08 ಮಾರ್ಚ್ 2023, ಮಂಗಳೂರು: ಲೇಖಕಿ ಚಿಂತಕಿ ಹಾಗೂ ಸಂಶೋಧಕಿ ಬಿ. ಎಮ್. ರೋಹಿಣಿಯವರು ಕನ್ನಡಾಂಬೆಯ ಪ್ರತಿಭಾವಂತ ಸುಪುತ್ರಿ. ತನ್ನಲ್ಲಿರುವ ಕನ್ನಡದ ದಿವ್ಯ ಜ್ಯೋತಿಯಿಂದ ಕರಾವಳಿ ಲೇಖಕಿಯರ ವಾಚಿಕೆಯರ ಸಂಘದ ಮೂಲಕ ಅನೇಕ ಕಿರು ಹಣತೆಗಳನ್ನು ಹಚ್ಚಿ ನಾಡಿಗೆ ಸಮರ್ಪಿಸಿದ್ದಾರೆ. ಇಂದಿಗೂ ಈ ಕಾಯಕದಲ್ಲಿ ತೊಡಗಿಸಿಕೊಂಡ ಇವರ ಮಾರ್ಗದರ್ಶನದಿಂದ ಬೆಳಗಿದ ನೂರಾರು ಹಣತೆಗಳು ನಾಡಿನಾದ್ಯಂತ ಪಸರಿಸಿ ಕನ್ನಡದ ಬೆಳಕನ್ನು ಚೆಲ್ಲುತ್ತಿವೆ. ಅನ್ಯ ಭಾಷಾ ಹಾವಳಿಯಿಂದ ತತ್ತರಿಸುತ್ತಿರುವ ಕರ್ನಾಟಕಕ್ಕೆ ಇಂದು ಬಿ.ಎಂ ರೋಹಿಣಿಯವರಂತಹ ವ್ಯಕ್ತಿಗಳ ಮಾರ್ಗದರ್ಶನ ಬೇಕು. ನವ್ಯತೆಯ ಹೆಸರಿನಲ್ಲಿ ಇಂದು ಜನ ಭಾಷಾ ಶುದ್ಧತೆ ಹಾಗೂ ವ್ಯಾಕರಣ ಬದ್ಧತೆಯನ್ನು ಮರೆತಂತಿದೆ. ಇಂತಹ ಸನ್ನಿವೇಶದಲ್ಲಿ ಬಿಎಂ ರೋಹಿಣಿಯವರಂತಹ ಭಾಷಾ ಪ್ರಭುದ್ಧರ ಅವಶ್ಯಕತೆ ನಮಗಿದೆ. ಈ ನಿಟ್ಟಿನಲ್ಲಿ ಇವರ ಸೇವೆ ಶ್ಲಾಘನೀಯ.
ಬಿ.ಎಂ ರೋಹಿಣಿಯವರು 19 44ರಲ್ಲಿ ಬಂಗ್ರಮಂಜೇಶ್ವರದಲ್ಲಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕಿಯಾಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದಾರೆ. ಬರಹ ಸಂಶೋಧನೆ ಹಾಗೂ ಅಧ್ಯಯನ ಇವರ ಪ್ರವೃತ್ತಿಗಳಾಗಿವೆ. ಇವರು ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಪ್ರಕಟಿಸಿರುತ್ತಾರೆ. ‘ಸ್ತ್ರೀ ಸಂವೇದನೆ’, ‘ಸ್ತ್ರೀ-ಶಿಕ್ಷಣ-ಸಂಸ್ಕೃತಿ’, ‘ಸ್ತ್ರೀ ಭಿನ್ನ ಮುಖಗಳು’, ‘ಸಾಮಾಜಿಕ ತಲ್ಲಣಗಳು’ ಮತ್ತು ‘ಆರಾಧನಾ ರಂಗದಲ್ಲಿ ಸ್ತ್ರೀ’ ಇವು ಇವರ ಲೇಖನ ಸಂಕಲನಗಳು. ‘ಕರ್ತವ್ಯ’, ‘ಹಿರಿಯರ ಜೀವನ ಕಥನಗಳು’, ‘ಗರಿಕೆಯ ಕುಡಿಗಳು’, ಇವು ಇವರ ಕಥಾ ಸಂಕಲನಗಳು.
