ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ “ಯಕ್ಷಕಲಾ ಕೇಂದ್ರ” ಮತ್ತು ದೇಶಭಕ್ತ ಎನ್. ಎಸ್. ಕಿಲ್ಲೆ ಪ್ರತಿಷ್ಠಾನದ ಸಹಯೋಗದಲ್ಲಿ ‘ಮೋಕ್ಷ ಸಂಗ್ರಾಮ’ ಯಕ್ಷಗಾನ ಪ್ರದರ್ಶನ ದಿನಾಂಕ 06 ಅಕ್ಟೋಬರ್ 2024ರ ಭಾನುವಾರದಂದು ಸಂಜೆ ಪುತ್ತೂರಿನ ಕೆದಂಬಾಡಿ ಸನ್ಯಾಸಿ ಗುಡ್ಡೆಯ ಸದ್ಗುರು ಗೋಪಾಲನ್ ನಾಯರ್ ಸಭಾಭವನದಲ್ಲಿ ಸಂಪನ್ನಗೊಂಡಿತು.
ಯಕ್ಷಕಲಾ ಕೇಂದ್ರದ ನಿರ್ದೇಶಕ ಮತ್ತು ಉಪನ್ಯಾಸಕರಾದ ಪ್ರಶಾಂತ್ ರೈ ಮುಂಡಾಳಗುತ್ತು ಇವರು ಸಾಂಸ್ಕೃತಿಕ ವಿಸ್ತರಣೆ ಚಟುವಟಿಕೆಗಳ ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಡಾ. ವಿಜಯ ಕುಮಾರ್ ಮೊಳೆಯಾರ ಮಾತನಾಡಿ “ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ಉದ್ದೇಶದಿಂದ ಕಿಲ್ಲೆ ಪ್ರತಿಷ್ಠಾನದೊಂದಿಗೆ ತಿಳುವಳಿಕೆ ಜ್ಞಾಪಕ ಪತ್ರ ಒಡಂಬಡಿಕೆ ಮಾಡಿಕೊಂಡಿದೆ.” ಎಂದರು. ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ “ಸಂಸ್ಥೆಯು ಸಾಹಿತ್ಯ ಮತ್ತು ಸಂಸ್ಕೃತಿಯ ವಿಸ್ತರಣೆಗೆ ವಿಶೇಷ ಪ್ರಾತಿನಿಧ್ಯವನ್ನು ನೀಡುತ್ತಿದ್ದು ,ಸಾಮಾಜಿಕ ಔನ್ನತ್ಯಕ್ಕೆ ಹೇತುವಾದ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸಲು ಸರ್ವರೂ ಸಹಕರಿಸಬೇಕು.” ಎಂದು ವಿನಂತಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಯಕ್ಷಗಾನ ಪ್ರದರ್ಶನದ ಪ್ರಾಯೋಜಕತ್ವವನ್ನು ನಿವೃತ್ತ ಶಿಕ್ಷಕರಾದ ಮುಂಡಾಳಗುತ್ತು ಈಶ್ವರ ಆಳ್ವ ಸ್ಮರಣಾರ್ಥ ಅವರ ಕುಟುಂಬಿಕರು ವಹಿಸಿದ್ದರು. ವೇದಿಕೆಯಲ್ಲಿ ತೆಂಕುತಿಟ್ಟು ಯಕ್ಷಗಾನದ ಹಿರಿಯ ಹಿಮ್ಮೇಳ ವಾದಕರಾದ ಪದ್ಯಾಣ ಶಂಕರ ನಾರಾಯಣ ಭಟ್ಟ, ಪದ್ಯಾಣ ಜಯರಾಮ ಭಟ್ಟ , ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾದ ಜಯಶಂಕರ ರೈ ಬೆದ್ರುಮಾರ್, ಪದಾಧಿಕಾರಿಗಳಾದ ಮೋಹನ ಆಳ್ವ ಮುಂಡಾಳಗುತ್ತು, ಸಂತೋಷ್ ಕುಮಾರ್ ರೈ ಕೋರಂಗ, ಕರುಣಾಕರ ರೈ ಕೋರಂಗ, ಸುರೇಶ್ ರೈ ಮುಂಡಾಳಗುತ್ತು, ವಿಜಯಕುಮಾರ್ ರೈ ಕೋರಂಗ, ಕೈಲಾಸ್ ಕೆದಂಬಾಡಿ, ರಾಘವ ಗೌಡ ಕೆರೆಮೂಲೆ ಉಪಸ್ಥಿತರಿದ್ದರು.