ಮಲಯಾಳಂನ ಸಾರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಉರೂಬ್ (ಪಿ.ಸಿ. ಕುಟ್ಟಿಕೃಷ್ಣನ್) ಅವರ ‘ಸುಂದರಿಗಳುಂ ಸುಂದರನ್‌ಮಾರುಂ’ ಎಂಬ ಕಾದಂಬರಿಯೂ ಒಂದು. ಇದು ಮಲಬಾರಿನ ಸಾಂಸ್ಕೃತಿಕ ಇತಿಹಾಸವಾಗಿದ್ದು ಮೂರು ತಲೆಮಾರುಗಳ ಸಾಮಾಜಿಕ ಮತ್ತು ರಾಜಕೀಯ ವಿಚಾರಗಳನ್ನು ಒಳಗೊಂಡಿದೆ. ಮಹಾನುಭಾವರೆಂದು ಹೊಗಳಿಸಿಕೊಂಡ ಚಾರಿತ್ರಿಕ ವ್ಯಕ್ತಿಗಳನ್ನು, ದಿನಾಂಕಗಳನ್ನು ಮತ್ತು ಘಟನೆಗಳನ್ನು ಕೈಬಿಟ್ಟು ಸಾಂಸ್ಕೃತಿಕ ಸಂದರ್ಭಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಜನಸಾಮಾನ್ಯರ ಜೀವನಾನುಭವಗಳನ್ನು ಮೂರ್ತಗೊಳಿಸಿದೆ. ಖಿಲಾಫತ್ ಚಳುವಳಿ, ವಿಶ್ವ ಮಹಾಯುದ್ಧಗಳು ಮತ್ತು 1942ರ ಕ್ವಿಟ್ ಇಂಡಿಯಾ ಚಳುವಳಿವರೆಗಿನ ನಲುವತ್ತು ವರ್ಷಗಳ ವ್ಯಾಪ್ತಿಯಲ್ಲಿ ಮಲಬಾರ್ ಪ್ರದೇಶದ ಕೆಲವು ಕುಟುಂಬಗಳ ಕತೆಯನ್ನು ಹೇಳುವ ಕಾದಂಬರಿಯು ಉತ್ತಮ ಪ್ರಯೋಗಶೀಲ ಕೃತಿಯಾಗಿದೆ. ಈ ಕಾದಂಬರಿಯಲ್ಲಿರುವ ಏಳು ಅಧ್ಯಾಯಗಳು ಸ್ವತಂತ್ರ ನೀಳ್ಗತೆಗಳಾಗಿಯೂ ಓದಿಸಿಕೊಳ್ಳುತ್ತವೆ. ಹಂಪಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ ಕುಂಟಾರ್ ಅವರು ಈ ಕಾದಂಬರಿಯನ್ನು ‘ಸುಂದರಿಯರು ಸುಂದರರು’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿರುವ ಪ್ರಪಂಚದಲ್ಲಿ ಮನುಷ್ಯತ್ವದ ಸೆಲೆಯಿಲ್ಲದಂತೆ ಹೊಗೆಯಾಡುತ್ತಿರುವ ದ್ವೇಷ, ಜಿದ್ದು, ಸ್ವಾರ್ಥಗಳು ಹೆಣೆಯುವ ನರಕದ ಬೇಲಿಯೊಳಗೆ ನೆಮ್ಮದಿಯ ಉಸಿರಿಗೆ ಆಸ್ಪದವಿಲ್ಲದೆ ನಲುಗುವ ಸಂದರ್ಭಗಳಲ್ಲಿಯೂ ಹೃದಯದಲ್ಲಿ ಪ್ರೀತಿ ಪ್ರೇಮಗಳನ್ನು ತುಂಬಿಕೊಂಡು ಮಾನವೀಯತೆಯನ್ನು ಮೆರೆಯುವ ಪಾತ್ರಗಳು ಲೇಖಕರ ಕಣ್ಣಿಗೆ ಸುಂದರಿಯರು ಮತ್ತು ಸುಂದರರಾಗಿ ಕಾಣಿಸಿಕೊಂಡಿದ್ದಾರೆ. ಮೂವತ್ತರಷ್ಟು ಪಾತ್ರಗಳಲ್ಲಿ ಹನ್ನೆರಡು ಮುಖ್ಯಪಾತ್ರಗಳನ್ನು ಹೊಂದಿದ ಕಾದಂಬರಿಯು ಕಥನ ತಂತ್ರದ ದೃಷ್ಟಿಯಿಂದ ವಿಶಿಷ್ಟವಾಗಿದೆ.
ಒಂದನೇ ಲೋಕ ಮಹಾಯುದ್ಧದಿಂದಾಗಿ ಉಂಟಾದ ನಷ್ಟವನ್ನು ಭರಿಸುವ ಉದ್ದೇಶದಿಂದ ಬ್ರಿಟಿಷರ ಧನದಾಹವು ಭಾರತೀಯರ ನೆತ್ತರನ್ನು ಹೀರುತ್ತಿದ್ದಂತೆ ಸ್ವಾತಂತ್ರ್ಯ ಹೋರಾಟದ ಆವೇಶವು ಭಾರತದ ಮೂಲೆ ಮೂಲೆಗಳಲ್ಲಿ ತುಂಬಿ ತುಳುಕಿತು. ಅದೇ ಹೊತ್ತಿನಲ್ಲಿ ಇಂಗ್ಲೆಂಡಿನ ರಾಣಿಯು ತುರ್ಕಿಯ ಖಲೀಫನನ್ನು ಪದಚ್ಯುತಗೊಳಿಸಿದಾಗ ಹುಟ್ಟಿದ ಖಿಲಾಫತ್ ಚಳುವಳಿಯು ಕೇರಳದಲ್ಲೂ ವ್ಯಾಪಿಸಿ ಕೋಮುಗಲಭೆಗೆ ಕಾರಣವಾಯಿತು. ಹಿಂದೂ ಮುಸ್ಲಿಮರು ಪರಸ್ಪರ ಹೊಡೆದಾಡಿ ಪ್ರಾಣವನ್ನು ತೆತ್ತರು. ಹಿಂದೂಗಳು ಮತಾಂತರ ಮತ್ತು ಮಾನಭಂಗಗಳಿಗೆ ಒಳಗಾದರು. ಬ್ರಿಟಿಷರು ಆ ದಂಗೆಯನ್ನು ದಮನಿಸಿದರಾದರೂ ಮಲಬಾರಿನ ಸಾಮಾಜಿಕ ಬದುಕಿನ ಮೇಲೆ, ನಂಬೂದಿರಿ, ನಾಯರ್ ಮನೆತನ ಮತ್ತು ಪರಂಪರೆಗಳ ಮೇಲೆ ದುಷ್ಪರಿಣಾಮಗಳನ್ನು ಬೀರಿದವು. ಕುಂಜುಕುಟ್ಟಿಯು ಇದಕ್ಕೆ ಜ್ವಲಂತ ಉದಾಹರಣೆಯಾಗಿದ್ದಾಳೆ. ಮಲಬಾರ್ ದಂಗೆ ಎಂಬ ಹೆಸರಿನಲ್ಲಿ ಸ್ಪೋಟಿಸಿದ ಹಿಂದೂ ಮುಸ್ಲಿಂ ಕೋಮುಗಲಭೆಯ ದಿನಗಳಲ್ಲಿ ಯಾರಿಂದಲೋ ಬಸಿರಾಗಿ ಹೆತ್ತು ಸಾಯುವ ಕುಂಜುಕುಟ್ಟಿಯನ್ನು ಆಧುನಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಶೋಷಣೆ ಮತ್ತು ದುರಂತದ ಪ್ರತೀಕವಾಗಿಯೂ ನೋಡಬಹುದು.
ಖಿಲಾಫತ್ ಚಳುವಳಿಯ ಅಂಗವಾಗಿ ಹುಟ್ಟಿದ ಮಲಬಾರ್ ದಂಗೆಗೆ ಬಲಿಯಾಗಿ, ಬಸಿರಾಗಿ ದಿಕ್ಕುಗೆಟ್ಟ ಕುಂಜುಕುಟ್ಟಿಗೆ ಕೆಲವು ವರ್ಷಗಳ ಹಿಂದೆ ತನ್ನ ಪ್ರಿಯಕರನಾಗಿದ್ದ ರಾಮನ್ ಮಾಸ್ತರರ ಆಸರೆಯು ದೊರೆತ ಬಳಿಕ ಕಾದಂಬರಿಯು ಮುಖ್ಯ ತಿರುವನ್ನು ಪಡೆದುಕೊಳ್ಳುತ್ತದೆ. ಒಂಭತ್ತು ವರ್ಷಗಳಷ್ಟು ಹಿಂದಿನ ದಿನಗಳಲ್ಲಿ ಪ್ರತಿಷ್ಠಿತ ನಾಯರ್ ಕುಟುಂಬದೊಂದಿಗಿನ ಒಡನಾಟ, ಕುಂಜುಕುಟ್ಟಿಯ ಮೇಲಿನ ಪ್ರೀತಿ, ಆಕೆಯು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಗೆ, ಮನದಲ್ಲಿ ಉಳಿದುಕೊಂಡಿರುವ ಪ್ರಶ್ನೆಗಳು ಮಾಸ್ತರರ ಪ್ರಜ್ಞಾ ಪ್ರವಾಹದಲ್ಲಿ ತೇಲಿ ಬರುತ್ತವೆ. ಮೇಲು ಜಾತಿಯವಳಾದ ಕುಂಜುಕುಟ್ಟಿ ಮತ್ತು ಕೀಳುಜಾತಿಗೆ ಸೇರಿದ ಮಾಸ್ತರರು ತಮ್ಮ ಸಂಸ್ಕೃತಿಯ ಬಂಧನವನ್ನು ಭೇದಿಸಲಾರರು. ತಂದೆ ತಾಯಿಯರ ಅನುಮತಿಯಿಲ್ಲದೆ ಆಕೆಯು ಮುಂದುವರಿಯಲಾರಳು. ಮಾಸ್ತರನು ಆಕೆಯ ಕುಟುಂಬದವರೊಂದಿಗಿನ ವಿನಯವನ್ನು ಮೀರಲಾರ. ಆದ್ದರಿಂದ ಅವರ ಪ್ರೇಮವು ಮದುವೆಯಲ್ಲಿ ಕೊನೆಗೊಳ್ಳುವುದಿಲ್ಲ. ಆದರೆ ವರ್ಣ, ಸಾಮಾಜಿಕ ಸ್ತರಗಳನ್ನು ಮೀರುವ ಶಕ್ತಿ ಅವಳಲ್ಲಿದೆ. ಖಿಲಾಫತ್ ಚಳುವಳಿಯ ಹೆಸರಿನಲ್ಲಿ ಹುಟ್ಟಿದ ಕೋಮುಗಲಭೆಗೆ ಸಿಕ್ಕು ಪಾರಾಗುವ ಸಂದರ್ಭದಲ್ಲಿ ಆಕೆಯು ಗೋವಿಂದನ್ ನಾಯರನಿಂದ ಬಸಿರಾಗುತ್ತಾಳೆ. ನಂತರ ಮುಸ್ಲಿಂ ದಾಳಿಕೋರರ ಕೈಗೆ ಸಿಕ್ಕಿದ ಆತನು ಚಿತ್ರಹಿಂಸೆಗಳನ್ನು ಅನುಭವಿಸಿ ಮತಾಂತರವಾದರೆ, ತುಂಬು ಬಸುರಿಯಾದ ಕುಂಜುಕುಟ್ಟಿಯು ರಾಮನ್ ಮಾಸ್ತರನ ಆಸರೆಯಲ್ಲಿ, ಆತನ ಹೆಂಡತಿ ಮಾಧವಿಯಮ್ಮನ ಆರೈಕೆಯಲ್ಲಿ ಗಂಡು ಮಗುವನ್ನು ಹಡೆದು ಸಾಯುತ್ತಾಳೆ. ಖಿಲಾಫತ್ ಚಳುವಳಿಯ ಹೆಸರಿನಲ್ಲಿ ಕೋಮುಗಲಭೆಯನ್ನು ಹಬ್ಬಿಸಿದ ಗಲಭೆಕೋರರ ಅತ್ಯಾಚಾರಕ್ಕೆ ಬಲಿಯಾದ ಹೆಂಗಸರ ಪರಿಸ್ಥಿತಿಯನ್ನು