ಹಂಗಾರಕಟ್ಟೆ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಐವತ್ತರ ಸಂಭ್ರಮ ಪ್ರಯುಕ್ತ ‘ಯಕ್ಷ ಸಪ್ತೋತ್ಸವ 2024’ವನ್ನು ದಿನಾಂಕ 21 ಅಕ್ಟೋಬರ್ 2024ರಿಂದ 27 ಅಕ್ಟೋಬರ್ 2024ರವರೆಗೆ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 21 ಅಕ್ಟೋಬರ್ 2024ರಂದು ವಿದ್ವಾನ್ ಅಶೋಕ ಆಚಾರ್ ಇವರಿಂದ ಭಜನೆ ಹಾಡುಗಳ ಬಳಿಕ ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಮದ್ ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀ ಕೃಷ್ಣ ಜನ್ಮ’ ಎಂಬ ಪ್ರಸಂಗದ ಯಕ್ಷಗಾನ ನಡೆಯಲಿದೆ.
ದಿನಾಂಕ 22 ಅಕ್ಟೋಬರ್ 2024ರಂದು ಶ್ರೀ ಅಚ್ಚುತ ಪೂಜಾರಿ ಮತ್ತು ಶ್ರೀ ಚಂದ್ರಕಾಂತ ನಾಯರಿ ಇವರಿಂದ ಸುಗಮ ಸಂಗೀತ ಬಳಿಕ ‘ಕಾಲಯವನ ಸಂಹಾರ’ ಯಕ್ಷಗಾನ, ದಿನಾಂಕ 23 ಅಕ್ಟೋಬರ್ 2024ರಂದು ಪ್ರಾಚಾರ್ಯ ನಾರಾಯಣಪ್ಪ ಉಪ್ಪೂರ ಇವರ ನೆನಪಿನಲ್ಲಿ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಹೂವಿನ ಕೋಲು ಪ್ರದರ್ಶನ, ಸಭಾ ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ ಶ್ರೀ ಹೆರಂಜಾಲು ಗೋಪಾಲ ಗಾಣಿಗ ಇವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಬಳಿಕ ‘ಪ್ರದ್ಯುಮ್ನ ವಿಜಯ’ ಯಕ್ಷಗಾನ, ದಿನಾಂಕ 24 ಅಕ್ಟೋಬರ್ 2024ರಂದು ಭಾಗವತ ಕಾಳಿಂಗ ನಾವಡ ನೆನಪಿನಲ್ಲಿ ವಿಪ್ರ ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ನೃತ್ಯ ವೈವಿಧ್ಯ ಹಾಗೂ ಯಕ್ಷಗಾನ ಪ್ರಸಾದನ ಕಲಾವಿದರಾದ ಶ್ರೀ ನರಸಿಂಹ ಮಡಿವಾಳ ಇವರಿಗೆ ‘ನಮ್ಮ ಕಾಳಿಂಗ ಪ್ರಶಸ್ತಿ’ ಪ್ರದಾನವಾಗಲಿದೆ. ಬಳಿಕ ‘ಶ್ಯಮಂತಕ ವಿಲಾಸ’ ಯಕ್ಷಗಾನ, ದಿನಾಂಕ 25 ಅಕ್ಟೋಬರ್ 2024ರಂದು ಛಾಯಾ ತರಂಗಿಣಿ ಸಂಗೀತ ಶಾಲೆ ಕೋಟ ಇವರಿಂದ ‘ಗಾನ ವೈಭವ’ ಹಾಗೂ ‘ಉಷಾ ಪರಿಣಯ’ ಯಕ್ಷಗಾನ, ದಿನಾಂಕ 26 ಅಕ್ಟೋಬರ್ 2024ರಂದು ಮಹಿಳಾ ವೇದಿಕೆ ಸಾಲಿಗ್ರಾಮ ಇವರಿಂದ ಸಾಂಸ್ಕೃತಿಕ ವೈಭವ ಹಾಗೂ ‘ಗಾಂಧಾರಿ ಶಾಪ’ ಯಕ್ಷಗಾನ ಬಯಲಾಟ ನಡೆಯಲಿದೆ.
ದಿನಾಂಕ 27 ಅಕ್ಟೋಬರ್ 2024ರಂದು ಕಲಾಕೇಂದ್ರದ ಸಂಸ್ಥಾಪಕರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾದ್ಯಾಯರಾದ ಐರೋಡಿ ಸದಾನಂದ ಹೆಬ್ಬಾರ್ ನೆನಪಿನಲ್ಲಿ ಶ್ರೀ ನಟರಾಜ ನೃತ್ಯ ನಿಕೇತನ ಚಿತ್ರಪಾಡಿ ಸಾಲಿಗ್ರಾಮ ವಿದುಷಿ ಭಾಗೀರತಿ ಎಂ. ರಾವ್ ಇವರ ಶಿಷ್ಯರಿಂದ ‘ನೃತ್ಯ ಸೌರಭ’ ಪ್ರಸ್ತುತಗೊಳ್ಳಲಿದೆ. ಸಭಾ ಕಾರ್ಯಕ್ರಮದಲ್ಲಿ ಬಹುಮುಖಿ ಪ್ರತಿಭೆಯ ಮುಖ್ಯೋಪಾದ್ಯಾಯರಾದ ಶ್ರೀ ಗುಂಡ್ಮಿ ರಾಮಚಂದ್ರ ಐತಾಳ ಇವರಿಂದ ‘ಸದಾನಂದ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಬಳಿಕ ‘ಕೃಷ್ಣ ಪರಂದಾಮ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.