ಉಡುಪಿ : ಉಡುಪಿಯ ಸಾಂಸ್ಕೃತಿಕ ಹರಿಕಾರ ಡಾ. ತಲ್ಲೂರು ಶಿವರಾಮ ಶೆಟ್ಟಿಯವರಿಗೆ ಇದೀಗ 75ರ ಹುಟ್ಟುಹಬ್ಬದ ಸಂಭ್ರಮ. ದಿನಾಂಕ 9 ಅಕ್ಟೋಬರ್ 2024ರಂದು ಅವರು 75 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವ್ಯಕ್ತಿಯಾಗಲಿ ಅಥವಾ ಸಂಘ ಸoಸ್ಥೆಗಳಿಗಾಗಲಿ ಈ ವಜ್ರ ಮಹೋತ್ಸವ ಎಂಬುದು ಸಾರ್ಥಕತೆಯನ್ನು ತಂದು ಕೊಡುವ ಕ್ಷಣಗಳು.
ಡಾ. ತಲ್ಲೂರು ಇವರಿಗೆ 75ರ ಸಂಭ್ರಮದ ಜೊತೆಗೆ ತಮ್ಮ ಸಾರ್ಥಕ್ಯ ಸಮಾಜ ಸೇವೆಯ ಸುವರ್ಣ ಸಂಭ್ರಮವೂ ಹೌದು. ಕಳೆದ 50 ವರ್ಷಗಳಲ್ಲಿ ಸಮಾಜ ಸೇವಕರಾಗಿ, ಕಲಾವಿದರಾಗಿ, ಕಲಾಭಿಮಾನಿಯಾಗಿ, ಕಲಾ ಪೋಷಕರಾಗಿ, ದೈವ ಭಕ್ತರಾಗಿ ಹತ್ತು ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಲ್ಲದೆ ಇವರು ಸಮಾಜಕ್ಕೆ ನೀಡಿದ ಕೊಡುಗೆಗಳು ಬೆರಗು ಹುಟ್ಟಿಸುವಂತಹುದು. ಜೀವನ ಪಥದ 75ರ ಮೈಲಿಗಲ್ಲನ್ನು ನೆಟ್ಟಿರುವ ಇವರ ಬದುಕು, ಆದರ್ಶಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಳ್ಳಬೇಕಾದ ಸುವರ್ಣ ಸಂಭ್ರಮ ಕಾಲವಿದು.
ಕುಂದಾಪುರ ತಾಲೂಕಿನ ತಲ್ಲೂರು ಎಂಬ ಗ್ರಾಮದಲ್ಲಿ ತಂದೆ ಅಣ್ಣಯ್ಯ ಶೆಟ್ಟಿ ಹಾಗೂ ಕನಕಮ್ಮ ದಂಪತಿಯ ಸುಪುತ್ರರಾಗಿ 1949ರ ಅಕ್ಟೋಬರ್ 9ರಂದು ಜನಿಸಿದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಕಾಲಘಟ್ಟದಲ್ಲಿ ಯಶಸ್ವಿ ಉದ್ಯಮಿಯಾಗಿ ಬದುಕನ್ನು ಕಟ್ಟಿಕೊಂಡವರು. ಮುಂದೆ ತಾನು ಸಂಪಾದಿಸಿದರಲ್ಲಿ ಒಂದಷ್ಟನ್ನು ಸಮಾಜದ ಸೇವೆಗೆ ಮೀಸಲಿಡುವ ಮೂಲಕ ನಾಡಿನ ಋಣ ತೀರಿಸುವ ಕೈಂಕರ್ಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಈ ತುಡಿತದೊಂದಿಗೆ ‘ತಲ್ಲೂರ್ಸ್ ಪ್ಯಾಮಿಲಿ ಟ್ರಸ್ಟ್’ನ್ನು ಹುಟ್ಟು ಹಾಕಿ ಸಾಮಾಜಿಕ, ಧಾರ್ಮಿಕ, ಸಾಹಿತ್ಯ, ಜಾನಪದ, ಯಕ್ಷಗಾನ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಡಾ. ತಲ್ಲೂರರ ಬದುಕೇ ಒಂದು ಪ್ರೇರಣೆ. ಇವರು ಪಾಲಿಸುವ ಶಿಸ್ತು, ಸಮಯ ಪರಿಪಾಲನೆ, ಮಿತ ಮಾತು, ಗುರುಹಿರಿಯರಲ್ಲಿ ಅಪಾರ ಗೌರವ. ತನ್ನಂತೆಯೇ ತನ್ನ ಒಡನಾಡಿಗಳು ಸುಖವಾಗಿರಬೇಕು, ಯಶಸ್ಸು ಕಾಣಬೇಕು ಎನ್ನುವ ಹೃದಯ ಶ್ರೀಮಂತಿಕೆಯೇ ಡಾ. ತಲ್ಲೂರು ಅವರಿಗೆ ಅಪಾರ ಅಭಿಮಾನಿಗಳನ್ನು ತಂದುಕೊಟ್ಟಿದೆ.
