ಡಾ. ರಾಮ ಭಟ್ ಬಾಳಿಕೆ ಹುಟ್ಟಿದ್ದು 02 ಅಕ್ಟೋಬರ್ 1943ರಂದು ಕಾಸರಗೋಡು ಜಿಲ್ಲೆಗೆ ಸೇರಿದ ಧರ್ಮತ್ತಡ್ಕ ಎಂಬ ಪುಟ್ಟ ಹಳ್ಳಿಯ ಬಾಳಿಕೆ ಎಂಬ ಮನೆಯಲ್ಲಿ. ಒಂದು ಮಧ್ಯಮ ವರ್ಗದ ಹವ್ಯಕ ಬ್ರಾಹ್ಮಣರ ತುಂಬು ಕುಟುಂಬದಲ್ಲಿ. ಅಡಿಕೆ ತೋಟ, ಬತ್ತದ ಗದ್ದೆ ಮತ್ತು ಗೇರು-ಮಾವು-ಹಲಸು ಹಾಗೂ ಇತರ ಹಲವು ಬಗೆಯ ಮರಗಳಿದ್ದ ಗುಡ್ಡಗಳ ನಡುವೆ. ಆಗ ತೀರಾ ಹಿಂದುಳಿದಿದ್ದ ಆ ಹಳ್ಳಿಯಲ್ಲಿದ್ದದ್ದು ಒಂದೇ ಒಂದು ಶಾಲೆ. ಅಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮಂಜೇಶ್ವರದಲ್ಲಿ ಹೈಸ್ಕೂಲು ಮುಗಿಸಿದಾಗ ‘ಇನ್ನು ಕಲಿತದ್ದು ಸಾಕು ರಾಮಾ, ತೋಟ-ಗದ್ದೆಗಳನ್ನು ನೋಡಿಕೋ’ ಎಂಬ ರಾಗ ಶುರುವಾಗಿತ್ತು. ಆದರೆ ಓದಿನಲ್ಲಿ ಯಾವಾಗಲೂ ಮುಂದಿದ್ದ ರಾಮಭಟ್ ಹಠ ಹಿಡಿದು ಕಾಸರಗೋಡು ಸರಕಾರಿ ಕಾಲೇಜಿಗೆ ಹೋಗಿ ಪಿಡಿಸಿಗೆ ಸೇರಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದರು. ಪುನಃ ಹಠ ಹಿಡಿದು ಆಗ ತುಂಬಾ ಅಪರೂಪವಾಗಿದ್ದ ಎಂಜಿನಿಯರಿಂಗ್ ಓದಲು ಸುರತ್ಕಲ್ಲಿನ ಕೆ.ಆರ್.ಇ.ಸಿ. ಸೇರಿದರು. ಅಲ್ಲಿಂದ ನಂತರ ಹಿಂದಿರುಗಿ ನೋಡಲೇ ಇಲ್ಲ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಬಿ.ಇ. ಮಾಡಿ ಪ್ರಾಧ್ಯಾಪಕರುಗಳ ಬೆಂಬಲದಿಂದ ಮದರಾಸಿನ ಐ.ಐ.ಟಿ.ನಲ್ಲಿ ಸ್ಕಾಲರ್ಶಿಪ್ ಪಡೆದು ಎಂ.ಟೆಕ್ ಮಾಡಿದರು. ಅಲ್ಲೂ ಓದಿನಲ್ಲಿ ಜಾಣ್ಮೆ ತೋರಿಸಿದ ಅವರನ್ನು ಅಲ್ಲಿನ ಪ್ರಾಧ್ಯಾಪಕರುಗಳು ಪಿ.ಹೆಚ್.ಡಿ. ಮಾಡುವಂತೆ ಒತ್ತಾಯಿಸಿದರು. ಮನೆಯಿಂದ ಓದು ಸಾಕೆಂಬ ಒತ್ತಾಯ ಬರುತ್ತಲೇ ಇತ್ತು. ಮೂರು ವರ್ಷದಲ್ಲಿ ಪಿ.ಹೆಚ್.ಡಿ. ಮುಗಿಸಿ ‘ಸೌಂಡ್ ಅಂಡ್ ವೈಬ್ರೇಷನ್ (ನಾದ ಮತ್ತು ಕಂಪನ)’ ಎಂಬ ವಿಷಯದ ಮೇಲೆ ಅವರು ಬರೆದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿತು. ಇಲ್ಲಿಗೆ ಅವರ ಸಾಧನೆಯ ಮೊದಲ ಘಟ್ಟ ಮುಗಿದಿತ್ತು.