ಅರಿತಿದ್ದ ಸುತ್ತುಮುತ್ತಲಿನವರು ಆ ಶಿಶುವನ್ನು ‘ದಂಗೆಗೆ ಹುಟ್ಟಿದ ಮಗು’ ಎಂದು ಭಾವಿಸಿದ್ದಲ್ಲಿ ಅಚ್ಚರಿಯಿಲ್ಲದಿದ್ದರೂ ಕುಂಜುಕುಟ್ಟಿಯನ್ನು ಆವರಿಸಿದ ಲೈಂಗಿಕ ಸಂಬಂಧದ ಹೀನ ದೆಸೆ, ಇಂಥ ವಿಷಯಗಳಲ್ಲಿ ಜನರು ಹೊಂದಿರುವ ಕೆಟ್ಟ ಕುತೂಹಲ, ಸಂದಿಗ್ಧದಲ್ಲಿ ಸಿಲುಕಿಕೊಂಡ ರಾಮನ್ ಮಾಸ್ತರರ ಕುಟುಂಬದ ಪರಿಸ್ಥಿತಿ, ಕುಂಜುಕುಟ್ಟಿಯ ಮರಣ ಹೀಗೆ ಹಲವು ಆಯಾಮಗಳನ್ನು ಪಡೆದ ಕಾದಂಬರಿಯು ಸಾಮಾನ್ಯ ಮಟ್ಟದ ನಿರೂಪಣೆಗೊಳಗಾಗದೆ ಪ್ರೀತಿ, ಕ್ರಾಂತಿ ಮತ್ತು ದುರಂತದ ಸಾಧ್ಯತೆಗಳನ್ನು ಬಳಸಿಕೊಳ್ಳುತ್ತದೆ. ರಾಮನ್ ಮಾಸ್ತರರ ಅಸಾಧಾರಣ ಮಾನವೀಯ ಗುಣಗಳನ್ನು ಗುರುತಿಸುತ್ತದೆ. ತಾನು ಪ್ರೀತಿಸಿದ ಹೆಣ್ಣು ತನಗೆ ದೊರಕದಿದ್ದರೂ, ಸಹಜ ಭಾವನೆಯಾದ ದ್ವೇಷ ಅಸೂಯೆಗಳನ್ನು ಮೀರಿ ಅವಳ ಮಗುವನ್ನು ತನ್ನದೆಂಬಂತೆ ಒಪ್ಪಿಕೊಳ್ಳುವ ಹೃದಯವಂತಿಕೆಯು ಅವನಲ್ಲಿದೆ. ಸಂಸಾರಸ್ಥನಾಗಿದ್ದರೂ ಎಲ್ಲವನ್ನೂ ಬಿಟ್ಟಂತಿದ್ದ ಮಾಸ್ತರರಿಗೆ ತನ್ನ ಪ್ರೇಯಸಿಯಾಗಿದ್ದ ಕುಂಜುಕುಟ್ಟಿಯನ್ನು ನೆನಪಿಸುವ ವಿಶ್ವನ ಮೋಹವನ್ನು ತೊರೆಯಲು ಸಾಧ್ಯವಾಗುವುದಿಲ್ಲ. ಕಾದಂಬರಿಯು ವಿಶ್ವನನ್ನು ಸ್ವೀಕರಿಸುವ ಮಾಸ್ತರರ ಮಾನವೀಯತೆಯನ್ನು ಎತ್ತಿ ಹಿಡಿದರೂ ಆತನ ಬದುಕು ವೈಫಲ್ಯ ಮತ್ತು ಸೋಲಿನ ತಟಸ್ಥ ಸ್ವೀಕೃತಿಯಲ್ಲಿ ಮುಗಿದು ಹೋಗುತ್ತದೆ.
ರಾಮನ್ ಮಾಸ್ತರರ ಅಧಪತನಕ್ಕೆ ಯಜಮಾನ್ಯ ವ್ಯವಸ್ಥೆಯ ಭಾಗವೆನಿಸಿಕೊಂಡ ಕೃಷ್ಣನ್ ನಂಬಿಡಿಯ ಆಪ್ತ ಸಹಾಯಕ ವೇಲುಮ್ಮಾನ್ ಕಾರಣನಾಗಿದ್ದಾನೆ. ಪ್ರತಿಷ್ಠಿತ ನಾಯರ್ ಸಮುದಾಯದ ‘ಕಾರಣವರ್’ ಆಗಿರುವ ಆತನು ಮಾಸ್ತರರ ಹೆಂಡತಿಯಾದ ಮಾಧವಿಯಮ್ಮನ ಹಿರಿಯ ಮಾವನಾಗಿದ್ದರೂ ಆತನಿಗೆ ಆಕೆಯ ಬಗ್ಗೆ ಮಮಕಾರವಿಲ್ಲ. ತನಗೆ ತಲೆಬಾಗದ ಮಾಸ್ತರರನ್ನು ಹೊರದಬ್ಬಿ ಆ ಭೂಮಿಯನ್ನು ವಶಪಡಿಸುವ ಉದ್ದೇಶವನ್ನು ಹೊಂದಿರುವ ಆತನ ಹಾದಿಯು ಆಧುನಿಕ ರಾಜಕೀಯದ ದಾರಿಯಾಗಿದೆ. ಅಸುರೀ ಭಾವದಿಂದ ಕುದಿದು ಕನಲುತ್ತಾ ಪರಿಸ್ಥಿತಿಯ ಮೇಲೆ ರಾಕ್ಷಸೀಯ ಆಧಿಪತ್ಯವನ್ನು ಸ್ಥಾಪಿಸಿ, ಜಗತ್ತಿನ ಒಳ್ಳೆಯತನ, ಸ್ವಚ್ಛತೆಗಳ ಮೇಲೆ ಒಡೆತನವನ್ನು ಹೇರಿ ದುಷ್ಟತನವೇ ವಿಜೃಂಭಿಸುವಂತೆ ಮಾಡುವ ಆತನ ಅಮಾನವೀಯ ನಡವಳಿಕೆಗಳು ಮಾಸ್ತರರ ಕುಟುಂಬದ ಮನಸ್ಸನ್ನು ಚಿವುಟುತ್ತವೆ. ಸ್ವಾರ್ಥ, ದ್ವೇಷ, ಹಿಂಸೆಗಳನ್ನೇ ಜೀವಾಳವಾಗಿಸಿಕೊಂಡು ಮೋಸ, ವಂಚನೆ, ಕುತಂತ್ರಗಳ ಬಲೆಯನ್ನು ಬೀಸಿ ಕೆಡಹುವ ಆತನು, ಬದುಕಲು ಒದ್ದಾಡುವ ಮಾಸ್ತರರ ಕುಟುಂಬದ ಕಾಲಿಗೆ ಮುಳ್ಳಾಗುತ್ತಾನೆ. ಕಣ್ಣಿಗೆ ಕಸವಾಗುತ್ತಾನೆ. ಮಾನವೀಯತೆಯ ಮೇಲೆ ಕೆಟ್ಟ ಶಕ್ತಿಗಳ ನೆರಳು ಬಿದ್ದಾಗ ಶುದ್ಧ ಮನಸ್ಸಿನ ಕನಸುಗಳು, ಜನಸಾಮಾನ್ಯರ ಆಶೋತ್ತರಗಳು ನಾಶವಾಗುತ್ತವೆ ಎಂಬುದಕ್ಕೆ ವೇಲುಮ್ಮಾನ್ ಬರೆದ ಅರ್ಜಿಯನ್ನು ಪರಿಗಣಿಸಿದ ಸರಕಾರವು ಮಾಸ್ತರರನ್ನು ಉದ್ಯೋಗದಿಂದ ವಜಾಗೊಳಿಸುವ ಸನ್ನಿವೇಶವು ಸಾಕ್ಷಿಯಾಗುತ್ತದೆ. ಮನುಷ್ಯನ ಘನತೆಯನ್ನು ಹೊಸಕಿ ಹಾಕುವ ಹಿಂಸೆಯ ಮುಖಗಳನ್ನು ಅಭಿವ್ಯಕ್ತಿಸುವ ಕಾದಂಬರಿಯು ಹಳ್ಳಿಯ ಬದುಕಿನೊಳಗೆ ಹುದುಗಿರುವ ಕ್ರೌರ್ಯದ ದರ್ಶನವನ್ನು ಮಾಡುತ್ತದೆ. ಮಾನವೀಯ ತುಡಿತ ಮಿಡಿತಗಳ ಬದಲು ಸ್ವಾರ್ಥ, ಜಿದ್ದುಗಳನ್ನು ಮೆರೆಯುವ ವೇಲುಮ್ಮಾನನು ತನ್ನ ಸ್ವಾರ್ಥಕ್ಕಾಗಿ ಮಾಸ್ತರರ ಕುಟುಂಬವನ್ನು ಬಲಿಗೊಡುತ್ತಾನೆ. ಆತನ ಸ್ವಾರ್ಥಪ್ರೇರಿತ ಚಟುವಟಿಕೆಗಳನ್ನು ವಿವರಿಸುವಂತೆ ಅವನಿಗಿಂತ ಭಿನ್ನ ನೆಲೆಗಳಲ್ಲಿ ಅವನೊಂದಿಗೆ ವೈದೃಶ್ಯದಲ್ಲಿ ನಿಲ್ಲುವ ಪಾತ್ರಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಕಾದಂಬರಿಯ ಮಹತ್ವವು ತಿಳಿಯುತ್ತದೆ. ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಯಾಗಿರುವ ಕೃಷ್ಣನ್ ನಂಬಿಡಿ, ಕಾರ್ತಿಕೇಯನ್ ಮತ್ತು ವೇಲುಮ್ಮಾನರ ವಿರುದ್ಧ ನೆಲೆಯಲ್ಲಿ ಒಳಿತಿನ ಪಕ್ಷದವರಾದ ಮಾಸ್ತರರು ಮತ್ತು ಆತನ ವಿದ್ಯಾರ್ಥಿ ಕುಂಞರಾಮನ್ ನಡುವಿನ ವ್ಯಕ್ತಿಗತ ವ್ಯತ್ಯಾಸಗಳು ಮುಖ್ಯವಾಗುತ್ತವೆ. ಆದರ್ಶವಾದಿಯೂ, ಒಳಿತಿನ ಸಮರ್ಥಕನೂ, ವಿನಯವಂತನೂ, ಉದಾರಿಯೂ, ಸ್ನೇಹಶೀಲನೂ ಆದ ಮಾಸ್ತರರ ಮೇಲೆ ಕುಂಞರಾಮನಿಗೆ ಪ್ರೀತಿ ಗೌರವಗಳಿದ್ದರೂ, ನಿರ್ಣಾಯಕ ಗಳಿಗೆಯಲ್ಲಿ ನಿರ್ಲಿಪ್ತನಾಗಿ ಉಳಿಯುವ ಮನೋಭಾವವನ್ನು ಒಪ್ಪುವುದಿಲ್ಲ. ಮಾಸ್ತರರ ಕುಟುಂಬ ಅನುಭವಿಸುವ ಬವಣೆ, ದಬ್ಬಾಳಿಕೆಗಳನ್ನು ಕಂಡು ಸೆಟೆದು ನಿಲ್ಲುವ ಆತನು ಸುಲೈಮಾನ್ ಹಾಜಿಯ ಮೂಲಕ ತನ್ನ ಗುರುಗಳಿಗೆ ಒಂದು ನೆಲೆಯನ್ನು ಒದಗಿಸುವಲ್ಲಿ ಸಫಲನಾಗುತ್ತಾನೆ. ಆದರೆ ಹೊಟ್ಟೆನೋವು ಉಲ್ಬಣಿಸಿ ಮಾಸ್ತರರು ತೀರಿಕೊಂಡು, ಕುಟುಂಬವು ಬೀದಿಪಾಲಾದ ಬಳಿಕ ಅವರ ಮಗಳಾದ ರಾಧೆಯು ತನ್ನ ಬದುಕನ್ನು ಮೂರಾಬಟ್ಟೆಗೊಳಿಸಿದ ವ್ಯವಸ್ಥೆಗೆ ಪ್ರತೀಕವಾದ ಕೃಷ್ಣನ್ ನಂಬಿಡಿಯ ಮನೆಗೆಲಸದವಳಾಗಿ ದುಡಿಯುವುದು ಪರಿಸ್ಥಿತಿಯ ಕ್ರೂರ ವ್ಯಂಗ್ಯವಾಗಿದೆ. ಆಕೆಯು ಮನಸ್ಸು ಮಾಡಿದ್ದರೆ ನಂಬಿಡಿಯ ಮಗನಾದ ಕಾರ್ತಿಕೇಯನಿಗೆ ವಶಳಾಗಿ ಸುಖವಾಗಿ ಬಾಳಬಹುದಿತ್ತು. ಅವಕಾಶವು ದೊರೆತರೂ ಆಕೆಯು ಅಂಥ ಬದುಕನ್ನು ಒಪ್ಪುವುದಿಲ್ಲ. ಈ ರೀತಿಯಲ್ಲಿ ಆಕೆಯು ತನ್ನ ಲೈಂಗಿಕತೆಯನ್ನು ನಿಭಾಯಿಸುತ್ತಾಳೆ.
