ಕಾಸರಗೋಡು : “ಸಂಗೀತವು ಭಗವಂತ ಹಾಗೂ ಭಕ್ತನನ್ನು ಹೆಣೆಯುವ ಮಾಧ್ಯಮ. ಸಂಗೀತದಲ್ಲಿರುವ ಮಾಧುರ್ಯ ಹಾಗೂ ಆ ಕೃತಿಯಲ್ಲಿ ಹುದುಗಿರುವ ಸಾಹಿತ್ಯದ ಸೌಂದರ್ಯವು, ಪವಾಡಸದೃಶವಾಗಿ ಕಾರ್ಯವೆಸಗಿ ಕಲಾವಿದನ ಹಾಗೂ ಕೇಳುಗನ ಮನದಾಳದಲ್ಲಿ ಭಗವಂತನ ಕುರಿತಾದ ಪೂಜ್ಯ ಭಾವನೆಯನ್ನು ಬಿಂಬಿಸುತ್ತದೆ. ಸಂಗೀತಕ್ಕೆ ಮರುಳಾಗದ ಜೀವಿಗಳೇ ಇಲ್ಲ. ಅಂತಹ ಸಂಗೀತವು ಭಕ್ತಿಗೀತೆಯಾಗಿರಬಹುದು, ಭಾವಗೀತೆಯಾಗಿರಬಹುದು, ಜಾನಪದ ಗೀತೆಯಾಗಿರಬಹುದು. ಅದರಲ್ಲಿರುವ ಸಾಹಿತ್ಯ ಹಾಗೂ ಸಂಗೀತಗಳೆರಡೂ ಎರಡು ಕಣ್ಣುಗಳಷ್ಟೇ ಪ್ರಧಾನ, ಅಂತಹ ಗೀತೆಗಳನ್ನು ಸ್ವತಃ ಕಲಿಯುವುದಕ್ಕಿಂತ ಇಂತಹ ಶಿಬಿರಗಳ ಮೂಲಕ ಕಲಿಯುವುದರಿಂದ ಪ್ರಬುದ್ಧತೆ ಹೆಚ್ಚಾಗುತ್ತದೆ.” ಎಂಬುದಾಗಿ ಖ್ಯಾತ ಚಿತ್ರನಟ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ವಿ. ಮನೋಹರರವರು ನುಡಿದರು.
ಕಾಸರಗೋಡಿನ ಪ್ರಸಿದ್ಧ ಕಲಾಸಂಸ್ಥೆ ರಂಗಚಿನ್ನಾರಿ (ರಿ) ಇದರ ಸಾರಥ್ಯದಲ್ಲಿ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಹಾಗೂ ಸ್ಥಳೀಯ ಭಕ್ತಿರಸ ಸಮಿತಿಯ ಸಮರ್ಥ ಸಹಕಾರದಲ್ಲಿ ಅಂತರ್ರಾಷ್ಟ್ರೀಯ ಖ್ಯಾತಿಯ ಗಾಯಕ ಶಂಕರ ಶಾನುಭೋಗ್ ಕಳಸ ಇವರ ನೇತೃತ್ವದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 29 ಸೆಪ್ಟೆಂಬರ್ 2024ರಂದು ಬಲು ವಿಜೃಂಭಣೆಯಿಂದ ಜರಗಿದ ಭಕ್ತಿ-ಭಾವಗೀತೆಗಳ ಕಲಿಕಾ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸುತ್ತಾ ಅವರು ಈ ರೀತಿ ಅಭಿಪ್ರಾಯ ಪಟ್ಟರು.
ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕರಾದ ಕೆ ಮಾಧವ ಅಡಿಗರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಭೆಯಲ್ಲಿ ಅತಿಥಿಯಾಗಿ ಖ್ಯಾತ ಹಿಂದೂಸ್ಥಾನಿ ಗಾಯಕಿ ಶ್ರೀಮತಿ ಶಾಂತೇರಿ ಕಾಮತ್ ಭಾಗವಹಿಸಿದ್ದರು. ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕರಾದ ಕಾಸರಗೋಡು ಚಿನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಾಗಾರದ ಸದುದ್ದೇಶಗಳನ್ನು ವಿವರಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಪ್ರೇಮಾಶೆಟ್ಟಿ ವಂದಿಸಿದರು. ಕುಮಾರಿ ವೈಭವಿ ಶಂನಾಡಿಗ ಪ್ರಾರ್ಥನೆ ಹಾಡಿದರು. ಭಕ್ತಿರಸ ಸಮಿತಿಯ ಕಾರ್ಯಾಧ್ಯಕ್ಷರಾದ ಕಲಾರತ್ನ ಶಂನಾಡಿಗ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ರಂಗಚಿನ್ನಾರಿ ಹಾಗೂ ಭಕ್ತಿರಸ ಸಮಿತಿಯ ಆಹ್ವಾನದಂತೆ ಕಾಸರಗೋಡು, ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಮಾತ್ರವಲ್ಲದೇ ಭಟ್ಕಳದಿಂದಲೂ ಶಿಬಿರಾರ್ಥಿಗಳು ಆಗಮಿಸಿದ್ದರು. ಕಣಿಪುರ ದೇಗುಲದಂಗಳದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 650 ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದು, ಬೆಳಗ್ಗಿನಿಂದ ಸಂಜೆಯ ತನಕ ಸ್ಥಳದಲ್ಲೇ ಉಪಸ್ಥಿತರಿದ್ದು, ಶ್ರೀ ಶಂಕರ ಶಾನುಭೋಗ್ ಅವರು ಸರಳ ರೂಪದಿಂದ ಕಲಿಸಿದ ನಾಲ್ಕು ಹಾಡುಗಳನ್ನು ಕಲಿತು ಶಿಬಿರವನ್ನು ಯಶಸ್ವಿಗೊಳಿಸಿದರು.