ಸಾಧನೆ ಎನ್ನುವುದು ಸಾಧಕನ ಸೊತ್ತು ಹೊರತು ಸೋಮಾರಿಯದ್ದಲ್ಲ ಎನ್ನುವುದು ಯುವ ಸಮುದಾಯಕ್ಕೆ ಸರಿ ತೋರಿದ ಅದರ್ಶನೀಯರು ಇವರು.
20.10.2004ರಲ್ಲಿ ಕುಂದಾಪುರದ ಬಿ ಚಂದ್ರಶೇಖರ ಮಯ್ಯ ಹಾಗೂ ಬಿ ನಿರ್ಮಲ ಮಯ್ಯ ದಂಪತಿಯ ಸುಪುತ್ರನಾಗಿ ಭುವಿಯ ಬೆಳಕನ್ನು ಕಂಡರು ಬಿ ಪನ್ನಗ ಮಯ್ಯ. ಪ್ರಸ್ತುತ ದ್ವಿತೀಯ ವರ್ಷದ ಇಂಜಿನಿಯರಿಂಗ್ ಅನ್ನು ಬೆಂಗಳೂರಿನ Dayanand Sagar Academy of Technology and Management ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಬಾಲ್ಯದಿಂದಲೂ ಯಕ್ಷಗಾನ ನೋಡುವ ಅಭ್ಯಾಸ ಇತ್ತು. 8ನೇ ತರಗತಿಯಲ್ಲಿ ಶಾಲೆಯಲ್ಲೇ ನಡೆಯುತ್ತಿದ್ದ ಕ್ಲಾಸ್ ಅಲ್ಲಿ ಕಡ್ಲೆ ಗಣಪತಿ ಗುರುಗಳಲ್ಲಿ ತಾಳ ಮತ್ತು ಹೆಜ್ಜೆ ಕಲಿತು ನಂತರ ಕೋಟ ಶಿವಾನಂದರು ಮತ್ತು ಸುಜನ ಹಾಲಾಡಿ ಅವರ ಚಂಡೆಗಾರಿಕೆ ಕೇಳಿ ಇಷ್ಟಪಟ್ಟು ಚಂಡೆಯ ಕಡೆಗೆ ಹೋದೆ. ತೆಕ್ಕಟ್ಟೆ ಕೇಂದ್ರದಲ್ಲಿ ದೇವದಾಸ್ ರಾವ್ ಕೂಡ್ಲಿ ಇವರಲ್ಲಿ ಸ್ವಲ್ಪ ಕಾಲ ಅಭ್ಯಾಸ ಮಾಡಿ ಆಮೇಲೆ ಕೋಟ ಶಿವಾನಂದರಲ್ಲಿ ಅಭ್ಯಾಸ ಮುಂದುವರಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಮದ್ದಳೆ ಕಲಿಯಬೇಕೆಂದು ರಾಘವೇಂದ್ರ ಹೆಗಡೆ ಯಲ್ಲಾಪುರ ಇವರಲ್ಲಿ ಮದ್ದಳೆಯ basicಗಳನ್ನು ಅಭ್ಯಾಸ ಮಾಡಿರುತ್ತೇನೆ. ಯಕ್ಷಗಾನದಲ್ಲಿ ನನಗೆ ತಿಳಿಯದೇ ಇದ್ದ ಹಲವು ವಿಷಯಗಳನ್ನು ಕೃಷ್ಣಮೂರ್ತಿ ತುಂಗರು ಬೆಂಗಳೂರಿನಲ್ಲಿ ನನಗೆ ಹೇಳಿ ಕೊಡುತ್ತಿದ್ದಾರೆ.
ನೆಚ್ಚಿನ ಚೆಂಡೆ ಹಾಗೂ ಮದ್ದಳೆವಾದಕರು:-
ಕೋಟ ಶಿವಾನಂದ, ಮಂದಾರ್ತಿ ರಾಮಕೃಷ್ಣ, ರಾಕೇಶ್ ಮಲ್ಯ, ಗಣೇಶ ಗಾಂವ್ಕರ್, ಶ್ರೀಕಾಂತ್ ಶೆಟ್ಟಿ, ಸುಜನ ಹಾಲಾಡಿ,
ರಾಘವೇಂದ್ರ ಹೆಗಡೆ, ಪರಮೇಶ್ವರ ಭಂಡಾರಿ, ಕವಾಳೆ ಗಣಪತಿ ಭಾಗ್ವತ್, ಸುನಿಲ್ ಭಂಡಾರಿ, ಶಶಾಂಕ್ ಆಚಾರ್ಯ, ಅಕ್ಷಯ ಆಚಾರ್ಯ.
