ಜಗನ್ನಾಥ ಗಾಣಿಗ ಸಿಪಾಯಿ ಮನೆ ಇವರು ರತ್ನ ಗಾಣಿಗ ಹಾಗೂ ಅಂತ ಗಾಣಿಗ ಇವರ ಸುಪುತ್ರರಾಗಿ 12-02-1979ರಂದು ಜನಿಸಿದರು. ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸದ ನಂತರ ನಮ್ಮ ಭೂಮಿ ಎಂಬ ಎನ್.ಜಿ.ಒ. ಸಂಸ್ಥೆ ಇವರ ಕಾರ್ಯಕ್ಷೇತ್ರ. ಈ ಸಂಸ್ಥೆಯೇ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಪ್ರಸಂಗಕರ್ತರಾಗಿ, ಭಾಗವತರಾಗಿ, ಯಕ್ಷ ಗುರುಗಳಾಗಿ ಅನೇಕ ಯುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ಶ್ರೀಯುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷಗಾನ ಗುರುಗಳು.
ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ, ಪ್ರಸಂಗದ ಬಗ್ಗೆ ಅಧ್ಯಯನ ಮಾಡಿಕೊಂಡು, ಹಿರಿಯ, ಅನುಭವಿ ಕಲಾವಿದರಲ್ಲಿ ಮಾರ್ಗದರ್ಶನ ಪಡೆದು, ಸಾಂದರ್ಭಿಕವಾಗಿ, ಸಕಾಲಿಕವಾಗಿ, ಸ್ವಂತ ನಿಲುವನ್ನು ಸೇರಿಸಿಕೊಂಡು ರಂಗವನ್ನು ಪ್ರವೇಶಿಸುವ ಇವರ ಪೂರ್ವ ಭಾವಿ ತಯಾರಿ ಶ್ಲಾಘನೀಯ.
ಕಂಸ ವಧೆ, ಶ್ರೀ ದೇವಿ ಮಹಾತ್ಮೆ, ರತ್ನಾವತಿ ಕಲ್ಯಾಣ, ಸುಂದೋಪಸುಂದ ಕಾಳಗ, ಶ್ವೇತ ಕುಮಾರ ಚರಿತ್ರೆ, ಜಾಂಬವತಿ ಕಲ್ಯಾಣ ಇವರ ನೆಚ್ಚಿನ ಪ್ರಸಂಗಗಳಾದರೆ ಕಂಸ, ಜಾಂಬವ, ದುರ್ಜಯ, ಭಧ್ರಸೇನ, ಮಧು, ಕೈಟಭ, ಚಂಡ, ಮುಂಡ, ಅರ್ಜುನ ಇವು ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿಗತಿಯ ಬಗ್ಗೆ ಹೇಳುತ್ತಾ ಯುವ ಜನಾಂಗ ಯಕ್ಷಗಾನದತ್ತ ಆಕರ್ಷಿಸುತ್ತಿದ್ದಾರೆ. ಅಲ್ಲದೇ ಯುವ ಜನಾಂಗ ಹವ್ಯಾಸಿಯಾಗಿಯೋ ಅಥವಾ ವೃತ್ತಿ ಕಲಾವಿದರಾಗಿಯೋ ತಯಾರಾಗುತ್ತಿದ್ದಾರೆ. ಇತ್ತೀಚಿನ ಹೊಸ ಪ್ರಸಂಗಗಳು ಯಕ್ಷಗಾನ ಚೌಕಟ್ಟು ಮೀರಿ ಪ್ರದರ್ಶನಗೊಳ್ಳುತ್ತಿವೆ ಎಂಬ ವಿಷಾದದೊಂದಿಗೆ ಯುವ ಕಲಾವಿದರು ಹೊಸತನದೊಂದಿಗೆ ಪರಂಪರೆಯನ್ನು ಉಳಿಸುವಲ್ಲಿ ಮನಸ್ಸು ಮಾಡಬೇಕು. ಇದು ಬಿಟ್ಟರೆ ಯಕ್ಷಗಾನದ ಇಂದಿನ ಸ್ಥಿತಿ ಉತ್ತಮವಾಗಿಯೇ ಇದೆ ಎಂಬ ಸಮಾಧಾನದ ಮಾತುಗಳನ್ನಾಡುತ್ತಾರೆ.
ಇತ್ತೀಚಿಗೆ ಯಕ್ಷಗಾನಕ್ಕೆ ಪ್ರೇಕ್ಷಕರ ಸಂಖ್ಯೆ ಅಧಿಕವಾಗಿದೆ. ವಿದ್ಯಾವಂತ ಯುವ ಜನಾಂಗವೂ ಕೂಡ ಅಧಿಕ ಸಂಖ್ಯೆಯಲ್ಲಿ ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದಾರೆ. ಪ್ರೇಕ್ಷಕ ವರ್ಗ ಯಾವುದೇ ಒಬ್ಬ ಕಲಾವಿದನ ಅಭಿಮಾನಿ ಆಗಿರದೆ ಯಕ್ಷಗಾನ ಕಲೆಯ ಅಭಿಮಾನಿಯಾದರೆ ಯಕ್ಷಗಾನ ಬೆಳವಣಿಗೆಗೆ ಪೂರಕವಾಗುತ್ತದೆ ಎಂದು ಇಂದಿನ ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಕಿವಿಮಾತುಗಳನ್ನು ಹೇಳುವುದು ಸಂದರ್ಭೋಚಿತವಾಗಿದೆ.
ಯಕ್ಷಗಾನದ ಕಲೆ ನಮ್ಮ ಹೆಮ್ಮೆ ಮತ್ತು ಉಸಿರು ಇದ್ದಂತೆ. ಈ ಶ್ರೀಮಂತ ಕಲೆಯಲ್ಲಿ ಇನ್ನು ಅನೇಕ ಯುವ ಕಲಾವಿದರನ್ನು ತಯಾರು ಮಾಡಬೇಕು ಹಾಗೂ ಮಕ್ಕಳಿಗೆ ಯಕ್ಷಗಾನ ಹೆಜ್ಜೆ ಹೇಳಿಕೊಡಬೇಕು ಎಂಬ ಯೋಜನೆ ಇದೆ ಎಂದು ಹೇಳುವ ಜಗನ್ನಾಥ ಗಾಣಿಗರು ಪುಸ್ತಕ ಓದುವುದು, ಕೃಷಿಯ ಕೆಲಸವನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಹಲವು ಕಡೆಯಲ್ಲಿ ಹವ್ಯಾಸಿಯಾಗಿ ವೇಷ ಮಾಡಿದ ಅನುಭವ ಇವರಿಗಿದೆ.
ಜಗನ್ನಾಥ ಗಾಣಿಗರು ಪತ್ನಿ ಲೀಲಾವತಿ ಗಾಣಿಗ ಮತ್ತು ಮಕ್ಕಳಾದ ಅನನ್ಯ, ಅಭಿನವ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ಮಕ್ಕಳೂ ಯಕ್ಷಗಾನದಲ್ಲಿ ಕೆಲವು ವೇಷವನ್ನು ಮಾಡಿದ್ದಾರೆ. ತಂದೆ, ತಾಯಿ ಹಾಗೂ ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಜಗನ್ನಾಥ ಗಾಣಿಗ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಇವರಿಗೆ ಶುಭವನ್ನುಂಟು ಮಾಡಲಿ ಹಾಗೂ ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಶ್ರವಣ್ ಕಾರಂತ್ ಕೆ.
‘ಸುಪ್ರಭಾತ’, ಶಕ್ತಿನಗರ, ಮಂಗಳೂರು.
+ 91 8317463705