ಮುಂದೆ ರಾಮಭಟ್ ತಿರುವನಂತಪುರ ಸಮೀಪದ ತುಂಬಾ ರಾಕೆಟ್ ಸೆಂಟರಿನಲ್ಲಿ (ISRO) ವಿಜ್ಞಾನಿಯಾಗಿ ಕೆಲಸಕ್ಕೆ ಸೇರಿದರು. ಅಲ್ಲಿದ್ದಾಗ ಮುಳ್ಳೇರಿಯಾ ಸಮೀಪದ ಕೊಲ್ಲಂಪಾರೆಯ ಪಾರ್ವತಿ ಭಟ್ ಅವರೊಂದಿಗೆ ವಿವಾಹವಾಯಿತು. ತುಂಬಾದಲ್ಲಿ ಸುಮಾರು ಮೂರು ವರ್ಷಗಳ ಕಾಲ ಕೆಲಸ ಮಾಡುವಷ್ಟರಲ್ಲಿ ಅವರಿಗೆ ಇಂಗ್ಲೆಂಡಿನ ಒಂದು ವಿಜ್ಞಾನ ಸಂಸ್ಥೆಯಿಂದ ಕರೆ ಬಂತು. ಅವರು ಪತ್ನಿಯೊಂದಿಗೆ ಅಲ್ಲಿಗೆ ಹೋಗಿ ಅಲ್ಲಿ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ಅವರಿಗೆ ಅಮೆರಿಕಾದ ನಾಸಾ (NASA)ದಿಂದ ಆಹ್ವಾನ ಬಂತು. ಅಲ್ಲಿ ಸುಮಾರು ಮೂರು ವರ್ಷ ಕೆಲಸ ಮಾಡುವಷ್ಟರಲ್ಲಿ ಕೆನಡಾದ ಮಾಂಟ್ರಿಯಲ್ ನ ಕಾನ್ ಕಾರ್ಡಿಯಾ ವಿಶ್ವವಿದ್ಯಾಲಯದವರು ಅವರನ್ನು ಅಹ್ವಾನಿಸಿದರು. ರಾಮಭಟ್ ಅಲ್ಲಿಗೆ ಹೋದವರು ಮುಂದೆ ಅಲ್ಲಿಯೇ ನೆಲೆಸಿ ಶೈಕ್ಷಣಿಕ (ವಿಜ್ಞಾನ) ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನಿತ್ತರು. ನೂರಾರು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಗಳನ್ನಿತ್ತರು ಮತ್ತು ಅನೇಕ ಗೋಷ್ಠಿಗಳ ಅಧ್ಯಕ್ಷತೆಯನ್ನು ವಹಿಸಿದರು. ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದರು. ಅನೇಕ ವಿಜ್ಞಾನ ಪಠ್ಯ ಪುಸ್ತಕಗಳನ್ನೂ ಬರೆದರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಡೀನ್ ಆದರು. ವಿಶ್ವವಿದ್ಯಾಲಯದ ಪ್ರೋ ವೈಸ್ ಚಾನ್ಸಲರ್ ಕೂಡಾ ಅದರು.