ವೇಲುಮ್ಮಾನನ ಚಟುವಟಿಕೆಗಳು ಮುನ್ನೆಲೆಗೆ ಬರುವಷ್ಟು ಅವನ ಎರಡನೇ ಹೆಂಡತಿ ಅಮ್ಮಾಳುಕುಟ್ಟಿಯಮ್ಮನ ಪಾತಿವ್ರತ್ಯದ ಪ್ರಶ್ನೆಯು ಮುನ್ನೆಲೆಗೆ ಬಾರದಿರುವುದು ಗಮನಾರ್ಹವಾಗಿದೆ. ಗಂಡನ ಕಣ್ಣು ತಪ್ಪಿಸಿ ಸನ್ಯಾಸಿಯ ಸಂಗವನ್ನು ಮಾಡುವ ಮೂಲಕ ಬದುಕಿನ ಒಳದಾರಿಯನ್ನು ಹುಡುಕುವ ಇವಳು ತನ್ನ ಹೆಣ್ತನವನ್ನೇ ಅಸ್ತ್ರವನ್ನಾಗಿಸಿಕೊಂಡು ಗುರಿಯನ್ನು ಸಾಧಿಸುತ್ತಾಳೆ. ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಕಾದಂಬರಿಯು ಶೋಷಣೆಯನ್ನು ಕುರಿತ ಸಾಮಾನ್ಯ ನಂಬಿಕೆಗಳನ್ನು ಒಡೆಯುತ್ತದೆ. ದುರ್ಬಲ, ಪತಿವ್ರತೆ ಮತ್ತು ಸುಧಾರಿತ ಹೆಣ್ಣುಗಳಿಗಿಂತ ಭಿನ್ನವಾದ ಪಾತ್ರಮಾದರಿಗಳನ್ನು ಸೃಷ್ಟಿಸುವ ಮೂಲಕ ಆದರ್ಶ ಮತ್ತು ಸಂಪ್ರದಾಯದ ನೆಲೆಗಳಿಗಿಂತ ವಾಸ್ತವದ ನೆಲೆಗಳಿಗೆ ಹತ್ತಿರವಾಗುತ್ತದೆ.
ವೇಲುಮ್ಮಾನ್ ತಮ್ಮ ಬದುಕಿನಲ್ಲಿ ಸಾಕಷ್ಟು ಕಷ್ಟ ಸುಖಗಳನ್ನುಂಡು, ಕೆಟ್ಟ ಕೆಲಸಗಳನ್ನು ಮಾಡಿ, ಅನೇಕ ಬಗೆಯ ಏರಿಳಿತಗಳನ್ನು ಕಂಡು ಬೆಳೆಯುತ್ತಾರೆ. ಬದುಕಿನ ಕೊನೆಯ ಘಟ್ಟದಲ್ಲಿ ಲೌಕಿಕ ಕಾಮನೆಗಳಿಂದ ಕಳಚಿಕೊಂಡು ವೈರಾಗ್ಯದ ಅಂಚನ್ನು ಮುಟ್ಟುತ್ತಾರೆ. ಬದುಕಿನ ಶೂನ್ಯತೆಯನ್ನು ಅರ್ಥ ಮಾಡಿಕೊಂಡು ಕುಸಿಯುತ್ತಾರೆ. ಬದುಕಿನಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ ರಾಮನ್ ಮಾಸ್ತರರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ವೇಲುಮ್ಮಾನನು ಸೋತರೂ ಅದನ್ನು ಒಪ್ಪಿಕೊಳ್ಳುವವನಲ್ಲ. ಅಡ್ಡದಾರಿಯನ್ನು ಹಿಡಿದ ತನ್ನ ಹೆಂಡತಿಯಿಂದಾಗಿ ಮರ್ಯಾದೆಯನ್ನು ಕಳೆದುಕೊಳ್ಳಬೇಕಾಗಿ ಬಂದರೂ ಆತನಲ್ಲಿ ಪಶ್ಚಾತ್ತಾಪ ಮತ್ತು ಪಾಪಪ್ರಜ್ಞೆಯು ಹುಟ್ಟುವುದಿಲ್ಲ. ಖಳನಾಯಕನೆಂದು ಹೇಳಲಾಗದಿದ್ದರೂ ಅವನು ಪ್ರತಿನಾಯಕನ ಪಾತ್ರಕ್ಕೆ ಹತ್ತಿರವಾಗಿದ್ದಾನೆ. ಆದ್ದರಿಂದ ಕಾದಂಬರಿಯಲ್ಲಿ ಭಾವುಕತೆಯ ಅಂಶ ಕಡಿಮೆಯಾಗಿದ್ದು ಪಾತ್ರಚಿತ್ರಣ, ಘಟನೆಗಳ ನಿರೂಪಣೆ, ಸನ್ನಿವೇಶದ ವ್ಯಾಖ್ಯಾನ ವಿಶ್ಲೇಷಣೆಗಳಲ್ಲಿ ವಸ್ತುನಿಷ್ಠತೆಯು ಕಂಡುಬರುತ್ತದೆ. ಲೇಖಕರು ತಮ್ಮ ನಾಯಕರೊಂದಿಗೆ ದೂರವನ್ನು ಕಾಯ್ದುಕೊಂಡರೂ ಒಳಿತಿನ ತಮ್ಮ ಪಾತ್ರಗಳ ಕಡೆಗೆ ಮೆಚ್ಚುಗೆಯು ಹರಿದಿರುವುದು ಸ್ಪಷ್ಟವಾಗಿದೆ. ಆದರೆ ಕಾದಂಬರಿಯ ನಿರೂಪಣೆಯಲ್ಲಿ ಮೆಚ್ಚುಗೆ ಆರಾಧನ ಭಾವಗಳ ಬದಲು ಒಂದು ಬಗೆಯ ವಿಮರ್ಶೆಯು ಹುದುಗಿರುವಂತೆ ಭಾಸವಾಗುತ್ತದೆ. ಉಳಿದವರನ್ನು ಹಿಂಸಿಸುತ್ತಿದ್ದ ವೇಲುಮ್ಮಾನ್ ತನ್ನ ಕ್ರೌರ್ಯದಿಂದ ತಾನೇ ಬಳಲಿ, ಶಿಕ್ಷೆಯನ್ನು ಅನುಭವಿಸುವ ಅಥವಾ ದುರಂತದ ಕಡೆ ಸಾಗುವ ಮೂಲಕ ತನ್ನ ಸತ್ಯವನ್ನು ಅರಿಯುವ ಯಾತನಾಮಯ ಸ್ಥಿತಿಗೆ ತಲುಪಿದರೂ ಆತನು ಕೊನೆಯವರೆಗೂ ತನ್ನ ಅಹಂಕಾರ, ವ್ಯಾಮೋಹ, ಸ್ವಾರ್ಥಗಳಿಂದ ದೂರವಾಗುವುದಿಲ್ಲ.