ಒoದು ಸರಕಾರ ಮಾಡಬೇಕಾದ ಕೆಲಸವನ್ನು ಡಾ. ತಲ್ಲೂರು ತನ್ನ ಟ್ರಸ್ಟ್ ಮೂಲಕ ಸಾಧಿಸಿ ತೋರಿಸಿದ್ದಾರೆ ಎಂದಾಗ ಯಕ್ಷಗಾನ ಕಲಾರಂಗ, ರಂಗಭೂಮಿ, ಜಾನಪದ ಪರಿಷತ್ತು, ಯಕ್ಷಗಾನ ಅಕಾಡೆಮಿ, ಲಯನ್ಸ್ ಇವೆಲ್ಲಾ ತಲ್ಲೂರರಿಗೆ ಸಮಾಜ ಸೇವೆ ಮಾಡುವ ವೇದಿಕೆಗಳಷ್ಟೇ ಎಂಬುದು ನಿರ್ವಿವಾದ. ತನಗೆ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡು ಅದನ್ನು ಸಮಾಜಮುಖಿಯನ್ನಾಗಿಸಿ ಬೆಳೆಸುವುದು ಡಾ. ತಲ್ಲೂರು ಇವರ ನಾಯಕತ್ವದ ಗುಣಕ್ಕೆ ಸಾಕ್ಷಿ ಎಂಬುದು ಇವರು ಮುನ್ನಡೆಸಿದ ಹಾಗೂ ಪ್ರಸ್ತುತ ಅಧ್ಯಕ್ಷರಾಗಿ ಮುನ್ನಡೆಸುತ್ತಿರುವ ಸಂಘಸಂಸ್ಥೆಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ.
ಉಡುಪಿ ಜಿಲ್ಲೆಯ ಯಾವುದೇ ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳಲ್ಲಿ ‘ತಲ್ಲೂರು’ ಬರುತ್ತಿದ್ದಾರೆ ಎಂದಾಕ್ಷಣ ಅಲ್ಲಿನ ವಾತಾವರಣದಲ್ಲಿ ಲವಲವಿಕೆ ಕಾಣಿಸಿಕೊಳ್ಳುತ್ತದೆ. ಸದಾ ಹಸನ್ಮುಖಿಗಳಾಗಿ, ಆತ್ಮೀಯರಾಗಿ ಬೆರೆಯುವ ಡಾ. ತಲ್ಲೂರು ಸದಾ ಬ್ಯುಸಿಯಾಗಿರುವ ವ್ಯಕ್ತಿ. ಇವರ ದಿನಚರಿಯಲ್ಲಿ ಕಾರ್ಯಕ್ರಮಗಳಿಲ್ಲದ ದಿನಗಳೇ ಇಲ್ಲ. ತನಗಾಗಿ ಯಾರೂ ಕಾಯಬಾರದು ಎಂದು ಸಮಯಕ್ಕೆ ಸರಿಯಾಗಿ ಉಪಸ್ಥಿತರಾಗುವ ಡಾ. ತಲ್ಲೂರು ಸಮಯ ಪರಿಪಾಲನೆಯಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಸದಾ ಜೀವನೋತ್ಸಾಹದಿಂದ ತುಂಬಿ ತುಳುಕುವ ಈ ಹಿರಿಯ ಚೇತನಕ್ಕೆ ಇಂದು 75 ತುಂಬುತ್ತಿದೆ ಎಂಬುದು ಅಭಿಮಾನದ ಸಂಗತಿ.