1983ರಲ್ಲಿ ನಾಸಾದಲ್ಲಿದ್ದಾಗ ರಾಮಭಟ್ಟರ ಅನನ್ಯ ಸಾಧನೆಯನ್ನು ಗುರುತಿಸಿ ಅವರಿಗೆ ನಾಸಾದ ಲಾಂಗ್ಲೆ ರಿಸರ್ಚ್ ಸೆಂಟರ್ ನವರು ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. ಕೆನಡಾ, ಅಮೆರಿಕಾ ಮತ್ತು ಇಂಡಿಯಾದ ಹಲವು ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಗಳ ಫೆಲೋಷಿಪ್ ಗಳು ಕೂಡಾ ಅವರಿಗೆ ದೊರಕಿದವು. ಭಾರತದಲ್ಲಿ ಮುಂಚೂಣಿಯಲ್ಲಿರುವ ಕುರುಕ್ಷೇತ್ರ ರೂರ್ಕಿ, ವೆಲ್ಲೋರ್ ಮೊದಲಾದ ಆಯ್ದ ಸಂಸ್ಥೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿದರು. ಇಂಡಿಯಾದ ಹಲವು ತಾಂತ್ರಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಅವಕಾಶವನ್ನು ಸಂಯುಕ್ತ ದೇಶಗಳ ಅಭಿವೃದ್ಧಿ ಯೋಜನೆಯಲ್ಲಿ ಅವರು ಪಡೆದರು.
ರಾಮಭಟ್ಟರಿಗೆ ಮೊದಲಿನಿಂದಲೂ ಸಾಹಿತ್ಯ-ಸಂಗೀತ-ಶಾಸ್ತ್ರೀಯ ನೃತ್ಯ-ಯಕ್ಷಗಾನ- ಹರಿಕಥೆ ಮೊದಲಾದ ಸಾಂಪ್ರದಾಯಿಕ ಕಲೆಗಳಲ್ಲಿ ಬಹಳ ಆಸಕ್ತಿ. ಚಿಕ್ಕಂದಿನಿಂದಲೂ ಸಣ್ಣ ಪುಟ್ಟ ಲೇಖನ, ಕಥೆ-ಕವನಗಳನ್ನು ಬರೆಯುತ್ತಿದ್ದ ಅವರು ಬದುಕಿನಲ್ಲಿ ನೆಲೆಯೂರಿದ ನಂತರ ಮೊದಲು ‘ನಗೆಗೆ ಇರಲಿ ಬಾಳಿಕೆ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದರು. ಬಾಲ್ಯದ ನೆನಪುಗಳು, ಸುತ್ತಮುತ್ತಲ ಬದುಕಿನ ಅವಲೋಕನ, ವಿದೇಶಗಳಲ್ಲಿ ತಮ್ಮ ಅನುಭವಗಳು-ಅನ್ನಿಸಿಕೆಗಳು, ಕೌಟುಂಬಿಕ ಬದುಕಿನಲ್ಲಿ ಕಂಡ ಸಂತೋಷಗಳು ಅವರ ಕಾವ್ಯಕ್ಕೆ ವಸ್ತುಗಳಾದವು. ಆ ಕವನ ಸಂಕಲನವನ್ನು ಕನ್ನಡ ಸಾಹಿತ್ಯ ಪರಿಷತ್ತು 1984ರಲ್ಲಿ ಪ್ರಕಟಿಸಿತು. ಆಗಿನ ಅಧ್ಯಕ್ಷರಾಗಿದ್ದ ಹೆಚ್.ಬಿ. ಜ್ವಾಲನಯ್ಯನವರು ಅದಕ್ಕೆ ಮುನ್ನುಡಿಯನ್ನೂ ಬರೆದಿದ್ದರು.
