ಉಡುಪಿ : ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ ದಿನಾಂಕ 06 ಅಕ್ಟೋಬರ್ 2024ರಂದು ಹಮ್ಮಿಕೊಂಡ ಯಕ್ಷ ಸಂಭ್ರಮ ಕಾರ್ಯಕ್ರಮದಲ್ಲಿ ಬಣ್ಣದ ಮಾಲಿಂಗ ಅವರ 15 ಅಡಿ ಎತ್ತರದ ಮಹಿರಾವಣ ವೇಷದ ಯಕ್ಷ ಪ್ರತಿಮೆಯ ಉದ್ಘಾಟನೆ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಮೋಹನ್ ಆಳ್ವ ಇವರು ಮಾತನಾಡಿ “ಬಣ್ಣದ ಮಾಲಿಂಗ ಅವರು ಚೌಕಿಗೆ ಬಂದು ತಪಸ್ಸಿನಂತೆ ವೇಷ ಹಾಕುವುದನ್ನು ಕಂಡಿದ್ದೇನೆ. ಅವರು ಬದುಕಿದ್ದಾಗಲೇ ದಂತಕತೆಯಾಗಿದ್ದವರು. ಈ ದಂತಕಥೆಯನ್ನು ಅವರ ಪ್ರತಿಮೆ ಮೂಲಕ ಇತಿಹಾಸ ಮಾಡಿದ ರಂಗಕರ್ಮಿ ಜೀವನ್ ರಾಮ್ ಸುಳ್ಯ ಅವರ ಸಾಧನೆ ಪ್ರಶಂಸನೀಯ. ಇದು ರಂಗಮನೆಯ ಹೆಗ್ಗಳಿಕೆಯಾಗಿದೆ. ಜೀವನ್ ರಾಮ್ ಸುಳ್ಯ ಅವರೊಂದಿಗೆ ಕಳೆದ 32 ವರ್ಷಗಳಿಂದ ಸಾಂಸ್ಕೃತಿಕವಾಗಿ ಅರ್ಥಪೂರ್ಣ ಸಂಬಂಧವನ್ನು ಹೊಂದಿದ್ದೇನೆ. ಅವರು ನಮ್ಮ ವಿದ್ಯಾ ಸಂಸ್ಥೆಗೆ ನೀಡಿದ ಸಾಂಸ್ಕೃತಿಕ ಕೊಡುಗೆಗೆ ಅಭಿನಂದಿಸುತ್ತೇನೆ. ಬಣ್ಣದ ಮಾಲಿಂಗರ ಈ ಪ್ರತಿಮೆ ಪುನಃ ನಿರ್ಮಾಣ ಮಾಡಿರುವುದು ಕಲೆಯ ಮೇಲಿನ ಅವರ ಪ್ರೀತಿಗೆ ಸಾಕ್ಷಿ. ಸ್ತ್ರೀ ವೇಷ, ಪುಂಡುವೇಷ ಹಾಕಿಯೇ ಮೇಲೆ ಬಂದವರು ಬಣ್ಣದ ಮಾಲಿಂಗ. ಗಾಣಿಗ, ಪಾಟಾಳಿ ಜನಾಂಗಕ್ಕೆ ಈ ಬಣ್ಣದ ವೇಷ ಒಲಿದಿದೆ ಎಂದು ನನ್ನ ಅಂಬೋಣ. ಅನೇಕ ಪ್ರಸಿದ್ಧ ಕಲಾವಿದರು ಈ ಸಮುದಾಯದಲ್ಲಿ ಬಂದಿದ್ದಾರೆ. ಈ ಬಗ್ಗೆ ದಾಖಲೀಕರಣ ನಡೆದಿರುವುದು ಸಂತೋಷ ತಂದಿದೆ. ತಾಳಮದ್ದಲೆ ಕಿವಿಗೆ ತಂಪು, ಬಯಲಾಟ ಕಣ್ಣಿಗೆ ತಂಪು. ಇವು ಯಕ್ಷಗಾನ ಪ್ರೇಮಿಗಳ ಎರಡು ಕಣ್ಣುಗಳಿದ್ದಂತೆ” ಎಂದು ಬಣ್ಣಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಮಾತನಾಡಿ “ಖ್ಯಾತ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಅವರು ಯಕ್ಷಗಾನದ ದಂತಕಥೆ ಬಣ್ಣದ ಮಾಲಿಂಗ ಅವರ ಪುತ್ತಳಿಯನ್ನು ಸ್ಥಾಪಿಸುವುದರ ಮೂಲಕ ಯಕ್ಷಗಾನದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ಈ ಅರ್ಥಪೂರ್ಣ ಕಾರ್ಯಕ್ಕಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪರವಾಗಿ ಅವರನ್ನು ಅಭಿನಂದಿಸುತ್ತೇನೆ” ಎಂದು ಹೇಳಿದರು.
ಕಲಾ ನಿರ್ದೇಶಕ, ಬಿಗ್ಬಾಸ್ ಖ್ಯಾತಿಯ ಅರುಣ್ ಸಾಗರ್ ಮಾತನಾಡಿ “ದಕ್ಷಿಣ ಕನ್ನಡದ ಮಣ್ಣಿನಲ್ಲಿ ಕಲೆಯ ಸಾಮ್ರಾಜ್ಯವೇ ನಿಂತಿದೆ. ನಾನಿಂದು ನಿಮ್ಮೆದುರು ಕಲಾವಿದನೆಂದು ಅನಿಸಿಕೊಳ್ಳಲು ಯಕ್ಷಗಾನ, ರಂಗಭೂಮಿಯ ಪ್ರೇರಣೆಯೇ ಕಾರಣ. ಬಣ್ಣದ ಮಾಲಿಂಗ, ಶೇಣಿ, ಸಾಮಗ ಮೊದಲಾದ ಮಹಾನ್ ಕಲಾವಿದರು ಪೌರಾಣಿಕ ಪಾತ್ರಗಳ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆ ಬೆಳೆಸಿದವರು. ಯಕ್ಷಗಾನ ಇದು ಕೃಷಿಕರು ಕಟ್ಟಿದ ಕಲೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರಂಗಮನೆ ಅಮ್ಮ ವನಜಾಕ್ಷಿ ಜಯರಾಮ ನೆನಪಿನ ‘ವನಜ ರಂಗಮನೆ ಪ್ರಶಸ್ತಿ 2024’ನ್ನು ತೆಂಕತಿಟ್ಟಿನ ಪ್ರಸಿದ್ಧ ಬಣ್ಣದ ಕಲಾವಿದ ಸಿದ್ದಕಟ್ಟೆ ಸದಾಶಿವ ಶೆಟ್ಟಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಂಗಮನೆಯ ಅಧ್ಯಕ್ಷ ಜೀವನ್ ರಾಮ್ ಸುಳ್ಯ ಉಪಸ್ಥಿತರಿದ್ದರು.