಾಹಿತಿ ಚಂದ್ರಹಾಸ ಕಣಂತೂರು ವಿರಚಿತ ‘ಪಡಿಯಕ್ಕಿ’- ತುಳುನಾಡಿನ ದೈವಾರಾಧನೆಯ ಕಥೆಗಳು ಕೃತಿಯ ಲೋಕಾರ್ಪಣಾ ಸಮಾರಂಭವು ದಿನಾಂಕ 28 ಸೆಪ್ಟೆಂಬರ್ 2024ರ ಶನಿವಾರದಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ತುಕಾರಾಮ ಪೂಜಾರಿಯವರು ಮಾತನಾಡಿ “ಪಡಿಯಕ್ಕಿ ತುಳು ಬದುಕಿನ ವಿಶೇಷವಾದ ಪಡಿಯಚ್ಚು ಮೂಡಿಸಿದೆ. ಕನ್ನಡದ ಗಡಿಮೀರಿ ಈ ಕೃತಿ ಬೆಳೆಯಬೇಕು. ಆಂಗ್ಲ ಭಾಷೆಗೆ ತರ್ಜುಮೆಯಾಗುವ ಅಗತ್ಯವಿದೆ. ತುಳು ಭಾಷೆಯಲ್ಲಿರುವಷ್ಟು ಶ್ರೀಮಂತಿಕೆ ಜಗತ್ತಿನ ಬೇರೆ ಯಾವುದೇ ಭಾಷೆಯಲ್ಲಿ ಇರಲಾರದು. ಆದರೆ ಇಂದು ತುಳುವ ಬದುಕು ಸಂಪೂರ್ಣವಾಗಿ ಬದಲಾಗಿ ಬಿಟ್ಟಿದೆ. ಜಿಜ್ಞಾಸೆಗೆ ಅವಕಾಶ ಇರುವ ಅನೇಕ ವಸ್ತುಗಳು ಕೃತಿಯಲ್ಲಿವೆ.” ಎಂದರು.
ಕವಿ ಮತ್ತು ನಿವೃತ್ತ ಉಪನ್ಯಾಸಕ ಕೆ. ಟಿ. ಆಳ್ವ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂತ ಆ್ಯಗ್ನೆಸ್ ಕಾಲೇಜಿನ ಉಪನ್ಯಾಸಕ ಡಾ. ಅರುಣ್ ಕುಮಾರ್ ಕೃತಿ ಸಮೀಕ್ಷೆಗೈದರು. ವಿಶ್ವ ವಿದ್ಯಾಲಯ ಕಾಲೇಜು ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಮಂಗಳೂರು ವಿ.ವಿ. ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ. ಮಾಧವ ಎಂ. ಕೆ., ಪ್ರಕಾಶಕ ಕಲ್ಲೂರು ನಾಗೇಶ್ ಉಪಸ್ಥಿತರಿದ್ದರು. ಕೃತಿಕಾರ ಚಂದ್ರಹಾಸ ಕಣಂತೂರು ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಶಾಂತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಂಧ್ಯಾ ವಂದಿಸಿದರು.