ಕಾದಂಬರಿಯ ಎರಡನೇ ಅಧ್ಯಾಯವು ಲಕ್ಷ್ಮೀಕುಟ್ಟಿ ಎಂಬ ವಿಧವೆಯ ನೆನಪುಗಳ ಆಧಾರದಲ್ಲಿ ನಿಂತಿದೆ. ಕಥಕಳಿ ಪಾತ್ರಧಾರಿಯೂ ಆಕೆಯ ಪ್ರಿಯಕರನೂ ಆಗಿದ್ದ ಗೋಪಿ ಕುರುಪ್ ಆಕೆಯ ನೆನಪುಗಳ ಕೇಂದ್ರವಾಗಿದ್ದಾನೆ. ಅದು ಆಕೆಯ ಬದುಕಿನ ತಂತುವಾಗಿ ಸುತ್ತಿಕೊಂಡಿದೆ. ಪಣಿಕ್ಕರನನ್ನು ಮದುವೆಯಾಗಿ ಸಿಂಗಾಪುರಕ್ಕೆ ತೆರಳಿದ ಕೆಲವೇ ವರ್ಷಗಳಲ್ಲಿ ವಿಧವೆಯಾಗಿ ತನ್ನ ಮಗಳಾದ ಶಾಂತಳೊಂದಿಗೆ ತವರಿಗೆ ಹಿಂತಿರುಗಿದಾಗಲೂ ತನ್ನ ಮೊದಲ ಪ್ರೇಮದ ಸೆಳೆತವು ಕಡಿಮೆಯಾಗಿರುವುದಿಲ್ಲ. ಆಕೆಯು ತವರುಮನೆಗೆ ಮರಳಿದ್ದು ಯೋಗಾಯೋಗವೇ? ಅದಕ್ಕೆ ಒಂದು ಉದ್ದೇಶವಿದೆಯೇ? ವಿರಹವನ್ನು ತಾಳಲಾರದೆ ಹುಚ್ಚನಾಗಿದ್ದ ಗೋಪಿ ಕುರುಪ್ಪಿಗೆ ತನ್ನ ಮನೆಯಲ್ಲಿ ಆಸರೆಯನ್ನು ನೀಡಿ ಗಂಡ ಹೆಂಡತಿಯರಂತೆ ಬಾಳತೊಡಗಿದಾಗ ನಿಂತುಹೋಗಿದ್ದ ಕಲಾ ಬದುಕು ಅರಳತೊಡಗಿದರೂ ಆಕೆ ಅನುಭವಿಸಿರಬಹುದಾದ ಮಾನಸಿಕ ಸಂಘರ್ಷದ ಸ್ವರೂಪವೇನು ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಸಾಂಪ್ರದಾಯಿಕ ಕಾದಂಬರಿಯಲ್ಲಾದರೆ ಪ್ರಿಯಕರನನ್ನು ಕಳೆದುಕೊಂಡ ಕೊರಗು ಮಾತ್ರ ವಸ್ತುವಾಗಿರುತ್ತಿತ್ತು. ಆದರೆ ಆಕೆಯು ವಿಧವೆಯಾದ ಬಳಿಕ ಅವಳು ತನ್ನ ಮಗಳ ಮೇಲೆ ಮತ್ತೆ ಕೂಡಿಕೊಂಡ ಪ್ರಿಯಕರನಿಗಾಗಿ ಹೊಂದಿದ ಪ್ರೀತಿ, ಹೊಸ ಸಂಸಾರದಲ್ಲಿ ದೊರೆಯುವ ಸುಖ, ಟೀಕೆಯನ್ನು ಲೆಕ್ಕಿಸದೆ ಹೊಸ ಜೀವನವನ್ನು ನಡೆಸಿದ ನೆಮ್ಮದಿ ಮುಂತಾದ ಭಾವನೆಗಳು ಒಟ್ಟಾಗಿ ಬರುವುದರಿಂದ ಅಪೂರ್ವ ಸಂಕೀರ್ಣತೆಯು ಒದಗಿದೆ. ರಾಮನ್ ಮಾಸ್ತರ್- ಕುಂಜುಕುಟ್ಟಿ ಮತ್ತು ಗೋಪಿ ಕುರುಪ್- ಲಕ್ಷ್ಮೀಕುಟ್ಟಿ ನಡುವಿನ ಪ್ರೇಮಕತೆಗಳು ಬೇರೆಯಾಗಿ ಉಳಿದು, ಬಂಧವು ಸಡಿಲವಾದರೂ ರಾಮನ್ ಮಾಸ್ತರರ ಮರಣದ ಬಳಿಕ ವಿಶ್ವನು ಅಲೆಮಾರಿಯಾಗಿ ಅಲೆಯುತ್ತಾ, ಕಲ್ಪನಾಜೀವಿಯಾಗಿ ವಿಹರಿಸುತ್ತಾ ದಿಕ್ಕುಗೆಟ್ಟು ಲಕ್ಷ್ಮೀಕುಟ್ಟಿಯ ಆಸರೆಯನ್ನು ಪಡೆಯುವಲ್ಲಿ ಮರಳಿ ಬಿಗಿಗೊಳ್ಳುತ್ತದೆ. ಆಕೆಯ ಮಗಳು ಶಾಂತಾಳ ಗೆಳೆತನವು ದೊರಕುತ್ತದೆ. ಬಾಲ್ಯದ ಸ್ವಚ್ಛಂದತೆ ವಿಶ್ವ ಮತ್ತು ಶಾಂತಾಳ ನಡುವಿನ ಅನ್ಯೋನ್ಯತೆಗೆ ಸಾಕ್ಷಿಯಾಗುತ್ತದೆ. ಗೋಪಿ ಕುರುಪ್ಪಿನ ಬಳಿಯಲ್ಲಿ ಜೊತೆಯಾಗಿ ನೃತ್ಯವನ್ನು ಕಲಿಯುವ ಅವರು ಹದಿಹರೆಯವನ್ನು ತಲುಪುತ್ತಿದ್ದಂತೆ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ. ಆದರೆ ಲಕ್ಷ್ಮೀಕುಟ್ಟಿಯು ಅವರ ಪ್ರೇಮಕ್ಕೆ ತಡೆಯೊಡ್ಡುತ್ತಾಳೆ. ಅನಾಥನಾದ ತನಗೆ ಆಸರೆಯನ್ನು ನೀಡಿದ ಲಕ್ಷ್ಮೀಕುಟ್ಟಿಯ ಮೇಲಿನ ಕೃತಜ್ಞತೆಯು ವಿಶ್ವನನ್ನು ಮೂಕನನ್ನಾಗಿಸುತ್ತದೆ. ಆ ಊರಿನ ಜಮೀನ್ದಾರಿ ಮನೆತನಕ್ಕೆ ಸೇರಿದ ಕಾರ್ತಿಕೇಯನೊಂದಿಗೆ ಶಾಂತಳ ಮದುವೆಯು ನಡೆಯುತ್ತದೆ. ಭಗ್ನಪ್ರೇಮವು ವಿಶ್ವನನ್ನು ಆತ್ಮಹತ್ಯೆಗೆ ಪ್ರೇರಿಸುತ್ತದೆ. ಸುಲೈಮಾನ್ ಎಂಬ ಹೆಸರಿನಲ್ಲಿ ಮತಾಂತರಕ್ಕೊಳಗಾದ ಗೋವಿಂದನ್ ನಾಯರ್ ಆತನನ್ನು ಕಾಪಾಡುತ್ತಾನೆ. ಶಾಂತಾಳ ತಾಯಿ ಲಕ್ಷ್ಮೀಕುಟ್ಟಿಯು ವಿಶ್ವನಲ್ಲಿ ಹಳೆಯ ನಳನನ್ನು ಅಂದರೆ ಗೋಪಿ ಕುರುಪ್ಪನ್ನು ಕಂಡಿರುತ್ತಾಳೆ. ಒಂದೇ ವೇದಿಕೆಯಲ್ಲಿ ಇಬ್ಬರು ನಳರು ಇರಬಾರದು ಎಂದು ಗೋಪಿ ಕುರುಪ್ ಆಕೆಯನ್ನು ಬಿಟ್ಟು ಹೋಗಲು ನಿರ್ಧರಿಸುವ, ಪ್ರಾಣಿಯ ಏದುಸಿರಿನಂಥ ಉಸಿರಾಟದೊಂದಿಗೆ ಆಕೆಯು ವಿಶ್ವನ ಹತ್ತಿರ ಬರುವ ಸನ್ನಿವೇಶಗಳನ್ನು ಗಮನಿಸಿದರೆ ಲಕ್ಷ್ಮೀಕುಟ್ಟಿಯು ತನ್ನ ಮಗಳ ಮೇಲಿನ ಲೈಂಗಿಕ ಅಸೂಯೆಯಿಂದಾಗಿ ಆಕೆಯ ಪ್ರೀತಿಗೆ ಅಡ್ಡಬಂದಿರುವ ವಿಚಾರವು ಸ್ಪಷ್ಟವಾಗುತ್ತದೆ. ವಿಶ್ವನ ಪ್ರೇಮ ಪ್ರಕರಣವನ್ನು ಮನಶಾಸ್ತ್ರೀಯ ದೃಷ್ಟಿಯಿಂದ ನೋಡಿದ್ದರೆ ಕಾದಂಬರಿಗೆ ಬೇರೊಂದು ಆಯಾಮವು ದೊರಕುವ ಸಾಧ್ಯತೆ ಇತ್ತು.
ಕಾರ್ತಿಕೇಯನನ್ನು ಮದುವೆಯಾದ ಶಾಂತಳ ಬದುಕು ನಿಷ್ಫಲವಾಗುತ್ತದೆ. ಆದರೆ ಆಕೆಯು ನಿಷ್ಫಲತೆಯನ್ನು ಎದುರಿಸುವ ವಿಧಾನದಲ್ಲಿ ಕ್ರಿಯಾಶೀಲತೆಯಿದೆ. ಒಲ್ಲದ ಗಂಡನ ದೈಹಿಕ ಸಂಬಂಧವನ್ನು ಒಳಗೊಳಗೆ ನಿರಾಕರಿಸಿ ತಾನೇ ರೂಪಿಸಿಕೊಂಡ ಬಾಳನ್ನು ಬಾಳುತ್ತಾಳೆ. ಅಧಿಕಾರಿಯ ಪತ್ನಿಯಾಗಿದ್ದೂ ವೇದಿಕೆಯಲ್ಲಿ ನೃತ್ಯ ಮಾಡಿದ್ದಕ್ಕಾಗಿ ಹಲವರ ಕುಹಕಕ್ಕೆ ಒಳಗಾಗುತ್ತಾಳೆ. ಆದರೂ ನೃತ್ಯವನ್ನು ತಪಸ್ಸಿನಂತೆ ಮುಂದುವರಿಸಿಕೊಂಡು ಹೋಗುತ್ತಾಳೆ. ಆದರೆ ಆಕೆಗೆ ಅದು ಸ್ಥಿಮಿತವನ್ನು ತಂದುಕೊಡುವುದಿಲ್ಲ. ಅಸಾಧಾರಣ ಸಾಮರ್ಥ್ಯವನ್ನು ಮೆರೆದ ಶಾಂತಾ ಕೊನೆಗೆ ದುರ್ಬಲಳಾಗುತ್ತಾ ಹೋದರೆ, ದುರ್ಬಲನಾಗಿದ್ದ ವಿಶ್ವನು ಪ್ರಬಲನಾಗುತ್ತಾ ಹೋಗುತ್ತಾನೆ. ಅವ್ಯಕ್ತವನ್ನು ಹುಡುಕುತ್ತಾ ಹೋಗುವ, ತಾನು ಏನನ್ನು ಅರಸುತ್ತಿರುವೆನೆಂದು ತನಗೇ ತಿಳಿಯದಿರುವ, ಕನಸುಗಳನ್ನು ವಾಸ್ತವ ಎಂದು ಭಾವಿಸುವ ಪರಿಸ್ಥಿತಿಗಳಿಂದಾಗಿ ಆತನು ಸಂಕಟಕ್ಕೆ ಒಳಗಾಗುತ್ತಾನೆ. ತನ್ನ ಒಳಬದುಕು ಮತ್ತು ಹೊರಬದುಕುಗಳಿಗೆ ಭೂಮಿ ಆಕಾಶಗಳಷ್ಟು ದೂರ ಇವೆಯೆಂದೂ, ಹೊರಜೀವನ ಮತ್ತು ಕನಸಿನ ಜೀವನಗಳಲ್ಲಿ ಸಾಮರಸ್ಯವು ಸಾಧ್ಯವಿಲ್ಲವೆಂದು ಮನದಟ್ಟಾದ ಬಳಿಕ ಅವನು ಕನಸುಗಳಲ್ಲಿ ಬದುಕುವ ಮನೋಭಾವವನ್ನು ಬಿಟ್ಟು ಬಿಡುತ್ತಾನೆ. ನವೋದಯ ಮನೋಧರ್ಮಕ್ಕಿಂತ ಭಿನ್ನವಾದ ನವ್ಯತೆಯ ಅಂಶಗಳನ್ನು ಇಲ್ಲಿ ಗುರುತಿಸಬಹುದು. ವಿಶಿಷ್ಟ ನೈತಿಕ ನಿಲುವು, ಕೆಳದನಿಯ ನಿರೂಪಣೆ, ಸಂಕೀರ್ಣತೆ, ಸಂದಿಗ್ಧತೆ, ದುರಂತವು ಸೂಕ್ಷ್ಮ ಭಾವ ತುಮುಲದಲ್ಲಿ ಸ್ಫೋಟಗೊಳ್ಳುವ ರೀತಿಯು ಕಲಾತ್ಮಕವಾಗಿ ಮೂಡಿ ಬಂದಿದೆ. ಈ ಕಾದಂಬರಿಯಲ್ಲಿ ಲೇಖಕರು ಎತ್ತಿಕೊಂಡ ತನ್ನತನದ ಸಮಸ್ಯೆ, ನಾಯರ್ ತರವಾಡಿನ ಯಜಮಾನರ ದರ್ಪ, ಅಧಪತನಗಳನ್ನು ಕುರಿತ ವಿಚಾರಗಳು ಮುಂದಿನ ಪೀಳಿಗೆಯ ಎಂ.ಟಿ. ವಾಸುದೇವನ್ ನಾಯರ್, ಟಿ. ಪದ್ಮನಾಭನ್ ಮೊದಲಾದ ಕತೆಗಾರರನ್ನು ಕಾಡಿದೆ. ಇವರ ಕತೆಗಳ ನಾಯಕರು ತಮ್ಮ ವ್ಯಕ್ತಿತ್ವದ ಪೂರ್ಣತೆಯನ್ನು ಸಾಧಿಸಲು ನೆನಪುಗಳಿಗೆ, ಬೇರೆ ಯಾವುದೋ ಸ್ಥಳಗಳಿಗೆ ಮರಳುವುದನ್ನು ಗಮನಿಸಬಹುದು. ವ್ಯಕ್ತಿತ್ವದ ಪೂರ್ಣತೆ ಎಂಬ ಕಲ್ಪನೆ ಅಪ್ರಸ್ತುತವಾಗಿರುವ ಆಧುನಿಕ ಸಂದರ್ಭದಲ್ಲಿ ಈ ಕ್ರಿಯೆಯು ಯಾತನೆ ಮತ್ತು ಪ್ರಜ್ಞೆಗೆ ಮಾತ್ರ ಸೀಮಿತವಾಗಿರುತ್ತದೆ.
