ಮಂಗಳೂರು : ದಸರಾ ಬಹುಭಾಷಾ ಕವಿಗೋಷ್ಠಿಯು 8 ಅಕ್ಟೋಬರ್ 2024ರಂದು ಸಂಜೆ 3-00 ಗಂಟೆಗೆ ನಗರದ ಉರ್ವಾಸ್ಟೋರಿನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳು ಪರಿಷತ್, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಮಯೂರಿ ಫೌಂಡೇಶನ್ ಇವರ ಸಹಯೋಗದೊಂದಿಗೆ 3ನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಆಯೋಜಿಸಿದೆ.
ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯ 12 ಭಾಷೆಗಳ ಕವಿಗಳು ಕವಿತೆ ವಾಚಿಸಲಿದ್ದಾರೆ. ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ. ನಿಕೇತನ ಉಡುಪಿ ಅವರು ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಕೆ. ಶೆಟ್ಟಿ ಮುಂಬಯಿ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಗೀತಾ ಜೈನ್ (ತುಳು), ಪ್ರಮೀಳಾ ರಾಜ್ ಸುಳ್ಯ (ಕನ್ನಡ), ಚಂದ್ರಾವತಿ ಬಡ್ಡಡ್ಕ (ಅರೆಭಾಷೆ), ಬಾಬು ಕೊರಗ ಪಾಂಗಾಳ (ಕೊರಗ ಭಾಷೆ) ಮಂಜುನಾಥ್ ಗುಂಡ್ಮಿ (ಕುಂದಾಪುರ ಕನ್ನಡ), ಜ್ಯೋತಿ ರವಿ ರಾಜ್ (ಹವ್ಯಕ ಕನ್ನಡ), ಆಕೃತಿ ಭಟ್ (ಶಿವಳ್ಳಿ ತುಳು), ಶರೀಫ್ ನೀರ್ಮುಂಜೆ (ಬ್ಯಾರಿ), ಡಾ. ಪ್ಲೇವಿಯಾ ಕ್ಯಾಸ್ಟಲಿನೋ (ಕೊಂಕಣಿ), ರಾಜನ್ ಮುನಿಯೂರು (ಮಲೆಯಾಳಂ), ಸಿಯಾನ ಬಿ.ಎಂ. (ಬ್ಯಾರಿ), ಫೆಲ್ಸಿ ಲೊಬೋ ದೇರೆಬೈಲ್ (ಕೊಂಕಣಿ), ಶರ್ಮಿಳಾ ಬಜಕೊಡ್ಳು (ಮರಾಟಿ), ಶ್ರೀನಿವಾಸ ಪೆರಿಕ್ಕಾನ (ಕರಾಡ) ಭಾಗವಹಿಸುವರು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.