‘ಅಧ್ಯಾಪಿಕೆಯ ಅಧ್ವಾನಗಳು’ ಇದು ಇವರ ಅನುಭವಕಥನ. ‘ಶ್ರೀಮತಿ ಲಲಿತಾ ರೈ’, ‘ವರ್ಣ ಚಿತ್ರ ಕಲಾವಿದ ಪಾವಂಜೆ ಗೋಪಾಲಕೃಷ್ಣಯ್ಯ’, ಮತ್ತು ‘ಸಂಗೀತ ವಿದ್ವಾನ್ ಕೇಶವ ಭಟ್’ ಇವು ಇವರ ವ್ಯಕ್ತಿ ಚಿತ್ರಣಗಳು‘ಅವಿವಾಹಿತ ಮಹಿಳೆಯರ ಸಮಾಜಿಕ ಸಾಂಸ್ಕೃತಿಕ ಅಧ್ಯಯನ’, ‘ತುಳು ನಾಡಿನ ಮಾಸ್ತಿ ಕಲ್ಲುಗಳು ವೀರಗಲ್ಲುಗಳು’, ಹಾಗೂ ‘ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಹೋರಾಟದ ದಾಖಲೀಕರಣ’ ಇವು ಇವರ ಸಂಶೋಧನಾ ಕೃತಿಗಳು.
ನಾಗಂದಿಗೆ ಒಳಗಿಂದ ಇವರ ಆತ್ಮಕಥನ. ಈ ಎಲ್ಲಾ ಕೃತಿಗಳಿಗೂ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಮುಖ್ಯವಾಗಿ ‘ಸ್ತ್ರೀ ಸಂವೇದನೆ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ ಪ್ರಶಸ್ತಿ, ‘ಸ್ತ್ರೀ -ಶಿಕ್ಷಣ – ಸಂಸ್ಕೃತಿ’ ಕೃತಿಗೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಶ್ರೇಷ್ಠ ಪ್ರಶಸ್ತಿಗಳು ದೊರೆತಿವೆ. ಅಲ್ಲದೆ ಇವರಿಗೆ ದೊರೆತ ಇತರ ಪ್ರಶಸ್ತಿ – ಪುರಸ್ಕಾರಗಳು : ‘ಮೌಲ್ಯ ಗೌರವ ಪ್ರಶಸ್ತಿ’, ‘ಕಾಂತಾವರ ಸಾಹಿತ್ಯ ಪ್ರಶಸ್ತಿ’, ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ, ‘ಕನ್ನಡ ಸಂಸ್ಕೃತಿ ಇಲಾಖೆಯ ಗೌರವ ಸನ್ಮಾನ’, ಹಾಗೂ ‘ನಾಗಂದಿಗೆಯೊಳಗಿಂದ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಲಭಿಸಿದೆ. ಅಲ್ಲದೆ ಇನ್ಫೋಸಿಸ್ ಪ್ರತಿಷ್ಠಾನದ ಪ್ರಶಸ್ತಿ, ‘ಶ್ರೀ ಗುರು ನಾರಾಯಣ ಪ್ರಶಸ್ತಿ’ ಲಭಿಸಿದೆ. ಅಲ್ಲದೆ ಇವರ ಒಟ್ಟು ಸಾಹಿತ್ಯ ಸೇವೆಯನ್ನು ಪರಿಗಣಿಸಿ ‘ವಿಷಕುಮಾರ್ ಪ್ರಶಸ್ತಿ’ಪ್ರದಾನ ಮಾಡಿರುತ್ತಾರೆ.
