ಪಿರಿಯಾಪಟ್ಟಣ : ಧಾನ್ ಫೌಂಡೇಶನ್ ನೇತೃತ್ವದ ಮಸಣಿಕಮ್ಮ ಮಹಿಳಾ ಕಳಂಜಿಯ ಒಕ್ಕೂಟದ ಸಮೂಹ ಮಹಾಸಭೆ ಹಾಗೂ ನಾರಾಯಣ ಹೆಗಡೆಯವರಿಗೆ ಅಭಿನಂದನಾ ಸಮಾರಂಭ ಮತ್ತು ‘ಸಂಘಂ ಶರಣಂ ಗಚ್ಛಾಮಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ದಿನಾಂಕ 21 ಸೆಪ್ಟೆಂಬರ್ 2024ರಂದು ಸಾಯಿ ಸಮುದಾಯ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಗತಿಪರ ಚಿಂತಕಿ ಡಾ. ಶ್ವೇತಾ ಮಡಪ್ಪಾಡಿ ಇವರು ಮಾತನಾಡಿ “ಸಮಾಜದ ಏಳಿಗೆಯಲ್ಲಿ ಪುರುಷರಷ್ಟೇ ಪಾತ್ರ ಮಹಿಳೆಯರದ್ದು ಇದೆ. ಈ ನಿಟ್ಟಿನಲ್ಲಿ ಮಹಿಳಾ ಸಬಲೀಕರಣಕ್ಕೆ ಧಾನ್ ಫೌಂಡೇಶನ್ ಕೊಡುಗೆ ಶ್ಲಾಘನೀಯ, ಕಳೆದ ಏಳು ವರ್ಷಗಳಿಂದ ಧಾನ್ ಫೌಂಡೇಶನ್ ಅಭಿವೃದ್ಧಿಯಲ್ಲಿ ತನ್ನದೇ ಆದ ಕೊಡುಗೆ ನೀಡಿ ನಿರ್ಗಮಿಸುತ್ತಿರುವ ಯೋಜನಾ ಕಾರ್ಯ ನಿರ್ವಾಹಕ ನಾರಾಯಣ ಹೆಗಡೆಯವರ ಕೆಲಸ ಇತರರಿಗೆ ಮಾದರಿಯಾಗಿದೆ” ಎಂದರು.
ಧಾನ್ ಫೌಂಡೇಶನ್ ಪ್ರಾದೇಶಿಕ ಸಂಯೋಜಕ ಶಂಕರ್ ಪ್ರಸಾದ್ ಮಾತನಾಡಿ “30 ವರ್ಷಗಳಿಂದ 16 ರಾಜ್ಯಗಳಲ್ಲಿ ಧಾನ್ ಫೌಂಡೇಶನ್ ಕರ್ತವ್ಯ ನಿರ್ವಹಿಸುತ್ತಿದ್ದು, ನಾರಾಯಣ ಹೆಗಡೆ ಇವರ ಕೆಲಸ ಒಕ್ಕೂಟದ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಿತ್ತು. ಸಮಾಜದ ಅಭಿವೃದ್ಧಿಗಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದರು.
ಯೋಜನಾ ಕಾರ್ಯನಿರ್ವಾಹಕ ನಾರಾಯಣ ಹೆಗಡೆ ಅವರು ಮಾತನಾಡಿ “ಧಾನ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಒಂದು ಕುಟುಂಬದಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ ತೃಪ್ತಿ ಇದ್ದು, ಸಂಸ್ಥೆಯಿಂದ ದೊರೆಯುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಿ ಎಲ್ಲರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಕರ್ತವ್ಯದ ಅವಧಿಯಲ್ಲಿನ ಅನುಭವದ ಆಧಾರದ ಮೇಲೆ ಸ್ವಸಹಾಯ ಸಂಘಗಳ ನಿರ್ವಹಣೆ ಮತ್ತು ಏಳಿಗೆ ಕುರಿತು ‘ಸಂಘಂ ಶರಣಂ ಗಚ್ಛಾಮಿ’ ಪುಸ್ತಕ ರಚಿಸಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಕೋರಿದರು.
ಇದೇ ಸಂದರ್ಭದಲ್ಲಿ ನಾರಾಯಣ ಹೆಗಡೆ ಅವರು ಸ್ವಸಹಾಯ ಸಂಘಗಳ ರಚನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ರಚಿಸಿರುವ ‘ಸಂಘಂ ಶರಣಂ ಗಚ್ಛಾಮಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ನಾರಾಯಣ ಹೆಗಡೆಯವರಿಗೆ ಸಂಸ್ಥೆ ವತಿಯಿಂದ ಮತ್ತು ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಮುಖಂಡರು ಅಭಿನಂದಿಸಿ ಶುಭಕೋರಿ ಬೀಳ್ಕೊಟ್ಟರು. ಹಿರಿಯ ನ್ಯಾಯವಾದಿ ಕೃಷ್ಣಪ್ರಸಾದ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ, ಕಳಂಜಿಯ ಚಳುವಳಿ ನಾಯಕಿ ಪ್ರಮೀಳಾ, ಒಕ್ಕೂಟ ಅಧ್ಯಕ್ಷೆ ವಸಂತ, ಸಂಯೋಜಕರಾದ ಜಯಲಕ್ಷ್ಮಿ, ಪ್ರಭುಶಂಕರ್, ವೀರೇಂದ್ರ, ಭಾಗ್ಯ, ನಾರಾಯಣ ಹೆಗಡೆಯವರ ಕುಟುಂಬದವರು, ಧಾನ್ ಫೌಂಡೇಶನ್ ಸಿಬ್ಬಂದಿ ಹಾಗೂ ವಿವಿಧ ಸ್ವಸಹಾಯ ಸಂಘಗಳ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.