ರಾಮಭಟ್ ಅವರ ಎರಡನೆಯ ಕೃತಿ ‘ನಾದ’ ಎಂಬ ವಿಜ್ಞಾನ ಕೃತಿ. ಅದರಲ್ಲಿ ಅವರು ತಮ್ಮ ಪಿ.ಹೆಚ್.ಡಿ. ಸಂಶೋದನೆಗೆ ಸಂಬಂಧಪಟ್ಟ ಹಲವಾರು ವಿವರಗಳನ್ನು ಕನ್ನಡದಲ್ಲಿ ಬರೆದಿದ್ದರು. ಅವರ ಇಷ್ಟದ ವಿಷಯವಾದ ಸಂಗೀತ ಮತ್ತು ಸಂಗೀತೋಪಕರಣಗಳಲ್ಲಿ ನಾದ ಹೇಗೆ ಉಂಟಾಗುತ್ತದೆ ಎಂಬುದನ್ನೂ ವಿವರಿಸಿದರು. ಈ ಪುಸ್ತಕವನ್ನು 1986ರಲ್ಲಿ ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದರು. ರಾಮಭಟ್ ಅವರ ಮುಂದಿನ ಕೃತಿ ಇಂಗ್ಲಿಷ್ ನಲ್ಲಿ ಬರೆದ ‘The Divine Anjaneya-Story of Hanuman’ ಎಂಬ ಸುಮಾರು 230 ಪುಟಗಳ ಒಂದು ಕಾದಂಬರಿ. ಭಾರತೀಯ ಸಂಸ್ಕೃತಿ, ವೇದ-ಪುರಾಣ-ಇತಿಹಾಸಗಳ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದ ಅವರು ಆಂಜನೇಯನ ಹುಟ್ಟಿನ ಹಿನ್ನೆಲೆ, ಬೆಳವಣಿಗೆ ಮತ್ತು ಆತ ಮಾಡಿದ ಸಾಹಸಗಳು, ರಾಮಾಯಣ ಯುದ್ಧದಲ್ಲಿ ಅವನ ಪಾತ್ರ- ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಇದನ್ನು ಕೆನಡಾದ ಯೂನಿವರ್ಸ್ ಪ್ರಕಟಿಸಿದೆ ಮತ್ತು ಅದು ಅಮೆಝಾನ್ ನಲ್ಲೂ ಲಭ್ಯವಿದೆ. ಮುಂದೆ ಅವರು ಆಂಜನೇಯನ ಚೀನೀ ಪರಿಕಲ್ಪನೆ ಅಧಾರಿತ ‘Xuang Zhang’s Mission to the West with monkey King’ ಎನ್ನುವ 768 ಪುಟಗಳ ಬೃಹತ್ ಕಾದಂಬರಿಯನ್ನು ಬರೆದರು. ಇದು ಅವರ ಮಾಸ್ಟರ್ ಪೀಸ್ ಅನ್ನಬಹುದು. ಎಪಿಕ್ ಸಯಲಿಯಲ್ಲಿರುವ ಇದನ್ನು ಮಹಾಕಾದಂಬರಿ ಎಂದು ಹೇಳಬಹುದು. ಇದರ ಹಿಂದಿನ ಪ್ರೇರಣೆ ಅವರು ಒಂದು ವಿಜ್ಞಾನ ಸಮ್ಮೇಳನಕ್ಕೆಂದು ಮಾಡಿದ ಚೀನಾ ಭೇಟಿ. ತಮ್ಮ ಚೀನೀ ಸ್ನೇಹಿತ ಮಿಂಗ್ ಯುವಾನ್ ವೆನ್ ಅವರ ಬಳಿ ಚೀನಾದ ಯಾವುದಾದರೂ ಪೌರಾಣಿಕ ಕಥೆಯನ್ನು ಸೂಚಿಸಲು ಕೇಳಿಕೊಂಡಾಗ ಅವರು ‘Journey to the West’ ಎಂಬ ಕೃತಿಯನ್ನು ಓದಲು ಹೆಳಿದರು. ಅದ್ಭುತವಾದ ಆ ಕೃತಿಯಲ್ಲಿ ಬರುವ ‘ಸುನ್ ವೂಕಾಂಗ್’ ಎಂಬ ಪಾತ್ರವು ರಾಮಭಟ್ಟರಿಗೆ ಕುತೂಹಲಕರವಾಗಿ ತೋರಿತು. ಅದರ ಆಧಾರದಲ್ಲಿ ಇಂಗ್ಲೀಷಿನಲ್ಲಿ ಒಂದು ಕೃತಿಯನ್ನು ಬರೆಯುವ ಆಲೋಚನೆ ಬಂತು. (ಇದೆ ಸಮಯದಲ್ಲಾಗಿತ್ತು ಚೀನಿಯರಿಗೆ ಆಂಜನೇಯನನ್ನು ಪರಿಚಯಿಸಲೆಂದು ಅವರು ‘ಆಂಜನೇಯ’ ಕೃತಿಯನ್ನು ಬರೆದದ್ದು. ಕೂಡಲೇ ಅದು ಚೀನೀ ಭಾಷೆಗೆ ಅನುವಾದಗೊಂಡಿತು.) ಆಂಜನೇಯನ ಕುರಿತು ಚೀನೀ ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಹಲವಾರು ವಿಚಾರಗಳ ಕುರಿತು ತಿಳಿದುಕೊಂಡ ಭಟ್ಟರು ಅದರೊಂದಿಗೆ ಭಾರತೀಯ ಕಲ್ಪನೆಗಳಿಗಿರುವ ಅದ್ಭುತ ಸಾಮ್ಯವನ್ನು ಗುರುತಿಸಿ ಇಂಗ್ಲೀಷಿಗೆ ಅನುವಾದಗೊಂಡ ಆ ಪುರಾಣಗಳನ್ನು ಓದಿ ಒಂದು ಕಾದಂಬರಿಯನ್ನು ಬರೆದು ಬಿಟ್ಟರು. ಚೀನಾದ ಪಶ್ವಿಮಕ್ಕಿರುವ ಭಾರತದಿಂದ ಚೀನಿ ಬೌದ್ಧ ಪುರೋಹಿತನಾದ ಝುವಾನ್ ಝಾಂಗ್ ಭಾರತಕ್ಕೆ ವಾನರ ರಾಜ ಸುನ್ ವೂಕಾಂಗ್ ನ ಜತೆಗೆ ಬೌದ್ಧ ಗ್ರಂಥಗಳನ್ನು ತರಲು ಹೋಗುತ್ತಾನೆ. ದಾರಿಯಲ್ಲಿ ಬರುವ ಸಾವಿರಾರು ಅಡೆತಡೆಗಳನ್ನು ಎದುರಿಸಿ ಬೌದ್ಧರ ಪವಿತ್ರ ಗ್ರಂಥಗಳನ್ನು ತನ್ನ ದೇಶಕ್ಕೆ ತರುವ ಕೆಲಸದಲ್ಲಿ ‘ಮಂಕಿ ಕಿಂಗ್’ನ ಸಂಪೂರ್ಣ ಸಹಕಾರ ಸಿಕ್ಕಿ ಅವನ ಉದ್ದೇಶ ಫಲಿಸುವುದೇ ಈ ಕೃತಿಯ ವಸ್ತು. ಅದನ್ನೂ ಡೆಲ್ಲಿಯ ಆದಿತ್ಯ ಪ್ರಕಾಶನದವರು 2014ರಲ್ಲಿ ಪ್ರಕಟಿಸಿದರು.