ಕರ್ನಾಟಕ ಯಕ್ಷಗಾನ ಅಕಾಡೆಮಿ, ರಂಗಭೂಮಿ ಉಡುಪಿ, ಲಯನ್ಸ್, ಕರ್ನಾಟಕ ಜಾನಪದ ಪರಿಷತ್ತು, ಹೋಟೆಲ್ ಉದ್ಯಮ ಸೇರಿದಂತೆ ಹತ್ತು ಹಲವಾರು ರಂಗಳಲ್ಲಿ ಸಕ್ರಿಯರಾಗಿದ್ದುಕೊಂಡು, ಸಂಘಸಂಸ್ಥೆಗಳನ್ನು ಮುನ್ನಡೆಸಿದ ಡಾ. ತಲ್ಲೂರು “ತುಂಬಿದ ಕೊಡ ತುಳುಕುವುದಿಲ್ಲ” ಎನ್ನುವ ಗಾದೆ ಮಾತಿನಂತೆ ನಿರ್ಗರ್ವಿ. ಯಾವುದೇ ಹಮ್ಮು ಇಲ್ಲದೆ ಸರಳವಾಗಿ ಎಲ್ಲರೊಡನೆ ಒಂದಾಗಿ ಬೆರೆಯುತ್ತಾ, ತನ್ನ ಕೆಲಸದಲ್ಲಷ್ಟೇ ಗಮನ ಇರಿಸಿಕೊಂಡವರು.
‘ನನ್ನ ಸಂಬoಧಿಗಳಾರೂ ಯಕ್ಷಗಾನದಲ್ಲಿ ಇಲ್ಲ. ಯಕ್ಷಗಾನ ವೇಷ ಹಾಕಿದವರಲ್ಲ. ಹೀಗಾಗಿ ರಕ್ತಗತವಾಗಿ ನನಗೆ ಯಕ್ಷಗಾನ ಕಲೆ ದಾಟಿ ಬಂದಿಲ್ಲ. ಇದನ್ನು ಒಂದು ಹವ್ಯಾಸವಾಗಿ ಪಡೆದುಕೊಂಡೆ. ಇದರಲ್ಲಿ ನನಗೆ ಹೆಸರು ಮಾಡುವ ಉದ್ದೇಶವೂ ಇಲ್ಲ. ಕಲೆ ಹಾಗೂ ಕಲಾವಿದನಿಗೆ ನನ್ನಿಂದಾದಷ್ಟು ನೆರವನ್ನು ನೀಡಬೇಕು ಎನ್ನುವ ಉದ್ದೇಶದಿಂದ ಈ ರಂಗಕ್ಕೆ ಬಂದಿದ್ದೇನೆ’ ಎನ್ನುವ ಡಾ. ತಲ್ಲೂರರ ವಿನಮ್ರ ಮಾತುಗಳೇ ಇವರನ್ನು ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ನಾವಿರುವ ಸಮಾಜ ಸುಸಂಸ್ಕೃತವಾಗಿರಬೇಕು. ಈ ನಿಟ್ಟಿನಲ್ಲಿ ಯುವ ಪೀಳಿಗೆಗೆ ನೈತಿಕ ಮೌಲ್ಯಗಳ ಪಾಠ ನಡೆಯಬೇಕು ಎನ್ನುವ ಉದ್ದೇಶದಿಂದ ಡಾ. ತಲ್ಲೂರು ಶಿವರಾಮ ಶೆಟ್ಟರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಸಾಹಿತ್ಯ ಲೋಕದತ್ತ ಹೊರಳಿ ಅಲ್ಲಿ ಅನೇಕ ಕೃತಿಗಳನ್ನು ರಚನೆ ಮಾಡಿದಲ್ಲದೆ ಇತರ ಸಾಹಿತಿಗಳ ಕೃತಿಗಳನ್ನು ಪ್ರಕಟಿಸಿ 40,000ಕ್ಕೂ ಅಧಿಕ ಪ್ರತಿಗಳನ್ನು ಶಾಲಾ ಕಾಲೇಜುಗಳಿಗೆ ತೆರಳಿ ಉಚಿತವಾಗಿ ಹಂಚಿದ್ದಾರೆ. ಇವರು ರಚಿಸಿದ ‘ಕಲಾ ಸಂಚಯ : ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು’ ಕೃತಿಗೆ ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ಪುಸ್ತಕ ಬಹುಮಾನ ಲಭಿಸಿದೆ. ಅಲ್ಲದೆ ಇದೇ ಕೃತಿಗೆ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ 2020ನೇ ಸಾಲಿನ ‘ಪುಸ್ತಕ ಗೌರವ ಸೊಗಸು’ ಗೌರವ ಪ್ರಧಾನವಾಗಿದೆ ಎಂಬುದನ್ನು ಇಲ್ಲಿ ನೆನಪಿಸಲೇ ಬೇಕು.
ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಅಲ್ಲೋ ಇಲ್ಲೋ ಪ್ರದರ್ಶನ ಕಲೆಯಾಗಿ ಉಳಿದಿದ್ದ ಜಾನಪದ ಕಲೆಯನ್ನು ರಂಗುರಂಗಿನ ವೇದಿಕೆಗೆ ಕರೆತಂದು ಪ್ರದರ್ಶಿಸಿ, ಈ ಮೂಲಕ ಅನೇಕ ಕಲಾತಂಡಗಳು ಜನ್ಮ ತಳೆಯುವಂತೆ ಮಾಡುವಲ್ಲಿ ಡಾ. ತಲ್ಲೂರು ಯಶಸ್ವಿಯಾಗಿದ್ದಾರೆ. ಇವರ ನಿರಂತರ ಪ್ರೋತ್ಸಾಹದಿಂದಾಗಿ ಅನೇಕ ಜಾನಪದ ಕಲಾವಿದರು ಬದುಕು ಕಟ್ಟಿಕೊಂಡು, ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ಸುಮಾರು 40ಕ್ಕೂ ಅಧಿಕ ಜಾನಪದ ಕಲಾವಿದರನ್ನು ಗುರುತಿಸಿ, ಸನ್ಮಾನಿಸುವುದರೊಂದಿಗೆ ಜಾನಪದ ಸಂಘಟಕರಿಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ನಾಡಿನ ಉದ್ದಗಲಕ್ಕೂ ಓಡಾಡುತ್ತಿರುವ ಡಾ. ತಲ್ಲೂರು ಅವರಿಗೆ ಯಕ್ಷಗಾನ ಕಲೆಯನ್ನು ಮಕ್ಕಳಿಗೆ ದಾಟಿಸಬೇಕು. ಈ ಮೂಲಕ ಕಲೆಯ ಉಳಿವು ಹಾಗೂ ಬೆಳವಣಿಗೆಯಾಗಬೇಕು ಎಂಬ ಕನಸಿದೆ. ಮಕ್ಕಳಿಗೆ ಯಕ್ಷಗಾನ ತರಬೇತಿಗೆ ಯಕ್ಷಗಾನ ಅಕಾಡೆಮಿ ತುಂಬು ಪ್ರೋತ್ಸಾಹ ನೀಡುತ್ತದೆ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ.
ಕಾಸರಗೋಡು, ಉತ್ತರ ಕನ್ನಡ ಸೇರಿದಂತೆ ಹಲವಾರು ಕಡೆಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಚಾಲನೆಯನ್ನೂ ನೀಡಿದ್ದಾರೆ.
ಯಕ್ಷಗಾನದ ಪದ್ಮಶ್ರೀ ಚಿಟ್ಟಾಣಿ ಅವರ ಯಕ್ಷಗಾನ ಸಪ್ತಾಹ, ಅಷ್ಟಾಹ, ದಶಾಹ ಕಾರ್ಯಕ್ರಮಗಳು ಉಡುಪಿ ರಾಜಾಂಗಣದಲ್ಲಿ ಪ್ರತಿ ವರ್ಷ ಇವರ ಸಾರಥ್ಯದಲ್ಲಿಯೇ ನೆರವೇರುತ್ತಿದೆ. ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಪ್ರತಿಷ್ಠಾನದಿಂದ ಯಕ್ಷಗಾನ ಸಪ್ತಾಹ, ತೆಂಕುತಿಟ್ಟಿನ ದಶಾವತಾರಿ ಕೆ. ಗೋವಿಂದ ಭಟ್ಟರ ಯಕ್ಷ ಸಪ್ತಾಹ, ಪ್ರಸಿದ್ಧ ಅರ್ಥಧಾರಿ ಸಾಮಗ ಸಂಸ್ಮರಣೆ ಅಲ್ಲದೆ ಹಟ್ಟಿಯಂಗಡಿ ಮೇಳದ ಪಂಚಾಹ ಕಾರ್ಯಕ್ರಮಗಳನ್ನು ಪ್ರಾಯೋಜಿಸಿ ಯಕ್ಷಗಾನಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಯಕ್ಷಗಾನದ ಮೇರು ಕಲಾವಿದರು, ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡುವ ಮೂಲಕ ಧನ್ಯತೆಯ ಭಾವ ಅನುಭವಿಸಿದ್ದಾರೆ.
