ಮಂಗಳೂರು : ಮಹಾಕವಿ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಸಂಸ್ಕೃತ ನಾಟಕವನ್ನಾಧರಿಸಿದ ‘ಸತೀ ಶಕುಂತಲೆ’ ಯಕ್ಷಗಾನ ತಾಳಮದ್ದಳೆಯು ಮಂಗಳೂರು ಆಕಾಶವಾಣಿಯಲ್ಲಿ ಎರಡು ಭಾಗಗಳಾಗಿ ಮೂಡಿ ಬರಲಿದೆ. ಕರ್ನಾಟಕ ಯಕ್ಷಭಾರತಿ ಪುತ್ತೂರು ತಂಡದ ಕಲಾವಿದರು ಭಾಗವಹಿಸಿರುವ ಈ ಯಕ್ಷಗಾನ ತಾಳಮದ್ದಳೆಯ ಮೊದಲನೇ ಭಾಗ ‘ಮುದ್ರಿಕಾ ಪ್ರದಾನ’ವು 25 ಅಕ್ಟೋಬರ್ 2024ರ ಶುಕ್ರವಾರದಂದು ರಾತ್ರಿ ಗಂಟೆ 9.30ಕ್ಕೆ ಪ್ರಸಾರವಾಗಲಿದೆ.
ಕಾರ್ಯಕ್ರಮದಲ್ಲಿ ಅರ್ಥಧಾರಿಗಳಾಗಿ ಭಾಸ್ಕರ ರೈ ಕುಕ್ಕುವಳ್ಳಿ, ಗಣರಾಜ ಕುಂಬ್ಳೆ, ಎಂ.ಕೆ. ರಮೇಶಾಚಾರ್ಯ, ರಮೇಶ ಸಾಲ್ವಣ್ಕರ್ ಹಾಗೂ ಉಮೇಶಾಚಾರ್ಯ ಗೇರುಕಟ್ಟೆ ಪಾತ್ರ ವಹಿಸಲಿದ್ದಾರೆ. ಭಾಗವತರಾಗಿ ಪ್ರಶಾಂತ ರೈ ಪುತ್ತೂರು, ಹಿಮ್ಮೇಳದಲ್ಲಿ ಪಿ. ಟಿ. ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಿದ್ದಾರೆ.
‘ಸತೀ ಸಮಾಗಮ’ – ನವೆಂಬರ್ 1
ಪ್ರಸಂಗದ ಎರಡನೇ ಭಾಗ ‘ಸತೀ ಸಮಾಗಮ’ ದಿನಾಂಕ 1 ನವೆಂಬರ್ 2024ರಂದು ರಾತ್ರಿ 9:30ಕ್ಕೆ ಪ್ರಸಾರವಾಗುವುದು. ಕರ್ನಾಟಕ ಯಕ್ಷಭಾರತಿ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಯೋಜಿಸಿದ ಈ ಯಕ್ಷಗಾನವನ್ನು ಮಂಗಳೂರು ಆಕಾಶವಾಣಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೂರ್ಯನಾರಾಯಣ ಭಟ್ ಪಿ.ಎಸ್. ನಿರ್ಮಿಸಿ ಬಾನುಲಿ ಪ್ರಸಾರಕ್ಕೆ ಸಿದ್ಧಪಡಿಸಿದ್ದಾರೆ. ಚೈತನ್ಯ ಪ್ರಶಾಂತ್ ಧ್ವನಿಮುದ್ರಣದಲ್ಲಿ ಸಹಕರಿಸಿದ್ದಾರೆ ಎಂದು ಪುತ್ತೂರಿನ ಕರ್ನಾಟಕ ಯಕ್ಷಭಾರತಿಯು ತಿಳಿಸಿದೆ.