ಕಾರ್ತಿಕೇಯ ಮತ್ತು ಶಾಂತಾ ನಡುವೆ ದೈಹಿಕ ಆಕರ್ಷಣೆ ಮತ್ತು ತೃಪ್ತಿಗಳಿದ್ದರೂ ಕೊಡುಕೊಳ್ಳುವಿಕೆ ಇಲ್ಲ. ತನ್ನ ಪ್ರೀತಿಗೆ ಅಡ್ಡಬಂದ ಅಮ್ಮನನ್ನು ಇಷ್ಟಪಡಲಾರದೆ, ಇಷ್ಟಪಡದಿರಲಾರದೆ, ದ್ವೇಷಿಸಲಾಗದೆ, ದ್ವೇಷಿಸದಿರಲಾರದೆ ಬದುಕುತ್ತಾಳೆ. ಅವಳಿಗೆ ವಿಶ್ವನ ಮೇಲಿನ ಆಕರ್ಷಣೆ ಕಡಿಮೆಯಾಗಿಲ್ಲ ಎಂದು ಅರಿತುಕೊಂಡ ಕಾರ್ತಿಕೇಯನು ತನ್ನ ಕಲಕಿದ ಮನಸ್ಸನ್ನು ತಿಳಿಯಾಗಿಸುವ ಪ್ರಯತ್ನವು ಯಶಸ್ವಿಯಾಗುವುದಿಲ್ಲ. ಆದರೆ ತನ್ನ ಹೆಂಡತಿಯು ವಿಶ್ವನ ಕಡೆ ಆಸಕ್ತಳಾದಾಗ ಅವನ ಮನಸ್ಸು ಆಕೆಯ ಕಡೆಗೆ ತಿರುಗುತ್ತದೆ. ಸುತ್ತಲೂ ಕಟ್ಟಿಕೊಂಡ ಕೋಟೆಯನ್ನು ಒಡೆಯುವ ಪ್ರಯತ್ನಗಳು ಸೋಲುತ್ತವೆ. ಮಾತು ಗೋಡೆಯನ್ನು ಕಟ್ಟುತ್ತದೆಯೇ ಹೊರತು ಬಾಗಿಲನ್ನು ತೆರೆಯುವುದಿಲ್ಲ. ಬಾಲ್ಯದಲ್ಲಿ ತನ್ನ ಮತ್ತು ವಿಶ್ವನ ನಡುವೆ ಅಡ್ಡ ಬಾರದ ವ್ಯವಸ್ಥೆಯು ಬೆಳೆದಾಗ ಕಂದರವಾಗಿ ನಿಲ್ಲುವ ಬಗೆ, ಅದನ್ನು ಮೀರಲಾಗದ ಪರಿಸ್ಥಿತಿಯಲ್ಲಿ ಮತ್ತೆ ಮತ್ತೆ ಭೇಟಿಯಾದರೂ ಮನಬಿಚ್ಚಿ ಮಾತನಾಡಲಾಗದ ನೋವು, ಮೈಬಿಚ್ಚಿ ಒಂದಾಗಲಾರದ ಯಾತನೆಯು ಮಾರ್ಮಿಕವಾಗಿ ವ್ಯಕ್ತವಾಗುತ್ತದೆ. ವಿಶ್ವನು ಆಕೆಯ ಪ್ರೇಮವನ್ನು ತಿರಸ್ಕರಿಸಿದಾಗ ಆಕೆಯು ಹಗೆತನದ ಹಾದಿಯನ್ನು ಹಿಡಿಯುತ್ತಾಳೆ. ಅಸೂಯೆ, ವೈಫಲ್ಯಗಳಿಂದ ಕೆರಳಿದ ಆಕೆಯು ಮದ, ಸೇಡಿನ ಬೆಂಕಿಗೆ ಬಿದ್ದು ಹೊರಳಾಡುವ ಅವಳ ಮಾನಸಿಕ ಹೊಯ್ದಾಟವನ್ನು ಮಾರ್ಮಿಕವಾಗಿ ಚಿತ್ರಿಸಲಾಗಿದೆ. ಗಂಡನ ಜೊತೆ ಎರಡನೇ ಮಹಾಯುದ್ಧದ ಬಗ್ಗೆ ಆಡುವ ಮಾತುಗಳು ಆಕೆಯ ಮನಸ್ಸಿನೊಳಗೆ ನಡೆಯುವ ಯುದ್ಧಕ್ಕೆ ಪೂರಕವಾಗಿ ಬಂದಿದೆ. ಆ ಸಂದರ್ಭದಲ್ಲಿ ಬಳಸಿದ ಭಾಷೆಯು ಸಮರ್ಪಕವಾಗಿದ್ದು ಕ್ರಿಯೆಯ ತೀವ್ರತೆಯನ್ನು ಅನುಭವಿಸಿ ತೋರಿಸುತ್ತದೆ.
ರಾಧೆ ಮತ್ತು ಕುಂಞರಾಮನ ಪ್ರೇಮಕ್ಕೆ ಅಡೆತಡೆಗಳು ಇಲ್ಲದಿದ್ದರೂ ಬದುಕು ಅವರ ಪಾಲಿಗೆ ಒಂದು ಸಮಸ್ಯೆಯಾಗಿರುತ್ತದೆ. ಕುಂಞರಾಮನು ಉದ್ಯೋಗವನ್ನು ಅರಸಿ ಊರು ಬಿಟ್ಟ ಘಟನೆಗಳು ಹೆಚ್ಚುತ್ತಾ ಬದುಕಿನ ಲಯಗಳು ಬದಲಾಗುತ್ತವೆ. ಊರಿನಲ್ಲಿ ಬದುಕಲು ಕಷ್ಟವಾದಾಗ ರಾಧೆಯು ತನ್ನ ತಮ್ಮನಾದ ಗೋಪಾಲಕೃಷ್ಣನನ್ನು ಕರೆದುಕೊಂಡು ಕುಂಞರಾಮನನ್ನು ಅರಸುತ್ತಾ ರೈಲುಗಾಡಿಯಲ್ಲಿ ಪ್ರಯಾಣಿಸುತ್ತಾಳೆ. ನಿಲ್ದಾಣದಲ್ಲಿ ಇಳಿದು ದಿಕ್ಕೆಟ್ಟು ನಿಂತಾಗ ವಿಶ್ವನು ಅವರನ್ನು ಗುರುತಿಸಿ ಆಶ್ರಯದಾತನಾದ ಸುಲೈಮಾನನ ಮನೆಗೆ ಕರೆತರುತ್ತಾನೆ. ವಿಶ್ವನ ತಾಯಿಯು ಕುಂಜುಕುಟ್ಟಿ ಎಂದು ತಿಳಿದಾಗ ಈತನು ತನ್ನ ಮಗನೆಂದು ಅರಿತ ಸುಲೈಮಾನನು ವಾತ್ಸಲ್ಯದಿಂದ ಉಮ್ಮಳಿಸುವ ಹೃದಯವನ್ನು ಅದುಮಿಟ್ಟುಕೊಂಡು ವಿಶ್ವನನ್ನು ಹೊರಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುತ್ತಾನೆ. ಸುಲೈಮಾನನ ಮಾನಸಿಕ ಪರಿಸ್ಥಿತಿಯು ಅತಿರಂಜನೆಯ ರೂಪವನ್ನು ತಾಳುವುದಿಲ್ಲ. ಅವರ ನಡುವಿನ ಮೌನವು ಅದೆಷ್ಟೋ ಮಾತುಗಳನ್ನು ಹೇಳುತ್ತವೆ. ಆದರೂ ಸುಲೈಮಾನನು ನಿಜವನ್ನು ಹೇಳಲಾರ. ತಂದೆಯ ಪ್ರೀತಿಯನ್ನು ತೋರಲಾರ. ಸಾಮಾಜಿಕವಾಗಿ, ನೈತಿಕವಾಗಿ ಅವನು ಆ ಹಕ್ಕನ್ನು ಕಳೆದುಕೊಂಡಿದ್ದಾನೆ. ಆದ್ದರಿಂದ ಮೌನವಾಗಿ ನೋವನ್ನು ಅನುಭವಿಸುತ್ತಾನೆ. ಆದರೆ ಆ ಮೌನದಲ್ಲಿನ ಭಾವ ತುಮಲವನ್ನು ಕತೆಯು ಧ್ವನಿಪೂರ್ಣವಾಗಿ ಓದುಗರ ಊಹೆಗೆ ಬಿಟ್ಟು ಕೊಡುತ್ತದೆ.
