7 ಮಾರ್ಚ್ 2023, ಉಡುಪಿ: ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಉದ್ಯಮದೊಂದಿಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಕಲೆ, ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನ ಹೆಜ್ಜೆ ಗುರುತನ್ನು ಮೂಡಿಸಿಕೊಂಡವರು. ಇದಕ್ಕಾಗಿ “ತಲ್ಲೂರು ಫ್ಯಾಮಿಲಿ ಟ್ರಸ್ಟ್” (ರಿ) ಅನ್ನು ಹುಟ್ಟು ಹಾಕಿ ತನ್ನ ಪರಿವಾರದ ಜೊತೆಗೆ ಸಮಾಜದ ಕೈಂಕರ್ಯಕ್ಕೆ ಟೊಂಕ ಕಟ್ಟಿದವರು. ಯಕ್ಷಗಾನ, ರಂಗಭೂಮಿ ಕಲಾವಿದರಿಗೆ ಗೌರವಾರ್ಪಣೆಯ ಜೊತೆಗೆ ಆಧುನಿಕ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಮೊಬೈಲ್, ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲ ತಾಣಗಳಲ್ಲಿ ಕಳೆದು ಹೋಗದೆ, ತಮ್ಮ ಹಿರಿಯರ ಈ ಮಣ್ಣಿನ ಉದಾತ್ತ ಶ್ರೀಮಂತ ಪರಂಪರೆಯನ್ನು ಮನಗಾಣಬೇಕು ಎಂಬ ತುಡಿತ ಇವರದ್ದು. ಅದರಲ್ಲಿಯೂ ಯುವ ಪೀಳಿಗೆ ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಅಡ್ಡದಾರಿ ಹಿಡಿಯಬಾರದು ಎಂಬ ಸಾಮಾಜಿಕ ಕಳಕಳಿ ಇವರನ್ನು ಸಾಹಿತ್ಯ ಕ್ಷೇತ್ರಕ್ಕೆ ಸೆಳೆದು ತಂದಿದೆ. ಹೀಗಾಗಿ ಇವರ ಬಹುತೇಕ ಕೃತಿಗಳು ನೈತಿಕ ಶಿಕ್ಷಣ ನೀಡುವ ಸಾರವನ್ನೇ ಒಳಗೊಂಡಿದೆ.
‘ಮುಂಬೆಳಕು’, ‘ಹೊಂಬೆಳಕು’, ‘ದಾರಿದೀಪ’, ‘ಪಾಥೇಯ’, ‘ಹೊಂಗಿರಣ’, ‘ಪಥ ದೀಪಿಕಾ’, “ಧರ್ಮಾಂಚರ-ನಿತ್ಯ ಸತ್ಯಗಳು’ ಹಾಗೂ ‘ಕಲಾ ಸಂಚಯ’ – ‘ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು’, ‘ನಿತ್ಯ ಸತ್ಯ’, ‘ಬಾಳಿಗೆ ಬೆಳಕು’ ಮೊದಲಾದ ಕೃತಿಗಳನ್ನು ರಚಿಸಿ ಪ್ರಕಟಿಸಿದ್ದು ಮಾತ್ರವಲ್ಲದೆ, ಅನ್ಯ ಲೇಖಕರ ‘ದಾರಿದೀಪ’, ಬಾಳಬೆಳಕು’,‘ಬರಹ ತರಹ’, ‘ಪರಂಪರಾಗತ’, ಭಗವದ್ಗೀತೆ, ‘ಶ್ರೀ ರಾಮ ರಕ್ಷಾ ಸೋತ್ರಂ’,‘ಹನುಮಾನ್ ಚಾಲೀಸಾ’ ಮೊದಲಾದ ಪುಸ್ತಕಗಳನ್ನು ಪ್ರಕಟಿಸಿದರು . ಸುಮಾರು 400ಕ್ಕೂ ಅಧಿಕ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ,30,000ಕ್ಕೂ ಅಧಿಕ ಪುಸ್ತಕಗಳನ್ನು ವಾಚನಾಲಯಗಳಿಗೆ ಮತ್ತು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿದರು.ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಬಿತ್ತುವ ಜ್ಞಾನ ಯಜ್ಞ ನಡೆಸಿದರು. ಶ್ರೀಯುತರು ಬರೆದ ‘ಕಲಾಸಂಚಯ-ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು’ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ 2020ನೇ ಸಾಲಿನ `ಪುಸ್ತಕ ಬಹುಮಾನ ‘ಲಭಿಸಿದೆ. ಅಲ್ಲದೆ ಇದೇ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ 2020ನೇ ಸಾಲಿನ `ಪುಸ್ತಕ ಸೊಗಸು’ ಗೌರವ ಪ್ರದಾನವಾಗಿರುವುದು ಶ್ರೀಯುತರ ಸಾಹಿತ್ಯ ಕೃಷಿಗೆ ಸಂದ ಗೌರವ.
