ಮೈಸೂರು : ನಿರಂತರ ಫೌಂಡೇಶನ್ (ರಿ.), ಪ್ರಥ್ವಿ ಟ್ರಸ್ಟ್ (ರಿ.) ಮತ್ತು ಕಲಾಸುರುಚಿ ಇವುಗಳ ಸಹಯೋಗದಲ್ಲಿ ಲೇಖಕ ಉಮೇಶ್ ತೆಂಕನಹಳ್ಳಿಯವರ ‘ಕಪ್ಪು ಹಲ್ಲಿನ ಕಥೆ’ ಎಂಬ ಕಾದಂಬರಿಯ ಲೋಕಾರ್ಪಣೆ ಸಮಾರಂಭವು ದಿನಾಂಕ 06 ಅಕ್ಟೋಬರ್ 2024ರಂದು ಮೈಸೂರಿನ ಕುವೆಂಪು ನಗರ, ಚಿತ್ರಭಾನು ರಸ್ತೆ, ಸುರುಚಿ ರಂಗಮನೆಯಲ್ಲಿ ಅರ್ಥಪೂರ್ಣವಾಗಿ ಜರುಗಿತು.
ನನ್ನ ಈ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹಾಜರಿದ್ದ ಖ್ಯಾತ ರಂಗಕರ್ಮಿ, ಹಿರಿತೆರೆ, ಕಿರುತೆರೆ ನಟರಾದ ಶ್ರೀ ಮಂಡ್ಯ ರಮೇಶ್. ಮತ್ತೋರ್ವ ಗಣ್ಯ ವ್ಯಕ್ತಿಗಳಾದ ದಕ್ಷ, ಹಾಗೂ ಪ್ರಾಮಾಣಿಕ ಸರಳ ವ್ಯಕ್ತಿಗಳಾದ ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಎಚ್.ಎಲ್. ನಾಗರಾಜ್ ಸರ್, ಮೈಸೂರಿನ ಹಿರಿಯ ಸಾಹಿತಿಗಳು ಚಿಂತಕರು ಆದ ಶ್ರೀಮತಿ ಪ್ರೊ. ಚ. ಸರ್ವಮಂಗಳ ಅವರ ಜೊತೆಗೆ ಮೈಸೂರಿನ ಕನ್ನಡ ಪ್ರಭ ಸ್ಥಾನಿಕ ಸಂಪಾದರು ಹಾಗೂ ವಿಮರ್ಶಕರು, ಜೊತೆಗೆ ಸಾಹಿತಿಗಳಾದ ಅಂಶಿ ಪ್ರಸನ್ನ ಕುಮಾರ್ ಕಾರ್ಯಕ್ರಮಕ್ಕೆ ಹೊಸ ಮೆರಗು ತಂದು ಕೊಟ್ಟರು.
ಈ ಕಾರ್ಯಕ್ರಮಕ್ಕೆ ಬಹಳ ಮುಜುಗರದಿಂದಲೇ ಬಂದೆ. ಕಾರಣ ವೇದಿಕೆಯಲ್ಲಿ ಇದ್ದವರು ಹಿರಿಯ ಸಾಹಿತಿಗಳು, ಚಿಂತಕರು ಜೊತೆಗೆ ನನ್ನ ಪುಸ್ತಕ ಓದಿಕೊಂಡು ಚರ್ಚೆಗೆ ತಯಾರಾಗಿಯೇ ಬಂದವರಾಗಿದ್ದರು. ಅವರು ಕಾದಂಬರಿ ಕುರಿತು ಏನು ಹೇಳುತ್ತಾರೋ, ಅವರ ಪ್ರಶ್ನೆಗಳು ಹೇಗಿರುತ್ತವೋ ಎಂಬ ಕುತೂಹಲ ನನ್ನಲಿ ಬಹಳಷ್ಟು ಮನೆ ಮಾಡಿತು. ಮಂಡ್ಯ ರಮೇಶ್ ಸರ್ ಮಾತನಾಡಿ “ರಂಗಭೂಮಿಯವರಿಗೆ ಓದು ಬರಹದ ಹವ್ಯಾಸ ಕಡಿಮೆ ಆದರೂ ಉಮೇಶ್ ಎರಡನ್ನು ಇಟ್ಟುಕೊಂಡಿರುವುದು ಮೆಚ್ಚುಗೆಯ ವಿಚಾರ ಪ್ರಸ್ತುತ ದಿನಗಳಲ್ಲಿ ರಂಗಭೂಮಿಗೆ ಇಂತಹ ಬೆಳವಣಿಗೆ ಬಹಳ ಮುಖ್ಯ. ಜೊತೆಗೆ ನಮ್ಮ ಹಳ್ಳಿಗಳ ಚಿತ್ರಣ ಬಹಳಷ್ಟು ಬದಲಾವಣೆ ಕಂಡಿವೆ. ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಪ್ರಭಾವದಿಂದಾಗಿ ಹಳ್ಳಿಯ ಚಿತ್ರಣಗಳು ತುಂಬಾ ಬದಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಉಮೇಶ್ ಹಳ್ಳಿಯ ಸೊಗಡಿನ ಜನಪದ ಕಲೆಗಳು ಹಳ್ಳಿಯಲ್ಲಿ ಇರುವ ವಿವಿಧ ಸಂಪ್ರದಾಯಗಳು ಮತ್ತು ನಮ್ಮ ಹಿರಿಯರ ಜೀವನ ಶೈಲಿಯ ಅಂತರಾಳದ ಅನುಭವದ ಕೃತಿಯನ್ನು ತಂದಿರುವುದು ಬಹಳ ಸಂತೋಷ” ಎಂದರು.
ಸರ್ವಮಂಗಳ ಮೇಡಂ ಕಾದಂಬರಿಯ ಪ್ರತಿಯೊಂದು ಪುಟದಲ್ಲಿ ಬರುವ ವಿಚಾರಗಳನ್ನು, ಸಂಗತಿಗಳನ್ನು ಎಳೆಎಳೆಯಾಗಿ ಚೆರ್ಚಿಸಿ ಕಾದಂಬರಿಯನ್ನು ಮೆಚ್ಚಿಕೊಂಡಿದ್ದು ನನಗೆ ಬಹಳ ಸಂತೋಷವಾಯಿತು. ಶಾಲೆಗಳಲ್ಲಿ ಮಕ್ಕಳಿಗೆ ಪ್ರಾಣಿ ಪಕ್ಷಿಗಳ ಬಗ್ಗೆ, ಮರಗಿಡಗಳ ಬಗ್ಗೆ ಪ್ರಬಂಧ ಬರೆದುಕೊಂಡು ಬನ್ನಿ ಅಂತ ಹೇಳ್ತಾರೆ. ಆದರೆ ಮನೆಯಲ್ಲಿ ಇರುವ ವಯಸ್ಸಾದ ಅಜ್ಜ ಅಜ್ಜಿಯರ ಕಥೆಗಳನ್ನ ಬರೆದುಕೊಂಡು ಬನ್ನಿ ಅಂತ ಯಾಕೆ ಹೇಳಲ್ಲಾ ? ಇದರ ಜೊತೆಗೆ ಕಾದಂಬರಿ ಕುರಿತಂತೆ ಮೂರು ನಾಲ್ಕು ಪ್ರಶ್ನೆಗಳನ್ನು ಕೇಳಿದರು.
ಬಹಳ ಮುಖ್ಯವಾಗಿ ಅಂಶಿ ಪ್ರಸನ್ನ ಕುಮಾರ್ ಸರ್ ಕಾದಂಬರಿ ಬಗ್ಗೆ ಸ್ಥೂಲವಾಗಿ ಬರೆದು ಪತ್ರಿಕೆಯಲ್ಲಿ ಪ್ರಕಟ ಮಾಡಿದ್ದು, ಬಹಳ ಖುಷಿ ತಂದಿತು. ಜೊತೆಗೆ ಅವರು ಈ ಕಾದಂಬರಿಯನ್ನು ನಾಟಕ ರೂಪಕ್ಕೆ ತಂದರೆ ಒಂದು ಒಳ್ಳೆಯ ನಾಟಕವಾಗುತ್ತದೆ ಎಂದು ಸಲಹೆ ಕೊಟ್ಟರು. ಅವರ ವರದಿಯನ್ನು ಈ ಹಿಂದೆ ಹಂಚಿಕೊಂಡಿದ್ದೆ ಸ್ನೇಹಿತರೆ.
