ಗೋಣಿಕೊಪ್ಪ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀ ಕಾವೇರಿ ದಸರಾ ಸಮಿತಿ ಹಾಗೂ ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿಯು ದಿನಾಂಕ 11 ಅಕ್ಟೋಬರ್ 024 ರಂದು ಗೋಣಿಕೊಪ್ಪದ ಕಾವೇರಿ ಕಲಾ ವೇದಿಕೆಯಲ್ಲಿ ನಡೆಯಿತು.
ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ “ಕನ್ನಡ ಪರ ಹೋರಾಟ ನಿರಂತರವಾಗಿರಬೇಕಿದೆ. ಗಡಿಭಾಗವಾದ ಕುಟ್ಟ ವ್ಯಾಪ್ತಿಯಲ್ಲಿ ಕನ್ನಡ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಕವಿಗಳ ಸಂಖ್ಯೆ ಕೂಡ ಹೆಚ್ಚಾಗಬೇಕಿದೆ.” ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಡಾ. ಜೆ. ಸೋಮಣ್ಣ ಮಾತನಾಡಿ “ಪಂಪ ತನ್ನ ಕಾವ್ಯದ ನಾಯಕನಾದ ಅರ್ಜುನನೊಂದಿಗೆ ಶತ್ರುವಾಗಿದ್ದ ಕರ್ಣನನ್ನು ಹೊಗಳುವುದರ ಮೂಲಕ ಕವಿ ಮನಸ್ಸಿನ ಶ್ರೇಷ್ಠತೆಯನ್ನು ಮೆರೆದಿದ್ದ. ಕವನ ಹುಟ್ಟುವುದೇ ಹೀಗೆ.” ಎಂದರು.
ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ ಮಾತನಾಡಿ “ಮುಂದಿನ ಪೀಳಿಗೆಗೆ ಕವಿಗಳು ಅನಿವಾರ್ಯ ಎಂಬ ಉದ್ದೇಶದಿಂದ ಕವಿಗೋಷ್ಠಿಗೆ ಆದ್ಯತೆ ನೀಡಲಾಗುತ್ತಿದೆ.”ಎಂದರು.
ಉಳುವಂಗಡ ಕಾವೇರಿ ಉದಯ ಅವರ ಲೇಖನ ಸೌರಭ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ. ಪಿ. ಕೇಶವ ಕಾಮತ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು “ದಸರಾ ಸಂದರ್ಭದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡೆಯೊಂದಿಗೆ ಸಾಹಿತ್ಯಕ್ಕೆ ನೀಡುತ್ತಿರುವ ಪ್ರೋತ್ಸಾಹ ಮೆಚ್ಚುವಂತದ್ದು, ಲೇಖನ ಸೌರಭ ಪ್ರತೀ ಮನೆಗೆ ತಲುಪಬೇಕು.” ಎಂದರು.
ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಂದ ದೇವಯ್ಯ, ಸಂಯೋಜಕ ಎಂ. ಕೆ. ಚಂದನ್ ಕಾಮತ್, ಕಾರ್ಯದರ್ಶಿ ಶೀಲ ಬೋಪಣ್ಣ, ಪ್ರಮುಖರಾದ ಡಿ. ಚಂದನ, ಮಂಜುನಾಥ್, ವಾಮನ, ವಿನೋದ್, ರಾಮಕೃಷ್ಣ ಉಪಸ್ಥಿತರಿದ್ದರು. ಸಂಚಾಲಕರಾದ ಎಸ್. ಎಂ. ರಜನಿ ಕವಿಗೋಷ್ಠಿ ನಿರ್ವಹಿಸಿ, ನಳಿನಿ ಮತ್ತು ಸುಶ್ಮಿತಾ ಕಾರ್ಯಕ್ರಯಮ ನಿರೂಪಿಸಿದರು.
ಕವಿಗೋಷ್ಠಿಯಲ್ಲಿ 81 ಕವಿಗಳು ಕವನ ವಾಚಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದೇ ಮೊದಲ ಬಾರಿಗೆ ಇಷ್ಟೊಂದು ಕವಿಗಳಿಗೆ ಅವಕಾಶ ನೀಡಿ ದಸರಾ ಆಚರಣೆಯಲ್ಲಿ ಸಾಹಿತ್ಯಕ್ಕೆ ಬೆಂಬಲ ನೀಡಲಾಯಿತು. 160 ಕವನಗಳಲ್ಲಿ 94 ಕವಿಗಳಿಗೆ ಅವಕಾಶ ನೀಡಿತ್ತಾದರೂ, 81 ಕವಿಗಳು ಪಾಲ್ಗೊಂಡರು. ಇದರೊಂದಿಗೆ 9 ಬಾಲಕ ಕವಿಗಳ ಉದಯವಾಯಿತು.
ಏಕಕಾಲದಲ್ಲಿ ಕವಿತೆಗಳ ತಯಾರಿ, ಕವನ ವಾಚನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಇದು ಸಮಯ ವ್ಯರ್ಥಕ್ಕೆ ಅವಕಾಶ ದೊರೆಯಲಿಲ್ಲ, ‘ಜನರು ಕಾವ್ಯ ಪ್ರಯೋಗದ ಕುರಿತು ಓದಿಕೊಳ್ಳದಿದ್ದರೂ ಕಾವ್ಯ ರಚಿಸುವಷ್ಟು ಬುದ್ಧಿವಂತರಾಗಿದ್ದರು.’ ಎಂಬ ಕವಿರಾಜ ಮಾರ್ಗದ ಉಲ್ಲೇಖ ಇಲ್ಲಿ ನಿಜವಾಯಿತು.