ಸಾಮ್ರಾಜ್ಯಶಾಹಿತ್ವವು ಬೆಳೆಯುತ್ತಿದ್ದಂತೆ ಕಾರ್ಮಿಕರ ವರ್ಗ ಪ್ರಜ್ಞೆ ಮತ್ತು ಸಂಘಟನೆಗಳು ಬಲಗೊಳ್ಳುತ್ತವೆ. ಎರಡನೇ ವಿಶ್ವ ಮಹಾಯುದ್ಧವು ಪಾತ್ರಗಳ ಬದುಕಿನ ನಿರ್ಣಾಯಕ ಶಕ್ತಿಯಾಗುತ್ತದೆ. ಬ್ರಿಟಿಷರೊಂದಿಗೆ ಯುದ್ಧದಲ್ಲಿ ಭಾಗವಹಿಸಬೇಡಿ ಎಂದು ಸಾರಿದರೂ ರಷ್ಯಾ ಬ್ರಿಟಿಷರ ಜೊತೆ ಕೈಜೋಡಿಸಿಕೊಂಡು ಯುದ್ಧರಂಗಕ್ಕೆ ಧುಮುಕಿದಾಗ ತಮ್ಮ ನೀತಿಯನ್ನು ಬದಲಿಸಿದ ಕುಂಞರಾಮನ ತಂಡ, ಭಾರತದ ಸ್ವರಾಜ್ಯವನ್ನೇ ಗುರಿಯಾಗಿಟ್ಟುಕೊಂಡು ಬ್ರಿಟಿಷರ ವಿರುದ್ಧ ಹೋರಾಡುವ ವಿಶ್ವನ ಪಕ್ಷ ಹೀಗೆ ಕಾರ್ಮಿಕ ವರ್ಗದಲ್ಲಿ ಎರಡು ಗುಂಪುಗಳಾಗುತ್ತವೆ. ಬ್ರಿಟಿಷರ ವಿರುದ್ದ ಹೋರಾಡುವವರನ್ನೆಲ್ಲ ಜಾಪ್ ಏಜೆಂಟ್ (ಜಪಾನ್ ಪರ) ಎನ್ನತೊಡಗುತ್ತಾರೆ. ಇಬ್ಬರ ಸಿದ್ಧಾಂತಗಳ ತಿಕ್ಕಾಟಗಳಲ್ಲಿ ಕುಂಞರಾಮ ಮತ್ತು ವಿಶ್ವನ ನಡುವಿನ ಸಂಬಂಧಗಳು ಒಡೆಯುತ್ತವೆ. ಭಾರತದ ಜನತೆ ವೀರಾವೇಶವನ್ನು ಅನುಭವಿಸಿದ ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಕುಂಞರಾಮನಿಗೆ ಬ್ರಿಟಿಷರ ರಾಜಕೀಯ ಶಕ್ತಿಯನ್ನು ಎದುರಿಸುವ ಧೈರ್ಯವಿದೆ. ಆದರೆ ವಿಶ್ವನ ಸೌಮ್ಯ ವರ್ತನೆಯು ಅವನಿಗೆ ಹೇಡಿತನವೆನಿಸುತ್ತದೆ. ಬ್ರಿಟಿಷರ ವಿರೋಧಿ ರಾಷ್ಟ್ರವಾದ ಜಪಾನ್ ಪರವಾಗಿ ಕೆಲಸ ಮಾಡುತ್ತಿದ್ದ ವಿಶ್ವನನ್ನು ಶಿಕ್ಷೆಗೆ ಗುರಿ ಪಡಿಸಲು ಆರಕ್ಷಕರಿಗೆ ಸಹಾಯವನ್ನು ಮಾಡುವ ಕುಂಞರಾಮನ ಉದ್ದೇಶವು ನ್ಯಾಯೋಚಿತವಾದದ್ದೇ. ಆದರೆ ರಾಧೆಯ ಮೇಲಿದ್ದ ಆತನ ಪ್ರೇಮ, ಮಾನವೀಯತೆಯು ಅಡ್ಡ ಬರುತ್ತದೆ. ಶಾಂತಾ, ಸುಲೈಮಾನರ ಸಹಾಯದಿಂದ ವಿಶ್ವನು ಬಿಡುಗಡೆಗೊಂಡರೂ ಕುಂಞರಾಮನಿಗೆ ಅಪರಾಧಿ ಪ್ರಜ್ಞೆಯು ಕಾಡುತ್ತದೆ. ರಾಧೆ ಮತ್ತು ಸುಲೈಮಾನರು ಧರ್ಮಸಂಕಟಕ್ಕೊಳಗಾಗುತ್ತಾರೆ. ರಾಜಕೀಯದಲ್ಲಿ ಗಟ್ಟಿಗೊಳ್ಳಲು ವೈಯಕ್ತಿಕ ಸಂಬಂಧಗಳು ಅಡ್ಡಿಯಾಗುವುದೆಂದು ತಿಳಿದ ಕುಂಞರಾಮನು ಸೈನ್ಯವನ್ನು ಸೇರಿ ಯುದ್ಧದಲ್ಲಿ ಸಾಯುತ್ತಾನೆ. ಕನಸುಗಾರರಾಗಿ, ಕಾರ್ಯಕರ್ತರಾಗಿ ವಿಸ್ತೃತವಾದ, ಸಮೃದ್ಧವಾದ ವಿವರಗಳಲ್ಲಿ ಮೂಡಿಬರುವ ವಿಶ್ವ ಮತ್ತು ಕುಂಞರಾಮನ್ ಕಾದಂಬರಿಯ ಪಾತ್ರಗಳೊಂದಿಗೆ ಒಂದಲ್ಲ ಒಂದು ಬಗೆಯ ಸಂಬಂಧವನ್ನು ಇಟ್ಟುಕೊಂಡಿರುವುದರಿಂದ ಕೃತಿಯ ಭಾಗಗಳನ್ನು ಅದರ ಒಟ್ಟು ಬಂಧದಲ್ಲಿ ಬೆಸೆಯುವ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ.
ಒಂದು ದೃಷ್ಟಿಯಿಂದ ವಿಶ್ವನ ಭಗ್ನಪ್ರೇಮವೇ ಅವನನ್ನು ರಾಧೆಯೊಂದಿಗಿನ ಮದುವೆಗೆ ಸಿದ್ಧಗೊಳಿಸುತ್ತದೆ. ಬದುಕಿನಲ್ಲಿ ವಾಸ್ತವದ ಅನುಭವಗಳನ್ನು ಪಡೆದುಕೊಂಡು ಪ್ರಬುದ್ಧನಾಗುವ ಆತನ ಶಾಲಾ ಶಿಕ್ಷಣವು ಅಲ್ಪವಾಗಿದ್ದರೂ ಬದುಕಿನ ಮೂಲಕ ಅವನು ಬಹಳ ಕಲಿಯುತ್ತಾನೆ. ರಾಧೆಯ ಬಗ್ಗೆ ಹೊಂದಿದ ಮೃದುಭಾವನೆಗಳ ಮೂಲಕ ಆತನಲ್ಲಿ ನಿಜವಾದ ಪರಿವರ್ತನೆ ಉಂಟಾಗುತ್ತದೆ. ಆಕೆಗೆ ಗೌರವಯುತ ಬಾಳನ್ನು ಕೊಟ್ಟು ಕಾಪಾಡಬೇಕೆಂಬ ಉದ್ದೇಶವು ವ್ಯಕ್ತವಾಗುತ್ತದೆ. ಪ್ರೀತಿ, ಪ್ರೇಮ ಮತ್ತು ಅನುಕಂಪಗಳಿಂದಲೇ ಇಂಥ ಬದಲಾವಣೆ ಸಾಧ್ಯ ಎನ್ನುವ ದನಿಯು ಇಲ್ಲಿದೆ. ನಾಟಕೀಯವಾದರೂ ನಂಬಲು ಅರ್ಹವಾದ ತಿರುವನ್ನು ನೀಡುವಲ್ಲಿ ಲೇಖಕರ ಕಥನ ಕೌಶಲವು ಎದ್ದು ಕಾಣಿಸುತ್ತದೆ. ಕುಂಜುಕುಟ್ಟಿ ಮತ್ತು ರಾಮನ್ ಮಾಸ್ತರರ ಪೂರ್ವಚರಿತ್ರೆಯನ್ನು ವಿವರಿಸುತ್ತಾ ಆರಂಭವಾಗುವ ಕತೆಯು ಕುಂಜುಕುಟ್ಟಿಯ ಮಗ ವಿಶ್ವ ಮತ್ತು ಮಾಸ್ತರರ ಮಗಳು ರಾಧೆಯು ಒಂದುಗೂಡುವ ಸೂಚನೆಯನ್ನು ನೀಡಿ ಮುಕ್ತಾಯವಾಗುತ್ತದೆ. ರಾಮನ್ ಮಾಸ್ತರರು ಮತ್ತು ಕುಂಜುಕುಟ್ಟಿ ಒಂದಾಗದಿದ್ದರೂ ಅವರ ಮಕ್ಕಳು ಪರಸ್ಪರ ಒಂದಾಗುತ್ತಾರೆ.
ಇದನ್ನು ವ್ಯಕ್ತಿ ಪ್ರಧಾನ ಅಥವಾ ಘಟನಾ ಪ್ರಧಾನ ಕಾದಂಬರಿ ಎನ್ನುವ ಬದಲು ಜೀವನಪ್ರಧಾನ ಕೃತಿ ಎನ್ನಬಹುದು. ಕುಂಜುಕುಟ್ಟಿ-ರಾಮನ್ ಮಾಸ್ತರ್, ಲಕ್ಷ್ಮೀಕುಟ್ಟಿ- ಗೋಪಿ ಕುರುಪ್ ಮತ್ತು ಅವರ ನಂತರದ ತಲೆಮಾರಿನ ವಿಶ್ವ- ಶಾಂತ, ರಾಧೆ-ಕುಂಞರಾಮನ್ ಅವರ ಭಗ್ನಪ್ರೇಮದ ಕತೆಗಳ ಪೈಕಿ ಲಕ್ಷ್ಮೀಕುಟ್ಟಿ ಮತ್ತು ಗೋಪಿ ಕುರುಪ್ಪಿನ ಪ್ರೇಮವು ಅಸಾಂಪ್ರದಾಯಕ ನೆಲೆಯಲ್ಲಿ ಗೆಲ್ಲುತ್ತದೆ. ತೀರಾ ಸಾಮಾನ್ಯರೆಂದು ಕಾಣುವ ವ್ಯಕ್ತಿಗಳು ತೋರುವ ವಿಕಾಸದ ಸಾಧ್ಯತೆಗಳು ಕಂಡುಬರುತ್ತವೆ. ಹಿಂದೂ ಮುಸ್ಲಿಂ ಸಮುದಾಯದವರು ಜಾತಿಯಲ್ಲಿ ಭಿನ್ನವಾಗಿದ್ದರೂ ಒಂದನ್ನೊಂದು ಅವಲಂಬಿಸಿ ಬದುಕುತ್ತಿರುವ ಸಂಕೀರ್ಣ ವಿನ್ಯಾಸವನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಭೂಮಾಲೀಕ ವರ್ಗದ, ಮೇಲುಜಾತಿಯ ಕ್ರೌರ್ಯ ಶೋಷಣೆಗಳ ನಡುವೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾಣಿಸದ ಮಾನವೀಯ ಸಂಬಂಧವು ಸಾಧ್ಯವಾಗುತ್ತದೆ. ಸಿಟ್ಟು, ಅತೃಪ್ತಿ, ಬಂಡಾಯ, ಅನುಕಂಪ, ಪ್ರೀತಿ ಪ್ರೇಮದ ಸಾಧ್ಯತೆಗಳು ತಾತ್ವಿಕ ಸಾಧ್ಯತೆಗಳತ್ತ ಸಾಗುತ್ತವೆ. ತನ್ನ ಕೊಳೆಯನ್ನು ಬಚ್ಚಿಡದ ಗ್ರಾಮ್ಯಜೀವನದ ಚಿತ್ರಣದಲ್ಲಿ ಕ್ರೂರ ವ್ಯಂಗ್ಯದ ಎಳೆಯೊಂದು ನೇಯ್ದುಕೊಳ್ಳುತ್ತದೆ. ವ್ಯಾವಹಾರಿಕ ತಿಳುವಳಿಕೆ, ಧರ್ಮಶ್ರದ್ಧೆ, ವಿಧಿಯ ಕೈವಾಡದ ಅರಿವು, ವಾಸ್ತವ ಪ್ರಜ್ಞೆ, ಕರುಳಿನ ನೋವು, ಇವೆಲ್ಲ ಮನಸ್ಸನ್ನು ವಿರುದ್ಧ ದಿಕ್ಕಿಗೆ ಎಳೆಯುತ್ತಿದ್ದರೂ ಅವುಗಳನ್ನು ಒಂದೆಡೆಯಲ್ಲಿ ಕೂಡಿಸಿ ಹಿಡಿದ ಮನೋಧರ್ಮವು ಅಚ್ಚರಿಯನ್ನು ಉಂಟು ಮಾಡುತ್ತದೆ.