ಯಕ್ಷಗಾನ ರಂಗದಲ್ಲಿ ಬರುವ ಎಲ್ಲಾ ಪೌರಾಣಿಕ ಪ್ರಸಂಗಗಳು ಹಾಗೂ ಎಲ್ಲಾ ಭಾಗವತರು ನನ್ನ ನೆಚ್ಚಿನವರು ಎಂದು ಬಿ ಪನ್ನಗ ಮಯ್ಯ ಹೇಳುತ್ತಾರೆ.
ಯಕ್ಷಗಾನದಲ್ಲಿ ಮುಂಚೆ ವೇಷ ಮಾಡಿದ್ದೆ. ಇನ್ನು ವೇಷ ಅಥವಾ ಭಾಗವತಿಕೆ ಮಾಡುವ ಆಸಕ್ತಿ ಇಲ್ಲ. ಮದ್ದಳೆ ಸರಿಯಾಗಿ ಬಾರಿಸಲು ಬೇಕಾದಷ್ಟು ಕಲಿತು ರಂಗದಲ್ಲಿ ಬಾರಿಸಬೇಕು ಅಂತ ಇದೆ ಎಂದು ಹೇಳುತ್ತಾರೆ ಮಯ್ಯರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಸಾಮಾಜಿಕ ಜಾಲತಾಣದ ಪ್ರಭಾವದಿಂದ ಯಕ್ಷಗಾನಕ್ಕೆ ಹೆಚ್ಚು ಪ್ರಚಾರ, ಕಲಾವಿದರಿಗೂ ಪ್ರಚಾರ ಬಹಳ ಬೇಗ ಸಿಕ್ತಿದೆ. ಯಕ್ಷಗಾನ ತರಗತಿಗಳು ಹೆಚ್ಚಾದ ಕಾರಣ ಯಕ್ಷಗಾನ ತಿಳಿದವರ ಸಂಖ್ಯೆ ಹೆಚ್ಚುತ್ತಿದೆ, ಇದರಿಂದ ಪ್ರೇಕ್ಷಕರ ಗುಣಮಟ್ಟ ಹೆಚ್ಚಾಗುತ್ತದೆ ಹಾಗೂ ಮೇಳಗಳ ಸಂಖ್ಯೆ ಹೆಚ್ಚಾಗಿ ಪ್ರದರ್ಶನದ ಗುಣಮಟ್ಟ ಕಡಿಮೆಯಾಗುತ್ತಿದೆ.
ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರು ಕಾಲಮಿತಿಗೆ adjust ಆಗಿದ್ದಾರೆ, ಲೈವ್ ಸ್ಟ್ರೀಮಿಂಗ್ ಮೂಲಕ ಯಕ್ಷಗಾನ ನೋಡುವವರು ಜಾಸ್ತಿಯಾಗಿದ್ದಾರೆ. ಆಟಕ್ಕೆ ಬರುವವರು ಕಡಿಮೆ ಆಗಿದ್ದಾರೆ. ಲೈವ್ ಸ್ಟ್ರೀಮಿಂಗ್ ನೋಡಿ ಕಾಮೆಂಟ್ ಮಾಡುತ್ತಾರೆ. ಇವರಿಗೆ ಆಟದ ಜಾಗದಲ್ಲಿ ಏನಾಗುತ್ತದೆ ಗೊತ್ತಿರುವುದಿಲ್ಲ. ದೇವಿ ಮಹಾತ್ಮೆ ಪ್ರಸಂಗದ ಲೈವ್ ಅಲ್ಲಿ ಚಂಡೆಗೆ ಮೈಕ್ ಕೊಡದ ಕಾರಣ ಲೈವ್ ಅಲ್ಲಿ ಚಂಡೆ ನಿಧಾನವಾಗಿ ಕೇಳಿಸುತ್ತಿದೆ ಎಂದು “ಈ ಆಟ ಮಾಡ್ಸುವರಿಗೆ ಬೇರೆ ಚಂಡೆಯವ್ರ್ ಸಿಕ್ಲ್ಯಾ” , “ಡಬ್ಬಿ ಬಡ್ದಾಂಗ್ ಇತ್” , “ಚೆಂಡೆಯರನ್ ಒಂದ್ ಎಬ್ಸಿ” , “ಇವ್ಕೆಲ್ಲಾ ಬಾಲಗೋಪಾಲಕ್ಕಿಂತ ಜಾಸ್ತಿ ಕೂರ್ಸುಕ್ ಆಗ” ಈ ತರಹದ ಕಾಮೆಂಟ್ಸ್ ಎಲ್ಲರ ಎದುರಿಗೆ ಮಾಡಿದ್ದರು. ಇದರಿಂದ ಒಬ್ಬ ಚಿಕ್ಕ ವಯಸ್ಸಿನ ಕಲಾವಿದನಿಗೆ ಹೇಗನಿಸಿರಬಹುದು ಎಂಬುದನ್ನು ಅವರ್ಯಾರೂ ಯೋಚಿಸಲ್ಲ. ಇಂತದನ್ನು ಇನ್ನಾದರೂ ಯಾವ ಕಲಾವಿದರಿಗೂ ಮಾಡಬೇಡಿ. ಯಾವುದೇ ತಪ್ಪು ಯಾವುದೇ ಕಲಾವಿದ ಮಾಡಿದಾಗ ಪ್ರೇಕ್ಷಕ ಚೌಕಿಗೆ ಬಂದು ಕಲಾವಿದರ ಹತ್ತಿರ ಹೇಳಿದರೆ ಅವರು ಆ ತಪ್ಪನ್ನು ತಿದ್ದಿಕೊಳ್ಳಬಹುದು.
