ಉಡುಪಿ : ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ರಂಗಭೂಮಿ (ರಿ.) ಉಡುಪಿ ಇವರು ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನೀಡಲಿರುವ ‘ಪುಸ್ತಕ ಪ್ರಶಸ್ತಿ’ಗೆ ಸ್ವತಂತ್ರ ನಾಟಕ ಕೃತಿಗಳನ್ನು ಆಹ್ವಾನಿಸಲಾಗಿದೆ.
ಆದರ್ಶ ಆಧ್ಯಾಪಕ, ಕವಿ, ಲೇಖಕ, ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥದಾರಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯಲ್ಲಿ ರಂಗಭೂಮಿ (ರಿ.) ಉಡುಪಿಯು, ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಸಹಯೋಗದಲ್ಲಿ ನಾಟಕರಂಗಕ್ಕೆ ಪ್ರಸ್ತುತವಾದ ಪುಸ್ತಕ ಪ್ರಶಸ್ತಿಯೊಂದನ್ನು ಕಳೆದ (2023) ವರ್ಷದಿಂದ ಆರಂಭಿಸಿತ್ತು. ಈ ಪ್ರಶಸ್ತಿಯು ರಂಗಭೂಮಿಗೆ ಪ್ರಸ್ತುತವಾದ, ಪರಿಶೀಲನ ಅವಧಿಯಲ್ಲಿ ಪ್ರಕಟವಾದ ನಾಟಕೇತರ ಸಾಹಿತ್ಯಕೃತಿ ಅಥವಾ ಅತ್ಯುತ್ತಮ ನಾಟಕ ಕೃತಿಯನ್ನು ಪರ್ಯಾಯ ವರ್ಷಗಳಲ್ಲಿ ಸ್ಪರ್ಧೆಯ ಮೂಲಕ ಗುರುತಿಸಿ ಪುರಸ್ಕರಿಸುವ ಮೂಲಕ ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯನ್ನು ನಿರಂತರವಾಗಿ ನಡೆಸುವ ಯೋಜನೆಯಾಗಿದೆ.
‘ಅಂಬಾತನಯ ಮುದ್ರಾಡಿಯವರ ಸಂಸ್ಮರಣೆಯ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುವ ಈ ‘ಪುಸ್ತಕ ಪ್ರಶಸ್ತಿ’ಯು ರಂಗಭೂಮಿ (ರಿ.) ಉಡುಪಿಯು ಆಯೋಜಿಸುವ ಸಾರ್ವಜನಿಕ ಸಮಾರಂಭದಲ್ಲಿ ಪ್ರದಾನಗೊಳ್ಳಲಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿರುತ್ತದೆ.
ಕಳೆದ ವರ್ಷ ನಾಟಕ ರಂಗಕ್ಕೆ ಸಂಬಂಧಿಸಿದ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯ ಕೃತಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗಿದ್ದು, ಈ ಸಾಲಿನ (2024ರ) ಪುಸ್ತಕ ಪ್ರಶಸ್ತಿಗೆ ಹಿಂದಿನ ಎರಡು ವರ್ಷಗಳಲ್ಲಿ (2022 ಮತ್ತು 2023) ಪ್ರಕಟವಾದ ಯಾವುದೇ ಪ್ರಕಾರದ ಸ್ವತಂತ್ರ ನಾಟಕ ಕೃತಿಯನ್ನು (ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ನವೋದಯ, ನವ್ಯ, ನವ್ಯೋತ್ತರ, ಅಸಂಗತ, ರೂಪಕ, ಏಕಾಂಕ, ನಾಟಕ ಸಂಕಲನ ಎಂಬ ಕಟ್ಟುಪಾಡುಗಳಿಲ್ಲದೇ) ಪರಿಗಣಿಸಲಾಗುತ್ತದೆ. ಅನುವಾದಿತ/ ಆಧಾರಿತ/ ಪುನರ್ಮುದ್ರಿತ ನಾಟಕ ಕೃತಿಗಳು ಸ್ಪರ್ಧೆಗೆ ಅರ್ಹವಾಗಿರುವುದಿಲ್ಲ.
ತನ್ನಿಮಿತ್ತ 2022 ಮತ್ತು 2023 ಈ ಎರಡು ವರ್ಷಗಳ ಅವಧಿಯಲ್ಲಿ ಪ್ರಥಮ ಆವೃತ್ತಿಯಲ್ಲಿ ಪ್ರಕಟವಾದ ನಾಟಕ ಕೃತಿಗಳ ಮೂರು ಪ್ರತಿಗಳನ್ನು ಲೇಖಕ/ಪ್ರಕಾಶಕರು/ರಂಗಕರ್ಮಿಗಳು ಅಥವಾ ರಂಗಾಸಕ್ತರು ಸ್ಪರ್ಧೆಯ ನಿರ್ವಾಹಕರಾದ ಡಾ. ವಿಷ್ಣುಮೂರ್ತಿ ಪ್ರಭು (ಮೊಬೈಲ್ 9108587192) c/o ಪ್ರೇಮಾ ನಾಯಕ್, ‘ಗೋಕುಲ’, ಆಲಂಬಿ ರಸ್ತೆ, 80 ಬಡಗುಬೆಟ್ಟು, ಪರ್ಕಳ, ಉಡುಪಿ – 576107 ಇವರಿಗೆ ದಿನಾಂಕ 10 ನವೆಂಬರ್ 2024ರ ಒಳಗೆ ತಲುಪುವಂತೆ ಕಳುಹಿಸಿಕೊಡಬಹುದು.