ಹಿಂಸೆಯೆಂದರೆ ಪಾಶವೀ ಕೃತ್ಯವೆಂಬ ಪರಿಕಲ್ಪನೆಯಿಂದ, ಊಳಿಗಮಾನ್ಯ ಪದ್ಧತಿ, ವಸಾಹತುಶಾಹಿಯಾಗಿ ಅನೇಕ ರೂಪಗಳನ್ನು ತಾಳಿದ ರೀತಿಯನ್ನು ಅವಲೋಕಿಸಿದಾಗ ಹಿಂಸೆಯ ಸ್ವರೂಪವು ಬದಲಾಗುತ್ತಾ, ವಿಸ್ತಾರವೂ ಸೂಕ್ಷ್ಮವೂ ಆಗುವ ಬಗೆಯನ್ನು ಕಾಣಬಹುದು. ಮಲಬಾರ್ ದಂಗೆಯ ಸಂದರ್ಭದ ಆಕ್ರಮಣಶೀಲ ಹಿಂಸೆ, ಗೋವಿಂದನ್ ನಾಯರನ ಆತ್ಮರಕ್ಷಕ ಹಿಂಸೆ, ವೇಲುಮ್ಮಾನನ ಸ್ಪರ್ಧಾತ್ಮಕ ಹಿಂಸೆ, ಬದುಕಿನ ನಿರ್ದಿಷ್ಟ ವಿನ್ಯಾಸಗಳಿಗೆ ಒಗ್ಗಿಸಿಕೊಳ್ಳಬೇಕಾಗಿ ಬರುವಾಗ ರಾಮನ್ ಮಾಸ್ತರ್, ಸುಲೈಮಾನ್, ವಿಶ್ವ, ರಾಧೆ, ಅನುಭವಿಸುವ ಹಿಂಸೆ, ಕುಂಜುಕುಟ್ಟಿ, ಗೋವಿಂದನ್ ನಾಯರ್, ಮಾಸ್ತರರ ಕುಟುಂಬ, ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ವಿಶ್ವ-ಕುಂಞರಾಮನ್ ಅವರ ತಂಡ ಅನ್ಯಾಕ್ರಮಣಕ್ಕೆ ಒಪ್ಪಿಸಿಕೊಳ್ಳಬೇಕಾಗಿ ಬರುವ ಹಿಂಸೆ ಮಾತ್ರವಲ್ಲದೆ ಇಂದಿಗೂ ನಮ್ಮನ್ನು ಆವರಿಸಿಕೊಂಡಿರುವ ಕೋಮುಗಲಭೆ, ಬಲವಂತದ ಮತಾಂತರ, ಧರ್ಮದ ಹೆಸರಿನಲ್ಲಿ ಹೆಂಗಸರ ಮಾನಭಂಗ ಮುಂತಾದ ಹಿಂಸಾಜಗತ್ತಿನ ಭಾಗಗಳು ಇಲ್ಲಿವೆ. ಕಾದಂಬರಿಯು ಇದನ್ನು ವರ್ಣಿಸುವುದರಲ್ಲೇ ನಿಂತು ಬಿಡದೆ ಅದನ್ನು ಮೀರಿ ನಿಲ್ಲುವ ಬಗ್ಗೆ ಚಿಂತಿಸುತ್ತದೆ. ಯಾವುದೇ ತತ್ವವು ಎಷ್ಟೇ ಮಹತ್ವದ್ದಾದರೂ ಸಮಕಾಲೀನ ಬದುಕಿನೊಡನೆ ಅದು ಸೃಷ್ಟಿಸಿಕೊಳ್ಳುವ ಸಂಬಂಧದ ಸ್ವರೂಪದ ಮೇಲೆ ಅದರ ಸಾರ್ಥಕತೆಯನ್ನು ನಿರ್ಧರಿಸುವ ಬಗ್ಗೆ ಚರ್ಚಿಸುತ್ತದೆ. ಸಾರ್ವಕಾಲಿಕ ಸತ್ಯಗಳು ಈ ನೆಲೆಯಲ್ಲಿಯೇ ಅರ್ಥಪೂರ್ಣವಾಗುತ್ತವೆ. ಮರುಹುಟ್ಟು ಪಡೆದು ಬದುಕು ಹಸನಾಗಲು ದಾರಿಯನ್ನು ತೋರುತ್ತದೆ.
ಕಾದಂಬರಿಯ ನಿರೂಪಣೆಯು ಅದರ ಶಕ್ತಿಯ ಮೂಲವಾಗಿದೆ. ಸಮೃದ್ಧ ವಿವರಗಳಿಂದ ಶ್ರೀಮಂತವಾದ ಭಾಷೆ, ಕತೆಯು ಮುಂದುವರಿದಂತೆ ಅದರ ಚಲನೆಯನ್ನು ಸೂಚಿಸುವ ಕ್ರಿಯಾಪದಗಳು ಹೆಚ್ಚಾಗುತ್ತಿದ್ದ ಹಾಗೆ ಚುಟುಕಾಗುವ ವಾಕ್ಯಗಳು ಕಾದಂಬರಿಯ ಉತ್ಕಟತೆಯನ್ನು ನಿಜ ಬದುಕಿನ ನಾಡಿಬಡಿತಕ್ಕೆ ತಂದು ನಿಲ್ಲಿಸುತ್ತವೆ. ನಿರೂಪಣೆಯ ವೈಖರಿ, ನಾಟಕೀಯ ಆರಂಭ, ವರ್ಣನೆಯ ಮೂರ್ತತೆ, ಮಾತಿನಲ್ಲೇ ಸನ್ನಿವೇಶವನ್ನು ಕೆತ್ತಿ ನಿಲ್ಲಿಸುವ ಸಾಮರ್ಥ್ಯವು ಮೆಚ್ಚುವಂತಿದೆ. ಕಾಲಾನುಕ್ರಮವಾಗಿ ಘಟನೆಗಳನ್ನು ವಿವರಿಸದೆ ಭೂತ, ವರ್ತಮಾನ ಮತ್ತು ಭವಿಷ್ಯಗಳು ಹೆಣೆದುಕೊಂಡ ಬಗೆಯನ್ನು ನಿರೂಪಿಸುವ ಕಾದಂಬರಿಯು ಹಿನ್ನೋಟ ತಂತ್ರ, ನಾಟಕೀಯ ಸಾಧ್ಯತೆ ಮತ್ತು ನೆನಪುಗಳನ್ನು ಬಳಸಿಕೊಂಡಿದ್ದರೂ ಅವುಗಳನ್ನು ಬಳಸಿಕೊಂಡ ರೀತಿ, ಸಾಧಿಸುವ ಪರಿಣಾಮಗಳೊಡನೆ ಹೋಲಿಸುವಾಗ ನೆನಪುಗಳು ಜೀವಂತವಾಗುತ್ತದೆ. ಭೂತ-ವರ್ತಮಾನಗಳ ಭೇದವನ್ನು ಒರೆಸುತ್ತದೆ.ಸನ್ನಿವೇಶ, ಭಾವನೆಗಳಲ್ಲಿ ಸಮ ಸಂಬಂಧವಿರುವುದರಿಂದ ಭಾವಾಡಂಬರದ ಪ್ರಶ್ನೆಯು ಏಳುವುದಿಲ್ಲ. ಕಾದಂಬರಿಯ ಭಾವಲೋಕದಲ್ಲಿ ಪೊಳ್ಳು ದನಿಗಳಿಲ್ಲ.
ಕಾದಂಬರಿಯ ಜಗತ್ತು ಮಾನವೀಯ ಆಶಯಗಳಿಂದ ಕೂಡಿದ್ದು, ಪಾತ್ರಗಳು ಒಳಗೊಳ್ಳುವ ಅನುಭವಗಳ ವೈಶಾಲ್ಯವು ಅಗಾಧವಾಗಿದೆ. ಗಂಡು ಹೆಣ್ಣಿನ ಸಂಬಂಧಗಳ ಮಾದರಿಗಳು, ಉಚ್ಛ ನೀಚ ತರತಮಗಳನ್ನು ಮೀರುವ ದುಃಖ ಯಾತನೆಗಳು, ತ್ಯಾಗ ಶರಣಾಗತಿಗಳ ಮೂಲಕ ದೊರಕುವ ಶಾಂತಿ, ಮನುಷ್ಯನ ಒಳ್ಳೆಯತನದ ನಿದರ್ಶನಗಳು, ಸೋಲು ಗೆಲುವುಗಳು ಮುಂತಾದ ಆಶಯಗಳು ಕಾದಂಬರಿಗೆ ಸಾಮಾಗ್ರಿಯನ್ನು ಒದಗಿಸುತ್ತವೆ. ಪ್ರೇಮ ಸಂಬಂಧದ ವ್ಯಾಖ್ಯಾನಕ್ಕೆ ಅನೇಕ ನೆಲೆಗಳನ್ನು ಸೃಷ್ಟಿಸುವ ಮೂಲಕ ಲೇಖಕರು ಅದರ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಸ್ವರೂಪವನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವಾಹ ಮತ್ತು ವಿವಾಹೇತರ ಚೌಕಟ್ಟಿನಲ್ಲಿ ಹೆಣ್ಣು ಗಂಡಿನ ಸಂಬಂಧದ ಆಳಗಳನ್ನು, ವಾಸ್ತವ ಸತ್ಯಗಳನ್ನು ಅನಾವರಣಗೊಳಿಸಿದ್ದಾರೆ. ಹೆಣ್ಣಿನ ಬಾಳನ್ನು ಚಿತ್ರಿಸುವಾಗ ಲೇಖಕರು ಅವಳ ನೋವನ್ನು ಯಥಾರ್ಥವಾಗಿ ಮತ್ತು ಅನುಕಂಪದಿಂದ ಧ್ವನಿಸಿರುವರಾದರೂ ಅವಳನ್ನು ದುರ್ಬಲ, ಅಸಹಾಯ ಮತ್ತು ಹೇಡಿಯಾಗಿ ಚಿತ್ರಿಸಲಿಲ್ಲ. ಎಲ್ಲ ಪಾತ್ರಗಳೂ ತಮ್ಮ ಸಮಸ್ಯೆಯನ್ನು ಎದುರಿಸುತ್ತಾರೆ. ವಿಶ್ವ ಮತ್ತು ರಾಧೆ ದೊರಕಿಸಿಕೊಂಡ ನಿರ್ಲಿಪ್ತತೆ ಉದಾಸೀನದಿಂದ ಹುಟ್ಟಿದ್ದಲ್ಲ. ಬದುಕನ್ನು ಇಡಿಗಣ್ಣಾಗಿ ನೋಡುವ ಧೈರ್ಯದಿಂದ ಹುಟ್ಟಿದೆ. ಲೇಖಕರ ಲಕ್ಷ್ಯವು ಶಾಶ್ವತ ಮೌಲ್ಯಗಳ ನಿದರ್ಶನವಾಗಿದೆಯೇ ಹೊರತು ಸಾಮಾಜಿಕ ಬದಲಾವಣೆಯಲ್ಲ. ಮನುಷ್ಯ ತನ್ನ ಬದುಕನ್ನು ಸುಖಮಯಗೊಳಿಸಲು ನೈತಿಕ ಮೌಲ್ಯಗಳ ಸ್ವೀಕಾರ ಮತ್ತು ಆಚರಣೆಗಳ ಅಗತ್ಯವಿದೆ ಎಂಬ ನಿರ್ಣಯಕ್ಕೆ ತಲುಪುವ ಕಾದಂಬರಿಯಲ್ಲಿ ಜೀವನವನ್ನು ಪರಿಷ್ಕರಿಸಲು ಬೇಕಾದ ಸೂತ್ರಗಳು ಸಿಗುತ್ತವೆ. ಘಟನೆ, ಭಾವನೆ, ಕಥನ ಮತ್ತು ವರ್ಣನೆಗಳಿಗೆ ಸಮಾನ ರೀತಿಯ ಪ್ರಾಶಸ್ತ್ಯವು ದೊರಕಿದೆ. ದಾಂಪತ್ಯ ಇಲ್ಲವೇ ವಿವಾಹಪೂರ್ವ ಸಂಬಂಧಗಳ ನೆರಳುಗಳನ್ನು ಪರಿಣಾಮಕಾರಿಯಾಗಿ ಹಿಡಿಯುವುದರಲ್ಲಿ ತೃಪ್ತರಾಗದೆ ಬದುಕಿನ ಸಂದರ್ಭಗಳಲ್ಲಿ ಅವುಗಳ ಅರ್ಥವೇನು ಎಂದು ಇಣುಕಿ ನೋಡುವ, ತಾತ್ವಿಕ ಆಯಾಮವನ್ನು ಪಡೆಯುತ್ತದೆ.
