ದಿನಾಂಕ16-10-24ರಂದು ಚಿತ್ರಕಲಾ ಪರಿಷತ್ತಿನಲ್ಲಿ ಏಳು ಕಲಾವಿದರಿಂದ ‘ಸಪ್ತ’ ಎನ್ನುವ ಹೆಸರಿನಲ್ಲಿ ಸಮೂಹ ಕಲಾಪ್ರದರ್ಶನ ಅನಾವರಣಗೊಂಡಿತು. ತುಂಬಾ ಆಪ್ತವೆನಿಸುವ ಕಲಾಕೃತಿಗಳು ಅವು ಆಗಿದ್ದವು. ಅಲ್ಲೊಂದು ಹದವಾದ ಸಂಗೀತವಿತ್ತು. ನಾವು ದಿನನಿತ್ಯ ನೋಡುವ, ಬಳಸುವ, ಆರಾಧಿಸುವ ವಿಷಯಗಳನ್ನು ಕಲಾವಿದರು ಆಯ್ದು ಕೊಂಡಾಗ ನೋಡುಗರಿಗೆ ಕಲಾಕೃತಿಗಳು ಹತ್ತಿರವಾಗುತ್ತವೆ. ಇಂತಹ ವಿಷಯಗಳನ್ನೇ ಮುಖ್ಯವಾಗಿಸಿಕೊಂಡು ಕಲಾ ಪ್ರದರ್ಶನ ಏರ್ಪಡಿಸಿದವರು ರಾಜ್ಯದ ವಿವಿಧ ಭಾಗದ ಕಲಾವಿದರು.
ಇಲ್ಲಿ ಬೇಲೂರು, ಹಳೇಬೀಡು ಶೈಲಿಯ ಶಿಲ್ಪದಿಂದ ಸ್ಪೂರ್ತಿ ಪಡೆದಂತ ಕಲಾಕೃತಿಗಳು ಗದುಗಿನ ನವೀನ್ ಪತ್ತಾರ್ ಅವರದಾದರೆ, ಬೆಳಗಾವಿಯ ಸುಶೀಲ್ ತರ್ಬಾರ್, ತಿಮ್ಮಣ್ಣಗೌಡ ಪಾಟೀಲ್ ಮತ್ತು ದರ್ಶನ್ ಚೌಧರಿ ಅವರ ಚಿತ್ರಗಳು ನಿಸರ್ಗ ಮತ್ತು ಸಮುದ್ರ ತೀರದ ಅನುಭವಗಳನ್ನು ಕಟ್ಟಿಕೊಡುತ್ತದೆ. ವಿಜಯ ಧೊಂಗಡಿ ಅವರ ಚಿತ್ರಗಳು ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕವಾದ ದೊಡ್ಡ ತಿಲಕವಿಟ್ಟುಕೊಂಡ ಭಾರತೀ ನಾರಿಯರ ಚಿತ್ರಗಳನ್ನು ಪ್ರತಿಬಿಂಬಿಸುತ್ತಿವೆ. ತುಮಕೂರಿನ ಬಿ. ಎನ್. ಹರಿಪ್ರಸಾದ್ ಅವರ ಚಿತ್ರಗಳು ಹಳ್ಳಿಯ ಜನಜೀವನ, ಹೂ ಮಾರುವ ಹೆಂಗಸು ಇತ್ಯಾದಿ ಚಿತ್ರಗಳು ನಿಮ್ಮನ್ನು ಹಿಡಿದ ನಿಲ್ಲಿಸುತ್ತವೆ.
ಚೇತನ್ ಕುಮಾರ್ ಅವರ ಶಿಲ್ಪ ಕಲಾಕೃತಿಗಳು ಪ್ರದರ್ಶನದ ಸೊಗಸನ್ನು ಇನ್ನೂ ಹೆಚ್ಚಿಸಿದೆ. ಸ್ವಲ್ಪಹೊತ್ತು ಗ್ಯಾಲರಿಯಲ್ಲಿ ನಿಂತು ನೋಡುವಂತೆ ಹಾಗೂ ಕುಳಿತುಕೊಳ್ಳುವಂತೆ ಕಲಾಕೃತಿಗಳು ನಿಮ್ಮನ್ನು ಸೆಳೆಯುತ್ತವೆ. ಎಲ್ಲರ ಕಲಾಕೃತಿಗಳು ಅವರವರದದೇ ಆದ ಶೈಲಿಯಲ್ಲಿ ತೆರೆದುಕೊಂಡಿದೆ.
ಆರ್ಟ್ ಹೌಸ್ ಗ್ಯಾಲರಿಯ ಮೇಲ್ವಿಚಾರಕರಾದ ಶ್ರೀಮತಿ ಜಯಂತಿ ಶೇಗಾರ್, ಪಿಡಿಲಿಟೀಸ್ ಗ್ಯಾಲರಿಯ ಸಂಸ್ಥಾಪಕರಾದ ಶ್ರೀ ಅಚ್ಯುತ ಗೌಡರು ಮತ್ತು ಕೇಂದ್ರ ಲಲಿತಕಲಾ ಅಕಾಡಮಿಯ ಮಾಜಿ ಅಧ್ಯಕ್ಷರಾದ ಶ್ರೀ ಚಿ. ಸು. ಕೃಷ್ಣಸೆಟ್ಟಿಯವರಿಂದ ಈ ಪ್ರದರ್ಶನ ಉದ್ಘಾಟನೆಗೊಂಡಿತು.
ಗಣಪತಿ ಎಸ್ ಹೆಗಡೆ
ಚಿತ್ರ ಕಲಾವಿದರು.