“ಯಕ್ಷಗಾನ ರಂಗ ಮತ್ತು ಡಾ .ಶೆಟ್ಟಿಯವರು:
ಯಕ್ಷಗಾನ ಕಲೆಯ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಅವರು ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿದ್ದ ದಿನಗಳಲ್ಲಿ ತಲ್ಲೂರು ಶಿವರಾಮ ಶೆಟ್ಟರು “ಯಕ್ಷಗಾನ ಕಲಾವಿದರಲ್ಲ”ಎನ್ನುವ ಕೊಂಕು ಮಾತು ಕೇಳಿ ಬಂದಾಗ, ಅದನ್ನು ಸವಾಲಾಗಿ ಸ್ವೀಕರಿಸಿ,ತನ್ನ 60ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಖ್ಯಾತ ಗುರು ಬನ್ನಂಜೆ ಸಂಜೀವ ಸುವರ್ಣರಲ್ಲಿ ಅಭ್ಯಾಸ ಮಾಡಿ ಕಲಿಯುವಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ಮತ್ತು ಈವರೆಗೆ 400 ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅಭಿಮಾನಿಗಳ ಅತೀವ ಮೆಚ್ಚುಗೆಗೆ ಪಾತ್ರರಾದದ್ದು ಇವರ ಮಹತ್ತರ ಸಾಧನೆ ಎಂದರೆ ತಪ್ಪಾಗಲಾರದು. ಕಳೆದ 16 ವರ್ಷಗಳಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯುವ ಚಿಟ್ಟಾಣಿ ರಾಮಚಂದ್ರ ಹೆಗೆಡೆ ಯಕ್ಷಗಾನ ಸಪ್ತಾಹ, ಕೆ.ಗೋವಿಂದ ಭಟ್ಟ ಯಕ್ಷಗಾನ ಸಪ್ತಾಹ ಹಾಗೂ ಪ್ರಶಸ್ತಿ ಪ್ರದಾನ, ಮತ್ತು ಖ್ಯಾತ ಭಾಗವತ ಶ್ರೀ ಸುಬ್ರಹ್ಮಣ್ಯ ಧಾರೇಶ್ವರ ಅವರ `ಧಾರೇಶ್ವರ ಅಷ್ಟಾಹ’ ಕಾರ್ಯಕ್ರಮಗಳ ನೇತೃತ್ವ ವಹಿಸಿ ಮುನ್ನಡೆಸಿದ ಖ್ಯಾತಿ ಇವರದು.
ತನ್ನ ಪೂಜ್ಯ ಮಾತಾ ಪಿತರ ನೆನಪಿನಲ್ಲಿ ತಲ್ಲೂರು ಕನಕಾ – ಅಣ್ಯಯ್ಯ ಶೆಟ್ಟಿ ಪ್ರಶಸ್ತಿಯನ್ನು ಪ್ರತೀ ವರ್ಷ ನೀಡುತ್ತಾ ಬಂದಿದ್ದು ಈವರೆಗೆ 8 ಮಂದಿ ಪ್ರಸಿದ್ಧ ಯಕ್ಷಗಾನ ವಿದ್ವಾಂಸರಿಗೆ ಅರ್ಪಿಸಲಾಗಿದೆ.ಉಡುಪಿ ಕುಂಜಿಬೆಟ್ಟಿನ ಯಕ್ಷಗಾನ ಕೇಂದ್ರದ ಮುಖ್ಯ ಪೋಷಕರಾಗಿ, ಉಡುಪಿಯ ಪ್ರತಿಷ್ಠಿತ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ ಅನುಭವ ಇವರಿಗಿದೆ.ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸುವಂತೆ ಮಾಡಿರುವುದು ಸದ್ರಿಯವರ ಸಾಧನೆಯಲ್ಲೊಂದಾಗಿದೆ.ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಮತ್ತು ಯಕ್ಷನಿಧಿಯ ಅಧ್ಯಕ್ಷರಾದ ನಂತರ 1,000 ವಿದ್ಯಾರ್ಥಿಗಳಿಗೆ 70 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಿರುವುದು ದಾಖಲೆಯಾಗಿದೆ.
ರಂಗಭೂಮಿ ಉಡುಪಿಗೆ ಸಾರಥ್ಯ :
ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿರುವ ‘ರಂಗಭೂಮಿ ಉಡುಪಿಗೆ’ ಅಧ್ಯಕ್ಷರಾದ ನಂತರ ಸಂಸ್ಥೆಯ ಕಲಾವಿದರಿಗೆ ಕಿರುತರೆಗಳಲ್ಲಿ ಅಭಿನಯಿಸಲು ಪ್ರೋತ್ಸಾಹ, ಸಂಸ್ಥೆಯ ಸುವರ್ಣ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುವುದರೊಂದಿಗೆ, ಸ್ವಂತ ಕಟ್ಟಡವನ್ನು ಹೊಂದುವ ಕನಸು ಕೂಡಾ ನನಸಾಯಿತು. ಈ ಸಂದರ್ಭದಲ್ಲಿ “ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ ಸಂಸ್ಕೃತಿ ಸಾಧಕ ಪ್ರಶಸ್ತಿ”ಯನ್ನು ಸ್ಥಾಪಿಸಿ ರಂಗಭೂಮಿಯ ಪ್ರಸಿದ್ಧ ಸಾಧಕರನ್ನು ಗುರುತಿಸಿ ಪ್ರದಾನ ಮಾಡಲಾಗುತ್ತಿದ್ದು, ಈವರೆಗೆ 5 ಮಂದಿ ಸಾಧಕರಿಗೆ ಈ ಪ್ರಶಸ್ತಿ ಸಂದಿದೆ.
ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿ :
ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ನೇಮಕ ಆದ ಮೇಲೆ `ಜಾನಪದ ವೈಭವ’ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಮೂಲಕ ಜಾನಪದ ಕಲಾ ಸೊಗಡನ್ನು ಪ್ರದರ್ಶಿಸುವ ಕಾರ್ಯ ನಡೆಯಿತು. ಈಗಾಗಲೇ 5 ಕಡೆಗಳಲ್ಲಿ ಈ ಕಾರ್ಯಕ್ರಮ ನಡೆದು ಜನ ಮನ್ನಣೆ ಗಳಿಸಿದೆ.
ಇವರ ಕಲಾ ಸೇವೆಯನ್ನು ಪರಿಗಣಿಸಿ 2016ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ “ಕರ್ನಾಟಕ ರತ್ನ’ ಪ್ರಶಸ್ತಿ ಹಾಗೂ “ಸಮಾಜ ಸೇವಾ ರತ್ನ” ಪ್ರಶಸ್ತಿ, ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಇವರಿಂದ “ಕೈರಳೀ ಶ್ರೀ ಪ್ರಶಸ್ತಿ”, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಇವರಿಂದ “ಸಾಧಕ ರತ್ನ ಪ್ರಶಸ್ತಿ”, ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ (ರಿ.) ಬೆಂಗಳೂರು ವತಿಯಿಂದ “ಸಿರಿಗನ್ನಡ ರಾಜ್ಯೋತ್ಸವ ಪ್ರಶಸ್ತಿ” ಇವರನ್ನು ಅರಸಿಕೊಂಡು ಬಂದಿದೆ. ಇವರು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ 2011ರಲ್ಲಿ ಯಕ್ಷಗಾನ ಕಲಾರಂಗಕ್ಕೆ ‘ಉಡುಪಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ’, 2012ರಲ್ಲಿ ರಂಗಭೂಮಿ ಉಡುಪಿಗೆ ‘ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ಯಕ್ಷಗಾನ ಕಲಾರಂಗಕ್ಕೆ ‘ಕಿಲ್ಲೆ ಪ್ರಶಸ್ತಿ’, ಯಕ್ಷಗಾನ ಕಲಾರಂಗಕ್ಕೆ ‘ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ’ ಕೂಡಾ ಲಭಿಸಿತು. ಪದವಿ ಯಕ್ಷಗಾನ, ರಂಗಭೂಮಿ, ಜಾನಪದ, ಸಾಹಿತ್ಯ ,ಸಂಘಟನೆ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಮಾಡಿದ ಗಣನೀಯ ಸಾಧನೆಗೆ ಒಲಿದು ಬಂದದ್ದು ರಾಜ್ಯದ ಪ್ರತಿಷ್ಠಿತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ನೀಡುವ 2022ನೇ ಸಾಲಿನ ಗೌರವ ಡಾಕ್ಟರೇಟ್. ಜೀವಮಾನದ ಸಾಧನೆ, ಮಾನವೀಯತೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪುಣೆಯ ಅಕಾಡೆಮಿಕ್ ಕೌನ್ಸಿಲ್ ಆಫ್ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಆಂಡ್ ಎಜುಕೇಶನ್ (ಐವಿಎಪಿ) ಸಂಸ್ಥೆ 2018ರ ಮಾ.17ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.
ನಿಸ್ವಾರ್ಥವಾಗಿ ಮಾಡಿದ ಸಾಂಸ್ಕೃತಿಕ ಚಟುವಟಿಕೆ, ಕಲಾರಂಗದ ಕಡೆಗಿನ ಒಲವು ತುಡಿತ, ವಿದ್ಯಾರ್ಥಿಗಳ ಭವಿಷ್ಯದ ಬಗೆಗಿನ ಕಾಳಜಿ ಈ ಎಲ್ಲಾ ಮಾನವೀಯ ಮೌಲ್ಯಗಳಿಗೆ ಭಗವಂತನ ಅನುಗ್ರಹದೊಂದಿಗೆ ಜನಮಾನಸದ ಪ್ರೀತಿ, ತುಂಬು ಹೃದಯದ ಹಾರೈಕೆ ಇವರನ್ನು ನಿರಂತರ ಚಟುವಟಿಕೆಯಿಂದ ಇರುವಂತೆ ಮಾಡಿದೆ. ಸದಾ ಹೊಸತರ ಹುಡುಕಾಟದ ನಡುವೆ ಬದುಕಿನ ನಿತ್ಯ ಸತ್ಯಗಳನ್ನು ಕಂಡು ಕೊಂಡಾಗ `ಧರ್ಮಂ ಚರ’ ಎಂಬುದು ಶ್ರೀಯುತರಿಗೆ ಹೆಚ್ಚು ಪ್ರಸ್ತುತವಾಗುತ್ತದೆ.