ವೈಕಂ ಮುಹಮ್ಮದ್ ಬಷೀರ್, ತಗಳಿ ಶಿವಶಂಕರ ಪಿಳ್ಳೆ, ಎಸ್.ಕೆ. ಪೊಟ್ಟೆಕಾಟ್, ಎಂ.ಟಿ. ವಾಸುದೇವನ್ ನಾಯರ್ ಮುಂತಾದವರ ಕೃತಿಗಳ ಪಕ್ಕದಲ್ಲಿಟ್ಟರೂ ತೇಜಸ್ಸಿನಿಂದ ಬೆಳಗುವ ‘ಸುಂದರಿಯರು ಸುಂದರರು’ ಮಲಯಾಳಂ ಭಾಷೆಯ ಮಹತ್ವದ ಕೃತಿಗಳಲ್ಲಿ ಒಂದು. ಕಾದಂಬರಿಯು ಬರಿಯ ಕಥಾವಸ್ತುವನ್ನಷ್ಟೇ ಬೆಳೆಸಿ ಬೃಹತ್ ಕಾದಂಬರಿಯನ್ನಾಗಿಸುವುದರಲ್ಲಿ ವಿರಮಿಸದೆ ಇಡೀ ದೃಷ್ಟಿಕೋನವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. ಕಾಲದೇಶಬದ್ಧವಾದ ವಿವರಗಳು ಪ್ರಕಟಿಸುವ ವೈಚಾರಿಕತೆ ಮತ್ತು ಭಾವಮೌಲ್ಯಗಳು ಕಾಲದೇಶಗಳನ್ನು ಮೀರಿ ಸಾರ್ವತ್ರಿಕವಾಗುತ್ತವೆ. ನಿರ್ದೇಶಕನ ಕೌಶಲವನ್ನು ಪರೀಕ್ಷಿಸುವಂತೆ ಹಲವು ಪ್ರಸಂಗಗಳು ರಂಗದ ಮೇಲೆ ಘಟಿಸುವಂಥ ವೈಚಿತ್ರ್ಯ, ನಾಟಕ, ಚಲನಚಿತ್ರ ಮತ್ತು ಧಾರವಾಹಿಗಳಲ್ಲಿರುವಂಥ ನಾಟ್ಯಕ್ರಿಯೆ, ಘಟನಾವೈವಿಧ್ಯ ಮತ್ತು ಕ್ರಿಯಾ ಸಾಂಗತ್ಯಗಳು ಇಲ್ಲಿವೆ. ಪ್ರೇಮ, ವಿರಹ, ಹೋರಾಟ, ಕುಟಿಲ ತಂತ್ರ, ಗೆಳೆತನ, ಗುಂಪುಗಳು, ಬಂಧನ, ಬಿಡುಗಡೆ, ಪ್ರಭುತ್ವದ ಸೊಕ್ಕು, ಆಡಳಿತದ ಬದಲಾವಣೆ ಮುಂತಾದ ಕ್ರಿಯೆಗಳ ನಡುವೆ ಮನಸ್ಸಿನುದ್ದಕ್ಕೂ ಬಲಿಯುತ್ತಾ ಹೋಗುವ ಪಾತ್ರಗಳು, ಕೊಳೆತ ವ್ಯವಸ್ಥೆಯ ಛಾವಣಿಯು ಕುಸಿಯುವಾಗ ಸದ್ಗುಣಿಗಳಷ್ಟೇ ಅದರಡಿಯಲ್ಲಿ ಸಿಲುಕುವ, ಸಿಲುಕಿಯೂ ಸಾಯದೆ ಹೊರಗೆ ಬರುವ ಸುಲೈಮಾನ್, ರಾಧೆ, ವಿಶ್ವ ಇವರನ್ನು ಮನಸ್ಸಿಗೆ ದಾಟಿಸುವ ಕೌಶಲವು ವಿಶಿಷ್ಟವಾಗಿದೆ. ಕಾಗದದ ಮೇಲೆ ಬರೆದ ಚುಕ್ಕೆಗಳನ್ನು ಜೋಡಿಸುವ ಗೆರೆಗಳಂತೆ ಚಲಿಸುವ ಪಾತ್ರಗಳು ಸೊಗಸಾದ ಕಲಾಕೃತಿಯನ್ನು ನಿರ್ಮಿಸಲು ಸಹಾಯಕವಾಗಿವೆ. ಗತಿಯು ಅಲ್ಲಲ್ಲಿ ನಿಯಂತ್ರಿತವಾಗಿದ್ದರೂ ಅಸಹಜತೆ ಇಲ್ಲ. ಇದು ಸ್ವಾತಂತ್ರ್ಯ ಹೋರಾಟದ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಕತೆಯಲ್ಲ. ಲೇಖಕರ ದೃಷ್ಟಿಯು ಬಡಪಾಯಿ ಜನರು ಮತ್ತು ಅವರ ಬಾಳಿಗೆ ಹೊರೆಯಾಗುತ್ತಿರುವ ಸಾಮಾಜಿಕ ಪರಿಣಾಮಗಳ ಮೇಲೆ ಇದೆ. ಬದುಕಿನ ಒಳಿತು ಕೆಡುಕುಗಳನ್ನು ಸಂಯಮ ಮತ್ತು ಸಮತೋಲನ ದೃಷ್ಟಿಕೋನದಿಂದ ಮಂಡಿಸಿ ಲೋಕದರ್ಶನವನ್ನು ಒದಗಿಸುವಲ್ಲಿ ಉರೂಬ್ ಸಫಲರಾಗಿದ್ದಾರೆ.
ಉರೂಬ್ ಅವರ ‘ಸುಂದರಿಯರು ಸುಂದರರು’ ಎಂಬ ಕಾದಂಬರಿಯ ಅನುವಾದವು ಮೋಹನ ಕುಂಟಾರ್ ಅವರ ಹಲವು ವರ್ಷಗಳ ಪರಿಶ್ರಮದ ಫಲವಾಗಿದೆ. ಪ್ರಾದೇಶಿಕ ಸೊಗಡನ್ನು ಹೊಂದಿದ ಕಾದಂಬರಿಯಾಗಿರುವುದರಿಂದ ಇದರ ಭಾಷಾಂತರವು ಸುಲಭವಲ್ಲ. ಮಲಯಾಳಂನ ಉಪಭಾಷೆ, ದನಿ ಮತ್ತು ಬನಿಗಳನ್ನು ಯಥಾವತ್ತಾಗಿ ಅನುವಾದಿಸಲು ಸಾಧ್ಯವಿಲ್ಲದಿದ್ದರೂ ಮೂಲಕ್ಕೆ ಚ್ಯುತಿ ಬರದ ರೀತಿಯಲ್ಲಿ ಭಾಷಾಂತರಿಸುವುದರಲ್ಲಿ ಅನುವಾದಕರು ಯಶಸ್ವಿಯಾಗಿದ್ದಾರೆ. ಮಲಯಾಳಂ ಭಾಷೆಯ ವಿದ್ವಾಂಸರಿಗೆ ಕೂಡ ತಿಳಿಯದಿರುವ ಪದಗಳು ಕಂಡುಬರುವ ಸಂದರ್ಭದಲ್ಲಿ ಅವುಗಳ ಅರ್ಥಭಾವಗಳನ್ನು ಅರಿಯಲು ಕ್ಷೇತ್ರಕಾರ್ಯಗಳನ್ನು ಮಾಡಿ ಗ್ರಾಮ್ಯರೂಪದ ಮಾತುಗಳನ್ನು ಓದುಗರಿಗೆ ಅರ್ಥವಾಗುವ ರೀತಿಯಲ್ಲಿ ಅನುವಾದಿಸಿದ್ದಾರೆ. ಹಳ್ಳಿಯ ಜನರ ಮಾತುಗಳಲ್ಲಿ ಕಾಸರಗೋಡಿನ ಆಡುಮಾತುಗಳ ಲಯವು ಕಂಡುಬರುತ್ತದೆ. ಕನ್ನಡಿಗರಿಗೆ ಮಲಯಾಳದ ಸೊಗಡನ್ನು ತಿಳಿಸುವುದಕ್ಕಾಗಿ ಆ ಭಾಷೆಯ ಪದಗಳನ್ನು ಅದೇ ರೂಪದಲ್ಲಿ ಉಳಿಸಿಕೊಳ್ಳದೆ ಅದಕ್ಕೆ ಸಂವಾದಿಯಾದ ಕನ್ನಡ ಪದಗಳನ್ನು ಬಳಸಿಕೊಂಡಿರುವುದರಿಂದ ಭಾಷೆಯ ಪೆಡಸುತನವು ಇಲ್ಲವಾಗಿದೆ. ಪದಪ್ರಯೋಗದ ಹಿಡಿತ, ಅರ್ಥಭಾವಗಳ ಮಿಡಿತಗಳನ್ನು ಮನಗಂಡು ಅನುವಾದಗೊಂಡ ‘ಸುಂದರಿಯರು ಸುಂದರರು’ ಮೋಹನ ಕುಂಟಾರ್ ಅವರ ಅನುವಾದಿತ ಕೃತಿಗಳಲ್ಲಿ ಅಗ್ರಸ್ಥಾನವನ್ನು ಪಡೆದಿದೆ.
ವಿಮರ್ಶಕರು ಡಾ. ಸುಭಾಷ್ ಪಟ್ಟಾಜೆ :
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.