ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನದಲ್ಲಿ ಇತ್ತೀಚಿನ ದಿನಗಳಲ್ಲಿ ನಮಗೆ ಅನೇಕ ಮಹಿಳಾ ಕಲಾವಿದೆಯರು ಕಾಣಲು ಸಿಗುತ್ತಾರೆ. ಇಂತಹ ಮಹಿಳಾ ಕಲಾವಿದರ ಸಾಲಿನಲ್ಲಿ ಮಿಂಚುತ್ತಿರುವ ಯುವ ಮಹಿಳಾ ಕಲಾವಿದೆ ಪ್ರೀತಿ ವಿನಾಯಕ ಹೆಗಡೆ ಜಾಲೀಮನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚ್ಗಿಯ ವಸುಧಾ ವಿ. ಹೆಗಡೆ ಹಾಗೂ ವಿನಾಯಕ ಮ. ಹೆಗಡೆ ಇವರ ಸುಪುತ್ರಿ ಪ್ರೀತಿ ವಿನಾಯಕ ಹೆಗಡೆ ಜಾಲೀಮನೆ. ಶ್ರೀ ಉಮೇಶ ಹೆಗಡೆ ಹೊಂಕಣಕೇರಿ ಹಾಗೂ ಶ್ರೀ ವೆಂಕಟರಮಣ ಭಟ್ ಗುಡ್ಡೆ ಇವರುಗಳು ಯಕ್ಷಗಾನ ಕಲಿಕೆಯಲ್ಲಿ ಈಕೆಯನ್ನು ತಿದ್ದಿ ತೀಡಿದ ಗುರುಗಳು.
ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:-
“ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರ ಯಕ್ಷಗಾನದ ಶಿಸ್ತು, ನಡೆ, ಪಾತ್ರ ನಿರ್ವಹಣೆ, ವೇದಿಕೆ ಉಪಸ್ಥಿತಿ ಎಲ್ಲರನ್ನೂ ಸೂರೆಗೊಳ್ಳುವ ಹಾಗೆ ನನ್ನ ಮೇಲೆಯೂ ಪರಿಣಾಮ ಬೀರಿತು ಹಾಗೂ ಶ್ರೀ ಕಾರ್ತಿಕ ಚಿಟ್ಟಾಣಿ ಅವರ ನೃತ್ಯ, ಹೆಜ್ಜೆ ಮತ್ತು ಅಭಿನಯಕ್ಕೆ ಆಕರ್ಷಿತಳಾಗಿ, ಯಕ್ಷಗಾನವನ್ನು ಕಲಿಯಬೇಕು ಎನ್ನುವ ಇನ್ನಷ್ಟು ನನ್ನಲ್ಲಿ ಹಂಬಲ ಹೆಚ್ಚಾಯಿತು” ಎನ್ನುತ್ತಾರೆ ಪ್ರೀತಿ. ಕೃಷ್ಣಾರ್ಜುನ ಕಾಳಗ, ಗದಾಯುದ್ಧ, ಶ್ರೀರಾಮ ಪಟ್ಟಾಭಿಷೇಕ, ದಕ್ಷ ಯಜ್ಞ ಇವುಗಳು ಇವರ ಪ್ರಿಯವಾದ ಪ್ರಸಂಗಗಳು. ಕೃಷ್ಣ, ದಾಕ್ಷಾಯಿಣಿ, ಅಂಬೆ, ಸಾವಿತ್ರಿ, ರುದ್ರಕೋಪ ಇತ್ಯಾದಿ ಇಷ್ಟವಾದ ಪಾತ್ರಗಳು. ವೀರವರ್ಮ ಕಾಳಗ, ಗದಾಯುದ್ಧ, ಕಂಸವಧೆ ಪ್ರಸಂಗಗಳ ಕೃಷ್ಣ, ದಕ್ಷ ಯಜ್ಞದ ದಾಕ್ಷಾಯಿಣಿ, ಕುಶ-ಲವ ಕಾಳಗದ ಲವ, ಇಂದ್ರಜಿತು ಕಾಳಗದ ರಾಮ, ಕೃಷ್ಣಾರ್ಜುನ ಕಾಳಗದ ಸುಭದ್ರೆ, ಸುಧನ್ವಾರ್ಜುನದ ಸುಧನ್ವ ಹಾಗೂ ವಿಷ್ಣು, ಧರ್ಮರಾಯ ಹಾಗೂ ಇನ್ನೂ ಚಿಕ್ಕ ಚಿಕ್ಕ ಪಾತ್ರವನ್ನು ನಿರ್ವಹಿಸಿದ್ದೇನೆ ಎಂದು ಪ್ರೀತಿ ವಿನಮ್ರವಾಗಿ ಹೇಳುತ್ತಾರೆ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಾವು ಮಾಡುವ ತಯಾರಿಯ ಬಗ್ಗೆ ಹೇಳುತ್ತಾ,