ಪ್ರೇಕ್ಷಕರಲ್ಲಿ ಒಂದು ವಿನಮ್ರ ವಿನಂತಿ ಹಿಂದೆ ಮುಂದೆ ಗೊತ್ತಿಲ್ಲದೇ ಕಾಮೆಂಟ್ಸ್ ಮಾಡಬೇಡಿ ಮತ್ತು ಸಾಮಾಜಿಕ ಜಾಲತಾಣಕ್ಕೆ ತುಂಬಾ ಶಕ್ತಿ ಇದೆ, ಆ ಶಕ್ತಿ ಪ್ರತಿಭೆ ಇರುವವರನ್ನ ಪ್ರಚಾರ ಮಾಡಲು ಉಪಯೋಗಿಸಿ. ಒಳ್ಳೇದು ಮಾಡಿದಾಗ ಹೇಳುವ ಪ್ರೇಕ್ಷಕರಿಗಿಂತ ತಪ್ಪು ಮಾಡಿದಾಗ ಚೌಕಿಗೆ ಬಂದು ಹೇಳುವ ಪ್ರೇಕ್ಷಕರು ಹೆಚ್ಚಾಗಬೇಕು ಎನ್ನುವುದು ನನ್ನ ಅಭಿಪ್ರಾಯ.
ವಿದ್ಯಾಭ್ಯಾಸದ ಸಲುವಾಗಿ ಯಾವುದೇ ಮೇಳಗಳಲ್ಲಿ ಪೂರ್ತಿ ತಿರುಗಾಟ ಮಾಡಲಿಲ್ಲ. ಹವ್ಯಾಸಿಯಾಗಿ ಹಟ್ಟಿಯಂಗಡಿ, ಸಾಲಿಗ್ರಾಮ, ಅಮೃತೇಶ್ವರಿ, ಹಾಲಾಡಿ, ಸೌಕೂರು , ಮೇಗರವಳ್ಳಿ ಹಾಗೂ ಇನ್ನಿತರ ಮೇಳಗಳಲ್ಲಿ ಸೇವೆ ಮಾಡಿದ ಅನುಭವ. ಈಗ ಬೆಂಗಳೂರಿನಲ್ಲಿ ಯಕ್ಷಕಲಾ ಅಕಾಡೆಮಿ, ಯಕ್ಷ ಸಂಭ್ರಮ, ಯಕ್ಷದೇಗುಲ ಈ ತಂಡಗಳಲ್ಲಿ ಚೆಂಡೆ ಕಲಾವಿದನಾಗಿ ಸೇವೆ ಮಾಡಿದ ಅನುಭವ ಇವರದು. ಬಿ ಪನ್ನಗ ಮಯ್ಯರು ಒಟ್ಟು 6 ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸನ್ಮಾನ ಹಾಗೂ ಪ್ರಶಸ್ತಿ:-
ಗಜೇಂದ್ರ ಆಚಾರ್ ಕೋಣಿ ಇವರ ಯಕ್ಷ ರಾತ್ರಿ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ.
ರಾಘವೇಂದ್ರ ಮಯ್ಯ ಹಾಲಾಡಿ ಇವರ ಮಯ್ಯ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ಯುವ ಪ್ರತಿಭಾ ಪುರಸ್ಕಾರ.
ಭಾಸ್ಕರ್ ಕಾಮತ್ ಇವರ ಉಪ್ಪಿನಕುದ್ರು ಗೊಂಬೆಮನೆಯ ಮಾಸಿಕ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ.
ಕಲೋತ್ಸವ 2021 (traditional instrumental competition) ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ.
ತಂದೆ, ತಾಯಿ ಪ್ರೋತ್ಸಾಹ ಹಾಗೂ ಗುರು-ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ ಬಿ ಪನ್ನಗ ಮಯ್ಯ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ.,
ಸುಪ್ರಭಾತ, ಶಕ್ತಿನಗರ ಮಂಗಳೂರು.