ವಿಜಯಪುರ : ಶರನ್ನವರಾತ್ರಿ ಪರ್ವದ ನಿಮಿತ್ತ ನಗರದ ಬಾಗಲಕೋಟೆ ರಸ್ತೆಯ ವಜ್ರಹನುಮಾನ್ ನಗರದಲ್ಲಿರುವ ಶ್ರೀ ಶಂಕರ ಮಠದಲ್ಲಿ ದಿನಾಂಕ 05 ಅಕ್ಟೋಬರ್ 2024ರಂದು ಪ್ರಥಮ ಬಾರಿಗೆ ‘ಗಮಕ ದುಂದುಭಿ’ ಮೊಳಗಿತು. ಕರ್ನಾಟಕ ಗಮಕ ಪರಿಷತ್ತು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಆಶ್ರಯದಲ್ಲಿ ಗಮಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಜಯಪುರ ಜಿಲ್ಲಾ ಗಮಕ ಪರಿಷತ್ ಅಧ್ಯಕ್ಷ ಶ್ರೀ ಬಿ. ಎಂ. ಪಾಟೀಲರು ಕಾರ್ಯಕ್ರಮ ಆಯೋಜಿಸಿದ್ದರು. ಹಿರಿಯ ಗಮಕಿ ಶ್ರೀಮತಿ ಶಾಂತಾ ಕೌತಾಳರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂತ ಕವಿ ಕನಕದಾಸರು ರಚಿಸಿರುವ ‘ನಳ ದಮಯಂತಿ’ ಷಟ್ಪದಿ ಕಾವ್ಯದ ‘ನಳ ದಮಯಂತಿ ವಿವಾಹ’ ಪ್ರಸಂಗವು ಮಠದ ಭಕ್ತರಲ್ಲಿ ಭಕ್ತಿಯ ಹೊಳೆ ಹರಿಸುವಲ್ಲಿ ಸಫಲವಾಯಿತು. ಗಮಕಿಗಳಾದ ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಸರಸ್ವತಿ ಕುಲಕರ್ಣಿ ಇವರುಗಳು ಆರಂಭದಲ್ಲಿ ಪ್ರಾರ್ಥನಾ ಪದ್ಯವಾದ ‘ಶ್ರೀರಮಣ ಸರಸಿಜದಳಾಕ್ಷ, ಸಾಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ’ ಎಂಬ ನಾಂದೀ ಪದ್ಯವನ್ನು ಸುಶ್ರಾವ್ಯವಾಗಿ ಹಾಡಿದರು. ಕಾವ್ಯಕ್ಕೆ ವ್ಯಾಖ್ಯಾನ ನೀಡಿದ ಗಮಕಿ ಕಲ್ಯಾಣರಾವ್ ದೇಶಪಾಂಡೆಯವರು ನಳ ದಮಯಂತಿಯರ ಆದರ್ಶ ಪ್ರೇಮ ಲೋಕಕ್ಕೆ ನೀಡಿದ ಶ್ರೇಷ್ಠ ಉದಾಹರಣೆ ಎಂದು ತಿಳಿಸಿದರು. ನಳ ಮಹಾರಾಜನು ಪ್ರೇಮದ ಇನ್ನೊಂದು ಮುಖ ತ್ಯಾಗ ಎಂಬ ಸಂದೇಶ ನೀಡಿದನು. ದಮಯಂತಿಯು ದೇವಿ ಶಾರದೆಯನ್ನು ಪ್ರಾರ್ಥಿಸುವ ‘ವಾಣಿ, ವೀಣಾ ಪಾಣಿ, ಪನ್ನಗವೇಣಿ, ಸುರನಿಕುರಂಬ ವಂದಿತೆ, ಸತ್ಯಸಂಚಾರಿ, ವಾಣಿ ಸ್ತ್ರೀ ಕುಲರನ್ನೆ ವರಗೀರ್ವಾಣಿ ರಕ್ಷಿಸು’ ಎಂದು ಗಮಕಿಗಳು ಕಾವ್ಯ ವಾಚನ ಮಾಡಿದಾಗ ಮಠದ ಭಕ್ತರಲ್ಲಿ ಭಕ್ತಿ ಪ್ರವಹಿಸಿ ವಿಶೇಷ ಪ್ರಭಾವ ಮೂಡಿಸಿತು. ನಳ-ದಮಯಂತಿಯರ ಮಂಗಲ ವಿವಾಹದೊಂದಿಗೆ ಗಮಕ ಕಾರ್ಯಕ್ರಮ ಮುಗಿದಾಗ ಭಾರೀ ಕರತಾಡನವಾಯಿತು. ಶೃಂಗೇರಿ ಶಾರದೆಯ ಸಮ್ಮುಖದಲ್ಲಿ ಸರಸ್ವತಿ ಸ್ತುತಿ ಅನುರಣಿಸಿದ್ದು ವಿಶೇಷವೆನಿಸಿತು.
ಶ್ರೀ ಶಂಕರಮಠದ ಅಧ್ಯಕ್ಷರಾದ ಶ್ರೀ ಮಹೇಶ್ ದೇಶಪಾಂಡೆ, ಧರ್ಮದರ್ಶಿಗಳಾದ ಅಶೋಕ್ ದೇಶಪಾಂಡೆ (ಕಾರಜೋಳ), ಪ್ರಸಾದ್ ಕುಲಕರ್ಣಿ ಇವರುಗಳು ಗಮಕ ಕಲಾವಿದರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಹಿರಿಯ ಗಮಕಿ ಶಾಂತಾ ಕೌತಾಳರ ಉಪಸ್ಥಿತಿ ಹಾಗೂ ‘ವೇದಪುರುಷನ ಸುತನ ಸುತನ’ ಎಂಬ ಅವರ ಪದ್ಯವಾಚನ ಸಭಿಕರಲ್ಲಿ ರೋಮಾಂಚನ ಉಂಟು ಮಾಡಿತು. ಕಾರ್ಯಕ್ರಮದಲ್ಲಿ 150ರಷ್ಟು ಜನ ಭಾಗವಹಿಸಿ ಗಮಕಾನಂದ ಅನುಭವಿಸಿದರು. ಶ್ರೀ ಬಿ.ಕೆ. ಗೋಟ್ಯಾಳ ಕಾರ್ಯಕ್ರಮದ ನಿರೂಪಣೆ ಮಾಡಿದರು.