“ಒಂದು ಪ್ರಸಂಗವನ್ನು ಕಲಿಯುವ ಅಥವಾ ಮನನ ಆಗಿರುವ ಪ್ರಸಂಗದಲ್ಲಿ ಪಾತ್ರ ನಿರ್ವಹಿಸುವ ಮೊದಲು ಪ್ರಸಂಗದ ಪೂರ್ಣ ಅಧ್ಯಯನ ಮಾಡಿ, ಪ್ರಸಂಗದ ನಡೆಯನ್ನು ಅರಿಯುತ್ತೇನೆ. ಮಾಡುವ ಪಾತ್ರವನ್ನು ಚೌಕಟ್ಟಿನಲ್ಲಿಯೇ ಪೂರೈಸುವ ಹಾಗೆ ಅಭ್ಯಾಸ ಮಾಡುತ್ತೇನೆ” ಎನ್ನುತ್ತಾರೆ ಪ್ರೀತಿ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ತಮ್ಮ ಅಭಿಪ್ರಾಯವನ್ನು ಪ್ರೀತಿ ಈ ರೀತಿ ಅಭಿವ್ಯಕ್ತ ಪಡಿಸುತ್ತಾರೆ.
“ನನ್ನ ಅಭಿಪ್ರಾಯವೇನೆಂದರೆ, ಯಾವ ಕಾಲಕ್ಕೂ ಯಕ್ಷಗಾನ ತನ್ನ ಘನತೆ, ಗೌರವವನ್ನು ಕಳೆದುಕೊಳ್ಳುವುದಿಲ್ಲ. ಈಗಿನ ಕಾಲದ ಪ್ರೇಕ್ಷಕರ ಮನಸ್ಸನ್ನು ಸೆಳೆಯುವ ಪ್ರಯತ್ನದಲ್ಲಿ ಯಕ್ಷಗಾನವನ್ನು ಬೇರೆ ಕಲಾ ಪ್ರಕಾರಗಳ ರೀತಿಯಲ್ಲಿ ಬದಲಾವಣೆಯ ಪ್ರಯತ್ನ ನಡೆಯುತ್ತಿದೆ. ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸುವ ಸಲುವಾಗಿ ಮಾಡುವ ಹಲವು ಸರ್ಕಸ್ ಗಳು ಮತ್ತು ಪಾತ್ರದ ಅರಿವಿಲ್ಲದೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೇರಿಸಿಕೊಳ್ಳುವ ಕುಣಿತ, ಹಾರಾಟ, ಯಕ್ಷಗಾನದ ನಡೆಯನ್ನೇ ಬದಲಾಯಿಸುತ್ತಿದೆ.
ಈಗಿನ ಪ್ರೇಕ್ಷಕರಿಗೆ ಶಿಸ್ತು, ಸಂಪ್ರದಾಯ ಪೂರ್ಣ ಯಕ್ಷಗಾನಕ್ಕಿಂತ, ಹಿಮ್ಮೇಳ ಮತ್ತು ಪಾತ್ರಧಾರಿಗಳ ಸಾಮರ್ಥ್ಯವನ್ನು ಪರೀಕ್ಷಿಸುವ ಕೆಟ್ಟ ಕುತೂಹಲ. ಒಂದು ಭಾವನಾತ್ಮಕ ಪ್ರಸಂಗ ಪ್ರದರ್ಶನಗೊಂಡರೆ, ಕಡಿಮೆ ಎಂದರೂ 25% ಪ್ರೇಕ್ಷಕರು ಆಟ ಒಳ್ಳೆಯದು ಆಗಲಿಲ್ಲ ಎಂದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಯಾಕೆಂದರೆ ಅವರು ನಿರೀಕ್ಷಿಸಿದ ಆರ್ಭಟ ಅದರಲ್ಲಿ ಇರುವುದಿಲ್ಲ. ಯಕ್ಷಗಾನದಲ್ಲಿ ಎಳ್ಳಷ್ಟೂ ಜ್ಞಾನವಿಲ್ಲದ ಕೆಲವು ಪ್ರೇಕ್ಷಕರು ವಿಮರ್ಶೆ ಮಾಡಲು ಹೊರಟಿರುವುದೂ ಒಂದು ದುರಂತ.
ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆಯ ಬೆಗಗೆ ಮಾತನಾಡುತ್ತಾ,
ಸದ್ಯಕ್ಕೆ ಯಾವುದೇ ಯೋಜನೆಯ ಯೋಚನೆ ಇಲ್ಲ. ಆದರೆ, ಓದಿನ ಜೊತೆಗೆ ನನ್ನಿಂದ ಸಾಧ್ಯವಾಗುವಷ್ಟು ಕಾಲ ಯಕ್ಷರಂಗದಲ್ಲಿ ಮುಂದುವರೆಯುವ ಪ್ರಾಮಾಣಿಕ ಹಂಬಲವಿದೆ. ನನ್ನ ಈ ಪ್ರಯತ್ನಕ್ಕೆ ನನ್ನ ತಂದೆ, ತಾಯಿ ಹಾಗೂ ಸಹೋದರಿಯ ಪೂರ್ಣ ಪ್ರಮಾಣದ ಬೆಂಬಲ ಸದಾ ಇದೆ. ಮುಂದೆಯೂ ಇರುತ್ತದೆ ಎಂಬ ಭರವಸೆ ಇದೆ. ಮೇಲೆ ಉಲ್ಲೇಖಿಸಿದ ಪಾತ್ರವನ್ನು ಹೊರತುಪಡಿಸಿ, ಇನ್ನೂ ಹಲವಾರು ಒಳ್ಳೊಳ್ಳೆ ಪಾತ್ರವನ್ನು ಮಾಡಬೇಕೆಂದು ಆಶಯ.
ಹವ್ಯಾಸಿ ಕಲಾವಿದೆ ಆಗುವುದಕ್ಕಿಂತ ಮೊದಲೇ ರಕ್ತಗತವಾಗಿಯೇ ಬಂದ ಕಲೆ ಯಕ್ಷಗಾನ. ಯಾಕಂದರೆ, ತಂದೆಯ ಅಜ್ಜನವರು ವೇಷಧಾರಿಗಳಾಗಿದ್ದರು ಹಾಗೂ ಅಜ್ಜ (ತಾಯಿಯ ತಂದೆ) ತಾಳಮದ್ದಳೆ ಅರ್ಥಧಾರಿಗಳು, ತಾಯಿಯೂ ಸಹ ಬಾಲ್ಯದಲ್ಲಿ ಗೆಜ್ಜೆ ಕಟ್ಟಿದ್ದಾರೆ.
ಯಕ್ಷಗಾನವನ್ನು ಹವ್ಯಾಸವಾಗಿ ಮಾಡುತ್ತಿರುವುದರಿಂದ ನಮ್ಮದೇ ಆದ ಒಂದು ಹವ್ಯಾಸಿ ಮೇಳ ಸುದರ್ಶನ ಯಕ್ಷ ಕಲಾ ಬಳಗ ಉಮ್ಮಚ್ಗಿ ಇದರಲ್ಲಿ ವೇಷವನ್ನು ಮಾಡುತ್ತಿದ್ದೇನೆ. ಶ್ರೀಮತಿ ನಿರ್ಮಲ ಗೋಳಿಕೊಪ್ಪ ಇವರ ‘ಯಕ್ಷ ಗೆಜ್ಜೆ’ ತಂಡದಲ್ಲಿ ನನಗೆ ಹಲವು ಬಾರಿ ಅವಕಾಶ ನೀಡಿದ್ದಾರೆ. ಯಕ್ಷಗಾನವನ್ನು ಹವ್ಯಾಸವಾಗಿ ಆಯ್ಕೆ ಮಾಡಿರುವುದರಿಂದ, ಬಿಡುವಿನ ವೇಳೆಯಲ್ಲಿ ಯಕ್ಷಗಾನವನ್ನು ನೋಡುವುದು, ಕಲಿಯುವುದು, ಮತ್ತು ಅಭ್ಯಾಸ ಮಾಡುವಲ್ಲಿ ನನ್ನ ಪ್ರಗತಿಗೆ ಮತ್ತು ಜ್ಞಾನ ವರ್ಧನೆಗೆ ಪ್ರಯತ್ನ ಪಡುತ್ತೇನೆ.
ಪ್ರೀತಿಯವರಿಗೆ ಅವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ ಹಾಗೂ ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಬೇಡುತ್ತಿದ್ದೇವೆ ಹಾಗೂ ಶುಭ ಹಾರೈಕೆಗಳು.
ಶ್ರವಣ್ ಕಾರಂತ್ ಕೆ.
ಸುಪ್ರಭಾತ, ಶಕ್ತಿನಗರ, ಮಂಗಳೂರು.
:- +918971275651