7 ಮಾರ್ಚ್ 2023 ಮಂಗಳೂರು: ಸಾಹಿತ್ಯಾ ಪ್ರಕಾಶನ ಮಂಗಳೂರು ಇವರ 2ನೇ ಕೃತಿ ಲೇಖಕಿ ಅಕ್ಷತಾ ರಾಜ್ ಪೆರ್ಲ ಇವರ “ಅವಲಕ್ಕಿ ಪವಲಕ್ಕಿ” ಇದರ ಬಿಡುಗಡೆ ಸಮಾರಂಭ ಹಾಗೂ ಸಾಹಿತ್ಯಾ ಪ್ರಕಾಶನ ಇದರ ಲಾಂಛನ ಅನಾವರಣ ಕಾರ್ಯಕ್ರಮವು ದಿನಾಂಕ 08-03-2023ನೇ ಬುಧವಾರ ವಿಶ್ವ ಮಹಿಳಾ ದಿನದ ವಿಶೇಷ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ “ಬೀಡು” ಇಲ್ಲಿ ಡಾ. ಹೇಮಾವತಿ ವೀ. ಹೆಗ್ಗಡೆಯವರಿಂದ ನೆರವೇರಲಿದೆ.
ಅಕ್ಷತಾ ರಾಜ್ ಪೆರ್ಲ: ಅಕ್ಷತಾರಾಜ್ ಪೆರ್ಲರು ಕನ್ನಡ, ತುಳು, ಹವ್ಯಕ ಭಾಷೆಯಲ್ಲಿ ಬರೆಯ ಬಲ್ಲವರಾಗಿದ್ದು ಇದುವರೆಗೆ ಕನ್ನಡದಲ್ಲಿ ಕತೆ ಹಾಗೂ ಕವಿತೆ ಸಂಕಲನ, ತುಳುವಿನಲ್ಲಿ ಮೂರು ನಾಟಕಗಳು ಮತ್ತು ಕಾದಂಬರಿ ಬರೆದಿದ್ದಾರೆ. ಕನ್ನಡ ಕೃತಿಗೆ ಕರ್ನಾಟಕ ಪುಸ್ತಕ ಪ್ರಾಧಿಕಾರ ಬಹುಮಾನ, ಹವ್ಯಕ ಕತೆಗಳಿಗೆ ಕೊಡಗಿನ ಗೌರಮ್ಮ ದತ್ತಿನಿಧಿ ಬಹುಮಾನ, ತುಳು ಕಾದಂಬರಿ ಮತ್ತು ನಾಟಕಗಳಿಗೆ ಎಸ್.ಯು.ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ತುಳು ನಾಟಕ ಪ್ರಶಸ್ತಿ ಲಭಿಸಿರುತ್ತದೆ. 2021ರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಾಟಕ ವಿಭಾಗ ಪುರಸ್ಕೃತರಾದ ಅಕ್ಷತಾ ರಾಜ್ ಪೆರ್ಲ ಪ್ರಸ್ತುತ ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರೂಪಕರಾಗಿದ್ದಾರೆ.
‘ಅವಲಕ್ಕಿ – ಪವಲಕ್ಕಿ’ ಹೆಚ್ಚು ಸುದೀರ್ಘವಲ್ಲದ ಐವತ್ತು ಲೇಖನಗಳನ್ನು ಹೊಂದಿರುವ ಕೃತಿಯಾಗಿದೆ. ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಮುನ್ನುಡಿ ಹಾಗೂ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಚೇಳೈರು ಬೆನ್ನುಡಿಯ ಮೂಲಕ ಶುಭ ಹಾರೈಸಿದ್ದಾರೆ.