ತನ್ನ 60ನೇ ವಯಸ್ಸಿನಲ್ಲಿ ಯಕ್ಷಗಾನದ ಗೆಜ್ಜೆಕಟ್ಟಿ ಕುಣಿದ ಡಾ. ತಲ್ಲೂರು, ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರ ಬಳಿ ಯಕ್ಷಗಾನವನ್ನು ಕಲಿತರು. ಶ್ರೀಕೃಷ್ಣ, ಬಲರಾಮ, ಹನುಮ, ಸಂಜಯ, ಮಗಧ, ಮೊದಲಾದ ದೊಡ್ಡ ವೇಷಗಳನ್ನೂ ಸಮರ್ಥವಾಗಿ ನಿಭಾಯಿಸಿ, ಈವರೆಗೆ 400ಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಅವರ ಕಚೇರಿ ತುಂಬೆಲ್ಲಾ ಅವರು ನಿರ್ವಹಿಸಿದ ಪಾತ್ರಗಳ ಫೋಟೊಗಳನ್ನು ಕಂಡಾಗ ಧನ್ಯತೆಯ ಭಾವ ಮೂಡುತ್ತದೆ.
ಡಾ. ತಲ್ಲೂರು ಅವರ ಕಲಾರಾಧನೆಗೆ ಸಂದ ಪ್ರಶಸ್ತಿಗಳು, ಸಮ್ಮಾನಗಳನ್ನು ಕಂಡಾಗ ಬೆರಗಾಗುತ್ತದೆ. ಕರ್ನಾಟನ ಜಾನಪದ ವಿಶ್ವವಿದ್ಯಾಲಯ ಅವರಿಗೆ 2022ನೇ ಸಾಲಿನ ‘ಗೌರವ ಡಾಕ್ಟರೇಟ್’ ನೀಡಿ ಗೌರವಿಸಿದೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ತುರುವೆ ರಾಜ್ಯೋತ್ಸವ ಪ್ರಶಸ್ತಿ, ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ, ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಸಾಧಕರ ರತ್ನ ಪ್ರಶಸ್ತಿ, ಜಗಜ್ಯೋತಿ ಬಸವೇಶ್ವರ ಕಾಯಕಶ್ರೀ ಪ್ರಶಸ್ತಿ ಸೇರಿದಂತೆ ನಾಡಿನ ನೂರಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಡಾ. ತಲ್ಲೂರು ಶಿವರಾಮ ಶೆಟ್ಟರಿಗೆ 75 ತುಂಬುತ್ತಿರುವ ಈ ಸಂಭ್ರಮದಲ್ಲಿ ಅವರ ಸಾಂಸ್ಕೃತಿಕ ರಂಗದ ಪಯಣ ಸುದೀರ್ಘವಾಗಿ ಮುಂದುವರಿಯಲಿ. ಯಕ್ಷಗಾನ, ಜಾನಪದ ಸೇರಿದಂತೆ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಿಗೆ ಅವರಿಂದ ನಿರಂತರ ಕೊಡುಗೆಗಳು ಹರಿದು ಬರಲಿ. ಅಜಾತಶತ್ರುವಾಗಿ ಅವರು ಹೆಮ್ಮರವಾಗಿ ಬೆಳೆದು ಅದರ ತಂಪಲ್ಲಿ ಕಲೆ, ಕಲಾವಿದರಿಗೆ ಆಶ್ರಯ ಸಿಗಲಿ, ಕಲೆ ಬೆಳಗಲಿ ಎಂಬುದೇ ನಮ್ಮೆಲ್ಲರ ಹಾರೈಕೆ.