ಡಾ. ಎಚ್.ಎಲ್. ನಾಗರಾಜ್ ಮಾತನಾಡಿ “ಇಂತಹ ಹಳ್ಳಿಯ ಪ್ರತಿಭೆಗಳನ್ನು ನಾವು ಬೆಳಸಿ ಪ್ರೋತ್ಸಾಹಿಸಬೇಕು. ಜೊತೆಗೆ ನಮ್ಮ ಗ್ರಾಮೀಣ ಬದುಕು ಹಿಂದೆ ಹೇಗಿತ್ತು ಎಂಬುದು ಈ ಪುಸ್ತಕದಲ್ಲಿ ತಿಳಿಯುತ್ತದೆ. ಇಂತಹ ಪುಸ್ತಕಗಳನ್ನು ನಗರ ಪ್ರದೇಶದ ಮಕ್ಕಳು ಓದುವಂತಾಗಬೇಕು. ಆಗ ನಮ್ಮ ಹಳೆಯ ತಲೆಮಾರುಗಳ ಜೀವನ ಚರಿತ್ರೆಯನ್ನು ಪರಿಚಯಿಸಿದಂತಾಗುತ್ತದೆ. ಈ ಕಾದಂಬರಿ ಓದುವಾಗ ನನ್ನ ಬಾಲ್ಯದ ಬಡತನದ ಬದುಕು ನನ್ನ ಕಣ್ಣ ಮುಂದೆ ಬಂದಿತು” ಎಂದರು.
ನಿರಂತರ ಫೌಂಡೇಶನ್ (ರಿ.) ಮೈಸೂರು ಮತ್ತು ಪೃಥ್ವಿ ಟ್ರಸ್ಟ್ ಮೈಸೂರು ಹಾಗೂ ಕಲಾ ಸುರುಚಿ ರಂಗಮನೆ ಮೈಸೂರು ಈ ಬಿಡುಗಡೆ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಹೊತ್ತು ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದರು. ಅದಕ್ಕಾಗಿ ನಾನು ವೇದಿಕೆ ಮೇಲಿನ ಗಣ್ಯರಿಗೆ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ ಮೂರು ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಹೇಳುತ್ತೇನೆ.
ಮೈಸೂರಿನಲ್ಲಿ ಬಿಡುಗಡೆಯಾಗಲು ಪ್ರಮುಖ ಪಾತ್ರ ವಹಿಸಿದ ಅರಸೀಕೆರೆ ಯೋಗಾನಂದ್ ಸರ್, ಬಿ.ಆರ್. ರವೀಶ್ ಸರ್ ಹಾಗೂ ಶ್ರೀನಿವಾಸ ಸರ್ ಇವರು ಸತತ ಒಂದು ತಿಂಗಳಿದ ಕಾರ್ಯಕ್ರಮ ಎಲ್ಲಿ ಮಾಡಬೇಕು ಹೇಗೆ ಮಾಡಬೇಕು, ವೇದಿಕೆಗೆ ಯಾರನ್ನ ಕರೆಯಬೇಕು ಎಂದು ನನ್ನೊಂದಿಗೆ ಚರ್ಚಿಸಿ ಎಲ್ಲಾ ಜವಾಬ್ದಾರಿ ಹೊತ್ತು ಈ ಕಾರ್ಯಕ್ರಮ ಯಶಸ್ವಿಯಾಗಲು ಕಾರಣಕರ್ತರಾಗಿದ್ದಾರೆ. ಕಾರ್ಯಕ್ರಮ ಕುರಿತು ಸುದ್ದಿ ಮಾಡಿದ ಎಲ್ಲಾ ಪತ್ರಕರ್ತರಿಗೆ, ಎಲ್ಲಾ ಸ್ನೇಹಿತರಿಗೆ ಚನ್ನರಾಯಪಟ್ಟಣದಿಂದ ಬಂದ ನನ್ನ ಪ್ರತಿಮಾ ಟ್ರಸ್ಟಿನ ಎಲ್ಲಾ ಸದಸ್ಯರಿಗೆ, ನನ್ನ ಹಳೆಯ ವಿದ್ಯಾರ್ಥಿಗಳಿಗೆ ಹಾಗೂ ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು.
ಉಮೇಶ್ ತೆಂಕನಹಳ್ಳಿ, ಚನ್ನರಾಯಪಟ್ಟಣ