ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ಏಕವ್ಯಕ್ತಿ ನೃತ್ಯ ಪ್ರದರ್ಶನಕ್ಕೊಂದು ವೇದಿಕೆ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 14-10-2024ರಂದು ಸಂಜೆ ಗಂಟೆ 6.25ಕ್ಕೆ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಈ ದಿನದ ಸರಣಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿದುಷಿ ಮೇಘಾ ಸಿ.ಕೆ. ಇವರು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ವಿದುಷಿ ಮೇಘಾ ಸಿ.ಕೆ. ಇವರು ನುರಿತ ಭರತನಾಟ್ಯ ಕಲಾವಿದೆ, ನೃತ್ಯ ನಿರ್ದೇಶಕಿ, ಗುರು ಮತ್ತು ಕರ್ನಾಟಕ ಸಂಗೀತ ಕಲಾವಿದೆ. ಇವರು ತಮ್ಮ ಆರನೇ ವಯಸ್ಸಿನಿಂದಲೇ ಶಾಸ್ತ್ರೀಯ ನಾಟ್ಯ ಪ್ರಕಾರದಲ್ಲಿ ತರಬೇತಿ ಪಡೆಯಲಾರಂಬಿಸಿದ್ದು, ಬೆಂಗಳೂರಿನ ಶ್ರೇಷ್ಠ ನೃತ್ಯಗುರುಗಳಿಂದ ಭರತನಾಟ್ಯ ತರಬೇತಿ ಪಡೆದಿರುವ ಇವರು ನಾಟ್ಯದ ಹಲವು ಬಾನಿಗಳಲ್ಲಿ ತರಬೇತಿ ಪಡೆದಿದ್ದಾರೆ. ಇವರು ಎಳವೆಯಲ್ಲಿ ಗುರು ವಿದುಷಿ ಸಂಧ್ಯಾ ಕೇಶವ ರಾವ್ ಮತ್ತು ಅನಿತಾ ಕೃಷ್ಣಾನಂದ ಇವರ ಬಳಿ ಈ ಕಲೆಯ ಕಲಿಕೆಗೆ ಕಾಲಿಟ್ಟರು. ನಂತರ ಗುರು ವಿದುಷಿ ಲತಾ ಲಕ್ಷ್ಮೀಶ ಇವರ ಬಳಿ ಹೆಚ್ಚಿನ ತರಬೇತಿ ಪಡೆದು, ಮುಂದಿನ ಘಟ್ಟವಾಗಿ ಗುರು ವಂದ್ಯಾ ಶ್ರೀನಾಥ್ ಇವರ ತರಬೇತಿಯಲ್ಲಿ ಕಲಾಕ್ಷೇತ್ರ ಶೈಲಿಯ ನಾಟ್ಯದಲ್ಲಿ ನುರಿತ ಕಲಾವಿದೆಯಾದರು. ಪ್ರಸ್ತುತ ಕೆಲ ವರುಷಗಳಿಂದ ಗುರು ಕರ್ನಾಟಕ ಕಲಾಶ್ರೀ ಡಾಕ್ಟರ್ ಸುಪರ್ಣಾ ವೆಂಕಟೇಶ್ ಇವರಿಂದ ಹೆಚ್ಚಿನ ಪರಿಣತಿ ಪಡೆಯುತ್ತಿರುವ ಮೇಘಾ ಭರತನಾಟ್ಯದಲ್ಲಿ ವಿದ್ವತ್ ಪಡೆದಿದ್ದು ರಾಜ್ಯ, ರಾಷ್ಟ್ರ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಕರ್ನಾಟಕ ಸಂಗೀತದಲ್ಲೂ ಚಿಂತಲಪಲ್ಲಿ ಪರಂಪರೆಯ ಗುರು ವಿದುಷಿ ಚೂಡಾಮಣಿ ಶ್ರೀಧರ್ ಇವರ ಬಳಿ ಕಲಿಯುತ್ತಿದ್ದು, ವಿದ್ವತ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ತಮ್ಮ ನರ್ತನ ಮತ್ತು ನಾಟ್ಯ ನಿರ್ದೇಶನಕ್ಕೆ ಹಲವು ಪ್ರಶಸ್ತಿ ಮತ್ತು ಪ್ರಶಂಸೆಗಳನ್ನು ಪಡೆದಿದ್ದು, ನಾಟ್ಯ ಪ್ರವೀಣೆ, ಅಭಿನಯ ರತ್ನ ಬಿರುದಾಂಕಿತರು. ಮೇಘಾರವರು ಅಮೇರಿಕಾದ ನೋವಿ, ವಾಶಿಂಗ್ಟನ್ ಮತ್ತು ನ್ಯೂಯಾರ್ಕ್ ನಲ್ಲಿ ಸಹ ನೃತ್ಯ ಪ್ರದರ್ಶನ ಪ್ರಸ್ತುತಪಡಿಸಿದ್ದಾರೆ. ಇವರು ತಮ್ಮದೇ ಆದ ಆರಾದನಾ ನೃತ್ಯ ಮತ್ತು ಸಂಗೀತ ಶಾಲೆ ಅಲ್ಲದೆ ಸಾಯಿ ಆರ್ಟ್ಸ್ ಇಂಟರ್ನ್ಯಾಶನಲ್ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.