ಮಂಗಳೂರು : ಶ್ರೀ ಶಾರದಾ ಮಹೋತ್ಸವದ ಶೋಭಾ ಯಾತ್ರೆಯ ಪ್ರಯುಕ್ತ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾ ವರ್ಧಕ ಸಂಘ ಆಯೋಜಿಸಿದ್ದ ಯಕ್ಷಗಾನ ಬಯಲಾಟ ಕಾರ್ಯಕ್ರಮವು ದಿನಾಂಕ 14 ಅಕ್ಟೋಬರ್ 2024ರಂದು ಮಂಗಳೂರಿನ ಮಹಾಮಾಯಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಮಿತ್ತಬೈಲು ಬಾಲಚಂದ್ರ ನಾಯಕ್ ಮಾತನಾಡಿ “ಯಕ್ಷಗಾನದಂತಹ ಕಲೆ ಎಲ್ಲರಿಗೂ ಒಲಿಯುವುದಿಲ್ಲ.ಹಾಗಾಗಿ ಈ ಕಲೆಯಲ್ಲಿ ತೊಡಗಿಸಿಕೊಂಡ ಇಂತಹ ಸಂಸ್ಥೆಗಳಿಗೆ ಸಾಧ್ಯವಾದಷ್ಟು ಧನ ಸಹಾಯ ಮಾಡುವ ಮೂಲಕ ಆಸಕ್ತರು ಈ ಕಲೆಯನ್ನು ಸವಿಯಲು ಅವಕಾಶ ಮಾಡಿ ಕೊಡೋಣ.” ಎಂದರು.
ಇದೇ ಸಂದರ್ಭದಲ್ಲಿ ಪ್ರವೃತ್ತಿಯಲ್ಲಿ ಯಕ್ಷಗಾನ ಅರ್ಥಧಾರಿ ಹಾಗೂ ಹರಿದಾಸರಾಗಿ ಪ್ರಸಿದ್ಧರಾದ ಮಹಾಬಲ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು “ನಾನು ಅರ್ಥಧಾರಿಯಾಗಲು ಶೇಣಿ ಗೋಪಾಲಕೃಷ್ಣ ಭಟ್ಟರು ಹಾಗೂ ಹರಿಕಥಾ ಕ್ಷೇತ್ರಕ್ಕೆ ಕಾಲಿಡಲು ಮಲ್ಪೆ ರಾಮದಾಸ ಸಾಮಗರು ಸ್ಪೂರ್ತಿ. ಹರಿಕಥಾ ಕ್ಷೇತ್ರ ಪೌರಾಣಿಕ ಜ್ಞಾನವನ್ನು ಹಾಗೂ ಜೀವನ ಕ್ರಮಗಳನ್ನು ತಿಳಿಸಿಕೊಡಲು ಅತ್ಯಂತ ಸೂಕ್ತ ಎಂದರು.” ಸಮ್ಮಾನ ಪತ್ರವನ್ನು ಅಶೋಕ್ ಬೋಳೂರು ವಾಚಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.
ಸಂಘದ ಗೌರವಾಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ “ಜನರ ಸಹಕಾರದಿಂದ ಈ ಕಲೆ ನಮ್ಮ ಕರಾವಳಿ ಭಾಗದಲ್ಲಿ ಗಟ್ಟಿಯಾಗಿ ನೆಲೆ ನಿಂತಿದೆ. ಈ ಕಲೆಯಿಂದಾಗಿಯೇ ನಮ್ಮಲ್ಲಿ ಪಾರಾಣಿಕ ಜ್ಞಾನ ಬೇರೂರಿದೆ.” ಎಂದರು. ಸಂಘದ ಕಾರ್ಯಾಧ್ಯಕ್ಷ ಶಿವಪ್ರಸಾದ್ ಪ್ರಭು ಸ್ವಾಗತಿಸಿ, ಪ್ರಧಾನ ಸಂಚಾಲಕ ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕ ವಿಚಾರಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಮಹಾಪೋಷಕ ಸಿ. ಎಸ್. ಭಂಡಾರಿ, ಅಧ್ಯಕ್ಷ ಶ್ರೀನಾಥ್ ಪ್ರಭು, ಹಿರಿಯ ಕಲಾವಿದ ಹಾಗೂ ಪ್ರಸಂಗ ಕರ್ತ ನಿತ್ಯಾನಂದ ಕಾರಂತ ಪೊಳಲಿ, ಪ್ರೊಫೆಷನಲ್ ಕೊರಿಯರ್ಸ್ ಇದರ ನರೇಂದ್ರನಾಥ್ ನಾಯಕ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ‘ಶಾಂಭವಿ ವಿಜಯ’ ತಾಳಮದ್ದಳೆ ಹಾಗೂ ಸಭಾಕಾರ್ಯಕ್ರಮದ ಬಳಿಕ ‘ಸುಧಾನ್ವಾರ್ಜುನ’ ಮತ್ತು ‘ಪಾಪಣ್ಣ ವಿಜಯ ಗುಣಸುಂದರಿ’ ಎಂಬ ಯಕ್ಷಗಾನ ಬಯಲಾಟಗಳು ಸಂಪನ್ನಗೊಂಡವು.