ಬಿ.ಎಂ.ರೋಹಿಣಿಯವರ ಎಲ್ಲಾ ಕೃತಿಗಳು ನಮಗೆ ಜೀವನ ಪಾಠವನ್ನೂ, ಮೆದುಳಿಗೆ ಜ್ಞಾನ ದೀಪ್ತಿಯನ್ನೂ, ಬುದ್ದಿಗೆ ಬೆಳಕನ್ನೂ ನೀಡಬಲ್ಲವು. ಹೆಣ್ಣಿನ ಶೋಷಣೆ, ಮಹಿಳಾದೌರ್ಜನ್ಯ, ಸಾಮಾಜಿಕ ಪಿಡುಗುಗಳು ಹೀಗೆ ಹಲವಾರು ಸಮಸ್ಯೆಗಳನ್ನು ಎತ್ತಿಕೊಂಡು ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿರುತ್ತಾರೆ. ಪ್ರತಿಯೊಂದು ಕೃತಿಯೂ ಧನಾತ್ಮಕ ಚಿಂತನೆಯಲ್ಲಿ ಕೊನೆಗೊಳ್ಳುತ್ತದೆ. ಇವರ ಕೃತಿಗಳಲ್ಲಿ ಹಲವಾರು ಜೀವನ ಮೌಲ್ಯಗಳು ಅನಾವರಣಗೊಂಡು ವಾಚಕರಿಗ ಭವಿಷ್ಯದ ಆಶಾಕಿರಣವಾಗಿ ಪರಿಣಮಿಸುತ್ತವೆ. ಸುಂದರ ಭಾಷಾ ಪ್ರೌಢಿಮೆ, ವಿಷಯ ವೈವಿಧ್ಯತೆ, ನೇರ ನಿರೂಪಣೆ ಇವುಗಳಿಂದ ಇವರ ಕೃತಿಗಳು ಜನಮನವನ್ನು ತಟ್ಟುತ್ತದೆ. ಯಾವ ಗಣಿಯಲ್ಲಿ ಯಾವ ಅನರ್ಘ್ಯ ಮಣಿ ಅಡಗಿದೆಯೋ ಎಂದು ವಾಚಕರು ಕುತೂಹಲದಿಂದ ಶೋಧಿಸುತ್ತಾ ಮುಂದಕ್ಕೆ ಸಾಗುವಂತಾಗುತ್ತದೆ. ಒಟ್ಟಿನಲ್ಲಿ ಬಿ.ಎಂ. ರೋಹಿಣಿಯವರ ವಿಚಾರಧಾರೆಗಳು, ಸಮಾಜಮುಖಿ ಚಿಂತನೆ, ಸ್ತ್ರೀಪರ ಕಾಳಜಿ, ಒಂದಕ್ಕಿಂತ ಒಂದು ಮಿಗಿಲೆಂಬಂತೆ ಭಾಸವಾಗಿ ತನ್ನದೇ ಆದ ವಿಶಿಷ್ಟತೆಗಳಿಂದ ಜನ ಮಾನಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡು, ಕನ್ನಡ ನಾಡಿನಾದ್ಯಂತ ಅದರ ಸೌರಭವನ್ನು ಪಸರಿಸಿದೆ. ಇವರ ಸಾಹಿತ್ಯ ಸೇವಾಲಹರಿ ಮಹಾವಾರಿಧಿಯಾಗಿ ಪ್ರವಹಿಸಲಿ, ನ ಭೂತೋ ನ ಭವಿಷ್ಯತಿ ಎಂಬಂತೆ ವಿರಾಜಿಸಲಿ, ಸುವರ್ಣಕ್ಕೆ ಸುವಾಸನೆಯ ಕಂಪು ಬಂದಂತಾಗಲಿ ಎಂದು ಹಾರೈಸುತ್ತೇನೆ.
- ಶ್ರೀಮತಿ ಅರುಣಾ ನಾಗರಾಜ್