ಬೆಂಗಳೂರು : ಜನಪದರು ಸಾಂಸ್ಕೃತಿಕ ವೇದಿಕೆ (ರಿ.) ಇವರು ಅಭಿನಯಿಸುವ ಸಿದ್ದೇಶ್ವರ ನನಸುಮನೆ ಇವರ ಪರಿಕಲ್ಪನೆ, ರಚನೆ ಮತ್ತು ನಿರ್ದೇಶನದಲ್ಲಿ ‘SOME ಸಾರ’ ನಾಟಕ ಪ್ರದರ್ಶನವನ್ನು ದಿನಾಂಕ 8 ಅಕ್ಟೋಬರ್ 2024ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ನಿಂಬೆಕಾಯಿಪುರದ ಶ್ರೀ ಅಭಯಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಜನಪದರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಿಡಿ ಬಿಡಿಯಾದ ಹಾಸ್ಯ ಪ್ರಸಂಗಗಳಿಗೆ ನಾಟಕದ ರೂಪ ಕೊಟ್ಟು ಅದನ್ನು ರಂಗದ ಮೇಲೆ ತಂದಿರುವ ತಂತ್ರದ ಹಿನ್ನಲೆಯಲ್ಲಿ ‘SOME ಸಾರ’ ಎನ್ನುವ ಈ ನಾಟಕವು ಹಾಸ್ಯಕ್ಕಾಗಿ ಡಬ್ಬಲ್ ಮೀನಿಂಗ್ ಸಂಭಾಷಣೆ ಅಥವಾ ಇನ್ನಾವುದೇ ಆಂಗಿಕ ಚೇಷ್ಟೆಗಳನ್ನು ಬಳಸದೆ ಘಟನೆಗಳ ಮೂಲಕ ಪ್ರೇಕ್ಷಕರನ್ನು ನಗಿಸುತ್ತದೆ. ಬೆಂಗಳೂರು ಪೂರ್ವ ತಾಲೂಕಿನ ದೊಡ್ಡಬನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಪ್ರೋತ್ಸಾಹದಿಂದ ‘ಜನಪದರು’ ಎಂಬ ಸಾಂಸ್ಕೃತಿಕ ವೇದಿಕೆ ಮೂಲಕ ಸಿದ್ದೇಶ್ವರ ನನಸುಮನೆ ಇವರ ನಿದೇಶನದಲ್ಲಿ ಪ್ರಸ್ತುತಗೊಳ್ಳುವ ಈ ನಾಟಕ ಹಾಸ್ಯ ನಾಟಕಗಳು ಅಪರೂಪ ಎನ್ನುವ ಈ ಕಾಲಘಟ್ಟದಲ್ಲಿ ಸಂಸಾರ ಸಮೇತವಾಗಿ ನೋಡಬಹುದಾರ ನಾಟಕ ‘SOME ಸಾರ’. ನಾಟಕದ ಅಂತ್ಯದಲ್ಲಿ ಸಂಸಾರ ಎಂದರೆ ಅದರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕು. ಆಗ ಮಾತ್ರ ಸಂಸಾರ ಸುಖದ ಸಾಗರ ಆಗೋದು ಎಂಬ ಸಂದೇಶ ಕೂಡ ಕೊಟ್ಟಿದ್ದಾರೆ.