ರಾಮಭಟ್ಟರ ಕೊನೆಯ ಕೃತಿ ‘ಬಾಳಿಕೆಯಿಂದ ಕೆನಡಾಕ್ಕೆ’ ಎಂಬ ಅವರ ಆತ್ಮಕಥನ. ಇದು ಎಪ್ಪತ್ತೆರಡು ಪುಟಗಳ ಒಂದು ಪುಟ್ಟ ಕೃತಿ. ಇದರಲ್ಲಿ ಅವರು ತಮ್ಮ ಬದುಕಿನ ಮುಖ್ಯ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಸ್ವತಃ ಹಾಡುಗಾರರೂ ಆಗಿರುವ ರಾಮಭಟ್ ಅವರಿಗೆ ಸಂಗೀತ ವಿದುಷಿಯೇ ಮಡದಿಯಾಗಿ ಸಿಕ್ಕಿದ್ದು ಅವರ ಅದೃಷ್ಡ. ಪ್ರಾಸಬದ್ಧವಾಗಿರುವ ಕವಿತೆಗಳನ್ನು ಬರೆಯುವ ಅವರ ಹಾಡುಗಳಿಗೆ ಪಾರ್ವತಿಯವರೇ ರಾಗ ಹಾಕಿ ಕೆನಡಾದ ಕನ್ನಡ ಕೂಟದಲ್ಲಿ ತಮ್ಮ ಮಕ್ಕಳನ್ನು ಸೇರಿಸಿಕೊಂಡು ಎಲ್ಲರೂ ಜತೆಯಾಗಿ ಹಾಡುತ್ತಿದ್ದರು. ಮಡದಿಯ ಪ್ರೋತ್ಸಾಹದಿಂದ ಅವರು ಮೃದಂಗ ನುಡಿಸುವುದನ್ನೂ ಕಲಿತರು. ಎಂಬತ್ತರ ದಶಕದಲ್ಲಿ ಒಮ್ಮೆ ಕನ್ನಡ ಕೂಟದ ವಾರ್ಷಿಕೋತ್ಸವದಲ್ಲಿ ಭಟ್ಟರು ರಚಿಸಿದ ‘ಪುರಂದರದಾಸ’ ರೂಪಕವು ಪ್ರದರ್ಶಿಸಲ್ಪಟ್ಟು ಬಹಳ ಜನಮನ್ನಣೆಯನ್ನು ಗಳಿಸಿತ್ತು. ಅವರು ಮಾಡಿದ ‘ಧರ್ಮಸ್ಥಳ ಕ್ಷೇತ್ರ ಮಹಾತ್ಮೆ’ ಎಂಬ ಹರಿಕಥೆಯೂ ಜನರನ್ನು ರಂಜಿಸಿತ್ತು. ಭಟ್ಟರು ತಮ್ಮ ಮಗಳಂದಿರಾದ ಮಮತಾ ಮತ್ತು ಅಪರ್ಣಾ ಇಬ್ಬರಿಗೂ ಭಾರತೀಯ ಕಲೆಗಳಾದ ನೃತ್ಯ- ಸಂಗೀತಗಳನ್ನು ಪ್ರಸಿದ್ಧ ಗುರುಗಳ ಮೂಲಕ ಕಲಿಸಿದ್ದರಲ್ಲದೆ ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡಲೂ ತರಬೇತಿ ನೀಡಿದ್ದರು. ಇಂದು ಇಬ್ಬರು ಮಕ್ಕಳೂ ತಮ್ಮ ವೈದ್ಯ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಒಳ್ಳೆಯ ಹೆಸರು ಗಳಿಸಿದ್ದಾರೆ.
ಇಂದು ಎಂಬತ್ತೊಂದರ ಇಳಿವಯಸ್ಸಿನ ರಾಮ ಭಟ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಸರಾಗವಾಗಿ ಓದುವುದಾಗಲಿ ಬರೆಯುವುದಾಗಲಿ ಅವರಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತಿಯಲ್ಲಿದ್ದರೂ ಅವರೀಗ ಕೃತಿಗಳನ್ನು ರಚಿಸುತ್ತಿಲ್ಲ. ಆದರೆ ಅವರು ಈಗಾಗಲೇ ಬರೆದಿರುವ ಸಾವಿರಾರು ಪುಟಗಳ ಸಾಹಿತ್ಯವು ಜನರಿಗೆ ಇನ್ನಾದರೂ ತಲುಪಬೇಕಾಗಿದೆ ಎಂಬುದು ನನ್ನ ಪ್ರಾಮಾಣಿಕ ಅನ್ನಿಸಿಕೆ.
ವಿಮರ್ಶಕರು ಡಾ. ಪಾರ್ವತಿ ಜಿ. ಐತಾಳ್ :
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.